An unconventional News Portal.

#ಚಲೋ_ಸ್ಮಶಾನ: ಸಿಲಿಕಾನ್ ಸಿಟಿಯ ಅನಾಮಿಕ ಹೆಣಗಳ ವಾರಸುದಾರರು & ಬಜೆಟ್ ನಿರೀಕ್ಷೆಗಳು!

#ಚಲೋ_ಸ್ಮಶಾನ: ಸಿಲಿಕಾನ್ ಸಿಟಿಯ ಅನಾಮಿಕ ಹೆಣಗಳ ವಾರಸುದಾರರು & ಬಜೆಟ್ ನಿರೀಕ್ಷೆಗಳು!

ಬೆಂಗಳೂರಿನ ಸ್ಮಶಾನಗಳಿಗೆ ಬರುವ ಹೆಣಗಳ ಪೈಕಿ ಎರಡರಲ್ಲಿ ಒಂದಕ್ಕೆ ವಾರಸುದಾರರೇ ಇರುವುದಿಲ್ಲ. ಅಂದರೆ, ಶೇ. 50ರಷ್ಟು ಜನರಿಗೆ ಅಂತಿಮ ವಿಧಿ ವಿಧಾನಗಳನ್ನು ಏರ್ಪಡಿಸಲು ಗೊತ್ತಿರುವ ಯಾರೂ ಸಿಲಿಕಾನ್ ಸಿಟಿಯಲ್ಲಿ ಸಿಗುತ್ತಿಲ್ಲ.

ಒಂದು ಕ್ಷಣ ಬೆಚ್ಚಿ ಬೀಳಿಸುವಂತಹ ಈ ವಿಚಾರ ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಭೇಟಿ ನೀಡಿದ ‘ಸಮಾಚಾರ’ಕ್ಕೆ ಲಭ್ಯವಾಯಿತು. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಡೆಯಿಂದ ನೇಮಕಗೊಂಡಿರುವ ಸ್ಮಶಾನ ವರದಿಗಾರರು ನೀಡಿರುವ ಈ ಅಂಕಿ ಅಂಶಗಳು ಸಿಲಿಕಾನ್‌ ಸಿಟಿಯ ಸ್ಮಶಾನಗಳ ಕುರಿತು ಹೊಸ ಆಯಾಮದ ಬೆಳಕು ಚೆಲ್ಲುತ್ತಿದೆ.

“ಒಂದು ತಿಂಗಳಿಗೆ ಇಲ್ಲಿಗೆ (ವಿಲ್ಸನ್ ಗಾರ್ಡನ್ ಸ್ಮಶಾನ) ಸುಮಾರು 18- 20 ಹೆಣಗಳು ಬರುತ್ತವೆ. ಇವುಗಳಲ್ಲಿ ಶೇ. 50ರಷ್ಟು ದೇಹಗಳಿಗೆ (ಅಂದಾಜು 10) ವಾರಸುದಾರರೇ ಇರಲಿಲ್ಲ. ಸ್ಮಶಾನ ಗುಂಡಿ ತೋಡುವ ಕುಟುಂಬಗಳೇ ಅಂತಹ ಹೆಣಗಳನ್ನು ಮಣ್ಣು ಮಾಡುತ್ತಾರೆ,” ಎಂದರು ಸುಬ್ರಮಣಿ. 1983ರಲ್ಲಿ ಬಿಬಿಎಂಪಿಗೆ ಸೇರಿದ ಅವರು ‘ಸ್ಮಶಾನಗಳ ವರದಿಗಾರ’ರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ವರೆಗೆ ಬೆಂಗಳೂರಿನ 8 ಸ್ಮಶಾನಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

subramani-bbmp-reporter-1

ಬಿಬಿಎಂಪಿ ‘ಸ್ಮಶಾನ ವರದಿಗಾರ’ ಸುಬ್ರಮಣಿ.

ಆಗಷ್ಟೆ ಬಂದ ಹೆಣದ ಅಂತಿಮ ಸರಕಾರಿ ದಾಖಲಾತಿಗಳನ್ನು ಸಿದ್ದಪಡಿಸಿದ ನಂತರ ‘ಸಮಾಚಾರ’ ಜತೆ ಮಾತನಾಡಿದ ಅವರು, “ಈ ಕೆಲಸದಲ್ಲಿ ತೃಪ್ತಿ ಇದೆ. ಜನ ಬದುಕಿರುವಾಗ ಏನೆಲ್ಲಾ ಮಾಡುತ್ತಾರೆ. ಕೊನೆಗೆ ಇಲ್ಲಿಗೆ ಬಂದು ಸೇರುತ್ತಾರೆ. ಅದರ ಲೆಕ್ಕಚಾರವನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ತಲುಪಿಸುವ ಕೆಲಸ ಮಾಡಿಕೊಂಡು ಬಂದಿದ್ದೇನೆ,” ಎಂದರು.

ಇತ್ತಿಚೆಗಷ್ಟೆ ಬಿಬಿಎಂಪಿ ಎಂಜಿನಿಯರ್ ಮನೆಗೆ ಮೇಲೆ ನಡೆದ ದಾಳಿ ವೇಳೆ ಸುಮಾರು 7000 ಸೀರೆಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಬೆಳಕಿಗೆ ಬಂದಿತ್ತು. ಈ ಕುರಿತು ಸುಬ್ರಮಣಿಯವರ ಗಮನ ಸೆಳೆದಾಗ, ನಕ್ಕು ಸುಮ್ಮನಾದರು.

ಬೆಂಗಳೂರಿನಾದ್ಯಂತ ಸುಮಾರು 131 ಸ್ಮಶಾನಗಳಿವೆ. 12 ವಿದ್ಯುತ್ ಚಿತಾಗಾರಗಳಿವೆ. ದೊಡ್ಡ ಸಂಖ್ಯೆಯಲ್ಲಿರುವ ಸ್ಮಶಾನಗಳಲ್ಲಿ ಹೆಣಗಳನ್ನು ಹೂಳುವ ಅಥವಾ ಸುಡುವ ವ್ಯವಸ್ಥೆ ಇದೆ. ಹೂಳಲು ಮಕ್ಕಳ ಶವಕ್ಕಾದರೆ 50 ರೂಪಾಯಿ, ವಯಸ್ಕರರ ಶವಕ್ಕಾದರೆ 100 ರೂಪಾಯಿಯನ್ನು ಸರಕಾರ  ನಿಗದಿ ಮಾಡಿದೆ.

ಒಂದು ಹೆಣ ಸುಡಲು ಅಂದಾಜು 80 ಮಣ ಕಟ್ಟಿಗೆ ಬೇಕಾಗುತ್ತದೆ. ಹೀಗಾಗಿ, ಚಿತೆಗಾದರೆ ಹೆಚ್ಚಿಗೆ ಖರ್ಚಾಗುತ್ತದೆ. ಇವತ್ತಿಗೆ ಹೆಚ್ಚು ಕಡಿಮೆ ಬೆಂಗಳೂರಿನ ಎಲ್ಲಾ ಸ್ಮಶಾನಗಳು ಹೆಣಗಳಿಂದ ತುಂಬಿ ತುಳುತ್ತಿವೆ. ಹೊಸ ಹೆಣಗಳನ್ನು ಸುಡಲು ಜಾಗವಿಲ್ಲದಂತಾಗಿದೆ. ಕೆಲವು ಸ್ಮಶಾನಗಳಲ್ಲಿ ಕಳೆ ಬೆಳೆದು ಬಳಕೆಗೆ ಅಯೋಗ್ಯವಾಗಿದೆ. ಕಳೆ ಕೀಳಲು, ಸ್ಮಶಾನಗಳನ್ನು ಸ್ವಚ್ಚ ಮಾಡಲು ಪ್ರತಿ ವರ್ಷ ಬಿಬಿಎಂಪಿ ಟೆಂಡರ್ ನೀಡುತ್ತಾದರೂ, ಅವರ ಪರಿಣಾಮ ಕೆಳಮಟ್ಟದಲ್ಲಿ ಅತ್ಯಂತ ಕಳಪೆಯಾಗಿದೆ ಎಂಬುದು ಡಿಸೆಂಬರ್ 2014ರಲ್ಲಿ ಸ್ಮಶಾನಗಳಿಗೆ ಭೇಟಿ ನೀಡಿದ್ದ ಮೇಯರ್ ಶಾಂತ ಕುಮಾರಿ ಅವರಿಗೂ ಅರ್ಥವಾಗಿತ್ತು. ಜನವರಿ 2017ರಲ್ಲಿ ಭೇಟಿ ನೀಡಿದ್ದ ಪಾಲಿಕೆ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಕೆ. ಗುಣಶೇಖರನ್ ಅವರಿಗೂ ಅರ್ಥವಾಗಿದೆ. “ಹೀಗಾಗಿಯೇ ಈ ಸಾರಿಯ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ ಹೊಸ ಸ್ಮಶಾನ ಸ್ಥಾಪನೆಗೆ ಮತ್ತು ಇರುವ ಸ್ಮಶಾನಗಳ ಅಭಿವೃದ್ಧಿಗೆ ಕೋರಲಾಗಿದೆ,” ಎಂದು ಅವರು ತಿಳಿಸಿದ್ದರು.

ಇಂತಹ ಸಮಯದಲ್ಲಿಯೇ ವಿಲ್ಸನ್ ಗಾರ್ಡನ್ ಸ್ಮಶಾನಕ್ಕೆ ಬರುವ ಹೆಣಗಳ ಪೈಕಿ ಶೇ. 50ರಷ್ಟು ವಾರಸುದಾರರಲೇ ಇಲ್ಲದೆ, ‘ಸ್ಮಶಾನ ವಾಸಿ’ಗಳನ್ನೇ ಆಶ್ರಯಿಸಿವೆ. ಸಾವಿನ ನಂತರ ಸಂವಿಧಾನಬದ್ಧವಾಗಿ ಈ ದೇಶದ ಪ್ರಜೆಗಳಿಗೆ ದಕ್ಕಬೇಕಾದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಸ್ಮಶಾನ ವಾಸಿಗಳ ಅಥವಾ ಸ್ಮಶಾನ ಗುಂಡಿ ತೋಡುವವರ ಬದುಕು ಹೈರಾಣಾಗಿವೆ. ಕಳೆದ ಹಲವು ವರ್ಷಗಳಿಂದ 1 ಸಾವಿರ ರೂಪಾಯಿ ಗೌರವ ಧನವೂ ಸಿಗದೆ ಅವರು ಪರದಾಡುತ್ತಿದ್ದಾರೆ.

ಮಾಸಿಕ ಗೌರವ ಧನದ ಕತೆ:

ಬೆಂಗಳೂರಿನ ಸ್ಮಶಾನಗಳನ್ನು ನೋಡಿಕೊಳ್ಳುತ್ತಿರುವ ಕುಟುಂಬಗಳ ಸಂಖ್ಯೆ ಸುಮಾರು 250. ಇವರು ಆಯಾ ಸ್ಮಶಾನದ ಒಳಗಡೆಯೇ ಒಂದು ಭಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಪ್ರತಿ ಹೆಣ ಬಂದಾಗಲೂ ಅದರ ವಾರಸುದಾರರಿಂದ ಸಿಗುವ ಭಕ್ಷೀಸು ಇವರ ಬದುಕಿನ ಆರ್ಥಿಕ ಮೂಲ. 2013ರಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಲಸೂರು ಸ್ಮಶಾನದಲ್ಲಿ ಗುಂಡಿ ತೋಡುವ ಕೆಲಸಕ್ಕೆ ನಾಥನ್ ಎಂಬುವವರನ್ನು ನೇಮಿಸಲಾಯಿತು. ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ನೆರವಿನಿಂದ ನೇಮಕಗೊಂಡ ನಾಥನ್ ಅವರಿಗೆ ಮಾಸಿಗ 500 ರೂಪಾಯಿ ಬದಲಿಗೆ 1000 ರೂಪಾಯಿ ಗೌರವ ಧನವನ್ನು ನೀಡಲು ಕ್ರಮ ಕೈಗೊಳ್ಳಲಾಯಿತು.

ಅಲಸೂರು ಸ್ಮಶಾನಕ್ಕೆ ನಾಥನ್ ನೇಮಕಾತಿ ಆದೇಶ. (ಮೂಲ: ಬಿಬಿಎಂಪಿ 2013)

ಅಲಸೂರು ಸ್ಮಶಾನಕ್ಕೆ ನಾಥನ್ ನೇಮಕಾತಿ ಆದೇಶ. (ಮೂಲ: ಬಿಬಿಎಂಪಿ 2013)

ಆ ನಂತರ ಬೆಂಗಳೂರಿನ ಎಲ್ಲಾ 131 ಸ್ಮಶಾನಗಳಲ್ಲಿ ಗುಂಡಿ ತೋಡುತ್ತಿದ್ದವರಿಗೂ ಮಾಸಿಕ ಗೌರವ ಧನವನ್ನು ಒಂದು ಸಾವಿರಕ್ಕೆ ಏರಿಸಲಾಯಿತು. ಒಂದು ಹಂತದಲ್ಲಿ ವರ್ಷಾನುಗಟ್ಟಲೆ ಈ ಗೌರವ ಧನವೂ ಸಿಗದಿದ್ದಾಗ ಸ್ಮಶಾನ ವಾಸಿಗಳು ಸಂಘಟಿತರಾಗುತ್ತ ಬಂದರು. ಅದು ಪತ್ರಿಕೆಯಲ್ಲಿ ಸುದ್ದಿಯಾಗಿ ಪ್ರಕಟಗೊಂಡಿತು. ಆ ನಂತರ ಬಿಬಿಎಂಪಿ ಅಕ್ಟೋಬರ್ 2014ರಲ್ಲಿ 7 ಜನ ಗುಂಡಿ ತೋಡುವವರಿಗೆ ಗೌರವ ಧನವನ್ನು 5772 ರೂಪಾಯಿಗೆ ಏರಿಸಿತು. ಜತೆಗೆ 2 ಷರತ್ತುಗಳ ಅಡಿಯಲ್ಲಿ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಗೌರವ ಧನ ಸಿಗಲಿದೆ ಎಂದು ಹೇಳಿತು.

ಷರತ್ತು ಬದ್ದ ಗುತ್ತಿಗೆ ಆಧಾರದ ಮೇಲೆ 7 ಜನರ ನೇಮಕಾತಿ ಮಾಡಿಕೊಂಡ ಬಿಬಿಎಂಪಿ ದಾಖಲೆ. (ಮೂಲ: ಬಿಬಿಎಂಪಿ ಆಡಳಿತ ಶಾಖೆ)

ಷರತ್ತು ಬದ್ದ ಗುತ್ತಿಗೆ ಆಧಾರದ ಮೇಲೆ 7 ಜನರ ನೇಮಕಾತಿ ಮಾಡಿಕೊಂಡ ಬಿಬಿಎಂಪಿ ದಾಖಲೆ. (ಮೂಲ: ಬಿಬಿಎಂಪಿ ಆಡಳಿತ ಶಾಖೆ)

ಹೀಗೆ, ನೇಮಕಾತಿಯಾದವರ 7 ಜನರ ಪೈಕಿ ಶೌರಿ ರಾಜ್ ಕೂಡ ಒಬ್ಬರು. ‘ಸಮಾಚಾರ’ ಅವರನ್ನು ಸಂಪರ್ಕಿಸಿದಾಗ, “ಸಾರ್, ಅವರು 11 ತಿಂಗಳು ಅಂತ ಷರತ್ತು ಹಾಕಿದ್ದಾರೆ. ನಾವೆಲ್ಲಾ ಹುಟ್ಟಿದ್ದೇ ಸ್ಮಶಾನದಲ್ಲಿ. ಅದರನ್ನು ಬಿಟ್ಟು ಹೊರಗೆ ಹೋಗಿ ಅಂದರೆ ಏನು ಮಾಡುವುದು. ಜತೆಗೆ, ನಮ್ಮ 7 ಜನರಿಗೆ ಮಾತ್ರ ಹೀಗೆ ಮಾಡಿದರೆ ಉಳಿದವರ ಕತೆ ಏನಾಗಬೇಕು. ಹೀಗಾಗಿ ನಾವು ಹೆಚ್ಚಿನ ಗೌರವ ಧನಕ್ಕೆ ಒಪ್ಪಲಿಲ್ಲ. ಈಗ ಹಳೆಯ ಒಂದು ಸಾವಿರ ಕೂಡ ಬರುತ್ತಿಲ್ಲ,” ಎಂದರು. ಇದು ಸದ್ಯ ಬೆಂಗಳೂರಿನ ವಾರುಸುದಾರರು ಇರುವ ಹಾಗೂ ಇಲ್ಲದ ಹೆಣಗಳಿಗೆ ಮುಕ್ತಿ ನೀಡುತ್ತಿರುವ ಸ್ಮಶಾನವಾಸಿಗಳ ಕತೆ.

ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿಯೇ ವಾಸ ಇರುವ ಶಕುಂತಲಾ ಮತ್ತು ಮಾರಪ್ಪ ದಂಪತಿಗೂ ಕೂಡ ತಿಂಗಳಿಗೆ 1 ಸಾವಿರ ಗೌರವ ಧನ ಸಿಗುತ್ತಿಲ್ಲ. “ನೋಡಿ, ತಿಂಗಳಿಗೆ ಒಂದು 20 ಹಣ ಬರಬಹುದು. ಅದರ ಕಡೆಯವರು ಮಣ್ಣು ಮಾಡಿದ ನಂತರ ಒಂದಷ್ಟು ಕೊಟ್ಟು ಹೋಗುತ್ತಾರೆ. ಅದರಲ್ಲೇ ಜೀವನ ಸಾಗಿದೆ. ಆದರೆ ಈ ಬದುಕಿನಲ್ಲಿ ನೆಮ್ಮದಿ ಇದೆ. ಹೊರಗೆ ಏನೇ ಮಾಡಿದರು ಒಂದು ದಿನ ಎಲ್ಲ ಬಂದು ಸೇರುವುದು ಇಲ್ಲಿಯೇ ಅಲ್ವಾ?. ನಾವು ಇಲ್ಲಿಯೇ ನೆಮ್ಮದಿಯಾಗಿ ಬದುಕಿ ಸಾಯುತ್ತೇವೆ ಬಿಡಿ,” ಎಂದರು ಶಕುಂತಲಾ. ಮಗ, ಸೊಸೆ, ಮೊಮ್ಮಗು ಹೀಗೆ ಮುದ್ದಾದ ಸಂಸಾರದ ಜತೆಗೆ ಒಂದಷ್ಟು ನಾಯಿಗಳಿಗೂ ಅಲ್ಲಿ ಅವರು ಆಶ್ರಯ ನೀಡಿದ್ದಾರೆ. ಸ್ಮಶಾನದ ಬದುಕು ಅವರು ಒಗ್ಗಿಹೋಗಿದ್ದಾರೆ. ಆಳದಲ್ಲಿ ಬದುಕು ಬದಲಾಗಬಹುದು ಎಂಬ ಆಸೆ ಇದೆ.

ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಶಕುಂತಲಾ ಕುಟುಂಬ.

ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಶಕುಂತಲಾ ಕುಟುಂಬ.

“ಸ್ಮಶಾನದಲ್ಲಿ ಏನು ಸೌಕರ್ಯ ಇದೆ, ಎಲ್ಲ ಎಂಬುದನ್ನು ನೀವೇ ನೋಡಿ. ನಾವು ಗೌರದಿಂದ ಮಾಡುವ ಕೆಲಸಕ್ಕಾದರೂ ಒಂದು ಗೌರವಯುತವಾದ ಹಣ ಬೇಡವಾ?” ಎನ್ನುತ್ತಾರೆ ಮಾರಪ್ಪ.

ಈ ಬಾರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 17ಕ್ಕೆ ಮಂಡಿಸಲಿರುವ ಬಜೆಟ್ ಕುರಿತು ಮಧ್ಯಮ ವರ್ಗಕ್ಕೆ ಅಂತಹ ನಿರೀಕ್ಷೆಗಳೇನು ಇಲ್ಲದಿರಬಹುದು. ಆದರೆ ಬೆಂಗಳೂರಿನ ಈ 250 ಕುಟುಂಬಗಳ ಸದಸ್ಯರಿಗೆ ದೂರದ ಆಸೆ ಇದೆ. ತಮ್ಮ ಕುಟುಂಬದ ಸದಸ್ಯರು ಕೂಡ ‘ಕ್ಲಾಸ್ ಡಿ’ ನೌಕರರಾಗುವ ಕನಸು ಕಟ್ಟಿಕೊಂಡಿದ್ದಾರೆ. ಈಗಾಗಲೇ 200 ಕೋಟಿಯ ‘ಬಜೆಟ್ ಮಾತುಗಳು’ ಬಿಬಿಎಂಪಿ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರ ಬಾಯಿಂದಲೇ ಬಂದಿರುವುದು ಸಹಜ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಿಲಿಕಾನ್ ಸಿಟಿಯಲ್ಲಿ ಸಾಯುವವರ ಅಂತಿಮ ವಿಧಿಗಳಿಗೆ ನೆರವಾಗುತ್ತಿರುವವರ ಕುಟುಂಬಗಳಿಗಾದರೂ ಸಿದ್ದರಾಮಯ್ಯ ಮಂಡಿಸಲಿರುವ 2 ಲಕ್ಷ ಕೋಟಿಯ ಆಯವ್ಯಯ ಪತ್ರ ಗೌರವಯುತ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇಚ್ಚಾಶಕ್ತಿಯನ್ನು ಪ್ರದರ್ಶಿಸುತ್ತಾ?  ಇನ್ನೊಂದು ವಾರ ಕಾಯಬೇಕಿದೆ.

(ಈ ವರದಿಗಾಗಿ ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಲಾಯಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.)

#ಚಲೋ_ಸ್ಮಶಾನ

Leave a comment

Top