An unconventional News Portal.

ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?

Donald Trump Sworn Inಕಳೆದ ಶುಕ್ರವಾರ ಅಮೆರಿಕಾದ ವಾಷಿಂಗ್ಟನ್ ಶ್ವೇತಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್, “ಅಮೆರಿಕ ಉತ್ಪನ್ನಗಳನ್ನು ಕೊಳ್ಳಿರಿ; ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಕೆಲವು ದಿನಗಳಲ್ಲಿ ಅಮೆರಿಕಾದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ವಿದೇಶಿ ಕಂಪನಿಗಳಿಗೆ ಹಾಗೂ ವಲಸಿಗರಾಗಿ ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಇನ್ನು ಮುಂದೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಪಾಲು ದಕ್ಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಚೈನಾ ‘ತನ್ನ ದೇಶದ ಕಂಪನಿಗಳ ಹಾಗೂ ಕಾರ್ಮಿಕರ ತಂಟೆಗೆ ಬಂದರೆ ಸರಿ ಇರುವುದಿಲ್ಲ’ ಎಂದು ಹೇಳಿದೆ. ಆರ್ಥಿಕ ವಿಶ್ಲೇಷಕರ ಪ್ರಕಾರ, ಈಗಾಗಲೇ ಅಮೆರಿಕಾದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿರುವುದು ಚೈನಾ. ಒಂದು ವೇಳೆ ಚೈನಾವನ್ನು ಎದುರು ಹಾಕಿಕೊಳ್ಳಲು ಟ್ರಂಪ್ ಹೊರಟಿದ್ದೇ ಆದರೆ, ಕಮ್ಯುನಿಸ್ಟ್ ದೇಶ ತನ್ನ ಹೂಡಿಕೆಯನ್ನು ಹಿಂಪಡೆಯುವ ಮೂಲಕ ಅಮೆರಿಕಾದ ಆರ್ಥಿಕತೆಗೆ ಕೊಡಲಿ ಏಟು ಕೊಡಲಿದೆ. ಹೀಗಾಗಿ, ಟ್ರಂಪ್ ಏನೇ ಘೋಷಣೆ ಮಾಡಿದರೂ ಚೈನಾ ತನ್ನ ಆರ್ಥಿಕ ಹಿತಾಸಕ್ತಿಯನ್ನು ಅಮೆರಿಕಾ ನೆಲದಲ್ಲಿ ಕಾಪಾಡಿಕೊಳ್ಳಲಿದೆ.

ಅದನ್ನು ಹೊರತುಪಡಿಸಿದರೆ, ಟ್ರಂಪ್ ಘೋಷಣೆಯ ಹೊಡೆತ ನೇರವಾಗಿ ತಟ್ಟಲಿರುವುದು ಭಾತರ ಮೂಲಕ ಐಟಿ ಕಂಪನಿಗಳಿಗೆ ಎನ್ನುತ್ತವೆ ವರದಿಗಳು.

15 ಸಾವಿರ ಕೋಟಿ ವಹಿವಾಟು:

ಭಾರತದ ಐಟಿ ಕ್ಷೇತ್ರ ವಾರ್ಷಿಕ ಸುಮಾರು 20 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಇದರಲ್ಲಿ ಶೇ. 75ರಷ್ಟು (15 ಸಾವಿರ ಕೋಟಿ) ವಹಿವಾಟು ಸಾಫ್ಟ್ವೇರ್ ರಫ್ತು ಮಾರುಕಟ್ಟೆ. ರಫ್ತು ಮಾರುಕಟ್ಟೆಯ ಶೇ. 60ರಷ್ಟು ಉತ್ಪನ್ನಗಳು ಅಮೆರಿಕಾದ ಮಾರುಕಟ್ಟೆಯನ್ನು, ವಿಶೇಷವಾಗಿ ಅಲ್ಲಿನ ಸಿಲಿಕಾನ್ ವ್ಯಾಲಿಯನ್ನು ನೆಚ್ಚಿಕೊಂಡಿದೆ. ಒಂದು ವೇಳೆ, ‘ಅಮೆರಿಕಾದ ಉತ್ಪನ್ನಗಳನ್ನೇ ಖರೀದಿಸಿ’ ಎಂಬುದನ್ನು ಟ್ರಂಪ್ ಸರಕಾರ ನೀತಿಯ ರೂಪದಲ್ಲಿ ಹೇರಿದರೆ ಭಾರತದ ಸಾಫ್ಟ್ ವೇರ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹೊಡೆತ ತಿನ್ನಲಿವೆ. ‘ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುವುದು’ ಅನಿವಾರ್ಯವಾದರೆ, ಸದ್ಯ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮ ಕೌಶಲ್ಯವನ್ನು ವಿನಿಯೋಗಿಸುತ್ತಿರುವ ಭಾರತೀಯ ಉದ್ಯೋಗಿಗಳ ಕೆಲಸಕ್ಕೆ ಸಂಚಕಾರ ಬರಲಿದೆ.

ವೀಸಾಕ್ಕೆ ಕತ್ತರಿ: 

ಈಗಾಗಲೇ, ವಿದೇಶಿ ಕೆಲಸಗಾರರಿಗೆ ಸುಲಭವಾಗಿ ಅಮೆರಿಕಾದಲ್ಲಿ ಕೆಲಸದ ವೀಸಾ ಸಿಗದಂತೆ ಕಾನೂನಾತ್ಮಕ ಚೌಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಈವರೆಗೆ, ಭಾರತ ಮೂಲದ ಸಾಫ್ಟ್ ವೇರ್ ಕಂಪನಿಗಳು ತಮ್ಮ ಕೆಲಸಗಾರರನ್ನು ಅಮೆರಿಕಾಗೆ ಕಳುಹಿಸಿಕೊಡುತ್ತಿದ್ದವು. ಆ ಮೂಲಕ ತಮ್ಮ ಉತ್ಪನ್ನಗಳನ್ನು ಕೊಳ್ಳುವವರ ಮನಸ್ಥಿತಿ ಮತ್ತು ಅಗತ್ಯಗಳನ್ನು ಅವು ಅರಿಯುವ ಪ್ರಯತ್ನ ಮಾಡುತ್ತಿದ್ದವು. ನಂತರ ಅವರ ಇಶಾರೆ ಮೇರೆಗೆ ಸಾಫ್ಟ್ ವೇರ್ಗಳನ್ನು ಭಾರತದಲ್ಲಿ ತಯಾರಿಸಿ ರಫ್ತು ಮಾಡಲಾಗುತ್ತಿತ್ತು. ಆದರೆ, ವೀಸಾ (ಎಚ್- 1 ಬಿ, ಎಲ್- 1) ನೀಡಲು ಕಠಿಣ ಕಾನೂನುಗಳನ್ನು ರೂಪಿಸಿರುವ ಹಿನ್ನೆಲೆಯಲ್ಲಿ ಭಾರತದ ಸಾಫ್ಟ್ ವೇರ್ ಕಂಪನಿಗಳಿಗೆ ಸುಲಭವಾಗಿ ತಮ್ಮ ಮಾನವ ಸಂಪನ್ಮೂಲವನ್ನು ಕಳುಹಿಸಲು ಕಷ್ಟವಾಗುತ್ತಿದೆ.

ಎಚ್- 1 ಬಿ ವೀಸಾ ಕೊಡುವ ಮುನ್ನ ಅಮೆರಿಕಾ ಕಂಪನಿಗಳು ಕನಿಷ್ಟ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಹೊಸ ಕಾನೂನು ರೂಪಿಸಲಾಗಿದೆ. ಅದನ್ನು ಜಾರಿಗೆ ತಂದರೆ, ಎಚ್- 1 ಬಿ ವೀಸಾ ಮೂಲಕ ಅಮೆರಿಕಾಗೆ ಹೋಗುವ ಕೆಲಸಗಾರರಿಗೆ ಕನಿಷ್ಟ ವೇತನವನ್ನು ದುಪ್ಪಟ್ಟು ಮಾಡಬೇಕಾಗಲಿದೆ. ಹೆಚ್ಚಿನ ವೇತನ ನೀಡುವ ಬದಲು ಸ್ಥಳೀಯ ಮಾನವ ಸಂಪನ್ಮೂಲಗಳಿಗೆ ಮೊರೆ ಹೋಗುವಂತೆ ಮಾಡಲು ಟ್ರಂಪ್ ಸರಕಾರ ಯೋಜನೆ ರೂಪಿಸಿದೆ.

ಈವರೆಗೆ ಪ್ರತಿವರ್ಷ ಅಮೆರಿಕಾದ ಕಂಪನಿಗಳು ಎಚ್- 1ಬಿ ವೀಸಾ ಅಡಿಯಲ್ಲಿ ಸುಮಾರು 65 ಸಾವಿರ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದವು. ಇದರಲ್ಲಿ ಶೇ. 65ರಷ್ಟು ಕೆಲಸಗಾರರು ಕಂಪ್ಯೂಟರ್ ಸಂಬಂಧಿತ ಕೆಲಸಗಳಿಗೆ ಅಮೆರಿಕಾಗೆ ಬಂದಿಳಿಯುತ್ತಿದ್ದರು ಮತ್ತು ಭಾರತದ ಪಾಲು ದೊಡ್ಡದಿತ್ತು.

ಇದೀಗ, ಟ್ರಂಪ್ ಸರಕಾರದ ‘ರಾಷ್ಟ್ರೀಯ ನೀತಿ’ ದೊಡ್ಡ ಪ್ರಮಾಣದಲ್ಲಿ ಭಾರತದ ಐಟಿ ಕಂಪನಿಗೆ ಹೊಡೆತ ಕೊಡಲಿದೆ. ವಿಶೇಷ ಎಂದರೆ, ಆರಂಭದಲ್ಲಿ ಟ್ರಂಪ್ ನೀತಿಗಳನ್ನು ಪರೋಕ್ಷವಾಗಿ ಇದೇ ವರ್ಗದ ಜನ ಬೆಂಬಲಿಸಿದ್ದರು. ಅವರ ಹೊಸ ತೀರ್ಮಾಣಗಳ ಮೊದಲ ಹೊಡೆತ ಅದೇ ವರ್ಗಕ್ಕೆ ಬೀಳಲಿದೆ ಎಂಬುದು ಗಮನಾರ್ಹ.

 

Leave a comment

Top