An unconventional News Portal.

14 ವರ್ಷಗಳ ನಂತರ ‘ಗುಲ್ಬರ್ಗ್ ಸೊಸೈಟಿ ಪ್ರಕರಣ’ದಲ್ಲಿ 24 ಜನರಿಗೆ ಶಿಕ್ಷೆ

14 ವರ್ಷಗಳ ನಂತರ ‘ಗುಲ್ಬರ್ಗ್ ಸೊಸೈಟಿ ಪ್ರಕರಣ’ದಲ್ಲಿ 24 ಜನರಿಗೆ ಶಿಕ್ಷೆ

ದೇಶಾದ್ಯಂತ ತಲ್ಲಣ ಮೂಡಿಸಿದ್ದ ಗುಜರಾತಿನ ಕೋಮು ಸಂಘರ್ಷದ ಸಮಯದಲ್ಲಿ ನಡೆದ ‘ಗುಲ್ಬರ್ಗ್ ಸೊಸೈಟಿ’ ಪ್ರಕರಣದಲ್ಲಿ 24 ಜನರಿಗೆ ಶಿಕ್ಷೆ ವಿಧಿಸಿ ಅಹಮದಾಬಾದ್ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಹೊರಟಿಸಿದೆ.

ಒಟ್ಟು 66 ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಈ ಪೈಕಿ 24 ಮಂದಿಗೆ ಶಿಕ್ಷೆ ಪ್ರಕಟವಾಗಿದೆ. 11 ಜನರ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ತೀರ್ಪಿನ ಹಿನ್ನೆಲೆಯಲ್ಲಿ ಪ್ರಮುಖ 10 ಅಂಶಗಳು ಇಲ್ಲಿವೆ.


  1. ಪ್ರಕರಣದ ನಡೆದು 14 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮು ಹಿಂಸಾಚಾರದ ಸಮಯದಲ್ಲಿ 29 ಬಂಗಲೆಗಳು ಹಾಗೂ 10 ವಸತಿ ಸಮುಚ್ಚಯಗಳನ್ನು ಒಳಗೊಂಡಿದ್ದ ಗುಲ್ಬರ್ಗ್ ಸೊಸೈಟಿಗೆ ನುಗ್ಗಿದ ಮತಾಂಧರು 69 ಮುಸ್ಲಿಂರನ್ನು ಕೊಂದು ಹಾಕಿದ್ದರು. ಇದರಲ್ಲಿ ಕಾಂಗ್ರೆಸ್ ಮಾಜಿ ಸಂಸದ ಎಹಸಾನ್ ಜಾಫ್ರಿ ಕೂಡ ಸೇರಿದ್ದರು.

  2. ಫೆ. 28, 2002ರಲ್ಲಿ ನಡೆದ ಘಟನೆಯಲ್ಲಿ 66 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರಲ್ಲಿ 5 ಮಂದಿ ವಿಚಾರಣೆ ಸಮಯದಲ್ಲಿಯೇ ಸಾವನ್ನಪ್ಪಿದ್ದರು.

  3. ಇಲ್ಲಿನ ಅಸರ್ಹ ಏರಿಯಾ ಪಾಲಿಕೆ ಸದಸ್ಯ, ಬಿಜೆಪಿ ಪಕ್ಷದ ಬಿಪಿನ್ ಪಟೇಲ್ ದಾಳಿ ನಡೆಸಿದವರ ಜತೆಯಲ್ಲಿದ್ದರು. ಈತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು. 2002ರಿಂದ ಚುನಾವಣೆಗೆ ನಿಲ್ಲುತ್ತ ಬಂದ ಪಟೇಲ್ ಒಟ್ಟು ನಾಲ್ಕು ಬಾರಿ ಆಯ್ಕೆ ಆಗಿದ್ದರು. ಅವರನ್ನು ಆರೋಪಿಯನ್ನಾಗಿ ವಿಶೇಷ ತನಿಖಾ ತಂಡ ಹೆಸರಿಸಿತ್ತು. ಇದೀಗ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ.

  4. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಅತುಲ್ ವೈದ್ಯನನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.

  5. ಗೋಧ್ರಾ ಘಟನೆಯ ನಂತರ ಗುಜರಾತ್ ರಾಜ್ಯದಲ್ಲಿ ಕೋಮು ಹಿಂಸಾಚಾರ ನಡೆದಿತ್ತು. ಈ ಸಮಯದಲ್ಲಿ ಹಿಂದೂ ಸಂಘಟನೆಗಳು ಗುಲ್ಬರ್ಗ್ ಸೊಸೈಟಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಕಂಡ ಕಂಡವರನ್ನು ಇರಿದಿದ್ದರು. ಕೊನೆಗೆ ಒಟ್ಟು 69 ಮೃತ ದೇಹಗಳು ಪತ್ತೆಯಾಗಿದ್ದವು. ಇವತ್ತಿಗೂ ಗುಜರಾತ್ ಹಿಂಸಾಚಾರದ ಪಳಯುಳಿಕೆಯಂತೆ ಇರುವ ಗುಲ್ಬರ್ಗ್ ಸೊಸೈಟಿ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ.

  6. ಕಾಂಗ್ರೆಸ್ ಮಾಜಿ ಸಂಸದ ಎಹಸಾನ್ ಜಾಫ್ರಿ ಗಲಭೆ ಆರಂಭವಾಗುತ್ತಿದ್ದಂತೆ ಪೊಲೀಸರಿಗೆ ಮೊರೆ ಇಡುವ ಹಲವು ಕರೆಗಳನ್ನು ಮಾಡಿದ್ದರು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯನ್ನೂ ಸಂಪರ್ಕಿಸಿದ್ದರು. ಆದರೆ, ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದವು.

  7. ಕೊನೆಗೆ, ಎಹಸಾನ್ ಜಾಫ್ರಿ ಪತ್ನಿ ಝಾಕಯಾ ಜಾಫ್ರಿ ತನ್ನ ಪತಿಯ ಕೊಲೆಗೆ ನ್ಯಾಯ ಬೇಕು ಎಂದು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಕೊಲೆಗಡುಕರಿಗೆ ಮರಣದಂಡನೆ ವಿಧಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

  8. ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ಕೋಮುಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರು ಆರೋಪ ಮಾಡಿದ್ದರು. ಹಿಂಸಾಚಾರದಲ್ಲಿ ಬಲಿಯಾದ ಸಾವಿರಕ್ಕೂ ಅಧಿಕ ಮಂದಿಯ ಜೀವ ತೆಗೆಯಲು ಮೋದಿ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಆದರೆ ವಿಚಾರಣೆ ವೇಳೆಯಲ್ಲಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.

  9. ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆ ಸಮಯದಲ್ಲಿ ಸಾವನ್ನಪ್ಪಿದ 14 ವರ್ಷದ ಬಾಲಕ ಅಝರ್ ಪಾರ್ಸಿ ನೆನಪಿನಲ್ಲಿ ಬಾಲಿವುಡ್ ನಿರ್ದೇಶಕ ರಾಹುಲ್ ದೋಲಾಕಿಯಾ ‘ಫರ್ಝಾನಿಯಾ’ ಎಂಬ ಸಿನೆಮಾ ಮಾಡಿದ್ದರು.

  10. 2009ರ ಸುಮಾರಿಗೆ ಪ್ರಕರಣದ ವಿಚಾರಣೆ ಶುರುವಾಗಿತ್ತು. 7 ವರ್ಷಗಳ ನಂತರ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ವಿಚಾರಣೆ ಮುಗಿದಿತ್ತು. ಸುಪ್ರಿಂ ಕೋರ್ಟ್ ಮೇ. 31ಕ್ಕೆ ತೀರ್ಪು ನೀಡುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ 39 ಜನರನ್ನು ಜೀವಂತ ಸುಡಲಾಗಿತ್ತು ಎಂದು ಉಲ್ಲೇಖಿಸಿತ್ತು.

 

Top