An unconventional News Portal.

ದಿಲ್ಲಿಯಲ್ಲಿ ಸಿದ್ದರಾಮಯ್ಯ ಭೇಟಿಯಾದ ಗುಡಿಬಂಡೆಯ ‘ಕನ್ನಡದ ಮುನಿಯಮ್ಮ’; ಯಾರು ಗೊತ್ತಾ?

ದಿಲ್ಲಿಯಲ್ಲಿ ಸಿದ್ದರಾಮಯ್ಯ ಭೇಟಿಯಾದ ಗುಡಿಬಂಡೆಯ ‘ಕನ್ನಡದ ಮುನಿಯಮ್ಮ’; ಯಾರು ಗೊತ್ತಾ?

ದಿಲ್ಲಿಯ ಕರ್ನಾಟಕದ ಭವನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗುವ ಮೂಲಕ ಸುದ್ದಿಯಾದ ಮುನಿಯಮ್ಮ, ಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ಟಣ ಪಂಚಾಯ್ತಿ ಗುಡಿಬಂಡೆಯ ಜನರ ಪಾಲಿಗೆ ‘ಕನ್ನಡದ ಮುನಿಯಮ್ಮ’ ಎಂದೇ ಜನಪ್ರಿಯರು.

ಕಳೆದ ಒಂದು ದಶಕದಿಂದ ಈಚೆಗೆ ಕಂದಾಯ ಇಲಾಖೆ, ಸ್ಥಳೀಯ ತಹಶೀಲ್ದಾರ್ ಕಚೇರಿಯಿಂದ ಹಿಡಿದು ಬೆಂಗಳೂರು ಮತ್ತು ದಿಲ್ಲಿಯ ನಾನಾ ಅಧಿಕಾರ ಕೇಂದ್ರಗಳ ಮುಂದೆ ಮನವಿ ಪತ್ರ ಸಲ್ಲಿಸಿಕೊಂಡ ಬಂದ ಇವರದ್ದು ‘ತಬರನ ಕತೆ’. ಸೋಮವಾರ ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಸಂಬಂಧ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ಮೂಲಕ ಮುನಿಯಮ್ಮ ದೇಶಾದ್ಯಂತ ಗಮನ ಸೆಳೆದಿದ್ದಾರೆ.

ಜಾಗದ ವಿವಾದ:

ಗುಡಿಬಂಡೆಯ ಮುನಿಯಮ್ಮ ದಿಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಥಳೀಯ ಜನ “ಮುನಿಯಮ್ಮ ಹಠ ಬಿಡುವ ಅಸಾಮಿ ಅಲ್ಲ ಬಿಡಿ,” ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ‘ಸಮಾಚಾರ’ದ ಜತೆ ಮಾತನಾಡಿದ ಸ್ಥಳೀಯ ಜಿ. ವಿ. ಗಂಗಪ್ಪ, “ಮುನಿಯಮ್ಮ ಅವರದ್ದು ಹಳೆಯ ಪ್ರಕರಣ. ಗುಡಿಬಂಡೆಗೆ ಕಳೆದ 10 ವರ್ಷಗಳಲ್ಲಿ ಬಂದ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇವರ ಪರಿಚಯ ಇದೆ. ಇವರು ಮನವಿ ಸಲ್ಲಿಸದೇ ಇರುವ ಜಾಗಗಳೇ ಇಲ್ಲ. ಐದಾರು ವರ್ಷಗಳ ಕೆಳಗೆ ಒಮ್ಮೆ ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನೂ ಭೇಟಿ ಆಗಿ ಬಂದಿದ್ದರು,” ಎಂದು ಮಾಹಿತಿ ನೀಡಿದರು.

ಗುಡಿಬಂಡೆಯ ಬೆಟ್ಟದ ಕೆಳಗಿನ ಪೇಟೆ ಎಂದು ಕರೆಯುವ ಜಾಗದಲ್ಲಿ ಸದ್ಯ ಮುನಿಯಮ್ಮ ಅವರ ಮನೆ ಇದೆ. ಗಂಡ ಮುನಿಯಪ್ಪ ಕೂಲಿ ಕೆಲಸ ಮಾಡುತ್ತಾರೆ. “ಅಯ್ಯೋ, ನನಗೆ ಏನೂ ಬೇಡ. ಆದ್ರೆ ಅವಳು ಮಾತು ಕೇಳಲ್ಲ,” ಎನ್ನುತ್ತಾರೆ ಮುನಿಯಪ್ಪ. ದಂಪತಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳು. ಮೂವರಿಗೂ ಮದುವೆಯಾಗಿದೆ. ಕೆಲವು ವರ್ಷಗಳ ಹಿಂದೆ ವಡ್ಡರ ನಾರಾಣಪ್ಪ ಎಂಬುವವರಿಂದ ಜಮೀನು ಖರೀದಿ ಮಾಡಿದ್ದೆವು. ಈ ಸಮಯದಲ್ಲಿ 70 ಸಾವಿರ ನೀಡಿದ್ದೆವು. ಆದರೆ ಆ ಜಾಗ ಸರಕಾರಕ್ಕೆ ಸೇರಿದ್ದು. ನಾವು ಮೋಸ ಹೋಗಿದ್ದೀವಿ, ಅದಕ್ಕೆ ಸರಕಾರವೇ ಪರಿಹಾರ ನೀಡಬೇಕು ಎಂಬುದು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮುನಿಯಮ್ಮ ಅವರ ಬೇಡಿಕೆ.

ಆಂಧ್ರದ ಗಡಿ ಪ್ರದೇಶವಾದ ಗುಡಿಬಂಡೆಯಲ್ಲಿ ಹೆಚ್ಚಾಗಿ ತೆಲುಗು ಮಾತನಾಡುತ್ತಾರೆ. ಇವರ ನಡುವೆ ಕನ್ನಡವನ್ನು ಹೆಚ್ಚು ಬಳಸುವವರು ಮುನಿಯಮ್ಮ. ಇಲ್ಲಿನ ಸರಕಾರಿ ಕಚೇರಿಗಳಿಗೆ ದಿನಾಲೂ ಅಲೆಯುವ ಇವರನ್ನು ಸ್ಥಳೀಯರು ‘ಕನ್ನಡದ ಮುನಿಯಮ್ಮ’ ಎಂದೇ ಗುರುತಿಸುತ್ತಾರೆ.

“ಅವರು ಗುಡಿಬಂಡೆಯಲ್ಲಿ ಕೃಷಿ ಮಾಡಿಕೊಂಡ ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳ ಫೈಲ್ ಕಣ್ಮರೆಯಾಗಿದೆ ಎಂದು ಹೇಳುತ್ತಾರೆ. ಹೀಗಾಗಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಅವರು ದಿನಾ ಭೇಟಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಸಿಎಂ ಭೇಟಿ ಮಾಡಿ ಬಂದಿದ್ದಾರೆ,” ಎನ್ನುತ್ತಾರೆ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಾಗಿ ಒತ್ತಾಯಿಸುತ್ತಿರುವ ಆಂಜುನೇಯ ರೆಡ್ಡಿ.

ಅಚಾನಕ್ ಭೇಟಿ: 

ಸೋಮವಾರ ದಿಲ್ಲಿಯಲ್ಲಿ ಸಿಎಂ ಅವರನ್ನು ಮುನಿಯಮ್ಮ ಭೇಟಿ ಮಾಡಿದ್ದೂ ಕಾಕತಾಳೀಯ ಎನ್ನುತ್ತಾರೆ ಅವರನ್ನು ಬಲ್ಲವರು. “ರೈಲು ಹತ್ತಿಕೊಂಡು ಮನವಿ ಪತ್ರ ಹಿಡಿದುಕೊಂಡು ದಿಲ್ಲಿಯಲ್ಲಿ ಹೋಗಿ ಇಳಿದಿದ್ದಾರೆ. ಸ್ಥಳೀಯ ಸಹಾಯದಿಂದ ಕನ್ನಡ ಭವನಕ್ಕೆ ಹೋಗಿದ್ದಾರೆ. ಅಲ್ಲಿ ಸಿಎಂ ಮತ್ತಿತರ ಸಚಿವರು ವಾಸ್ತವ್ಯ ಹೂಡಿದ್ದು ನಂತರ ಗೊತ್ತಾಗಿದೆ. ಕೊನೆಗೆ ಅಧಿಕಾರಿಗಳು ಸಿಎಂ ಭೇಟಿ ಮಾಡಿಸಿದ್ದಾರೆ,” ಎಂಬುದು ಅವರು ನೀಡುವ ಮಾಹಿತಿ.

“ಮೊನ್ನೆ ವಿಧಾನಸೌಧಕ್ಕೆ ಹೋದಾಗ ಸ್ವಾಮೇರು ದೆಹಲಿಯಲ್ಲಿ ಸುಲಭವಾಗಿ ಸಿಗುತ್ತಾರೆ ಎಂದು ಯಾರೋ ಒಬ್ಬರು ಸಲಹೆ ನೀಡಿದ್ದರಿಂದ ರೈಲು ಹತ್ತಿ ನಿನ್ನೆ ರಾತ್ರಿಯೇ ಇಲ್ಲಿಗೆ ಬಂದೆ. ಬೆಳಿಗ್ಗೆ ಭೇಟಿ ಮಾಡಿ ಮನವಿ ನೀಡಿದ್ದೇನೆ. ಜಿಲ್ಲಾಧಿಕಾರಿ ಜೊತೆ ಫೋನ್‌ನಲ್ಲಿ ಮಾತಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ನನ್ನ ಕೈಗೆ ₹ 2,000 ಕೊಟ್ಟು ಊರಿಗೆ ಹೋಗಲು ಹೇಳಿದ್ದಾರೆ,” ಎಂದು ‘ಪ್ರಜಾವಾಣಿ’ ವರದಿ ಹೇಳುತ್ತದೆ.

ಇದೇನೇ ಇದ್ದರೂ, ಸುಮಾರು 2000 ಕಿ. ಮೀ ಪ್ರಯಾಣ ಮಾಡಿ, ರಾಜ್ಯದ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿರುವ ಅವರ ನಡೆ ಸಹಜವಾಗಿಯೇ ಕುತೂಹಲವನ್ನು ಮೂಡಿಸುತ್ತಿದೆ. “ಕೊಂಡ ಜಾಗ ಸದ್ಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಹೀಗಾಗಿ ಅದರ ಬದಲಿಗೆ ಬೇರೆ ಜಾಗ ಕೊಡಿಸುವ ಪ್ರಯತ್ನ ನಡೆದಿದೆ. ಸರಕಾರದಿಂದ ಪರ್ಯಾಯ ವ್ಯವಸ್ಥೆ ಆಗಿದೆ. ಅದರ ಕಾಗದ ಪತ್ರಗಳಿನ್ನೂ ಆಗಬೇಕಿದೆ. ಸದ್ಯ ಮುನಿಯಮ್ಮ ಅವರ ಮನೆ ಎತ್ತರ ಪ್ರದೇಶದಲ್ಲಿದೆ. ಅಲ್ಲಿಗೆ ಹೋಗಲು ರಸ್ತೆಯ ವ್ಯವಸ್ಥೆ ಮಾಡಿ ಎಂಬ ಬೇಡಿಕೆಯೂ ಇದೆ,” ಎನ್ನುತ್ತಾರೆ ಗಂಗಪ್ಪ.

ದಿಲ್ಲಿಯಲ್ಲಿ ಮುನಿಯಮ್ಮ ಅವರ ಅವಹಾಲಿಗೆ ಸ್ಪಂದಿಸಿರುವ ಸಿಎಂ, ಸ್ಥಳೀಯ ಜಿಲ್ಲಾಧಿಕಾರಿಗೆ ಮುನಿಯಮ್ಮ ಅವರ ಸಮಸ್ಯೆ ಬಗೆಹರಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದಾರೆ. “ಮುನಿಯಮ್ಮಳ ಸಮಸ್ಯೆ ಬಗೆಹರಿಸಲು, ಆಕೆಯನ್ನು ಭೇಟಿಯಾಗಲು ತಾವು ಎದುರು ನೋಡುತ್ತಿದ್ದೇನೆ,” ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ‘ನ್ಯೂಸ್18’ಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a comment

Top