An unconventional News Portal.

ಗಮನಿಸಿ; ಆಧಾರ್ ಮಾಹಿತಿ ಸೋರಿಕೆ ಆಗಿದೆ: ಕೊನೆಗೂ ಒಪ್ಪಿಕೊಂಡ ಮೋದಿ ಸರಕಾರ

ಗಮನಿಸಿ; ಆಧಾರ್ ಮಾಹಿತಿ ಸೋರಿಕೆ ಆಗಿದೆ: ಕೊನೆಗೂ ಒಪ್ಪಿಕೊಂಡ ಮೋದಿ ಸರಕಾರ

ನಿಮ್ಮ ಆಧಾರ್‌ ಕಾರ್ಡ್‌ ಜತೆಗೆ ಬ್ಯಾಂಕ್‌ ಅಕೌಂಟ್ ಮತ್ತಿತರ ವೈಯಕ್ತಿಕ, ಸೂಕ್ಷ್ಮ ಮಾಹಿತಿಗಳನ್ನು ಜೋಡಿಸಿಟ್ಟುಕೊಂಡಿದ್ದೀರಾ? ಹಾಗಾದರೆ ಎಚ್ಚರಾಗಿ, ನಿಮ್ಮ ಗೌಪ್ಯ ಮಾಹಿತಿ ಸೋರಿಕೆಯಾಗಿರುವ ಎಲ್ಲಾ ಸಾಧ್ಯತೆಗಳೂ ಇವೆ.

ಇದೇ ಮೊದಲ ಬಾರಿಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅಧಿಕೃತವಾಗಿ ಯುಐಡಿ ಅಥವಾ ಆಧಾರ್‌ ಕಾರ್ಡ್ ಮಾಹಿತಿ ಸಾರ್ವಜನಿಕಗೊಳ್ಳುವ ಸಾಧ್ಯತೆಯನ್ನು ಒಪ್ಪಿಕೊಂಡಿದೆ.

ಈವರೆಗೂ ಸರಕಾರ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ನಾಗರಿಕರು ನೀಡಿರುವ ಮಾಹಿತಿ ಸೋರಿಕೆಯಾಗಬಹುದು ಎಂಬ ಎಚ್ಚರಿಕೆಗಳನ್ನು ಕಡೆಗಣಿಸುತ್ತಲೇ ಬಂದಿತ್ತು. ಜತೆಗೆ, ಆದಾಯ ತೆರಿಗೆ ಪಾವತಿ ಸೇರಿದಂತೆ ಸಿಮ್‌ ಕಾರ್ಡ್ ಪಡೆದುಕೊಳ್ಳಲು ಆಧಾರ್‌ ನಂಬರ್ ಕಡ್ಡಾಯಗೊಳಿಸಲು ಮುಂದಾಗಿತ್ತು. ಇದೀಗ, ಹಲವು ಎಚ್ಚರಿಕೆ ಹಾಗೂ ಪ್ರಕರಣಗಳ ನಂತರ ಸರಕಾರ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಆಧಾರ್‌ ಕಾರ್ಡ್ ನಂಬರ್ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿದೆ. ಈ ಕುರಿತು ಇಲಾಖೆಯ ತಜ್ಞರೊಬ್ಬರು ಬರೆದಿರುವ ಪತ್ರವೊಂದು ಬಹಿರಂಗವಾಗಿದೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಈ ಪತ್ರದ ಪ್ರತಿಯೊಂದನ್ನು ಪ್ರಕಟಿಸಿದ್ದು, ಇಲಾಖೆ ಸರಕಾರದ ಬಳಿ ಇದ್ದ ಜನರ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆ ಎಂಬುದು ನಿಚ್ಚಳವಾಗಿದೆ.

ಸಚಿವಾಲಯಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಆಧಾರ್‌ ಮಾಹಿತಿ ಸೋರಿಕೆ ಕುರಿತು ಬರೆದ ಪತ್ರ.

ಸಚಿವಾಲಯಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಆಧಾರ್‌ ಮಾಹಿತಿ ಸೋರಿಕೆ ಕುರಿತು ಬರೆದ ಪತ್ರ.

“ಸರಕಾರದ ನಾನಾ ಇಲಾಖೆಗಳು ಹಾಗೂ ಸಚಿವಾಲಯಗಳು ಸಂಗ್ರಹಿಸಿರುವ ಜನರ ಪ್ರಾದೇಶಿಕ ವಾಸ್ತವ್ಯದ ಮಾಹಿತಿ, ಆಧಾರ್‌ ಕಾರ್ಡ್ ನಂಬರ್, ಬ್ಯಾಂಕ್‌ ಅಕೌಂಟ್ ವಿವರಗಳು ಸೋರಿಕೆಯಾಗಿವೆ. ಅವುಗಳೀಗ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತಿವೆ,” ಎಂದು ಇಲಾಖೆಯ ತಜ್ಞೆ ಅರ್ಚನಾ ದುರೇಜಾ ಮಾ. 25ರಂದು ಪತ್ರವೊಂದನ್ನು ಬರೆದಿದ್ದಾರೆ.

“ಆಧಾರ್‌ ಕಾರ್ಡ್‌ ನಂಬರ್ ಜತೆಗೆ ಹೆಸರು, ಹುಟ್ಟಿದ ದಿನಾಂಕ ಹಾಗೂ ವಿಳಾಸಗಳನ್ನು ಬಹಿರಂಗಗೊಳಿಸುವುದು ಆಧಾರ್‌ ಕಾಯ್ದೆ 2016ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ,” ಎಂದವರು ಪತ್ರದಲ್ಲಿ ವಿವರಿಸಿದ್ದಾರೆ. ನಾನಾ ಸಚಿವಾಲಯಗಳಿಗೆ ಹಾಗೂ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಅರ್ಚನಾ ಸೋರಿಕೆಯಾಗಿರುವ ಮಾಹಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ನಾಗರಿಕರ ಮಾಹಿತಿ ಸೋರಿಕೆಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರವನ್ನೂ ಕಟ್ಟಿಕೊಡಬೇಕಾಗುತ್ತದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ವಿಪರ್ಯಾಸ ಏನೆಂದರೆ, ಇದೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮಾ. 5ರಂದು ನೀಡಿದ ಹೇಳಿಕೆಯಲ್ಲಿ ಆಧಾರ್‌ ಕಾರ್ಡ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಿತ್ತು. ಆಧಾರ್‌ ಕಾರ್ಡ್‌ ಮಾಹಿತಿ ಸೋರಕೆಯಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವಾಲಯ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

ಹಣಕಾಸು ಮಸೂದೆ ಕುರಿತು ಸಂಸತ್‌ನಲ್ಲಿ ನಡೆದ ಚರ್ಚೆಯ ವೇಳೆ, ಆಧಾರ್‌ ಕಾರ್ಡ್ ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಳ್ಳಲು ಸರಕಾರ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಎಂಬ ಪ್ರಶ್ನೆಯನ್ನು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಎತ್ತಿದ್ದರು. ವಿಶೇಷವಾಗಿ ಜನ ಆಧಾರ್‌ ಕಾರ್ಡ್‌ ಜತೆ ಜೋಡಿಸಿಕೊಟ್ಟುಕೊಂಡಿರುವ ಬ್ಯಾಂಕ್‌ ಅಕೌಂಟ್‌ಳ ಸುರಕ್ಷತೆ ಕುರಿತು ಅವರು ಅನುಮಾನ ವ್ಯಕ್ತಪಡಿಸಿದ್ದರು.

ಆಧಾರ್ ಕಾರ್ಡ್ ಮಾಹಿತಿ ಸೋರಿಕೆ ಕುರಿತು ಸಾಕ್ಷಿ ಟ್ಲೀಟ್.

ಆಧಾರ್ ಕಾರ್ಡ್ ಮಾಹಿತಿ ಸೋರಿಕೆ ಕುರಿತು ಸಾಕ್ಷಿ ಟ್ಲೀಟ್.

ಆಧಾರ್‌ ಕಾರ್ಡ್‌ ನಂಬರ್‌ನ್ನು ಎಲ್ಲಾ ಕಡೆಗಳಲ್ಲೂ ಕಡ್ಡಾಯಗೊಳಿಸುವ ಮೂಲಕ ಗೌಪ್ಯತೆಗೆ ಧಕ್ಕೆ ಬರಬಹುದು ಎಂಬುದಕ್ಕೆ ಕ್ರಿಕೆಟಿಗ ದೋನಿ ಪ್ರಕರಣ ಸಾಕ್ಷಿಯಾಗಿತ್ತು. ಕೆಲವು ದಿನಗಳ ಹಿಂದಷ್ಟೆ ದೋನಿ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತಿಯ ಆಧಾರ್‌ ಕಾರ್ಡ್‌ ಮಾಹಿತಿಗಳು ಬಹಿರಂಗವಾಗಿವೆ ಎಂದು ತಿಳಿಸಿದ್ದರು. ಇದಾದ ನಂತರ ಸರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ ಇದೊಂದು ಪ್ರತ್ಯೇಕ ಪ್ರಕರಣ ಎಂದು ತಿಪ್ಪೆ ಸಾರಿಸುವ ಕೆಲಸವೂ ನಡೆದಿತ್ತು.

ಇದೀಗ ಸಚಿವಾಲಯದ ತಜ್ಞೆಯ ಪತ್ರದ ಮೂಲಕ ಆಧಾರ್‌ ಕಾರ್ಡ್‌ ಮಾಹಿತಿಗಳು ದೊಡ್ಡ ಮಟ್ಟದಲ್ಲಿ ಸೋರಿಕೆಯಾಗಿದೆ ಎಂಬುದನ್ನು ಸರಕಾರವೇ ಒಪ್ಪಿಕೊಂಡಂತಾಗಿದೆ.

Top