An unconventional News Portal.

ರಾಜ್ಯ ಆರನೇ ವೇತನ ಆಯೋಗ ಶಿಫಾರಸ್ಸು ಜಾರಿ: ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿದೆಯಾ ನಿರ್ಧಾರ?

ರಾಜ್ಯ ಆರನೇ ವೇತನ ಆಯೋಗ ಶಿಫಾರಸ್ಸು ಜಾರಿ: ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿದೆಯಾ ನಿರ್ಧಾರ?

ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರಕಾರ ರಚಿಸಿದ್ದ ಆರನೇ ವೇತನ ಆಯೋಗ ಇಂದು ವರದಿಯ ಮೊದಲ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಸರಕಾರಿ ನೌಕರರ ವೇತನವನ್ನು ಶೇಕಡ 30 % ಹೆಚ್ಚಳ ಮಾಡುವತ್ತ ಸರಕಾರ ಹೆಜ್ಜೆಯಿಟ್ಟಿದೆ. ಸರಕಾರದ ಈ ನಿರ್ಧಾರ ಚುನಾವಣೆಯಲ್ಲಿ ಸರಕಾರಿ ನೌಕರರನ್ನು ತನ್ನತ್ತ ಸೆಳೆಯುವಂತೆ ಮಾಡಲಿದೆಯಾ ಎಂಬ ಪ್ರಶ್ನೆಯೀಗ ಮೇಲೆದ್ದಿದೆ.

ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜ್ಯ ಸರಕಾರ ಮತದಾರರನ್ನು ತನ್ನತ್ತ ಸೆಳೆಯಲು ಹೊಸ ಪ್ರಯೋಗಕ್ಕೆ ಮುಂದಾಗಿದೆ. ರಾಜ್ಯ ಸರಕಾರದ ಆರನೇ ವೇತನ ಆಯೋಗದ ಶಿಫಾರಸ್ಸನ್ನು ಅಳವಡಿಸುವ ಕಾರ್ಯಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಇಂದು ಇದರ ಪ್ರಯುಕ್ತ ಮೊದಲ ಅಂಗವಾಗಿ, ಆರನೇ ವೇತನ ಆಯೋಗದ ಅಧ್ಯಕ್ಷರಾದ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ವರದಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು. ಇದರಿಂದ ಸರಕಾರಿ ನೌಕರರ ಸಂಬಳ ಶೇಕಡ 30% ಹೆಚ್ಚಲಿದ್ದು, 2018ನೇ ವರ್ಷದ ಬಹುಮಾನವಾಗಲಿದೆ.

ವೇತನ ಆಯೋಗದಿಂದ ಶಿಫಾರಸು ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. “ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ ಆರನೇ ವೇತನ ಆಯೋಗ ತನ್ನ ವರದಿಯ ಮೊದಲ ಸಂಪುಟವನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿತು. ಆಯೋಗದ ಅಧ್ಯಕ್ಷರಾದ, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ವರದಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು,” ಎಂಬುದಾಗಿ ಟ್ವೀಟ್‌ ಮಾಡಿದ್ದಾರೆ.

ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಶೇ 30 %ನಷ್ಟು ಹೆಚ್ಚಿಸಲು ಆರನೇ ವೇತನ ಆಯೋಗ ಶಿಫಾರಸು ಮಾಡಿದ್ದು, ಇದರಿಂದ ಒಟ್ಟು ಸುಮಾರು 6 ಲಕ್ಷ  ನೌಕರರಿಗೆ ಪ್ರಯೋಜನವಾಗಲಿದೆ. ವೇತನ ಹೆಚ್ಚಳ ಶಿಫಾರಸು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73 ಸಾವಿರ ಬೋಧಕೇತರ  ಸಿಬ್ಬಂದಿಗಳಿಗೂ ಅನ್ವಯವಾಗಲಿದೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ಅವರ ಅಧಿಕೃತ ಟ್ವಿಟ್ಟರ್‌ ಖಾತೆ ನೀಡಿದೆ. ರೂ. 8,500ರ ಕನಿಷ್ಠ ಪಿಂಚಣಿ ಮತ್ತು ರೂ. 75,300ರ ಗರಿಷ್ಠ ಪಿಂಚಣಿಗೂ ಶಿಫಾರಸು  ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ ರೂ. 9,600 ಇನ್ನು ರೂ. 17,000ಕ್ಕೆ ಏರಿಕೆಯಾಗಲಿದೆ.

ಶೇ 45.25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ಸೇರಿಕೊಳ್ಳಲಿದೆ. ಕನಿಷ್ಠ ವೇತನವನ್ನು ರೂ. 17 ಸಾವಿರ ಮತ್ತು ಗರಿಷ್ಠ ವೇತನ ರೂ. 1.56 ಲಕ್ಷದಂತೆ ನಿಗದಿಪಡಿಸುವಂತೆ ವರದಿ ಶಿಫಾರಸ್ಸು ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ರೂ. 10 ಸಾವಿರ ಕೋಟಿಗೂ ಅಧಿಕ ಹೊರೆಯಾಗಲಿದೆ.

ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಸಲ್ಲಿಸಿದ ವೇತನ ಆಯೋಗದ ಶಿಫಾರಸುಗಳ ಬಗ್ಗೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ  ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅದರ ಜತೆಗೆ ವೇತನ ಆಯೋಗ ರಚಿಸಿದ ಅತ್ಯಲ್ಪ ಅವಧಿಯಲ್ಲಿಯೇ ಜಾರಿಗೆ ತರುವ ನಿರ್ಧಾರಕ್ಕೆ ಸರಕಾರ ಬಂದಿದೆ. ಕಳೆದ 2017ರ ಜುಲೈನಲ್ಲಿ ವೇತನ ಆಯೋಗ ರಚಿಸಲಾಗಿತ್ತು.

ವರದಿಯಲ್ಲೇನಿದೆ?:

  • ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನೂ ಸದ್ಯವಿರುವ 60 ವರ್ಷಗಳ ವಯೋಮಿತಿಯನ್ನೇ ಮುಂದುವರಿಸಬೇಕು.
  • ಸ್ವಯಂ ನಿವೃತ್ತಿಗೆ ಸೇವಾ ಅರ್ಹತೆಯ ಮಿತಿಯನ್ನು ಈಗಿರುವ 15 ವರ್ಷದಿಂದ 10 ವರ್ಷಕ್ಕೆ ಇಳಿಸಬೇಕು.
  • ಪೂರ್ಣ ಪಿಂಚಿಣಿ ಪಡೆಯಲು ವಯಸ್ಸಿನ ಅರ್ಹತೆಯನ್ನು 33 ವರ್ಷಗಳಿಗೆ ಬದಲಾಗಿ 30 ವರ್ಷಗಳಿಗೆ ಇಳಿಕೆ ಮಾಡಬೇಕು.
  • ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕೃತ ಮೂಲ ವೇತನ ಆಧರಿಸಿ ಶೇ 24, ಶೇ 16 ಮತ್ತು ಶೇ 8ರಂತೆ ಪರಿಷ್ಕರಿಸಬೇಕು.

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅವರು, ಸಮಸ್ತ ಸರಕಾರಿ ನೌಕರರಲ್ಲಿ ಅತೃಪ್ತಿ ಮೂಡಿಸಿದೆ ಎಂದರು. “ಕೇಂದ್ರ ಸರಕಾರ ಏಳನೇ ವೇತನ ಆಯೋಗದಲ್ಲಿ ನೀಡಿರುವ ವೇತನವನ್ನು ರಾಜ್ಯದಲ್ಲೂ ಜಾರಿ ಮಾಡಬೇಕು. ಕೇವಲ ಶೇಕಡ 30ರಷ್ಟು ಹೆಚ್ಚಳ ಮಾಡಲು ಮುಂದಾಗಿರುವುದು ಬೇಸರ ಮೂಡಿಸಿದೆ. ಶೇಕಡ 45 % ವೇತನವನ್ನು ಹೆಚ್ಚಿಸಬೇಕು. ಮುಖ್ಯಮಂತ್ರಿಗಳಿಗೆ ಸರಕಾರಿ ನೌಕರರಿಗೆ ಆಗಿರುವ ಅನ್ಯಾಯದ ಬಗ್ಗೆ ಅರಿವಿದೆ. ಫೆಬ್ರವರಿ 5ನೇ ತಾರೀಕು, ಮತ್ತೆ ಸಿದ್ದರಾಮಯ್ಯ ಅವರನ್ನು ನೌಕರರ ನಿಯೋಗ ಭೇಟಿ ನೀಡಿ ಮನವಿ ಮಾಡುತ್ತೇವೆ. ಶೇಕಡ 45% ವೇತನ ಹೆಚ್ಚಳ ಮಾಡದಿದ್ದರೆ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಹೋರಾಟದ ಬಗ್ಗೆಯೂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇವೆ,” ಎಂದು ಹೇಳಿಕೆ ನೀಡಿದ್ದಾರೆ.

ಈ ಮೂಲಕ ಸರಕಾರ ಸಂಪುಟ ಸಭೆಯಲ್ಲಿ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದರೂ, ಸರಕಾರಿ ನೌಕರರಲ್ಲಿರುವ ಅಸಮಾಧಾನ ಮುಂದುವರೆಯಲಿದೆ. ಸರಕಾರ ನೌಕರರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ, ಆಯೋಗದ ಶಿಫಾರಸ್ಸಿಗಿಂತಲೂ ಶೇಕಡ 15% ವೇತನ ಹೆಚ್ಚು ಮಾಡಲಿದೆಯೇ? ಚುನಾವಣೆ ಸಂದರ್ಭದಲ್ಲಿ ಸರಕಾರವನ್ನು ತಮ್ಮ ಆಗ್ರಹಕ್ಕೆ ಮಣಿಸುವ ಸರಕಾರಿ ನೌಕರರ ಸಂಘದ ಪ್ರಯತ್ನ ಸಫಲವಾಗುವುದೇ? ಎಂಬುದನ್ನು ಕಾದು ನೋಡಬೇಕಿದೆ.

Leave a comment

Top