An unconventional News Portal.

ಬರಲಿದೆ 4 ಹಂತಗಳ ‘ಜಿಎಸ್‌ಟಿ’; ಹೊಸ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ತಿಳಿದುಕೊಳ್ಳಬೇಕಿರೋ ಅಂಶಗಳಿವು!

ಬರಲಿದೆ 4 ಹಂತಗಳ ‘ಜಿಎಸ್‌ಟಿ’; ಹೊಸ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ತಿಳಿದುಕೊಳ್ಳಬೇಕಿರೋ ಅಂಶಗಳಿವು!

‘ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ’ ತನ್ನ ತೆರಿಗೆ ಪ್ರಕಾರವನ್ನು ಅಂತಿಮಗೊಳಿಸಿದೆ.

ಅಗತ್ಯ ವಸ್ತುಗಳಿಗೆ ಕಡಿಮೆ ತೆರಿಗೆಯನ್ನೂ, ಐಶಾರಾಮಿ ವಸ್ತುಗಳಿಗೆ ಹೆಚ್ಚಿನ ತೆರಿಗೆಯ ಜತೆಗೆ ಹೆಚ್ಚುವರಿ ಸೆಸ್’ನ್ನು ಹೇರುವಂತೆ ಈ ಮಂಡಳಿ ಶಿಫಾರಸ್ಸು ಮಾಡಿದೆ. ಮಂಡಳಿಯ ತೀರ್ಮಾನದ ಪ್ರಕಾರ ಶೇಕಡಾ 5, 12, 18 ಮತ್ತು 28 ಹೀಗೆ 4 ಪ್ರಕಾರದ ತೆರಿಗೆಗಳಿರಲಿವೆ.

ಹಣದುಬ್ಬರವನ್ನು ಗಮನದಲ್ಲಿರಿಸಿಕೊಂಡು ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಇನ್ನು ಸಾಮಾನ್ಯ ಬಳಕೆಯ ಪದಾರ್ಥಗಳಿಗೆ ಶೇಕಡಾ 5ರ ದರದಲ್ಲಿ ಟ್ಯಾಕ್ಸ್ ಹಾಕಲು ಸಮಿತಿಯು ಶಿಫಾರಸ್ಸು ಮಾಡಿದೆ. ಅಲ್ಲದೇ ಶೇಕಡಾ 12 ಮತ್ತು 18ರ ಎರಡು ರೀತಿಯ ದರಗಳು ಇದರಲ್ಲಿವೆ. ಈ ನೂತನ ಟ್ಯಾಕ್ಸ್ ನೀತಿಯನ್ನು ಏಪ್ರಿಲ್ 1, 2017ರಿಂದ ಜಾರಿಗೆ ತರಲು ಯೋಚಿಸಲಾಗಿದೆ.

ಜಿಎಸ್ಟಿ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕೃಷ್ಣ ಬೈರೇಗೌಡ

ಜಿಎಸ್ಟಿ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸಚಿವ ಕೃಷ್ಣ ಬೈರೇಗೌಡ

ಎರಡು ದಿನಗಳ ‘ಜಿಎಸ್ಟಿ ಕೌನ್ಸಿಲ್’ನ ಸಭೆಯ ಮೊದಲ ದಿನದಂದು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಮಾತನಾಡಿ “ಸದ್ಯ ಶೇ. 30- 31 (ತೆರಿಗೆ ಮತ್ತು ವ್ಯಾಟ್ ಸೇರಿ) ವಿಧಿಸುತ್ತಿರುವ ವಸ್ತುಗಳಿಗೆ ಅತಿ ಹೆಚ್ಚಿನ ತೆರಿಗೆ ಅನ್ವಯವಾಗಲಿದೆ,” ಎಂದು ಹೇಳಿದ್ದಾರೆ. ಐಶಾರಾಮಿ ಕಾರುಗಳು, ತಂಬಾಕು ಪದಾರ್ಥಗಳು ಮತ್ತು ಮದ್ಯಗಳಿಗೆ ಹೆಚ್ಚಿನ ತೆರಿಗೆಯ ಜೊತೆಗೆ, ಹೆಚ್ಚುವರಿ ಸೆಸ್ ಕೂಡಾ ವಿಧಿಸಲಾಗುತ್ತದೆ.

ಈ ಸೆಸ್ ಮತ್ತು ‘ಕ್ಲೀನ್ ಎನರ್ಜಿ’ ಸೆಸ್ ನಿಂದ ಹೆಚ್ಚುವರಿ ಆದಾಯ ಹರಿದು ಬರಲಿದೆ. ಈ ಆದಾಯವನ್ನು ಪರಿಹಾರ ರೂಪವಾಗಿ ಬಳಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಜಿಎಸ್ಟಿ ಜಾರಿಗೆ ಬಂದ ಮೊದಲ ಐದು ವರ್ಷಗಳಲ್ಲಿ ಯಾವುದೇ ರಾಜ್ಯಕ್ಕೆ ಆದಾಯದಲ್ಲಿ ನಷ್ಟವಾದರೆ ಈ ಹಣದಲ್ಲಿ ಪರಿಹಾರವನ್ನು ಭರಿಸಲಾಗುತ್ತದೆ.

ತೈಲ, ಮದ್ಯಕ್ಕಿಲ್ಲ ಜಿಎಸ್’ಟಿ:

ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಆಲ್ಕೋಹಾಲನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಈ ಎರಡೂ ತೆರಿಗೆ ಉತ್ಪನ್ನಗಳ ಮೇಲೆ ರಾಜ್ಯ ಸರಕಾರವೇ ನೇರ ತೆರಿಗೆ ವಿಧಿಸುವ ಅಧಿಕಾರವನ್ನು ಹೊಂದಿವೆ. ಈ ಎರಡೂ ಉತ್ಪನ್ನಗಳು ಆಯಾ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಆದಾಯ ಮೂಲಗಳಾಗಿವೆ.

ಐದು ವರ್ಷಗಳ ನಂತರ ಸೆಸ್’ನ್ನು ತೆಗೆದು ಹಾಕಲಾಗುತ್ತದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ. “ರಾಜ್ಯಗಳಿಗೆ ಆದಾಯದಲ್ಲಿ ನಷ್ಟವಾದಲ್ಲಿ ಪರಿಹಾರ ನೀಡಲು 50,000 ಕೋಟಿ ಹಣ ಬೇಕು. ಮೊದಲ ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರ ಒಟ್ಟಾಗಿ ಇದನ್ನು ಭರಿಸಬೇಕಾಗುತ್ತದೆ. ಅಬಕಾರಿ ತೆರಿಗೆ, ಸೇವಾ ತೆರಿಗೆ ಮತ್ತು ವ್ಯಾಟ್ ಮೂಲಕ ಇದನು ಸಾಧಿಸಬೇಕು,” ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಇದೇ ನಾಲ್ಕು ವಿಧಗಳ ತೆರಿಗೆಯನ್ನು ಶೇಕಡಾ 6, 12, 18, ಮತ್ತು 26ಕ್ಕೆ ನಿಗದಿಪಡಿಸುವ ಕುರಿತು ಚರ್ಚೆ ನಡೆದಿತ್ತು.

ಇನ್ನು ಸಂಧಾನದ ಮೂಲಕ ಕೇರಳದಂಥ ರಾಜ್ಯದಲ್ಲಿ ಬೇಡಿಕೆ ನೀಗಿಸಲು ಅತಿ ಹೆಚ್ಚಿನ ಶೇಕಡಾ 40 ತೆರಿಗೆ ವಿಧಿಸಲು ಅನುಮೋದನೆ ನೀಡಲಾಯಿತು.

ಚಿನ್ನದ ಮೇಲೆ ಶೇಕಡಾ 4 ಲೆವಿ ಹಾಕಲು ಕೇಂದ್ರ ಪ್ರಸ್ತಾವನೆ ಸಲ್ಲಿಸಿದ್ದು ಸಭೆಯಲ್ಲಿ ಅಂತಿಮ ನಿರ್ಧಾರಕ್ಕಿನ್ನೂ ಬಂದಿಲ್ಲ ಎಂದು ಅರುಣ್ ಜೈತ್ಲೀ ಹೇಳಿದ್ದಾರೆ. ಹಾಗಾಗಿ ಚಿನ್ನದ ಮೇಲೆ ಎಷ್ಟು ತೆರಿಗೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶೇಕಡಾ 2 ತೆರಿಗೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

‘ಜಿಎಸ್ಟಿ’ ಹೇಗೆ, ಏನು, ಎತ್ತ?

ಜಿಎಸ್ಟಿಯನ್ನು ಸರಳವಾಗಿ ಒಂದು ಉದಾಹರಣೆ ಮೂಲಕ ವಿವರಿಸುವುದಾದರೆ, ತೆರಿಗೆಯಲ್ಲಿ ಮೂರು ಹಂತಗಳು ಬರುತ್ತವೆ. ಮೊದಲ ಹಂತ ತಯಾರಿ, ನಂತರ ಹೋಲ್ ಸೇಲ್ ಮಾರಾಟ ಮತ್ತು ಕೊನೆಗೆ ಚಿಲ್ಲರೆ ಮಾರಾಟ. ತಯಾರಿಯಿಂದ ಗ್ರಾಹಕನ ಕೈಗೆ ವಸ್ತುವೊಂದು ತಲುಪುವ ಹಾದಿಯಲ್ಲಿ ಜಿಎಸ್ಟಿ ತರಲಿರುವ ಬದಲಾವಣೆಗಳನ್ನು ನೋಡುವುದಾದರೆ,

ಹಂತ-1: ಒಂದು ಅಂಗಿಯನ್ನು ಉತ್ಪಾದನೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಕಚ್ಛಾ ವಸ್ತುಗಳನ್ನು ಬಳಸಿ 100ರೂಪಾಯಿಗೆ ಈ ಅಂಗಿ ತಯಾರಾಗುತ್ತದೆ. ಕಚ್ಛಾ ವಸ್ತುಗಳ ಖರೀದಿ ಸಮಯದಲ್ಲಿಯೇ ಶೇ. 10 ಟ್ಯಾಕ್ಸ್ ರೂಪದಲ್ಲಿ ಅಂಗಿ ತಯಾರಿಸುವ ದರ್ಜಿ ಕಟ್ಟಿರುತ್ತಾನೆ.

ತಯಾರಕ ಅದಕ್ಕೆ 130 ಬೆಲೆ ನಿಗದಿಪಡಿಸಿ ಮಾರಾಟಕ್ಕೆ ಮುಂದಾಗುತ್ತಾನೆ. ಇಲ್ಲೂ ಶೇಕಡಾ 10 ತೆರಿಗೆ ಎಂದಿಟ್ಟುಕೊಂಡರೆ ರೂಪಾಯಿ 13 ತೆರಿಗೆಯಾಗಿ ಪಾವತಿ ಮಾಡಬೇಕಾಗುತ್ತದೆ. ಆದರೆ ಜಿಎಸ್ಟಿಯಿಂದ ತಯಾರಕ ಕಚ್ಛಾ ಪದಾರ್ಥಕ್ಕೆ ಭರಿಸಿದ 10 ರೂಪಾಯಿ ಟ್ಯಾಕ್ಸ್ ಸೇರಿ 13 ರೂಪಾಯಿ ತೆರಿಗೆ ನೀಡಿದರೆ ಸಾಕು. ಹೀಗಾಗಿ ತಯಾರಾದ ನಂತರ ಆತನಿಗೆ ಬೀಳುವ ಹೆಚ್ಚುವರಿ ಟ್ಯಾಕ್ಸ್ ಕೇವಲ ರೂಪಾಯಿ ಮೂರು ಮಾತ್ರ.

ಹಂತ-2: ಅಂಗಿ, ತಯಾರಕನಿಂದ ಹೋಲ್ ಸೇಲ್ ಮಾರಾಟಗಾರನ ಕೈಗೆ ಬರುತ್ತದೆ. ಆತ 130 ರೂಪಾಯಿಗೆ ಅಂಗಿ ಖರೀದಿ ಮಾಡಿ 20 ರೂಪಾಯಿ ಆತನಿಗೆ ಬರಬೇಕಾದ ಕಮಿಷನ್ ಸೇರಿಸಿ 150 ರೂಪಾಯಿ ಬೆಲೆ ನಿಗದಿಪಡಿಸುತ್ತಾನೆ. ಇದರಿಂದ ಆತ ಶೇಕಡಾ 10 ರೂಪಾಯಿ ಟ್ಯಾಕ್ಸ್ ನಂತೆ 15 ರೂಪಾಯಿ ಪಾವತಿ ಮಾಡಬೇಕು. ಆದರ ಜಿಎಸ್ಟಿಯಿಂದ ಹಿಂದೆ ತಯಾರಕ ಪಾವತಿ ಮಾಡಿದ 13 ರೂಪಾಯಿ ಬಿಟ್ಟು ಕೇವಲ 2 ರೂಪಾಯಿ ಪಾವತಿ ಮಾಡಿದರೆ ಸಾಕು.

ಹಂತ – 3: ಕೊನೆಯ ಹಂತದಲ್ಲಿ ಹೋಲ್ ಸೇಲ್ ಅಂಗಡಿಯಿಂದ  ಶರ್ಟನ್ನು ಖರೀದಿಸಲಾಗುತ್ತದೆ. ಆತ ಅದೇ 150 ರೂಪಾಯಿ ಶರ್ಟಿಗೆ 160 ರೂಪಾಯಿ ನಿಗದಿಪಡಿಸಿರುತ್ತಾನೆ. ಇದಕ್ಕೆ ಪುನಃ ಶೇಕಡಾ 10 ಟ್ಯಾಕ್ಸ್ ಎಂದರೆ ಆತ 16 ರೂಪಾಯಿ ಪಾವತಿ ಮಾಡಬೇಕಾಗಿರುತ್ತದೆ. ಆದರೆ ಜಿಎಸ್ಟಿಯಿಂದ ಇಲ್ಲೂ ಈ ಹಿಂದೆ ಕಟ್ಟಿದ 15 ರೂಪಾಯಿ ಕಳೆದು ಕೇವಲ 1 ರೂಪಾಯಿ ಕಟ್ಟಿದರೆ ಸಾಕು.

ಹೀಗೆ ಜಿಎಸ್ಟಿಯಲ್ಲಿ ಕಚ್ಛಾವಸ್ತುವಿನಿಂದ ಗ್ರಾಹಕರ ಕೈಗೆ ವಸ್ತು ತಲುಪುವವರೆಗೆ ಬೀಳುವ ತೆರಿಗೆ ಕೇವಲ 16 ರೂಪಾಯಿ ಮಾತ್ರ. ಇದರಲ್ಲಿ ಈಗ ಸ್ಥರಗಳನ್ನು ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆದು, ತೀರ್ಮಾನಗಳು ಒಂದೊಂದಾಗಿ ಹೊರಬೀಳುತ್ತಿವೆ.

ಜಿಎಸ್ಟಿ ಇಲ್ಲದಿದ್ದಾಗ ಹೇಗೆ?

ಇಡೀ ಜಿಎಸ್ಟಿಯ ಉಪಯೋಗ ಎಂದರೆ ಇಲ್ಲಿ ‘ಟ್ಯಾಕ್ಸಿನ ಮೇಲೆ ಮತ್ತೆ ಟ್ಯಾಕ್ಸ್’ ಹೇರುವುದು ತಪ್ಪುತ್ತದೆ.

ಒಂದೊಮ್ಮೆ ‘ಜಿಎಸ್ಟಿ’ ಇಲ್ಲದಿದ್ದಲ್ಲಿ, 100 ರೂಪಾಯಿಯ ಕಚ್ಛಾ ಪದಾರ್ಥಕ್ಕೆ 10 ರೂಪಾಯಿ ತೆರಿಗೆ ನಂತರ ಮತ್ತೆ ಹೋಲ್ ಸೇಲ್ ಅಂಗಡಿಯಲ್ಲಿ 13ರೂಪಾಯಿ ತೆರಿಗೆ, ಕೊನೆಗೆ ಗ್ರಾಹಕನ ಕೈಗೆ ತಲುಪುವಾಗ ಮತ್ತೊಮ್ಮೆ 16 ರೂಪಾಯಿ ತೆರಿಗೆ ಸೇರಿ ಒಟ್ಟು 39 ರೂಪಾಯಿ ತೆರಿಗೆ ನೀಡಬೇಕಾಗುತ್ತಿತ್ತು. ಮಾರಾಟಗಾರ ತೆರಿಗೆಯನ್ನೂ ಸೇರಿಸಿ ಮಾರುವುದರಿಂದ, ಹಳೆ ತೆರಿಗೆಗೆ ಮತ್ತೆ ಹೊಸ ತೆರಿಗೆ ಬಿದ್ದು ಗ್ರಾಹಕನ ಕೈಗೆ ಬರುವಾಗ ಮೇಲೆ ಹೇಳಿದ ಅಂಗಿಯ ಬೆಲೆಯೇ 200 ದಾಟುತ್ತದೆ.

ಸದ್ಯ ಹೇಗಿದೆ?:

ಸದ್ಯ ನಮ್ಮಲ್ಲಿ ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್ (VAT) ಪದ್ಧತಿಯಿದೆ. ವಸ್ತುವಿಗೆ ಉತ್ಪಾದನೆ ಹಂತದಲ್ಲಿ ತೆರಿಗೆ ವಿಧಿಸಲಾಗುತ್ತದೆ. ನಂತರ ಮಾರುಕಟ್ಟೆಗೆ ಬಂದ ಮೇಲೆ ಅದಕ್ಕೆ ಕೇಂದ್ರೀಯ ವ್ಯಾಟನ್ನು ವಿಧಿಸಲಾಗುತ್ತದೆ. ಇದೇ ರೀತಿ ಮಾರಾಟವಾಗುವ ವಸ್ತುಗಳ ಮೇಲೆ ರಾಜ್ಯವೂ ವ್ಯಾಟ್ ವಿಧಿಸುತ್ತದೆ. ಇಲ್ಲಿ ಮಾರಾಟವಾಗುವ ವಸ್ತುವಿಗೆ ಹಿಂದೆ ವ್ಯಾಟ್ ಪಾವತಿಸಿದ್ದರೆ ಅದನ್ನು ಕಡಿತ ಮಾಡುವಂತೆ ಕೋರಿಕೊಳ್ಳಬಹುದು ಅಷ್ಟೆ. ಇದಲ್ಲದೆ ಆಯಾ ರಾಜ್ಯಗಳು ವಿಧಿಸುವ ವಿಲಾಸಿ ಮತ್ತು ಮನರಂಜನೆ ತೆರಿಗೆಗಳು ಪ್ರತ್ಯೇಕವಾಗಿರುತ್ತವೆ.

ಆದರೆ ಒಮ್ಮೆ ಜಿಎಸ್ಟಿ ಜಾರಿಗೆ ತರುವುದರಿಂದ ರಾಜ್ಯ ಮತ್ತು ಕೇಂದ್ರ ಮಟ್ಟದ ತೆರಿಗೆಗಳು, ಲೆವಿಗಳು ಹಾಗೂ ಸೇವಾ ತೆರಿಗೆಗಳೆಲ್ಲಾ ಒಟ್ಟಾಗಿ ಜಿಎಸ್ಟಿಯಲ್ಲಿ ಬರಲಿವೆ. ಇಲ್ಲಿ ರಾಜ್ಯ ಜಿಎಸ್ಟಿ ಮತ್ತು ಕೇಂದ್ರ ಜಿಎಸ್ಟಿ ಮಾತ್ರವೇ ಇರುತ್ತವೆ.

‘ಜಿಎಸ್ಟಿ’ ಕೌನ್ಸಿಲ್:

ತೆರಿಗೆಗಳನ್ನು ಜಿಎಸ್ಟಿ ಮಂಡಲಿ ಸಭೆ ಸೇರಿ ನಿರ್ಧರಿಸಲಿದೆ. ಕೇಂದ್ರ ವಿತ್ತ ಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಕಂದಾಯ, ವಿತ್ತ ಮತ್ತು ತೆರಿಗೆಯ ರಾಜ್ಯ ದರ್ಜೆಯ ಸಚಿವರೂ ಇದರಲ್ಲಿ ಸದಸ್ಯರಾಗಿರಲಿದ್ದಾರೆ. ಇದರ ಜತೆಗೆ ಪ್ರತಿ ರಾಜ್ಯ ಕಳುಹಿಸುವ ಪ್ರತಿನಿಧಿ ಸಚಿವರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಹಂತದಲ್ಲಿ ನಿರ್ಧಾರ ತಗೆದುಕೊಳ್ಳಲು ನಾಲ್ಕನೇ ಮೂರು ಭಾಗ ಸದಸ್ಯರು ಮತ ಚಲಾಯಿಸಬೇಕು. ಇನ್ನು ರಾಜ್ಯದಲ್ಲಿ ಮೂರನೇ ಎರಡು ಭಾಗ ಮತಗಳು ಅಗತ್ಯವಾಗಿರುತ್ತವೆ.

‘ಜಿಎಸ್ಟಿ’ ಜಾರಿ:

ಕೇಂದ್ರ ಮತ್ತು ರಾಜ್ಯ ಸರಕಾರಗಳ ಅವುಗಳಿಗೆ ಬೇಕಾದ ತೆರಿಗೆ ಕಾನೂನುಗಳನ್ನು ರೂಪಿಸಬಹುದು. ಯಾವುದೇ ಕಾರಣಕ್ಕೂ ರಾಜ್ಯಗಳು ಹೊರಡಿಸಿದ ಕಾನೂನುಗಳ ಮೇಲೆ ಸಂಸತ್ತು ಕಾನೂನು ರಚಿಸುವಂತಿಲ್ಲ. ರಾಜ್ಯ ರಾಜ್ಯಗಳ ನಡುವೆ ವ್ಯವಹಾರ ಏರ್ಪಟ್ಟಾಗ ತೆರಿಗೆ ಸಂಗ್ರಹಿಸುವ ವಿಶೇಷ ಅಧಿಕಾರ ಕೇಂದ್ರ ಸರಕಾರಕ್ಕೆ ಇರುತ್ತದೆ. ಇದನ್ನು ‘ಇಂಟೆಗ್ರೇಟಡ್ ಜಿಎಸ್ಟಿ’ ಎಂದು ಕರೆಯುತ್ತಾರೆ. ಇದನ್ನು ರಾಜ್ಯ ಮತ್ತು ಕೇಂದ್ರದ ನಡುವೆ ಅವುಗಳ ಪಾಲು ಪ್ರಕಾರ ಹಂಚಿಕೊಳ್ಳಲಾಗುತ್ತದೆ.

Top