An unconventional News Portal.

‘ವೈದ್ಯೋ ನಾರಾಯಣ ಬಲಿ’: ಖಾಸಗಿ ಆಸ್ಪತ್ರೆಗಳ ಲಾಬಿಗೆ ಬೇಲಿ ಹಾಕಲು ಹೊರಟ ಸರಕಾರ ಎಡವಿದ್ದು ಎಲ್ಲಿ?

‘ವೈದ್ಯೋ ನಾರಾಯಣ ಬಲಿ’: ಖಾಸಗಿ ಆಸ್ಪತ್ರೆಗಳ ಲಾಬಿಗೆ ಬೇಲಿ ಹಾಕಲು ಹೊರಟ ಸರಕಾರ ಎಡವಿದ್ದು ಎಲ್ಲಿ?

ರಾಜ್ಯದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಸುದ್ದಿಕೇಂದ್ರಕ್ಕೆ ಬಂದಿದೆ.

ಕಳೆದ ನಾಲ್ಕು ದಿನಗಳಿಂದ ಸರಕಾರ ಮತ್ತು ಖಾಸಗಿ ವೈದ್ಯರ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ರಾಜ್ಯ ಸರಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ತಿದ್ದುಪಡಿ) ಕಾಯ್ದೆ- 2017 ಇದಕ್ಕೆ ಕಾರಣ.

ತಿದ್ದುಪಡಿ ವಿದೇಯಕ ಜಾರಿಯಾದರೆ ಖಾಸಗಿ ವೈದ್ಯರ ಹಕ್ಕುಗಳು ಹರಣವಾಗುತ್ತವೆ, ಆರೋಗ್ಯ ಸೇವೆ ನೀಡುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂಬುದು ಪ್ರತಿಭಟನೆಗೆ ಇಳಿದ ವೈದ್ಯರ ಆರೋಪ. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಮುಚ್ಚಲಾಗಿದೆ. ಐಸಿಯುಗಳಿಗೆ ದಾಖಲಾತಿ ನಿಲ್ಲಿಸಲಾಗಿದೆ. ಪ್ರತಿದಿನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಪಂಚತಾರ ಆಸ್ಪತ್ರೆಗಳ ಆದಾಯ ಕುಸಿದಿದೆ. ಅದಕ್ಕಿಂತ ಹೆಚ್ಚಾಗಿ ಸುಮಾರು 25 ಮಂದಿ ಸಕಾಲದಲ್ಲಿ ಆರೋಗ್ಯ ಸೇವೆ ಸಿಗದೆ ಮರಣವನ್ನಪ್ಪಿದ್ದಾರೆ.

ಆರೋಗ್ಯದ ಸಮಸ್ಯೆಗಳಿಗೆ ಈಡಾದ ಪ್ರತಿಯೊಬ್ಬರಿಗೂ ರಾಜ್ಯದ ಆರೋಗ್ಯ ಕ್ಷೇತ್ರ ಹೇಗಿದೆ ಎಂಬುದು ಅರ್ಥವಾಗಿದೆ. ಆರೋಗ್ಯ ಸೇವೆಯ ಹೆಸರಿನಲ್ಲಿ ಬೆಳೆದು ನಿಂತ ಖಾಸಗಿ ಪಂಚತಾರಾ ಆಸ್ಪತ್ರೆಗಳ ಉದ್ಯಮವೂ ಕಣ್ಮುಂದಿದೆ. ಇಂತಹ ಸಮಯದಲ್ಲಿ ಯಾವುದೇ ಸರಕಾರ ಜನರ ದೃಷ್ಟಿಯಲ್ಲಿ ಕಾಯ್ದೆಯೊಂದನ್ನು ತರಲು ಮುಂದಾದರೆ ಅದು ಸ್ವಾಗತಾರ್ಹ ಕ್ರಮ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಸರಕಾರ ಜಾರಿಗೆ ತರಲು ಹೊರಟ ಕೆಪಿಎಂಇ ತಿದ್ದುಪಡಿ ಕಾಯ್ದೆ ಪರವಾಗಿ ಅಭಿಯಾನಗಳು ನಡೆಯುತ್ತಿದೆ. ಹೋರಾಟಕ್ಕಿಳಿದ ವೈದ್ಯರ ಹಣದಾಹದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ವೈದ್ಯರ ಆತಂಕಗಳು: 

ತಿದ್ದುಪಡಿ ಕಾಯ್ದೆ ಜಾರಿಯಾದರೆ ಖಾಸಗಿ ವೈದ್ಯರ ಹಕ್ಕುಗಳು ಹರಣವಾಗುತ್ತವೆ ಎಂಬುದು ಪ್ರತಿಭಟನೆಗೆ ಇಳಿದವರ ಆರೋಪಗಳು. ಒಂದು ವೇಳೆ, ಆರೋಗ್ಯ ಸೇವೆ ನೀಡುವಾಗ ವೈದ್ಯರು ಮಾನದಂಡಗಳನ್ನು ಪಾಲಿಸದಿದ್ದರೆ ಜಿಲ್ಲಾ ಮಟ್ಟದಲ್ಲಿ ರಚನೆಗೊಳ್ಳುವ ರಿಡ್ರೆಸಲ್ ಕಮಿಟಿಗೆ ದೂರು ನೀಡುವ ಅವಕಾಶ ಇದೆ. ಇದರಿಂದ ವೈದ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸರಕಾರ ಹೊರಟಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ವಹಿಸಿರುವ ಐಎಂಎ ಅಧ್ಯಕ್ಷ ಡಾ. ರವೀಂದ್ರ, “ಚಿಕಿತ್ಸಗೆ ಸರಕಾರ ನಿರ್ದಿಷ್ಟ ದರ ನಿಗದಿ ಮಾಡಲು ಹೊರಟಿದೆ. ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಖಾಸಗಿ ಆಸ್ಪತ್ರೆಗಳನ್ನು ಕಟ್ಟಿದವರಿಗೆ ಸರಕಾರ ನಿಗದಿ ಮಾಡುವ ದರದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ, ಹೆಚ್ಚಿನ ದರ ಪಡೆದುಕೊಂಡರೆ ಕ್ರಿಮಿನಲ್‌ಗಳಾಗುತ್ತಾರೆ. ಹೀಗಾಗಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಅನಾವಶ್ಯಕವಾಗಿ ಸರಕಾರ ವೈದ್ಯರು ಮತ್ತು ರೋಗಿಗಳ ನಡುವೆ ಇರುವ  ಸಂಬಂಧವನ್ನು ಹಾಳು ಮಾಡುತ್ತಿದೆ,” ಎನ್ನುತ್ತಾರೆ.Doctors protest Belagavi

2009ರಲ್ಲಿ ರೋಗಿಗಳಿಂದ ಕರ್ತವ್ಯ ನಿರತ ವೈದ್ಯರ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯಲು ಕಾಯ್ದೆಯೊಂದನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. ಇದು ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯರ ರಕ್ಷಣೆಗಾಗಿ ಬಂದ ಕಾಯ್ದೆ. ಇವತ್ತು, ರೋಗಿಗಳ ರಕ್ಷಣೆಗಾಗಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಹೊರಟಿದೆ.

ಕಾಯ್ದೆ ಪರ ಧ್ವನಿ: 

ಖಾಸಗಿ ವೈದ್ಯರ ಪ್ರತಿಭಟನೆ ನಡುವೆಯೇ ಸರಕಾರ ಜಾರಿಗೆ ತರಲು ಹೊರಟ ಕಾಯ್ದೆ ಪರವಾಗಿ ಜನರ ಧ್ವನಿ ಹೆಚ್ಚಾಗುತ್ತಿದೆ. “ವೈದ್ಯರ ರಕ್ಷಣೆಗೆ 2009ರಲ್ಲಿ ಕಾಯ್ದೆ ತರಲಾಗಿದೆ. ಅದರಿಂದಾಗಿ ಅನೇಕ ರೋಗಿಗಳ ಮೇಲೆ, ಅವರ ಕಡೆಯವರ ಮೇಲೆ ಎಫ್‌ಐಆರ್‌ಗಳು ರಿಜಿಸ್ಟರ್ ಆಗಿವೆ. ಇದೀಗ ರೋಗಿಗಳ ರಕ್ಷಣೆಗೆ ಕಾಯ್ದೆಗೆ ತಿದ್ದುಪಡಿ ತಂದರೆ ತಪ್ಪೇನಿದೆ?” ಎಂದು ಪ್ರಶ್ನಿಸುತ್ತಾರೆ ಜನಾರೋಗ್ಯ ಚಳವಳಿಯ ಡಾ. ಅಖಿಲಾ ವಾಸನ್.

“ಪ್ರತಿಭಟನೆ ನಿರತ ವೈದ್ಯರ ಕಾಯ್ದೆಯಲ್ಲಿ ಸಮಸ್ಯೆ ಇದೆ ಎನ್ನುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ದೂರು ಸಮಿತಿ ಬೇಡ ಅನ್ನುತ್ತಿದ್ದಾರೆ. ಆದರೆ ಸಮಿತಿಯಲ್ಲಿ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳೂ ಇರುತ್ತಾರೆ. ಇವತ್ತು ವೈದ್ಯರು ಮತ್ತು ರೋಗಿಗಳ ಸಂಬಂಧದ ಕುರಿತು ಮಾತನಾಡುವವರು ರೋಗಿಗಳ ರಕ್ಷಣೆಗೆ ಕಾಯ್ದೆ ತರಲು ಹೊರಟರೆ ವಿರೋಧ ಮಾಡುತ್ತಿದ್ದಾರೆ,” ಎನ್ನುತ್ತಾರೆ ಡಾ. ಅಖಿಲಾ.

ಸಾವುಗಳು ಹೊಣೆ:

2007ರ ಕಾಯ್ದೆಗೆ ಹತ್ತು ವರ್ಷಗಳ ನಂತರ ತಿದ್ದುಪಡಿ ತರಲು ಸರಕಾರ ಹೊರಟಾಗ ಖಾಸಗಿ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಕಾಯ್ದೆಯು ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ಹೊರಟರೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರುವುದು ಖಾಸಗಿ ವೈದ್ಯರು. ಕಳೆದ ನಾಲ್ಕನೇ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 25 ಜನ ಸಾವನ್ನಪ್ಪಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವಿರಾರು ಜನ ಪರದಾಡುತ್ತಿದ್ದಾರೆ. ಈ ಸಾವುಗಳಿಗೆ ವೈದ್ಯರು ಎಷ್ಟು ಕಾರಣವೋ, ಸರಕಾರ ಕೂಡ ಸಮ ಪ್ರಮಾಣದಲ್ಲಿ ಹೊಣೆಯಾಗಬೇಕಿದೆ.

ಅದಕ್ಕೆ ಪ್ರಮುಖ ಕಾರಣ, ಖಾಸಗಿ ವೈದ್ಯಕೀಯ ಲಾಬಿಗೆ ಕಡಿವಾಣ ಹಾಕಲು ಸರಕಾರದ ಸಿದ್ಧತೆಗಳ ಕೊರತೆ. ಖಾಸಗಿ ವೈದ್ಯಕೀಯ ಕ್ಷೇತ್ರ ದನದಾಹಿಯಾಗಿ, ನಿರ್ಲಜ್ಜ ಉದ್ಯಮವಾಗಿ ಬೆಳೆಯಲು ಸರಕಾರದ ಪಾಲೂ ಇದೆ. ಇವತ್ತು ಸರಕಾರದ ಪ್ರಮುಖ ಸ್ಥಾನದಲ್ಲಿರುವವರ ಹಲವರು ಕೂಡ ಖಾಸಗಿ ಆಸ್ಪತ್ರೆಯ ಲಾಬಿಯಲ್ಲಿ ಪಾಲುದಾರರಾಗಿದ್ದಾರೆ. ಇಂತಹ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ಮಣಿಸಲು ಸರಕಾರ ತನ್ನದೇ ಆದ ತಂತ್ರಗಾರಿಕೆಯ ಮೊರೆ ಹೋಗಬೇಕಿತ್ತು. ಅದಕ್ಕಿಂತಲೂ ಮುಂಚೆ, ಸರಕಾರದ ಕನಿಷ್ಟ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಿತ್ತು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪಂಚತಾರ ಆಸ್ಪತ್ರೆಯೊಂದ ಭೂ ಕಬಳಿಕೆ ಪ್ರಕರಣ ದಿಕ್ಕು ತಪ್ಪಿದೆ. ಆರೋಗ್ಯ ವಿಮೆ ಸೇರಿದಂತೆ ರಾಜ್ಯದ್ಯಂತ ದಾಖಲಾದ ಮೆಡಿಕೋ ಲೀಗಲ್ ಪ್ರಕರಣಗಳಲ್ಲಿ ತಾರ್ಕಿಕ ಅಂತ್ಯ ಸಿಗುತ್ತಿಲ್ಲ. ಸರಕಾರ ಆರೋಗ್ಯ ಕ್ಷೇತ್ರದ ಸುಧಾರಣೆಯ ಕುರಿತು ಹೊಣೆಗಾರಿಕೆ ಇದ್ದಿದ್ದೇ ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಕೆಲವು ಪ್ರಕರಣಗಳಲ್ಲಾದರೂ ತನ್ನ ಗಟ್ಟಿತನವನ್ನು ತೋರಿಸಬೇಕಿತ್ತು. ಆದರೆ ಇದೀಗ, ಚುನಾವಣೆಯ ಹೊಸ್ತಿಲಿನಲ್ಲಿ ಕಾಯ್ದೆಯ ತಿದ್ದುಪಡಿಯನ್ನು ಮಂಡಿಸಲು ಮುಂದಾಗಿರುವುದರ ಹಿಂದೆ ಕಾಳಜಿಗಿಂತ, ರಾಜಕೀಯ ಕಾರಣಗಳು ಕಾಣಿಸುತ್ತಿದೆ. ಈ ಕುರಿತು ಸಾಕಷ್ಟು ಗಾಳಿ ಸುದ್ದಿಗಳೂ ಹರಿದಾಡುತ್ತಿವೆ.

ದಿಲ್ಲಿ ಮಾದರಿ: 

ಜವಾಬ್ದಾರಿಯುತ ಸರಕಾರ ಸಾಮಾನ್ಯ ಜನರ ಆರೋಗ್ಯ ಸೇವೆಯ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಇವತ್ತು ದೇಶದ ರಾಜಧಾನಿಯಲ್ಲಿ ತಲೆ ಎತ್ತಿರುವ ‘ಮೊಹಲ್ಲಾ ಕ್ಲಿನಿಕ್‌’ಗಳು ಮಾದರಿಯಾಗಿವೆ. ಜನರಿಗೆ ಬರುವ ಕಾಯಿಲೆಗಳಲ್ಲಿ ಶೇ. 90-95ರಷ್ಟು ಸಣ್ಣ ಕಾಯಿಲೆಗಳು. ಅವುಗಳಿಗೆ ಯಾವ ಪಂಚತಾರ ಆಸ್ಪತ್ರೆಗಳ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದು ದಿಲ್ಲಿ ಸರಕಾರ. ಹೀಗಾಗಿ, ಪ್ರತಿ 5 ಕಿ. ಮೀ ಅಂತರದಲ್ಲಿ ಒಂದೊಂದು ಮೊಹಲ್ಲಾ ಕ್ಲಿನಿಕ್‌ಗಳನ್ನು ಸರಕಾರ 2016ರಲ್ಲಿ ಆರಂಭಿಸಿತು. ಅಲ್ಲೀಗ 110 ರೀತಿಯ ಮದ್ದುಗಳು ಹಾಗೂ 212 ಡಯಾಗ್ನೋಸ್ಟಿಕ್ ಪರೀಕ್ಷೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

Delhi mohalla clinicಇದನ್ನು ಗಮನಿಸಿದ ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ ಕೋಫಿ ಅನ್ನಾನ್‌, “ದಿಲ್ಲಿಯ ಆರೋಗ್ಯ ಕ್ಷೇತ್ರದಲ್ಲಿ ತಲೆ ಎತ್ತಿರುವ ಮೊಹಲ್ಲಾ ಕ್ಲಿನಿಕ್‌ಗಳು ವಿಶ್ವಸಂಸ್ಥೆಯ ಯೂನಿವರ್ಸಲ್ ಹೆಲ್ತ್‌ ಕೇರ್ ಗೋಲ್‌ ಮುಟ್ಟುವ ಕೆಲಸ ಮಾಡುತ್ತಿವೆ,” ಎಂದು ಶ್ಲಾಘಿಸಿದ್ದಾರೆ. ವಾಷಿಂಗ್ಟನ್ ಪೋಸ್ಟ್‌ ನಡೆಸಿದ ರಿಯಾಲಿಟಿ ಚೆಕ್‌ ನಂತರ, ಅಮೆರಿಕಾ ಆರೋಗ್ಯ ಕ್ಷೇತ್ರಕ್ಕೆ ಮೊಹಲ್ಲಾ ಕ್ಲಿನಿಕ್‌ಗಳು ಮಾದರಿ ಎಂದು ಹೇಳಿದೆ.

ಇವುಗಳ ಜತೆಗೆ, 2016ರ ಜೂನ್‌ ತಿಂಗಳಿನಲ್ಲಿ ದಿಲ್ಲಿ ಸರಕಾರ ಅಲ್ಲಿನ 4 ಪ್ರಮುಖ ಖಾಸಗಿ ಆಸ್ಪತ್ರೆಗಳ ಮೇಲೆ ಸುಮಾರು 600 ಕೋಟಿ ರೂಪಾಯಿ ದಂಡ ವಿಧಿಸಿತು. ನಿಯಮಗಳ ಪ್ರಕಾರ ಶೇ. 25ರಷ್ಟು ಹೊರರೋಗಿಗಳಿಗೆ, ಶೇಕಡಾ 10ರಷ್ಟು ಒಳರೋಗಿಗಳಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಫೋರ್ಟಿಸ್‌ ಎಸ್ಕಾರ್ಟ್‌ ಹೆಲ್ತ್‌ ಇನ್ಸಿಸ್ಟಿಟ್ಯೂಟ್, ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಆರು ಆಸ್ಪತ್ರೆಗಳಿಗೆ ದಂಡ ಹಾಕಲಾಗಿತ್ತು. ನಂತರ ದಿನಗಳಲ್ಲಿ ಅಲ್ಲಿನ ವಾತಾವರಣ ಬದಲಾಗಿದೆ. ಸಾಮಾನ್ಯ ಕಾಯಿಲೆಗಳಿಗೆ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಸಿಗುತ್ತಿದ್ದರೆ, ಹೆಚ್ಚಿನ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶ ಸಿಗುತ್ತಿದೆ.

ಕರ್ನಾಟಕ ವಿಚಾರಕ್ಕೆ ಬರುವುದಾದರೆ, ಒಂದು ಕಡೆ ಸರಕಾರಿ ಆಸ್ಪತ್ರೆಗಳು ದಿನದಿಂದ ದಿನಕ್ಕೆ ಸೊರಗಿ ಹೋಗುತ್ತವೆ. ಆರೋಗ್ಯ ವಿಮೆಯ ಕೋಟ್ಯಾಂತರ ರೂಪಾಯಿ ಹಣ ಖಾಸಗಿ ಲಾಬಿಗಳ ಪಾಲಾಗುತ್ತಿದೆ. ಸಾಮಾನ್ಯ ಚಿಕಿತ್ಸೆಗಳಿಗೂ ಕೂಡ ದುಬಾರಿ ಹಣ ತೆರುವ ಪರಿಸ್ಥಿತಿ ಇದೆ. ಖಾಸಗಿ ಆಸ್ಪತ್ರೆಗಳು ಕೆಲಸ ನಿಲ್ಲಿಸಿದರೆ 25 ಜನರ ಸಾವಾಗುತ್ತದೆ. ಇಂತಹ ಸಮಯದಲ್ಲಿ ಸಿದ್ಧತೆಯೇ ಇಲ್ಲದೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟರೆ ಏನಾಗಬೇಕೋ ಅದಾಗುತ್ತಿದೆ. ಸದ್ಯ ನಡೆಯುತ್ತಿರುವ ಬೆಳವಣಿಗೆಯ ಒಟ್ಟಾರೆ ಸಾರಾಂಶ ಇಷ್ಟೆ.

ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಜನಪರ ಕಾಳಜಿ ಇದ್ದದ್ದೇ ಆದರೆ, ಉಳಿದಿರುವ ಕೆಲವು ತಿಂಗಳುಗಳ ಆಡಳಿತದ ಅವಧಿಯಲ್ಲಿ ಸರಕಾರಿ ವೈದ್ಯಕೀಯ ಕ್ಷೇತ್ರದ ಸುಧಾರಣೆ ಕುರಿತು ಗಮನ ಹರಿಸಬೇಕಿದೆ. ಖಾಸಗಿ ಆಸ್ಪತ್ರೆಗಳಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಬಿಸಿ ಮುಟ್ಟಿಸಲಿ. ಅದರ ಮೊದಲ ಹಂತವಾಗಿ, ಚಳಿಗಾಲದ ಅಧಿವೇಶನದಲ್ಲಿಯೇ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಮಂಡಿಸಬೇಕಿದೆ.

Leave a comment

Top