An unconventional News Portal.

ಅಮೆರಿಕಾದಲ್ಲಿ ಹೆಚ್ಚುತ್ತಿರುವ ‘ಹೇಟ್ ಕ್ರೈಮ್ಸ್’: ಇತಿಹಾಸ ಮತ್ತು ಭಾರತೀಯರ ಆತಂಕಗಳು

ಅಮೆರಿಕಾದಲ್ಲಿ ಹೆಚ್ಚುತ್ತಿರುವ ‘ಹೇಟ್ ಕ್ರೈಮ್ಸ್’: ಇತಿಹಾಸ ಮತ್ತು ಭಾರತೀಯರ ಆತಂಕಗಳು

ಅಮೆರಿಕಾದ ಕೆಂಟ್ ನಗರದಲ್ಲಿ ಭಾರತ ಮೂಲದ ಸಿಖ್ ಧರ್ಮದ ವ್ಯಕ್ತಿಯೊಬ್ಬರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.  ಈ ವೇಳೆ, “ನಿನ್ನ ದೇಶಕ್ಕೆ ವಾಪಾಸ್ ಹೋಗು,” ಎಂದು ಕೂಗಿದ್ದಾನೆ. ಕಳೆದ ಒಂದು ವಾರದ ಅಂತರದಲ್ಲಿ ಅಮೆರಿಕಾ ನೆಲಯದಲ್ಲಿ ಭಾತತ ಮೂಲದವರ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆಯ ಮೂರನೇ ಪ್ರಕರಣ ಇದಾಗಿದೆ.

ತಮ್ಮ ಮನೆಯ ಮುಂದೆಯೇ ಗುಂಡೇಟು ತಿಂದ ಭಾರತೀಯನನ್ನು ದೀಪಾ ರೈ ಎಂದು ಗುರುತಿಸಲಾಗಿದೆ. “ಸಿಖ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಇದೆ,” ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಮ್ಮ ಮನೆಗೆ ಮುಂದೆ ವಾಹನವನ್ನು ತೊಳೆಯುತ್ತಿದ್ದಾಗ 6 ಅಡಿಯ ಬಿಳಿ ವ್ಯಕ್ತಿಯೊಬ್ಬ ಬಂದು ”ನಿನ್ನ ದೇಶಕ್ಕೆ ಹಿಂತಿರುಗು” ಎಂದು ಕೂಗಿದ. ನಂತರ ವಾಗ್ವಾದ ಶುರುವಾದಾಗ ಮುಸುಗು ಹಾಕಿಕೊಂಡಿದ್ದಾತ ಗುಂಡು ಹಾರಿಸಿದ ಎಂದು ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.

 

ಘಟನೆ ನಂತರ ವಿಷಾಧವನ್ನು ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗಾಯಗೊಂಡ ಭಾರತ ಮೂಲದ ಪ್ರಜೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಕಳೆದ ತಿಂಗಳು ಕನ್ಸಾಸ್ ನಗರದಲ್ಲಿ ಹೈದ್ರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾರ ಕುಚಿಬೋಟ್ಲಾ ಅವರ ಮೇಲೆ ಅಮೆರಿಕಾ ಪ್ರಜೆಯೊಬ್ಬ ಬಾರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದ.  ಶ್ರೀನಿವಾಸ್ ಸಾವನ್ನಪ್ಪಿದರೆ, ಅವರ ಸ್ನೇಹಿತ ಅಲೋಕ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದಾಳಿಯನ್ನು ತಡೆಯಲು ಬಂದ ಅಮೆರಿಕಾ ಪ್ರಜೆ ಕೂಡ ಗಾಯಗೊಂಡಿದ್ದ. ದಾಳಿ ನಂತರ ಅಮೆರಿಕಾದಲ್ಲಿ ಶ್ರೀನಿವಾಸ್ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಅಭಿಯಾನವೂ ನಡೆದಿತ್ತು.

ಗುರುವಾರ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹಾರ್ನಿಶ್ ಪಟೇಲ್ ಎಂಬ ಮತ್ತೊಬ್ಬ ಭಾರತ ಮೂಲದ ಪ್ರಜೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಹಾರ್ನಿಶ್ ಅಸುನೀಗಿದ್ದರು.

 

ಅಮೆರಿಕಾದಲ್ಲಿ ‘ಹೇಟ್ ಕ್ರೈಮ್’ ಇತಿಹಾಸ:

ಲಿಂಗ, ಜನಾಂಗ, ವಿಲಕ ಚೇತನ, ಭಾಷೆ, ರಾಷ್ಟ್ರೀಯತೆ, ಚಹರೆ, ಲೈಂಗಿಕ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ವ್ಯಕ್ತಿಗಳ ಮೇಲೆ ನಡೆಯುವ ದಾಳಿಗಳನ್ನು ಅಮೆರಿಕಾ ಕಾನೂನು ‘ಹೇಟ್ ಕ್ರೈಮ್’ ಅಥವಾ ‘ದ್ವೇಷಾಪರಾಧಗಳು’ ಎಂದು ವರ್ಗೀಕರಣ ಮಾಡಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣವಾದ ಕಾನೂನು ಕೂಡ ಜಾರಿಯಲ್ಲಿದೆ. 80ರ ದಶಕದಲ್ಲಿ ಅಮೆರಿಕಾ ಮಾಧ್ಯಮಗಳಿಂದ ಈ ಪದ ಬಳಕೆಗೆ ಬಂದಿತು. ಆಧುನಿಕ ಅಮೆರಿಕಾದಲ್ಲಿ ಕಪ್ಪು ಜನಾಂಗದವರ ಮೇಲೆ ನಡೆದ ದಾಳಿಗಳನ್ನು ‘ಹೇಟ್ ಕ್ರೈಮ್’ ಎಂದು ಅವು ಬಣ್ಣಿಸಿದವು.

ಎಫ್‌ಬಿಐ ಮಾಹಿತಿ ಪ್ರಕಾರ, ಅಮೆರಿಕಾದಲ್ಲಿ ಅತಿ ಹೆಚ್ಚು ‘ದ್ವೇಷಪೂರಿತ ದಾಳಿ’ಗಳಿಗೆ ಒಳಗಾಗುತ್ತ ಬಂದವರು ಕಪ್ಪು ವರ್ಣೀಯರು. ಇವರ ನಂತರ ಸ್ಥಾನದಲ್ಲಿ ಇರುವವರು ಸಲಿಂಗ ಕಾಮಿಗಳು. ಜತೆಗೆ, ಮುಸ್ಲಿಂರು ಮತ್ತು ಜ್ಯೂಯಿಷ್ ಜನರ ಮೇಲೆಯೂ ಇಂತಹ ದಾಳಿಗಳು ಇಲ್ಲಿ ನಡೆದುಕೊಂಡು ಬಂದಿವೆ. ಇದೀಗ ಏಷಿಯಾ ಮತ್ತು ಮಧ್ಯಪ್ರಾಚ್ಯ ಜನರ ಮೇಲೆ ದಾಳಿಗಳು ಇಲ್ಲಿ ಶುರುವಾಗಿವೆ.

ಅಮೆರಿಕಾದ ಇತಿಹಾಸದ ಉದ್ದಕ್ಕೂ ಬಿಳಿಯರು ಇತೆ ಜನಾಂಗಗಳ ಮೇಲೆ ನಡೆಸಿಕೊಂಡು ಬಂದ ಪೈಶಾಚಿಕ ಕೃತ್ಯಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. 60ರ ದಶಕದಲ್ಲಿ ಇಂತಹ ದಾಳಿಗಳ ಮತ್ತು ವರ್ಣಭೇದ ನೀತಿಯ ವಿರುದ್ಧ ನಡೆದ ಕಪ್ಪು ಜನರ ಚಳುವಳಿಯ ಮೂಲಕ ದಾಖಲಿಸಿದ ಪ್ರತಿರೋಧವೂ ಇಲ್ಲಿ ಕಾಣಸಿಗುತ್ತದೆ. ಕಪ್ಪು ಜನರಲ್ಲಿ ಜಾಗೃತಿಗೆ ಕಾರಣವಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಹತ್ಯೆ ಕೂಡ ಇಂತಹದ್ದೇ ಜನಾಂಗೀಯ ಮೇಲುರಿಮೆಗಾಗಿ ನಡೆದ ಕೃತ್ಯವಾಗಿತ್ತು ಎಂಬುದು ಗಮನಾರ್ಹ.

ಇತ್ತಿಚಿನ ವರ್ಷಗಳಲ್ಲಿ ಮಾನವ ಹಕ್ಕುಗಳ ಮಂತ್ರ ಪಠಣ ಅಮೆರಿಕಾದಲ್ಲಿ ಹೆಚ್ಚಾಗಿತ್ತು. ಜತೆಗೆ ‘ಹೇಟ್ ಕ್ರೈಮ್’ಗಳ ಸಂಖ್ಯೆಯಲ್ಲಿ ಇಳಿಕೆಯಾದಂತೆ ಕಂಡು ಬಂದಿತ್ತು. ಇದೀಗ ಹೊಸ ಅಧ್ಯಕ್ಷರ ಆಡಳಿತ ಶುರುವಾಗುತ್ತಿದ್ದಂತೆ ಮತ್ತೆ ಅಮೆರಿಕಾ ನೆಲದಲ್ಲಿ ಇಂತಹ ಸುದ್ದಿಗಳು ಕೇಳಿಬರತೊಡಗಿವೆ.

 

ಟ್ರಂಪ್ ಕೊಡುಗೆ:

ಇತ್ತೀಚಿನ ದಾಳಿಗಳ ಹಿಂದೆ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಭಾಷಣಗಳ ಕೊಡುಗೆ ಇದ್ದಂತೆ ಕಾಣಿಸುತ್ತಿದೆ. ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು, ”ಅಮೆರಿಕಾ ಮೊದಲು” ಎಂದು ಘೋಷಿಸಿದ್ದರು. ಅಮೆರಿಕಾ ಉತ್ಪನ್ನಗಳನ್ನೇ ಕೊಳ್ಳಿ ಮತ್ತು ಅಮೆರಿಕನ್ನರಿಗೆ ಕೆಲಸ ನೀಡಿ ಎಂದು ಅವರು ಕರೆ ನೀಡಿದ್ದರು.

ಸ್ಥಳೀಯ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಸಂಬಳ ನೀಡಬೇಕಿರುವ ಹಿನ್ನೆಲೆಯಲ್ಲಿ ಅಮೆರಿಕಾದ ಕಂಪನಿಗಳು ಕೌಶಲ್ಯವನ್ನು ಹೊಂದಿದ ವಿದೇಶಿ ನೌಕರರಿಗೆ ಅವಕಾಶ ನೀಡುವ ಪರಿಪಾಠ ಕಳೆದ ಒಂದೂವರೆ ದಶಕದಲ್ಲಿ ಹೆಚ್ಚಿತ್ತು. ಹೀಗಾಗಿ ಸ್ಥಳೀಯರಲ್ಲಿ ನಿರುದ್ಯೋಗ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿತ್ತು. ಅದು ತಮ್ಮ ಕೆಲಸವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ವಿದೇಶಿಯರ ಮೇಲೆ ದ್ವೇಷದ ರೂಪದಲ್ಲಿ ಸ್ಫೋಟಗೊಂಡಿರುವ ಸಾಧ್ಯತೆಗಳನ್ನು ಇತ್ತೀಚಿನ ದಾಳಿಗಳು ತೋರಿಸುತ್ತಿವೆ. ಸದ್ಯ 1. 5 ಲಕ್ಷ ಭಾರತೀಯ ಉದ್ಯೋಗಿಗಳ ಅಮೆರಿಕಾದಲ್ಲಿ ನೌಕರಿ ಮಾಡುತ್ತಿದ್ದಾರೆ.

ಟ್ರಂಪ್ ಅಧ್ಯಕ್ಷರಾದ ನಂತರ ಪರಿಸ್ಥಿತಿ ಬದಲಾಗುತ್ತಿದೆ. ಸ್ಥಳೀಯರಲ್ಲಿ ವಿದೇಶಿಯರ ಬಗ್ಗೆ ಅಸಹನೆ ಹೆಚ್ಚುತ್ತಿದೆ. ಇದು ಭಾರತ ಮೂಲದ ಐಟಿ ಉದ್ಯೋಗಿಗಳ ಆತಂಕವನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ‘ಹೇಟ್‌ ಕ್ರೈಮ್‌’ಗಳನ್ನು ಹತೋಟಿಗೆ ತರಲು ಟ್ರಂಪ್ ಆಡಳಿತ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

Top