An unconventional News Portal.

‘ಒಎನ್‌ಜಿಸಿ’ ಬಾವಿಗೆ ಕನ್ನ ಹಾಕಿದ ಅಂಬಾನಿಗೆ 10,000 ಕೋಟಿ ದಂಡ; ಮೋದಿ ಸರಕಾರದ ‘ಡ್ರಾಮ’?

‘ಒಎನ್‌ಜಿಸಿ’ ಬಾವಿಗೆ ಕನ್ನ ಹಾಕಿದ ಅಂಬಾನಿಗೆ 10,000 ಕೋಟಿ ದಂಡ; ಮೋದಿ ಸರಕಾರದ ‘ಡ್ರಾಮ’?

ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)’ಗೆ ಸುಮಾರು 10,300 ಕೋಟಿ ರೂಪಾಯಿ ದಂಡ ವಿಧಿಸಿದೆ. ‘ಕೃಷ್ಣಾ ಗೋದಾವರಿ ಬೇಸಿನ್’ನಲ್ಲಿ ಸರಕಾರಿ ಸ್ವಾಮ್ಯದ ‘ಒಎನ್‌ಜಿಸಿ’ಗೆ ನಿಗದಿಯಾಗಿದ್ದ ಪ್ರದೇಶದಲ್ಲಿ ಅಕ್ರಮವಾಗಿ ನೈಸರ್ಗಿಕ ಅನಿಲ ಹೊರತೆಗೆದ ಪ್ರಕರಣದಲ್ಲಿ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಆದರೆ ಈ ದಂಡ ಕೇವಲ ‘ತೋರಿಕೆಗಾಗಿ’ ಎನ್ನುತ್ತಿದೆ ‘ಬಿಸಿನೆಸ್ ಸ್ಟಾಂಡರ್ಡ್’ನ ವರದಿ.

ಪೆಟ್ರೋಲಿಯಂ ಸಚಿವಾಲಯದಿಂದ ದಂಡ ಪಾವತಿಸುವಂತೆ ರಿಲಯನ್ಸ್ ಕಂಪೆನಿಗೆ ನವೆಂಬರ್ 3ರಂದು ನೊಟೀಸ್ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಲು ಕಂಪೆನಿಗೆ 30 ದಿನಗಳ ಕಾಲಾವಕಾಶವಿದೆ. ಈ ಭಾರಿ ಮೊತ್ತದ ದಂಡ ವಿಧಿಸುತ್ತಿದ್ದಂತೆ ಶುಕ್ರವಾರ ರಿಲಯನ್ಸ್ ಷೇರುಗಳು ಶೇಕಡಾ 2ರಷ್ಟು ಕುಸಿತ ಕಂಡಿವೆ. ಈ ದಂಡ 3,38,000 ಕೋಟಿ ಮೌಲ್ಯದ ರಿಲಯನ್ಸ್ ಕಂಪೆನಿ ಮೇಲೆ ದೀರ್ಘಕಾಲದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ಕೃಷ್ಣಾ ಗೋದಾವರಿ ನದಿ ಮೇಲಿರುವ ರಿಲಯನ್ಸ್ ಪ್ಲಾಂಟ್ (ಚಿತ್ರ : ರಾಯ್ಟರ್ಸ್)

ಕೃಷ್ಣಾ ಗೋದಾವರಿ ನದಿ ಮೇಲಿರುವ ರಿಲಯನ್ಸ್ ಪ್ಲಾಂಟ್ (ಚಿತ್ರ : ರಾಯ್ಟರ್ಸ್)

2015ನೇ ಆರ್ಥಿಕ ವರ್ಷದಲ್ಲಿ ಅಂಬಾನಿಯ ಕಂಪೆನಿ ಸುಮಾರು 30,000 ಕೋಟಿ ಲಾಭ ಗಳಿಸಿತ್ತು. ಈಗ ಕಂಪೆನಿ ದಂಡ ಕಕ್ಕಬೇಕಾಗಿದ್ದು ಇದರಲ್ಲಿ ಮೂರನೇ ಒಂದಂಶ ಕಳೆದುಕೊಳ್ಳಬೇಕಾಗಿ ಬಂದಿದೆ. ಇದರಿಂದ ತನ್ನ ಷೇರುದಾರರಿಗೆ ನೀಡುವ ಡಿವಿಡೆಂಟ್ (ಲಾಭಾಂಶ)ದಲ್ಲಿಯೂ ಕಂಪೆನಿ ಕಡಿತ ಮಾಡಬೇಕಾಗುತ್ತದೆ. ಸದ್ಯ 2015ನೇ ಆರ್ಥಿಕ ವರ್ಷದಲ್ಲಿ ತನ್ನ 25 ಲಕ್ಷ ಷೇರುದಾರರಿಗೆ ಕಂಪೆನಿ 3,095 ಕೋಟಿ ಲಾಭಾಂಶ ನೀಡಿತ್ತು. ಒಂದೊಮ್ಮೆ ಈ ದಂಡವನ್ನು ಪಾವತಿಸಿದ್ದೇ ಆದಲ್ಲಿ ಮುಂದಿನ ಎರಡು ವರ್ಷ ಕಂಪೆನಿ ತನ್ನ ಷೇರುದಾರರಿಗೆ ಯಾವುದೇ ಲಾಭಾಂಶ ವಿತರಣೆ ಮಾಡುವುದು ಕಷ್ಟಕರವಾಗಲಿದೆ.

ಆದರೆ ಮೋದಿ ಸರಕಾರ ಬಂದ ಮೇಲೆ ರಿಲಯನ್ಸ್ ಲಾಭ ರಾಕೆಟ್ ವೇಗದಲ್ಲಿ ಮೇಲೇರುತ್ತಿದ್ದು ಕಂಪೆನಿ ಮಾತ್ರ ತನ್ನ ಷೇರುದಾರರಿಗೆ ಹೊರಯಾಗದಂತೆ ನೋಡಿಕೊಳ್ಳಲು ನಿರ್ಧರಿಸಿದೆ. 2014ನೇ ಆರ್ಥಿಕ ವರ್ಷದಲ್ಲಿ ಕಂಪೆನಿ ಕಂಡಿದ್ದ 22,719 ಕೋಟಿ ಲಾಭಕ್ಕೆ ಹೋಲಿಕೆ ಮಾಡಿದಲ್ಲಿ 2015ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ಬರೋಬ್ಬರಿ 27,417 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದೇ ಏರುಗತಿಯ ಲಾಭವನ್ನು ಮುಂದಿನ ವರ್ಷಗಳಲ್ಲೂ ಗಳಿಸುವ ವಿಶ್ವಾಸದಲ್ಲಿ ರಿಲಯನ್ಸ್ ಇದ್ದು ಇದರಿಂದ ಷೇರುದಾರರಿಗೆ ಯಾವುದೇ ಹೊರೆಯಾಗಲಿಕ್ಕಿಲ್ಲ ಎಂದು ಭಾವಿಸಿದೆ.

ವ್ಯರ್ಥ ದಂಡ?

‘ಬಿಸಿನೆಸ್ ಸ್ಟಾಂಡರ್ಡ್’ ಸರಕಾರ ವಿಧಿಸಿದ ದಂಡವನ್ನು ವಿಶ್ಲೇಷಣೆ ಮಾಡಿದ್ದು ಫೈನ್ ವಿಧಿಸಿದ್ದರಿಂದ ಸರಕಾರಕ್ಕೆ ಹೆಚ್ಚುವರಿಯಾಗಿ ದಕ್ಕುವುದು ಏನೂ ಇಲ್ಲ ಎಂದು ಹೇಳಿದೆ. 2015ನೇ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ದೇಶದ ಬೊಕ್ಕಸಕ್ಕೆ 43,380 ಕೋಟಿ ರೂಪಾಯಿ ಕೊಡುಗೆ ನೀಡಿದೆ. ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 12,000 ಕೋಟಿ ಹೆಚ್ಚಾಗಿದೆ. ಒಂದೊಮ್ಮೆ ಆರ್ಐಎಲ್ ದಂಡ ಕಟ್ಟಿದರೂ ಇದು ಕಂಪೆನಿಯಿಂದ ಪಡೆದುಕೊಳ್ಳಬೇಕಾಗಿದ್ದ ಟ್ಯಾಕ್ಸಿಗಿಂತ ಹೆಚ್ಚಿಗೆ ಏನೂ ಆಗುವುದಿಲ್ಲ ಎಂದು ‘ಬಿಸಿನೆಸ್ ಸ್ಟ್ಯಾಂಡರ್ಡ್’ ಹೇಳಿದೆ. ಇದರಿಂದ ಕೇವಲ ತೆರಿಗೆಯ ಮೊತ್ತವನ್ನು ಪಡೆದುಕೊಂಡ ಹಾಗೆ ಆಗುತ್ತದೆ ಅಲ್ಲದೇ, ಹೆಚ್ಚುವರಿ ದಂಡವನ್ನೇನೂ ಹಾಕಿದಂತಾಗಿಲ್ಲ. ಆದರೆ ಸರಕಾರ ಸ್ವಾಮ್ಯದ ಕಂಪೆನಿಗಳ ಗ್ಯಾಸ್ ಕದಿಯುವ ಕಂಪೆನಿಗಳಿಗೆ ಇದೊಂದು ಎಚ್ಚರಿಕೆ. ಈ ಮೂಲಕ ಕದ್ದ ಗ್ಯಾಸಿನಲ್ಲಿ ಲಾಭ ಮಾಡಿಕೊಂಡರೆ ಕ್ಷಮಿಸಲಾಗದು ಎಂಬ ಸಂದೇಶವನ್ನು ಸಚಿವಾಲಯ ಉಳಿದ ಕಂಪನಿಗಳಿಗೆ ನೀಡಿದೆ ಎಂದು ವೆಬ್ಸೈಟ್ ಹೇಳಿದೆ.

ಕೃಷ್ಣಾ ಗೋದಾವರಿ ಕೊಳ್ಳದಿಂದ ತೆಗೆದ ಕಚ್ಛಾ ತೈಲವನ್ನು ಪ್ರದರ್ಶಿಸುತ್ತಿರುವ ಮುಖೇಶ್ ಅಂಬಾನಿ (ಚಿತ್ರ: ದಿ ಹಿಂದೂ)

ಕೃಷ್ಣಾ ಗೋದಾವರಿ ಕೊಳ್ಳದಿಂದ ತೆಗೆದ ಕಚ್ಛಾ ತೈಲವನ್ನು ಪ್ರದರ್ಶಿಸುತ್ತಿರುವ ಮುಖೇಶ್ ಅಂಬಾನಿ (ಚಿತ್ರ: ದಿ ಹಿಂದೂ)

ಪ್ರಕರಣ ನಡೆದು ಬಂದ ದಾರಿ

2013ರಲ್ಲಿ ‘ಒಎನ್‌ಜಿಸಿ’ ತನ್ನ ಬ್ಲಾಕ್ ಗಳಿಂದ ರಿಲಯನ್ಸ್ ಅನಿಲ ಹೊರತೆಗೆದಿದೆ ಎಂದು ತಗಾದೆ ತೆಗೆದಿತ್ತು. ನಂತರ ಎರಡೂ ಕಂಪೆನಿಗಳ ನಡುವೆ ವಾದ ವಿವಾದಗಳಾಗಿ, 2015, ಮೇ 15ರಂದು ದೆಹಲಿ ಹೈಕೋರ್ಟಿನಲ್ಲಿ ‘ಒಎನ್‌ಜಿಸಿ’ ಸರಕಾರ, ಡಿಜಿಎಚ್ (ಡೈರೆಕ್ಟರೇಟ್ ಆಫ ಹೈಡ್ರೋಕಾರ್ಬನ್ಸ್) ಮತ್ತು ರಿಲಯನ್ಸ್ ವಿರುದ್ಧ ರಿಟ್ ಪಿಟಿಷನ್ ಸಲ್ಲಿಸಿತು.

ಈ ಕುರಿತು ಅಮೆರಿಕಾ ಮೂಲದ ‘ಡಿ ಆ್ಯಂಡ್ ಎಮ್ ಕನ್ಸಲ್ಟಿಂಗ್’ ಕಂಪೆನಿ 74,000 ಕೋಟಿ ಘನ ಮೀಟರ್ ಅನಿಲ್ ‘ಒಎನ್‌ಜಿಸಿ’ ಯಿಂದ ವರ್ಗಾವಣೆಯಾಗಿರುವುದಾಗಿ ತನ್ನ ವರದಿ ಸಲ್ಲಿಸಿತು. ನಂತರ ಸದರಿ ಪ್ರಕರಣದಲ್ಲಿ ಕಾನೂನು ಕ್ರಮಗಳ ಬಗ್ಗೆ ವರದಿ ನೀಡಲು ಡಿಸೆಂಬರ್ 2015ರಲ್ಲಿ ಎ.ಪಿ ಶಾ ಸಮಿತಿಯನ್ನು ನೇಮಿಸಲಾಯಿತು. 2016ರಲ್ಲಿ ತನ್ನ ವರದಿ ನೀಡಿದ ಸಮಿತಿಯು ವರ್ಗಾವಣೆಯಾಗಿರುವುದನ್ನು ಖಚಿತ ಪಡಿಸಿ ವರದಿ ನೀಡಿತು. ಇದನ್ನು ಪೂರ್ಣಪ್ರಮಾಣದಲ್ಲಿ ಸರಕಾರ ಒಪ್ಪಿಕೊಂಡಿತು. ನಂತರ ಇದೀಗ ‘ಡಿಜಿಎಚ್’ ದಂಡ ಪ್ರಮಾಣವನ್ನು ಲೆಕ್ಕ ಹಾಕಿ ಕೊಟ್ಟಿದ್ದು, ಅದರನ್ವಯ ದಂಡ ವಿಧಿಸಲಾಗಿದೆ.

Top