An unconventional News Portal.

‘ಅಂತಿಮ ಅಲ್ಲ; ಆರಂಭ’: ಗೋವಾದಲ್ಲಿ 50 ದಿನಗಳ ಕಾಲಾವಕಾಶ ಕೋರಿದ ಪ್ರಧಾನಿ ಮೋದಿ

‘ಅಂತಿಮ ಅಲ್ಲ; ಆರಂಭ’: ಗೋವಾದಲ್ಲಿ 50 ದಿನಗಳ ಕಾಲಾವಕಾಶ ಕೋರಿದ ಪ್ರಧಾನಿ ಮೋದಿ

“ಇದೇ ಅಂತಿಮವಲ್ಲ. ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ನನ್ನ ತಲೆಯಲ್ಲಿ ಬೇರೆಯೇ ಆಲೋಚನೆಗಳಿವೆ. ನನಗೆ 50 ದಿನಗಳ ಸಮಯ ಕೊಡಿ; ನನ್ನೊಂದಿಗೆ ಸಹಕರಿಸಿ ನಾನು ನಿಮ್ಮ ಬಯಕೆಯ ಭಾರತವನ್ನು ನಿಮಗೆ ನೀಡುತ್ತೇನೆ.”

ಹೀಗಂತ ಸಮಯಾವಕಾಶದ ಮಾತನ್ನಾಡಿದವರು ಪ್ರಧಾನಿ ನರೇಂದ್ರ ಮೋದಿ. ಅನಾಣ್ಯೀಕರಣದ ನಂತರ ಭಾನುವಾರ ಗೋವಾದಲ್ಲಿ ಅವರು ಮೊದಲ ಬಾರಿಗೆ ವಿಸ್ತೃತವಾಗಿ ಮಾತನ್ನಾಡಿದ್ದಾರೆ. ಜನ ಸಾಮಾನ್ಯರ ಸಮಸ್ಯೆಯಿಂದ ಹಿಡಿದು ದೇಶದ ಬದಲಾವಣೆಯವರೆಗಿನ ಅಂಶಗಳು ಪ್ರಧಾನಿ ಮಾತಿನ ನಡುವೆ ಹಾದು ಹೋಗಿವೆ. ಅದರ ಸಂಕ್ಷಿಪ್ತ ಕನ್ನಡ ರೂಪ ಇಲ್ಲಿದೆ.

ಗೋವಾದಲ್ಲಿ ‘ಮೋಪ ಗ್ರೀನ್ ಪೀಲ್ಡ್ ವಿಮಾನ ನಿಲ್ದಾಣ’ಕ್ಕೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.

“ನಾವು ಬೇನಾಮಿ ಆಸ್ತಿಗಳ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ; ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ. ಒಂದೊಮ್ಮೆ ಯಾವುದೇ ಹಣ ಭಾರತದಲ್ಲಿ ಲೂಟಿ ಹೊಡೆದು, ದೇಶದಿಂದ ಹೊರಗೊಯ್ದಿದ್ದರೆ ಅದನ್ನು ಪತ್ತೆ ಹಚ್ಚುವುದು ನಮ್ಮ ಕೆಲಸ,” ಎಂದು ಹೇಳಿದರು.

modi-goaಪ್ರಧಾನಿಯನ್ನು ಬದುಕಲು ಬಿಡುವುದಿಲ್ಲ:

“ನನಗೆ ಗೊತ್ತು (ಕೆಲವು) ಶಕ್ತಿಗಳು ನನ್ನ ವಿರುದ್ಧ ಇವೆ. ಅವರು ನನ್ನನ್ನು ಬದುಕಲು ಬಿಡುವುದಿಲ್ಲ. 70 ವರ್ಷಗಳಿಂದ ಲೂಟಿ ಮಾಡಿದವರು ಈಗ ತೊಂದರೆಗೆ ಸಿಲುಕಿದ್ದಾರೆ. ಈ ಕಾರಣಕ್ಕೆ ಅವರು ನನ್ನನ್ನು ಬೇಕಿದ್ದರೆ ಮುಗಿಸಬಹುದು. ಆದರೆ ನಾನು ಸಿದ್ಧವಾಗಿದ್ದೇನೆ,” ಎಂದು ಹೇಳಿ ಭಾವೋದ್ವೇಗಕ್ಕೆ ಒಳಗಾದರು.

ನಂತರ ಮಾತು ಮುಂದುವರಿಸಿದ ಅವರು 2014ರಲ್ಲಿ ಜನ ಭ್ರಷ್ಟಾಚಾರದ ವಿರುದ್ಧ ಮತ ಹಾಕಿದ್ದಾರೆ ಎಂದರು. “ಈ ದೇಶದ ಜನರು ನನಗೆ ಏನು ಮಾಡಲು ಹೇಳಿದ್ದಾರೋ ಅದನ್ನೇ ನಾನು ಮಾಡುತ್ತಿದ್ದೇನೆ. ನಾನು ಎಸ್ಐಟಿ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ –ಕಪ್ಪು ಹಣದ ಬಗ್ಗೆ) ರಚಿಸಿದ ನನ್ನ ಮೊದಲ ಕ್ಯಾಬಿನೆಟ್ ಮೀಟಿಂಗಿನಿಂದಲೂ ಇದು ಸ್ಪಷ್ಟವಾಗಿದೆ. ನಾವು ಯಾವತ್ತೂ ಜನರನ್ನು ಕತ್ತಲೆಯಲ್ಲಿ ಇಡುವುದಿಲ್ಲ,” ಎಂದರು.

ಈ ಹಿಂದಿನ ಸರಕಾರಗಳ ಬಗ್ಗೆ ಉಲ್ಲೇಖ ಮಾಡಿದ ನರೇಂದ್ರ ಮೋದಿ, “ಅವರನ್ನು ನಿರ್ಲಕ್ಷಿಸಿ ಬಿಡಿ.. ನಿಷ್ಠಾವಂತ ಪ್ರಜೆಗಳನ್ನು ವಿಪತ್ತಿನಿಂದ ಪಾರು ಮಾಡಲು ಸಹಾಯಕ್ಕಾಗಿ ನಾವು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡು ಆಗಿದೆ,” ಎಂದು ಅಭಿಪ್ರಾಯಪಟ್ಟರು. ವಿಪಕ್ಷ ಯುಪಿಎ ವಿರುದ್ಧ ನೇರ ದಾಳಿಗೆ ಇಳಿದ ಪ್ರಧಾನಿ, “ಯಾರೆಲ್ಲಾ ಕಲ್ಲಿದ್ದಲು ಹಗರಣ, 2ಜಿ ಹಗರಣ ಮತ್ತು ಇತರ ಹಗರಣಗಳಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲಾ ಈಗ 4,000 ರೂಪಾಯಿ ಬದಲಾವಣೆಗಾಗಿ ಕ್ಯೂನಲ್ಲಿ ನಿಲ್ಲಲೇಬೇಕು. ಇದೆಲ್ಲಾ 70 ವರ್ಷಗಳ ಖಾಯಿಲೆ; ನಾನಿದನ್ನು 17 ತಿಂಗಳಲ್ಲಿ ಗುಣಪಡಿಸುತ್ತೇನೆ,” ಎಂದು ಮತ್ತೊಂದು ಭರವಸೆ ನೀಡಿದರು.

People change notes

ವಿರೋಧ ಪಕ್ಷಗಳಿಂದ ಅನಾಣ್ಯೀಕರಣಕ್ಕೆ ಟೀಕೆಗಳು ಕೇಳಿ ಬರುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿಗಳು, “ನನ್ನ ಜುಟ್ಟು ಹಿಡಿದೆಳೆದರೆ ನಾನೇನು ಮಾಡಲು ಸಾಧ್ಯವೇ ಇಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ನೀವು ನನ್ನನ್ನು ಜೀವಂತವಾಗಿ ಸುಟ್ಟರೂ ನಾನು ಭಯಪಡುವುದಿಲ್ಲ,” ಎಂದರು.

ಅನಾಣ್ಯೀಕರಣ ಯೋಜನೆ ಹೀಗಿತ್ತು!:

ಅನಾಣ್ಯೀಕರಣದ ಹಿಂದಿನ ಪ್ರಯತ್ನಗಳನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ “10 ತಿಂಗಳ ಹಿಂದೆ ನಾನು ಈ ಸೀಕ್ರೆಟ್ ಆಪರೇಷನ್ ಆರಂಭಿಸಿದೆ. ಒಂದು ಸಣ್ಣ ತಂಡ ರಚಿಸಿದೆ. ನಿಸ್ಸಂಶಯವಾಗಿ ಇದು ಪರಿಕ್ಕರ್ ಚಾಲನೆ (ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ರ್ಟೈಕ್) ನೀಡಿದಂತಲ್ಲ. ನಾವು ಹೊಸ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡಬೇಕಾಗಿತ್ತು. ಮಾತ್ರವಲ್ಲ ಬೇರೆ ಕೆಲವು ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾಗಿತ್ತು,” ಎಂದರು.

“ನಿಮಗೆ ಅಚ್ಚರಿಯಾಗಬಹುದು. ನನ್ನ ಬಳಿ ಹಲವು ಸಂಸತ್ ಸದಸ್ಯರೇ ಬಂದು ಹೇಳಿದರು. ಜುವೆಲ್ಲರಿ ಖರೀದಿಗೆ ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಡ್ಡಾಯ ಮಾಡಬೇಡಿ ಎಂದು. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಪತ್ರವನ್ನೂ ಬರೆದರು. ನಾನು ಆ ಪತ್ರಗಳನ್ನು ಬಹಿರಂಗಪಡಿಸಿದ ದಿನ ಅವರು ತಮ್ಮ ಕ್ಷೇತ್ರಕ್ಕೆ ಹೋಗಲೂ ಸಾಧ್ಯವಾಗುವುದಿಲ್ಲ,” ಎಂದು ಪ್ರತಿಕ್ರಿಯೆ ನೀಡಿದರು.

ಆಭರಣಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ವಿರೋಧ ಪಕ್ಷಗಳು ಈ ವಿಚಾರದಲ್ಲಿ ತಜ್ಞರ ಸಮಿತಿ ರಚಿಸುವಂತೆ ಮಾಡಿದವು. “ಆದಾಯ ತೆರಿಗೆ ಇಲಾಖೆಯಿಂದ ಆಭರಣ ವರ್ತಕರಿಗೆ ದೌರ್ಜನ್ಯ ನಡೆಸಲಾಗುತ್ತದೆ ಎಂಬ ಹೆದರಿಕೆ ಇದೆ. ನಾನು ನಿಮಗೆ ಪೂರ್ಣ ಭರವಸೆ ನಡುತ್ತಿದ್ದೇನೆ. ಯಾವುದೇ ಐಟಿ ಅಧಿಕಾರಿ ನಿಮಗೆ ತೊಂದರೆ ಕೊಡುವುದಿಲ್ಲ. ಯಾರಾದರೂ ಹಾಗೆ ಮಾಡಿದರೆ, ಅವರ ಮಾತುಗಳನ್ನು ರೆಕಾರ್ಡ್ ಮಾಡಿ ನನಗೆ ನೀಡಿ. ನಾನು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.” ಎಂದರು.

Note exchange“ಇವತ್ತು ಯಾರು ತಮ್ಮ ವಿಧವಾ ತಾಯಿಯನ್ನೂ ನೋಡುಕೊಳ್ಳುತ್ತಿರಲಿಲ್ಲವೋ ಅವರೇ ಆ ತಾಯಿಯ ಅಕೌಂಟಿಗೆ 2.5 ಲಕ್ಷ ಹಣ ಹಾಕುತ್ತಿದ್ದಾರೆ,” ಎಂದರು.

“ನಾನು ನಂಬಿಕಸ್ಥ, ದಕ್ಷ ಜನರನ್ನು ಬೆನ್ನಿಗಂಟಿಸಿಕೊಂಡು ಈ ಹೋರಾಟಕ್ಕೆ ಇಳಿದಿದ್ದೇನೆ. ನನಗೆ ಅವರ ಶಕ್ತಿಯಲ್ಲಿ ಪೂರ್ತಿ ನಂಬಿಕೆ ಇದೆ. ಎಲ್ಲರೂ ಹೇಳುತ್ತಿದ್ದಾರೆ ನಮಗೆ ಸಮಸ್ಯೆಯಾಗುತ್ತಿದೆ ಎಂದು; ಆದರೆ ಅವರೇ ಇದರಿಂದ ದೇಶಕ್ಕೆ ಒಳ್ಳೆಯಾದಾಗಲಿದೆ ಎಂದು ಖುಷಿಯಾಗಿದ್ದಾರೆ,” ಎಂದು ಹೇಳಿದ ಪ್ರಧಾನಿಗಳು ಬ್ಯಾಂಕಿನ ಸಿಬ್ಬಂದಿಗಳು ಮತ್ತು ಕ್ಯೂನಲ್ಲಿ ನಿಂತ ಹಿರಿಯರಿಗೆ ಸಹಾಯ ಮಾಡುತ್ತಿರುವ ಯುವಕರಿಗೆ ಅಭಿನಂದನೆಗಳನ್ನು ಹೇಳಿದರು.

ದೇಶದಲ್ಲಿ ಉಪ್ಪಿನ ಕೊರತೆ ಇದೆ ಎಂಬ ಗಾಳಿ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅವರು,”ಇದು ತಮ್ಮ ಕಪ್ಪು ಹಣ ಬಳಕೆಗೆ ಆಗದಿದ್ದವರು ಹೇಳುತ್ತಿರುವ ಮಾತುಗಳು,” ಎಂದರು.

1,25,000 ಕೋಟಿ ಸಂಗ್ರಹ:

“ನಾನು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸುಪ್ರಿಂ ಕೋರ್ಟ್ ಮಾರ್ಗದರ್ಶನದಲ್ಲಿ ವಿದೇಶದಲ್ಲಿರುವ ಕಪ್ಪುಹಣದ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾದಳವನ್ನು ರಚಿಸಿದೆ.  ಹಿಂದಿನ ಸರಕಾರ ಇದನ್ನು ನಿರ್ಲಕ್ಷಿಸಿತ್ತು. ನಾನೇನಾದರೂ ನಿಮ್ಮಿಂದ ಮುಚ್ಚಿಟ್ಟೆನಾ? ಭ್ರಷ್ಟಾಚಾರಿಗಳ ಕಪಿ ಮುಷ್ಠಿಯಿಂದ ಜನರನ್ನು ರಕ್ಷಿಸಲು ನಾವು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವೀಗಾಗಲೇ ಕಪ್ಪು ಹಣ ಘೋಷಣೆ ಮಾಡಿಕೊಳ್ಳಿ ಎಂದು ಹೇಳಿ 67,000 ಕೋಟಿ ಸಂಗ್ರಹಿಸಿದ್ದೇವೆ. ಸಮೀಕ್ಷೆಗಳು, ರೈಡ್ಗಳು ಮತ್ತು ಕಪ್ಪು ಹಣ ಘೋಷಣೆ ಸೇರಿ ಒಟ್ಟು 1,25,000 ಕೋಟಿ ಸಂಗ್ರಹಿಸಿದ್ದೇವೆ,” ಎಂದು ಪ್ರಧಾನಿ ಮಾಹಿತಿ ನೀಡಿದರು.

“ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಆಡಳಿತಾಂಗಕ್ಕೆ ಸಣ್ಣ ಪ್ರಮಾಣದಲ್ಲಿ ಔಷಧಿ ನೀಡುತ್ತಾ ಬಂದಿದ್ದೇನೆ.,” ಎಂದು ಜನರನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಳಗೊಳ್ಳುವ ಜನಧನ್ ಯೋಜನೆಯನ್ನು ಪ್ರಸ್ತಾಪಿಸಿ ಹೇಳಿದರು. “ನಾನು ಕುರ್ಚಿಗಾಗಿ ಹುಟ್ಟಿದವನಲ್ಲ. ನಾನು ನನ್ನ ಗ್ರಾಮವನ್ನು ನನ್ನ ಕುಟುಂಬವನ್ನು ಈ ದೇಶಕ್ಕಾಗಿ ಬಿಟ್ಟು ಬಂದವನು,” ಎಂದು ಭಾವೋದ್ವೇಕಿತರಾಗಿ ಭಾಷಣ ಮಾಡಿದರು.

ಬೇನಾಮಿ ಆಸ್ತಿಗಳೆ ಮುಂದಿನ ಗುರಿ:

ಬೇರೆಯವರ ಹೆಸರಿನಲ್ಲಿ ತೆಗೆದಿರುವ ಆಸ್ತಿಗಳ ಮೇಲೆ ನಾವು ಕ್ರಮ ಕೈಗೊಳ್ಳಲಿದ್ದೇವೆ. ಅದು ದೇಶದ ಆಸ್ತಿ. ಬಡಜನರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಭವಿಷ್ಯದ ಯೋಜನೆಗಳ ಬಗ್ಗೆ ಮೋದಿ ಅಭಿಪ್ರಾಯಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.

“ಸಾಮಾನ್ಯ ಜನ ಕಷ್ಟಗಳನ್ನು ಎದುರಿಸುವಾಗ ನನಗೂ ನೋವಾಗುತ್ತದೆ. ಈ ನಿರ್ಧಾರಗಳೆಲ್ಲಾ ನನ್ನ ಅಹಂ ಎಂದು ತಿಳಿಯಬೇಡಿ. ದೇಶದ ಜನ ಸದ್ಯ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ಈ ಎಲ್ಲಾ ಸಮಸ್ಯೆಗಳು ಡಿಸೆಂಬರ್ 30ರವರೆಗೆ ಮಾತ್ರ. ಒಮ್ಮೆ ಎಲ್ಲಾ ಸ್ವಚ್ಛವಾದರೆ ನಂತರ ಸೊಳ್ಳೆಯೂ ಹಾರಾಡುವುದಿಲ್ಲ,” ಎಂದರು.

ಜನರ ಬೆಂಬಲಕ್ಕೆ ಮನವಿ!

modi-goa-2

ಜನರು 50 ದಿನ (ಡಿಸೆಂಬರ್ 30ರವರೆಗೆ) ತಮ್ಮ ಬೆನ್ನಿಗೆ ನಿಂತುಕೊಳ್ಳಿ ಎಂದು ಮನವಿ ಮಾಡಿದ ಪ್ರಧಾನಿಗಳು, “ನೀವೇನಾದರೂ ನನ್ನ ಕೆಲಸ ಮತ್ತು ಗುರಿಯಲ್ಲಿ ತಪ್ಪಿದೆ ಎಂದು ಕಂಡು ಹಿಡಿದರೆ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ. ನಿಮ್ಮ ಬಯಕೆಯ ಭಾರತವನ್ನು ನಿಮಗೆ ನೀಡುತ್ತೇನೆ ಎಂದು ನಾನು ಮಾತು ಕೊಡುತ್ತೇನೆ. ಯಾರಿಗಾದರೂ ಸಮಸ್ಯೆಯಾದರೆ ನನಗೂ ನೋವಾಗುತ್ತದೆ. ನನಗೆ ಸಮಸ್ಯೆ ಅರ್ಥವಾಗುತ್ತದೆ; ಆದರೆ ಇದು ಕೇವಲ 50 ದಿನ ಮಾತ್ರ. 50 ದಿನಗಳ ನಂತರ ಈ ಸ್ವಚ್ಛತೆಯಲ್ಲಿ ನಾವು ಯಶಸ್ವಿಯಾಗಲಿದ್ದೇವೆ.”

ನನಗೆ ಈ ದೇಶದ ಬಡಜನರು ಮತ್ತು ತಾಯಂದಿರ ಆಶೀರ್ವಾದವಿದೆ. ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ನನಗೆ ಇದುವೇ ಶ್ರೀರಕ್ಷೆ. ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಲ್ಲೀವರೆಗೆ ನಡೆದ ಭ್ರಷ್ಟಾಚಾರಗಳನ್ನೆಲ್ಲಾ ಹೊರಗೆಳೆಯುತ್ತೇನೆ. ಇದಕ್ಕಾಗಿ ಒಂದು ಲಕ್ಷ ಯುವಜನರನ್ನು ನೇಮಿಸಿಕೊಳ್ಳಬೇಕಾಗಿ ಬಂದರೂ ಚಿಂತೆಯಿಲ್ಲ. ನಾನು ಮಾಡಿಯೇ ತೀರುತ್ತೇನೆ,” ಎಂದು ಮೋದಿ ಶಪಥ ಮಾಡಿದರು.

ಅನಾಣ್ಯೀಕರಣಕ್ಕೆ ಜನರಿಂದ ಬಂದಿರುವ ಪ್ರತಿಕ್ರಿಯೆಗೆ ಖುಷಿ ವ್ಯಕ್ತಪಡಿಸಿದ ಮೋದಿ, “ಜನರು ಬ್ಯಾಂಕಿನ ಹೊರಗೆ ಕ್ಯೂ ನಿಲ್ಲಲೇಬೇಕಾಗಿದೆ. ನಾವು ಸ್ವಲ್ಪ ತೊಂದರೆ ಅನುಭವಿಸಬಹುದು. ಆದರೆ ಇದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ,” ಎಂದರು. ಇದೇ ಸಂದರ್ಭದಲ್ಲಿ ಅವರು ದೇಶದ ಜನರಲ್ಲಿ ತಮ್ಮಲ್ಲಿರುವ ಹಣವನ್ನು ಬ್ಯಾಂಕಿಗೆ ಜಮೆ ಮಾಡುವಂತೆ ಮನವಿ ಮಾಡಿಕೊಂಡರು. ಹೆಚ್ಚುವರಿ ಹಣ ಇದ್ದರೆ ಅದನ್ನೂ ಜಮೆ ಮಾಡಿ, ಫೈನ್ ಕಟ್ಟಿ; ಮುಖ್ಯವಾಹಿನಿ ಜತೆ ಗುರುತಿಸಿಕೊಳ್ಳಿ ಎಂದು ಆಹ್ವಾನ ಇತ್ತರು.

ಚಿತ್ರ ಕೃಪೆ: ಟ್ವಿಟ್ಟರ್

Leave a comment

Top