An unconventional News Portal.

ಮೊಮ್ಮಗಳ ಕೈಚಳಕದಿಂದ ‘ಗ್ಲಾಮ್-ಮಾ’ ಆದ 80 ವರ್ಷದ ಗ್ರಾಂಡ್ ಮಾ!

ಮೊಮ್ಮಗಳ ಕೈಚಳಕದಿಂದ ‘ಗ್ಲಾಮ್-ಮಾ’ ಆದ 80 ವರ್ಷದ ಗ್ರಾಂಡ್ ಮಾ!

“ಯೂ ಆರ್ ಬ್ಯೂಟಿಫುಲ್…”

ಇದೊಂದು ವಾಕ್ಯ ಎದುರಿಗೆ ಇರುವ ಹೆಣ್ಣಿನ ಮೈಮನಗಳಲ್ಲಿ ಹೊಸ ಪುಳಕವನ್ನು ಮೂಡಿಸಬಲ್ಲದು ಎಂಬ ಸ್ಟಿರಿಯೋ ಟೈಪ್ ಆದ ನಂಬಿಕೆಯೊಂದಿದೆ.

ಇದು ಒಮ್ಮೊಮ್ಮೆ ನಿಜ ಇರಬಹುದು ಎನ್ನಿಸುವ ಕೆಲ ನಿದರ್ಶನಗಳು ನಮ್ಮ ಸುತ್ತ ಮುತ್ತ ದಾಖಲಾಗುತ್ತಿರುತ್ತವೆ. ಇದೀಗ 80 ವರ್ಷದ ಲೀವಿಯಾ ಎಂಬ ಅಜ್ಜಿಯೊಬ್ಬಳು ನಡೆಸಿದ ಸುಂದರವಾಗಿ ಕಾಣುವ ಪ್ರಯತ್ನವೊಂದು ಜಗತ್ತಿನ ಗಮನ ಸೆಳೆದಿದೆ. ಈ ಕಾರಣಕ್ಕೆ ಅಂತರ್ಜಾಲದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಅಜ್ಜಿ ಫೇಮಸ್ ಆಗಿ ಹೋಗಿದ್ದಾರೆ.

ಪೀಠಿಕೆಯನ್ನು ಇಲ್ಲಿಗೇ ನಿಲ್ಲಿಸಿ, ವಿಚಾರಕ್ಕೆ ಬರುತ್ತೇವೆ. ನಡೆದಿದ್ದು ಏನು ಎಂದರೆ, ಕ್ರುಯೇಶಿಯಾ ಎಂಬ ದೇಶದ ಲೀವಿಯಾ ಎಂಬ ಅಜ್ಜಿಯೊಬ್ಬರು, ತನ್ನ ಮೊಮ್ಮಗಳ ಬಳಿ, ಮೇಕಪ್ ಮಾಡಿಸಿಕೊಳ್ಳುವ ಬಯಕೆಯನ್ನು ಮುಂದಿಟ್ಟರಂತೆ. ಸ್ವತಃ ಮೇಕಪ್ ಆರ್ಟಿಸ್ಟ್ ಆಗಿರುವ ಮೊಮ್ಮಗಳು ಟಿಯಾ ಫ್ಲೆಗೋ ಎಂಬಾಕೆ, ತನ್ನ ಅಜ್ಜಿಗೆ ಅದ್ಭುತವಾದ ಮೇಕಪ್ ಮಾಡಿರುವ ಫೊಟೋಗಳೀಗ ಹೊರಬಿದ್ದಿವೆ. ಅದರಲ್ಲಿ 80 ವರ್ಷದ ಅಜ್ಜಿ, ಮೇಕಪ್ ಮೊದಲು ಹಾಗೂ ನಂತರ ಹೊಂದಿರುವ ಬದಲಾವಣೆಗಳು ಜನರ ಗಮನ ಸೆಳೆಯುತ್ತಿವೆ.

 

glam-ma-1

ಮೇಕಪ್ ಮೊದಲು ಹಣ್ಣು ಹಣ್ಣು ಮುದುಕಿಯಾಗಿದ್ದ ಲೀವಿಯಾ, ಮೇಕಪ್ ನಂತರ 20 ವರ್ಷ ವಯಸ್ಸು ಇಳಿಸಿಕೊಂಡಂತೆ ಕಾಣುತ್ತಿದ್ದಾರೆ ಎಂಬುದು ಈ ಚಿತ್ರಗಳಿಗೆ ಬರುತ್ತಿರುವ ಕಾಮೆಂಟ್ಗಳು. “ಇಳೀ ವಯಸ್ಸಿನಲ್ಲಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಜ್ಜಿಗೆ ಇಂತಹ ಮಾತುಗಳು ಖುಷಿ ನೀಡುತ್ತಿವೆ,” ಎಂದು ಟಿಯಾ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ, ಇವತ್ತಿನ ಮೇಕಪ್ ಮಾರುಕಟ್ಟೆ ಅಜ್ಜಿಯನ್ನೂ ಬಿಡಲಿಲ್ಲ ಎಂಬುದಕ್ಕೆ ಈ ಪ್ರಸಂಗ ಹೊಸ ಸಾಕ್ಷಿ. ಅದನ್ನು ಬದಿಗಿಟ್ಟು ನೋಡಿದರೆ, ವಯಸ್ಸು ಯಾವುದಾದರೇನು, ಜೀವಂತಿಕೆಯನ್ನು ಉಳಿಸಿಕೊಳ್ಳಲು ಹೊಸ ಸಾಧ್ಯತೆಗಳು ನಮ್ಮ ನಡುವೆಯೇ ಇರುತ್ತವೆ ಎಂಬುದನ್ನು ಈ ಅಜ್ಜಿ ಮತ್ತು ಮೊಮ್ಮಗಳು ತೋರಿಸಿಕೊಟ್ಟಿದ್ದಾರೆ. ಜತೆಗೆ, ತಮ್ಮ ಸೌಂದರ್ಯ ವರ್ಧಕ ವೃತ್ತಿಯ ಪ್ರಚಾರಕ್ಕಾಗಿ ಅಜ್ಜಿಯ ಮೇಕಪ್ ಚಿತ್ರಗಳಿಗೆ ‘ಗ್ಲಾಮ್- ಮಾ’ ಎಂಬ ಹೆಸರಿಟ್ಟಿರುವ ಟಿಯಾ, ಭರ್ಜರಿ ಪ್ರಚಾರವನ್ನೂ ಪಡೆದಿದ್ದಾರೆ.

Top