An unconventional News Portal.

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ‘ಗೌರಿ ಬಳಗ’ ಮಂಗಳವಾರ ಪ್ರತಿಭಟಿಸಿ, ಬಂಧನಕ್ಕೆ ಒಳಗಾಯಿತು.

ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಕಡೆ ಹೊರಟಾಗ ಪೊಲೀಸರು ಬಂಧಿಸಿದರು.

‘ಮುಖ್ಯಮಂತ್ರಿ ಗಳೇ ಉತ್ತರ ಕೊಡಿ, ಹಾರಿಕೆ ಉತ್ತರ ಸಾಕು, ಹಂತಕರ ಬಂಧನ ಬೇಕು’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್, ಕೋಮು ಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್, ಗೌರಿ ಸಹೋದರಿ ಕವಿತಾ ಲಂಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

“ಗೌರಿ ಹತ್ಯೆಯಾಗಿ 3 ತಿಂಗಳು ಹಾಗೂ ಕಲ್ಬುರ್ಗಿ ಹತ್ಯೆಯಾಗಿ 30 ತಿಂಗಳು ಕಳೆದರೂ ಹಂತಕರ ಬಂಧಿಸಲು ರಾಜ್ಯ ಸರ್ಕಾರ ವಿಫಲವಾಗಿದೆ,” ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜತೆಗೆ, ವಿಚಾರವಾದಿಗಳ ಹತ್ಯೆ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದೂ ಆಗ್ರಹಿಸಿದರು.

ಪ್ರತಿಭಟನೆ ವೇಳೆ ಕವಿತಾ ಲಂಕೇಶ್.

ಪ್ರತಿಭಟನೆ ವೇಳೆ ಕವಿತಾ ಲಂಕೇಶ್.

ಈ ಸಮಯದಲ್ಲಿ ಮಾತನಾಡಿದ ಕವಿತಾ ಲಂಕೇಶ್, “ಎಲ್ಲೋ ಒಂದು ಕಡೆ ಗೌರಿ ಹತ್ಯೆ ತನಿಖೆ ತುಂಬಾ ವಿಳಂಬವಾಗುತ್ತಿದೆ. ರಾಜ್ಯ ಸರಕಾರ ಭರವಸೆ ನೀಡಿದರೂ, ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿಯವರಿಗೆ ಮನವಿ ಮಾಡಲು ಅವರ ಮನೆಗೆ ತೆರಳುತ್ತಿದ್ದೇವೆ,” ಎಂದರು. ಇದೇ ಸರಕಾರ ಹಂತಕರನ್ನು ಬಂಧಿಸಲಿದೆ ಎಂಬ ನಂಬಿಕೆ ಇದೆ ಎಂದು ಕವಿತಾ ಮಾಧ್ಯಮಗಳಿಗೆ ತಿಳಿಸಿದರು.

ನಂತರ ಮುಖ್ಯಮಂತ್ರಿ ಮನೆ ಕಡೆಗೆ ಹೊರಟ ಪ್ರತಿಭಟನಾಕಾರನ್ನು ದಾರಿ ಮಧ್ಯೆ ತಡೆಹಿಡಿದ ಪೊಲೀಸರು ಬಂಧನಕ್ಕೆ ಒಳಪಡಿಸಿದರು. “ಕೊಲೆಗಡುಕರನ್ನು ಬಂಧಿಸುವ ಬದಲು ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ,” ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

Top