An unconventional News Portal.

ಗಾರ್ಮೆಂಟ್ಸ್ ಮಹಿಳೆಯರ ಮೇಲೆ ಪೊಲೀಸ್ ಪ್ರಹಾರ:ಸ್ವತಂತ್ರ ತನಿಖೆಗೆ ಆಮ್ನೆಸ್ಟಿ ಆಗ್ರಹ

ಗಾರ್ಮೆಂಟ್ಸ್ ಮಹಿಳೆಯರ ಮೇಲೆ ಪೊಲೀಸ್ ಪ್ರಹಾರ:ಸ್ವತಂತ್ರ ತನಿಖೆಗೆ ಆಮ್ನೆಸ್ಟಿ ಆಗ್ರಹ

‘ಗಾರ್ಮೆಂರ್ಟ್ಸ್ ಮಹಿಳೆಯರ ಪ್ರತಿಭಟನೆ’ ವೇಳೆ ಪೊಲೀಸರು ನಡೆಸಿದ ಬಲಪ್ರಯೋಗದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಒತ್ತಾಯಿಸಿದೆ.

ಶನಿವಾರ ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಪೊಲೀಸರು ನಡೆಸಿದ ಲಾಠಿಚಾರ್ಜ್ ಬಗ್ಗೆ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು,” ಎಂದು ಆಗ್ರಹಿಸಿದೆ.

“ಗಾರ್ಮೆಂಟ್ಸ್ ಕಾರ್ಮಿಕರು ಪಿಎಫ್ ನೀತಿಗಳ ಪರಿಷ್ಕರಣೆ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿ, ಹೋರಾಟಕ್ಕಿಳಿದರು. ಕೆಲವೆಡೆ ಪ್ರತಿಭಟನೆ ನಿಧಾನಕ್ಕೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಖಾಸಗಿ ವಾಹನಗಳು ಮತ್ತು ಕಚೇರಿಗಳತ್ತ ಕಲ್ಲು ತೂರಾಟ ನಡೆಸಿದರು. ಜತೆಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಬಸ್ಸಿಗೆ ಬೆಂಕಿ ಹಚ್ಚಿದರು. ಎರಡೂ ದಿನ ಪೊಲೀಸ್ ಪಡೆಗಳು ಲಾಠಿ ಚಾರ್ಜ್ ಮಾಡಿದರು ಹಾಗೂ ಜನರನ್ನು ಚದುರಿಸಲು ಅಶ್ರುವಾಯು ಸಿಡಿಸಿದರು. ಅನೇಕ ಪ್ರತಿಭಟನಾಕಾರರು ಹಾಗೂ ಪೊಲೀಸ್ ಅಧಿಕಾರಿಗಳು ಗಾಯಗೊಂಡರು,” ಎಂದು ಅಮ್ನೆಸ್ಟಿ ಘಟನೆಯನ್ನು ವಿವರಿಸಿದೆ.

“ಪೊಲೀಸರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಇದೆ. ಹಾಗೆಯೇ ಜನರ ಜೀವವನ್ನು ರಕ್ಷಿಸಿ, ಸುರಕ್ಷತೆಯನ್ನು ಕಾಪಾಡುವ ಕರ್ತವ್ಯವೂ ಇದೆ. ಆದರೆ ಅವರು ಜನರಿಗೆ ಸಾಂವಿಧಾನಿಕವಾಗಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಗುಂಪುಗೂಡುವ ಸ್ವಾತಂತ್ರ್ಯವನ್ನು ಗೌರವಿಸುತ್ತ ತಮ್ಮ ಪಾತ್ರವನ್ನು ನಿಭಾಯಿಸಬೇಕಿತ್ತು,” ಎಂದು ಅಮ್ನೆಸ್ಟಿ ಪರವಾಗಿ ಗೋಪಿಕಾ ಬಾಶಿ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

“ಪೊಲೀಸರು ತೀರಾ ಅಗತ್ಯವಿದ್ದಾಗ ಮಾತ್ರವೇ ಬಲಪ್ರಯೋಗ ಮಾಡಬೇಕು, ಅದೂ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ. ಪೊಲೀಸರು ಶಾಂತಿಯುತ ಪ್ರತಿಭಟನಾಕಾರರು ಹಾಗೂ ಹಿಂಸೆಯನ್ನು ಬಳಸಿಕೊಳ್ಳುವ ವ್ಯಕ್ತಿಗಳ ನಡುವೆ ವ್ಯತ್ಯಾಸ ಕಂಡುಕೊಳ್ಳಬೇಕಿತ್ತು,” ಎಂದವರು ಹೇಳಿದ್ದಾರೆ.

ಪ್ರತ್ಯಕ್ಷ ಸಾಕ್ಷಿಗಳು:

garments-protest-police-brutalityಅಮ್ನೆಸ್ಟಿ ಇಂಟರ್‍ನ್ಯಾಶನಲ್ ಇಂಡಿಯಾ 18 ಗಾರ್ಮೆಂಟ್ ಮಹಿಳೆಯರೊಂದಿಗೆ ಮಾತುಕತೆ ನಡೆಸಿದೆ. ಶಾಂತಿಯುತ ಪ್ರತಿಭಟನಾಕಾರರನ್ನು ಪೊಲೀಸರು ಅವಾಚ್ಯವಾಗಿ ನಿಂದಿಸುತ್ತ, ಕ್ರೂರವಾಗಿ ಹೊಡೆದಿದ್ದನ್ನು ಕಂಡಿದ್ದೇವೆ ಎಂದು ಎಲ್ಲರೂ ಹೇಳಿದ್ದಾರೆ. ಗುರುವಾರ ಪೀಣ್ಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗಾರ್ಮೆಂಟ್ ಮಹಿಳೆಯೊಬ್ಬರು, “ಪೊಲೀಸರು ನಮಗೆ ಮೈಮೇಲೆ, ಗುಪ್ತಾಂಗಕ್ಕೆ ರೂಲ್‍ ದೊಣ್ಣೆಯಿಂದ ಪೊಲೀಸರು ಚಚ್ಚಿದ್ದಾರೆ. ಅವರಲ್ಲೊಬ್ಬ ‘ಏನೇ *****, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಕ್ಕೆ ನಿಂಗೆ ಏನೇ ಕಷ್ಟ. ಇಲ್ಲಿ ರೋಡ್‍ಲ್ಲಿ ನಿಂತ್ಕಂಡು ಸ್ಟ್ರೈಕ್ ಮಾಡಕ್ಕೆ ಬರ್ತೀರ’ ಅಂತ ಅವಾಚ್ಯವಾಗಿ ಬೈಯ್ದರು,” ಎಂದು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಗಾರ್ಮೆಂಟ್ ಮಹಿಳೆ, “ನನ್ನ ತೊಡೆಗೆ ಲಾಠಿಯಿಂದ ಜೋರಾಗಿ ಹೊಡೆದಿದ್ದರಿಂದ  ಬಾಸುಂಡೆ ಬಂದಿದೆ,” ಎಂದು ಹೇಳಿಕೊಂಡಿದ್ದಾರೆ.

“ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದವರು ಹಾಗೂ ಹಿಂಸಾತ್ಮಕ ಕೃತ್ಯದಲ್ಲಿ ತೊಡಗಿದ ವ್ಯಕ್ತಿಗಳ ನಡುವೆ ಪೋಲೀಸರು ಯಾವ ವ್ಯತ್ಯಾಸವನ್ನೂ ಕಾಣಲಿಲ್ಲ ಎಂದು ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರು ನೀಡಿದ ಹೇಳಿಕೆಯನ್ನೂ ಸಂಸ್ಥೆ ದಾಖಲಿಸಿದೆ.

Top