An unconventional News Portal.

ಮಾಡದ ತಪ್ಪಿಗೆ 23 ವರ್ಷ ಜೈಲು: ಮಗನ ಬಿಡುಗಡೆಗಾಗಿ ಗುಲ್ಬರ್ಗದ ಈ ತಾಯಿ ಹಾಕಿದ ಕಣ್ಣೀರು ಹುಸಿಹೋಗಲಿಲ್ಲ!

ಮಾಡದ ತಪ್ಪಿಗೆ 23 ವರ್ಷ ಜೈಲು: ಮಗನ ಬಿಡುಗಡೆಗಾಗಿ ಗುಲ್ಬರ್ಗದ ಈ ತಾಯಿ ಹಾಕಿದ ಕಣ್ಣೀರು ಹುಸಿಹೋಗಲಿಲ್ಲ!

ಕಳೆದ ತಿಂಗಳು ಆತನಿಗೆ ಸಂಭ್ರಮವೋ ಸಂಭ್ರಮ. ಗಿಳಿಮರಿಯನ್ನು ಗೂಡಿನಿಂದ ಬಿಟ್ಟ ಸಂತೋಷ ಅವರ ಮುಖದಲ್ಲಿತ್ತು. ನಮ್ಮದೇ ಗುಲ್ಬರ್ಗ ಮೂಲದ ನಿಸಾರ್ ಉದ್ದೀನ್ ಅಹಮದ್ ಕಥೆ ಇದು. ಒಂದೇ ಒಂದು ಸುಳ್ಳು ಆರೋಪ ಇವರನ್ನು 23 ವರ್ಷ ಜೈಲು ಶಿಕ್ಷೆಗೆ ದೂಡಿತು. ಕೊನೆಗೂ ಆರೋಪ ಸಾಬೀತಾಗದೆ ಕಳೆದ ತಿಂಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಳ್ಳು ಆರೋಪಕ್ಕೆ ಬಲಿಯಾಗಿ ತನ್ನ ಬದುಕಿನ ಅಮೂಲ್ಯ ದಿನಗಳನ್ನು ಜೈಲಿನಲ್ಲಿ ಕಳೆದ ನತದೃಷ್ಟನ ಕತೆಯನ್ನು ಕರ್ನಾಟಕದ ಮೂಲದ ಹಿರಿಯ ಪತ್ರಕರ್ತ ಇಮ್ರಾನ್ ಖುರೇಶಿ ಬಿಬಿಸಿ- ಹಿಂದಿಗಾಗಿ ವರದಿ ಮಾಡಿದ್ದಾರೆ. ಅದರ ಸಂಗ್ರಹ ರೂಪ ಇದು.

ಆಗಿನ್ನೂ ಆತನಿಗೆ 20 ವರ್ಷ ವಯಸ್ಸು. ಎಲ್ಲರಂತೆ ತಿರುಗಾಡುತ್ತಾ ಕಾಲೇಜು ಹೋಗುತ್ತಿದ್ದ ವಯಸ್ಸು. ಅದೇ ಕಾಲಕ್ಕೆ 1993ರಲ್ಲಿ ಮುಂಬೈನ ಐದು ರೈಲುಗಳಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿತ್ತು. ಇದರಲ್ಲಿ ಇಬ್ಬರು ಸಾವನ್ನಪ್ಪಿ 8 ಜನ ಗಾಯಗೊಂಡರು. ಎಲ್ಲಾ ಬಾಂಬ್ ಸ್ಪೋಟಗಳಾದಾಗಲೂ ಅನುಮಾನದ ಮುಳ್ಳು ಮುಸ್ಲಿಂ ಯುವಕರ ಕಡೆ ತಿರುಗುವಂತೆ ಇಲ್ಲೂ ಅದೇ ಆಯಿತು.

ಅದು ಜನವರಿ 15, 1994. ತನ್ನ ಫಾರ್ಮಸಿ ಕಾಲೇಜಿಗೆ ಹೋಗಲು ನಿಸಾರ್ ಮನೆಯಲ್ಲಿ ಸಿದ್ಧವಾಗುತ್ತಿದ್ದರು. ಈ ಸಮಯದಲ್ಲಿ ಮನೆಗೆ ಬಂದ ಪೊಲೀಸರು ಆತನನ್ನು ಕರೆದೊಯ್ದಿದ್ದರು. “ನನ್ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಪ್ರೊಡೂಸ್ ಮಾಡುವ ಮುನ್ನ ಕಾನೂನಿಗೆ ವಿರುದ್ಧವಾಗಿ 43 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಳ್ಳಲಾಗಿತ್ತು. ನನಗೆ ಹೊಡೆದ್ರು, ಹಿಂಸೆ ನೀಡಿದ್ರು, ತಲೆ ಕೆಳಗಾಗಿ ಕಟ್ಟಿ ಹಾಕಿ ಮತ್ತಷ್ಟು ಹೊಡೆದ್ರು. ನಾನು ಮಾಡಿದ ತಪ್ಪಾದರೂ ಏನು ಅಂತ ಅವರಲ್ಲಿ ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಿದ್ದೆ, ಬೇಡಿಕೊಳ್ಳುತ್ತಿದ್ದೆ. ಕೊನೆಗೆ ‘ಒತ್ತಾಯಪೂರ್ವಕ ತಪ್ಪೊಪ್ಪಿಗೆ’ಗೆ ಸಹಿ ಹಾಕಿಸಿಕೊಂಡರು,” ಎಂದು 23 ವರ್ಷಗಳ ಹಿಂದಿನ ನೆನಪುಗಳನ್ನು ಹೇಳಿಕೊಳ್ಳುವಾಗ ನಿಸಾರ್ ಕಣ್ಣೀರು ಹಾಕುತ್ತಾರೆ.

ಇದಾದ ಮೂರೇ ತಿಂಗಳಿಗೆ ಅಣ್ಣ ಜಹೀರ್ ಉದ್ದೀನ್ ಅಹ್ಮದ್ರನ್ನೂ ಬಂಧಿಸಲಾಗಿತ್ತು. ಕೊನೆಗೆ ಭಯೋತ್ಪಾದನೆಯ ಆರೋಪದ ಮೇಲೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಆರೋಗ್ಯದ ಸಮಸ್ಯೆಯಿಂದಾಗಿ ಇವರನ್ನು 2008ರಲ್ಲಿ ಬಂಧ ಮುಕ್ತ ಗೊಳಿಸಲಾಗಿತ್ತು.

ರಾಜಾಸ್ಥಾನದಲ್ಲಿ ತಮ್ಮ ನಿಸಾರ್'ನನ್ನು ಸ್ವಾಗತಿಸಲು ತೆರಳಿದ್ದ ಜಹೀರ್

ರಾಜಾಸ್ಥಾನದಲ್ಲಿ ತಮ್ಮ ನಿಸಾರ್’ನನ್ನು ಸ್ವಾಗತಿಸಲು ತೆರಳಿದ್ದ ಜಹೀರ್

“ನನಗೆ ಶ್ವಾಸಕೋಶದ ಕ್ಯಾನ್ಸರ್ ಇದ್ದ ಕಾರಣಕ್ಕೆ ಜಾಮೀನು ಸಿಕ್ಕಿತು. ಆದರೆ ನಿರಪರಾಧಿ ಎಂದು ಪ್ರೂವ್ ಮಾಡಲು ನಾನು ಹೋರಾಟ ಮುಂದುವರಿಸಿದೆ,” ಎನ್ನುವುದು ಅವರ ಅಣ್ಣ ಝಹೀರ್ ಉದ್ದಿನ್ ಅಹಮದ್ ಮಾತು.

ಕಳೆದ ತಿಂಗಳು ತಮ್ಮ ಜೈಲಿನಿಂದ ಬರುವುದನ್ನು ಸ್ವಾಗತಿಸಲು ಇವರು ರಾಜಸ್ಥಾನದ ಜೈಲಿಗೆ ತೆರಳಿದ್ದರು. ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಾಗ ಬಿಡುಗಡೆಯ, ಸ್ವಾತಂತ್ರ್ಯ ಅನುಭವಕ್ಕೆ ಬಂದಿತ್ತು. ಆದರೆ, ಕಳೆದುಕೊಂಡಿದ್ದನ್ನು ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ ಎಂಬ ಕೊರಗು ಹಾಗೆಯೇ ಉಳಿದಿದೆ.

“ನನ್ನ ಸ್ವಂತ ಪಟ್ಟಣದಲ್ಲೇ ಈಗ ನಾನು ಅಪರಿಚಿತ. ನನ್ನ ಸಂಬಂಧಿಕರನ್ನು ಔಪಚಾರಿಕವಾಗಿ ತನಗೆ ಪರಿಚಯಿಸಲಾಯ್ತು. ನನ್ನ ತಂದೆ ನನ್ನ ಪರವಾಗಿ ಹೋರಾಡುತ್ತಲೇ 2006ರಲ್ಲಿ ಇಹಲೋಕ ತ್ಯಜಿಸಿದ್ರು. ಇವತ್ತಿಗೆ ನನ್ನ ಭವಿಷ್ಯ ಹೇಗೆ ಎಂಬುದೇ ನನಗೆ ಗೊತ್ತಿಲ್ಲ. ನನ್ನ ಒಳ್ಳೆಯ ಸಮಯವೆಲ್ಲಾ ಜೈಲಿನಲ್ಲೇ ಕಳೆದು ಹೋಯ್ತು. ನನ್ನನ್ನು ಜೈಲಿಗೆ ಕರೆದುಕೊಂಡು ಹೋದಾಗ ನನಗೆ 20 ವರ್ಷ. ಈಗ 43. ಹೊಸ ಜೀವನ ಆರಂಭಿಸಲು ಸಾಧ್ಯವಿಲ್ಲ.” ಎನ್ನುತ್ತಾರೆ ನಿಸಾರ್.

ಹೀಗೆ ಇನ್ನೂ ಬಾಳಿ ಬದುಕಬೇಕಾಗಿದ್ದ ಎಳೆಯ ಜೀವ ಕಂಬಿ ಹಿಂದೆ ಸೇರಿ ಬಿಟ್ಟಿತು.  ಅಲ್ಲಿಂದ ಕರಾಳ ದಿನಗಳು ಆರಂಭವಾದವು. ತನ್ನದೇನೂ ತಪ್ಪಿಲ್ಲದಿದ್ದರೂ ಕೆಲ ನ್ಯಾಯಾಲಯಗಳು ನಿಸಾರ್ ಉದ್ದೀನ್ ಅಹಮದ್ನಿಗೆ ಶಿಕ್ಷೆ ಪ್ರಕಟಿಸಿ ಬಿಟ್ಟವು. ಆದರೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಲೇರಿತು. ಕೊನೆಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಕಳೆದ ತಿಂಗಳೂ ನಾಸಿರ್ ಉದ್ದೀನ್ ಅಹಮದ್ರನ್ನು ಸುಪ್ರೀಂ ಕೋರ್ಟ್ ದೋಷಮುಕ್ತಗೊಳಿಸಿದೆ.

ಮೊನ್ನೆ ರಾತ್ರಿ ಇದೇ ನಿಸಾರ್ ಉದ್ದೀನ್ ಅಹಮದ್ ಮನೆಗೆ ಬಂದಿದ್ದರು. ಮಧ್ಯರಾತ್ರಿ ಮನೆ ಬಾಗಿಲು ಬಡಿದಾಗ ಮಗನನ್ನು ನೋಡಿ ಅಮ್ಮನಿಗೆ ನಂಬಲು ಸಾಧ್ಯವಾಗಲಿಲ್ಲ. ಎಲ್ಲಿ ಕನಸು ಕಾಣುತ್ತಿದ್ದೇನಾ ಎಂದು ಖಾತರಿ ಪಡಿಸಿಕೊಳ್ಳಲು ತಲೆ ಮುಟ್ಟಿ ನೋಡಿದರು. ಹೌದು ಮಗ ಮನೆಗೆ ಬಂದಿದ್ದ.

ಇಷ್ಟೆಲ್ಲಾ ಆದ ಮೇಲೆ ಆತ ಹೇಳುವುದು ಇಷ್ಟೇ. “ನನ್ನ ತಾಯಿ ತನ್ನ ಮಗನಿಗಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಣ್ಣೀರು ಸುರಿಸಿದ್ರು. ಈ ರೀತಿ ಯಾವ ತಾಯಿಗೂ ಆಗಬಾರದು. ಬೇರೆ ಯಾವುದೇ ನಿರಪರಾಧಿ ಈ ರೀತಿ ಕೊರಗಬಾರದು. ಇದು ಆಡಳಿತದಲ್ಲಿರುವವರಿಗೆ ತಟ್ಟಬೇಕು ಎಂಬುದಷ್ಟೇ ನನ್ನ ಹಾರೈಕೆ,” ಅಂತ.

23 ವರ್ಷಗಳಲ್ಲಿ ಅವರ ತಾಯಿ, ಮನೆಯವರು, ಸ್ವತಃ ಅವರು ಅನುಭವಿಸಿದ ನೋವಿನಿಂದ ಹೊರಗೆ ಬಂದ ನಿಟ್ಟುಸಿರು ಅದಾಗಿತ್ತು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top