An unconventional News Portal.

ಸರ್ಕಾರಿ ನೌಕರರಿಗೂ ತಟ್ಟಿದ ಬರದ ಬಿಸಿ: ಆರಂಭವಾಗದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ

ಸರ್ಕಾರಿ ನೌಕರರಿಗೂ ತಟ್ಟಿದ ಬರದ ಬಿಸಿ: ಆರಂಭವಾಗದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ

ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ತೀವ್ರ ಬರಗಾಲ ಇದೆ ಎಂಬ ಕಾರಣವನ್ನು ನೀಡಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಬರಗಾಲದ ಬಿಸಿ ಸರ್ಕಾರಿ ನೌಕರರನ್ನೂ ಕಾಡುವುದು ನಿಚ್ಚಳವಾಗಿದೆ.

ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗ ಸೂಚಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೂನ್ 30 ರ ನಂತರ ವರ್ಗಾವಣೆ ಮಾಡಬೇಕಿದ್ದರೆ ಮುಖ್ಯಮಂತ್ರಿಗಳ ಪೂರ್ವಾನುಮತಿ ಕಡ್ಡಾಯ. ಆದರೆ ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಆಡಳಿತ ಸುಧಾರಣಾ ಇಲಾಖೆ ಇಲ್ಲಿವರೆಗೂ ಆರಂಭಿಸಿಲ್ಲ. ರಾಜ್ಯದಲ್ಲಿ ಉಂಟಾಗಿರುವ ಬರವನ್ನು ನೆಪವಾಗಿಟ್ಟುಕೊಂಡು ಸಾರ್ವತ್ರಿಕ ವರ್ಗಾವಣೆ ಕೈಬಿಡುವ ಉದ್ದೇಶ ಹೊಂದಿದೆ ಎನ್ನಲಾಗ್ತಿದೆ.

ರಾಜ್ಯ ಸರ್ಕಾರದ ಈ ನಡೆ, ವರ್ಗಾವಣೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಆತಂಕ್ಕೆ ಕಾರಣವಾಗಿದೆ. ಆದರೆ ಪ್ರಭಾವವನ್ನು ಹೊಂದಿರುವವರು ಮುಖ್ಯಮಂತ್ರಿಗಳ ಅನುಮತಿ ಪಡೆದು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲಿ ಆಯಾ ಇಲಾಖೆಯ ಸಮಕ್ಷಮ ಪ್ರಾಧಿಕಾರದ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕಿದೆ. ಆದರೆ ಮೇ ಆರಂಭವಾಗಿ ಒಂದು ವಾರ ಕಳೆದರೂ ಇದಕ್ಕೆ ಸಂಬಂಧ ಪಟ್ಟಂತೆ ಇಲ್ಲಿವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.

ಪ್ರತಿ ವರ್ಷ ಕನಿಷ್ಠ ಮಟ್ಟದಲ್ಲಿ ಅಂದರೆ ಆಯಾ ಇಲಾಖೆಯ ಕಾರ್ಯ ನಿರತ ವೃಂದ ಬಲದ ಶೇಕಡಾ ಆರರಷ್ಟನ್ನು ಮೀರದಂತೆ ವರ್ಗಾವಣ ಮಾಡಬೇಕಿತ್ತು. ಆದರೆ ವರ್ಗಾವಣೆಗೆ ಯಾವುದೇ ಸರ್ಕಾರಿ ನೌಕರರು ಕಡ್ಡಾಯ ನಿರೀಕ್ಷೆಯಲ್ಲಿ ಉಳಿಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮಾರ್ಗಸೂಚಿಯ ಪ್ರಕಾರ ಎ ಮತ್ತು ಬಿ ಗುಂಪಿನ ಎಲ್ಲಾ ಹುದ್ದೆಗಳ ಅಧಿಕಾರಿಗಳು ಒಂದು ಸ್ಥಳದಲ್ಲಿ ಮೂರು ವರ್ಷ, ಸಿ ಗುಂಪಿನ ನೌಕರರು ನಾಲ್ಕು ವರ್ಷ ಸೇವೆ ಸಲ್ಲಿಸಿರಬೇಕು. ಡಿ ಗುಂಪಿನ ನೌಕರರು ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕಾಗುತ್ತದೆ.

ಬರವನ್ನೇ ಬಂಡವಾಳ ಮಾಡಿಕೊಂಡು ಸಾರ್ವತ್ರಿಕ ವರ್ಗಾವಣೆಯನ್ನು  ಕೈಬಿಡಲು ನಿರ್ಧರಿಸಿರುವ ಸರ್ಕಾರದ ನಡೆ ಸರ್ಕಾರಿ ನೌಕರರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Top