An unconventional News Portal.

ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ: ಕರ್ನಾಟಕ ಮಾಧ್ಯಮಗಳು ಎಡವಿದ್ದೆಲ್ಲಿ?

ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ: ಕರ್ನಾಟಕ ಮಾಧ್ಯಮಗಳು ಎಡವಿದ್ದೆಲ್ಲಿ?

ನಿರೀಕ್ಷೆಯಂತೆಯೇ ‘ಪಿಎಫ್’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಪ್ರತಿಭಟನೆ ಬೆಂಗಳೂರಿಗೆ ಸೀಮಿತಗೊಂಡು, ಬುಧವಾರದ ಹೊತ್ತಿಗೆ ಗರ್ಭಪಾತವಾಗಿ ಹೋಗಿದೆ.

ಸೋಮವಾರ ಬೆಳಗ್ಗೆ ಬೊಮ್ಮನಹಳ್ಳಿಯಿಂದ ಶುರುವಾದ ಬೆಳವಣಿಗೆ, ಮುಂದಿನ 72 ಗಂಟೆಗಳಲ್ಲಿ ತೆಗೆದುಕೊಂಡ ತಿರುವುಗಳು ಹಾಗೂ ಅದನ್ನು ಕರ್ನಾಟಕದ ಮಾಧ್ಯಮಗಳು- ಪತ್ರಿಕೆ, ಟಿವಿ- ವೆಬ್- ಗ್ರಹಿಸಿದ ರೀತಿ ಈಗ ಚರ್ಚೆಯ ವಸ್ತುವಾಗಿವೆ. ರಾಜ್ಯದ ಇತಿಹಾಸದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹಿಂದೆಂದೂ ನಡೆಯದ ಇಂತಹ ಘಟನೆಯನ್ನು ಅದರ ಅಂತರಾಳದಿಂದ ಅರ್ಥಮಾಡಿಕೊಳ್ಳುವಲ್ಲಿಯೇ ಬಹುತೇಕರು ಸೋತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿಯೇ, 2011ರಲ್ಲಿ ನಡೆದ ‘ಅರಬ್ ಸ್ಪಿಂಗ್’ ಎಂಬ ಬಂಡಾಯ ಸ್ವರೂಪದ ನಾಗರಿಕ ಪ್ರತಿಭಟನೆ ಮತ್ತು ಅದನ್ನು ವರದಿ ಮಾಡಿದ ಅರಬ್ ಮಾಧ್ಯಮಗಳನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುವ ಅಗತ್ಯವಿದೆ.

ಪಿಎಫ್ ಸುತ್ತ ಗಾರ್ಮೆಂಟ್ಸ್ ಮಹಿಳೆಯರು ನಡೆಸಿದ ಭಾರಿ ಪ್ರತಿಭಟನೆಯ ಸ್ವರೂಪಕ್ಕೂ, ಅರಬ್ ದೇಶಗಳಲ್ಲಿ ನಡೆದ ನಾಗರಿಕ ಪ್ರತಿಭಟನೆಗಳ ಸ್ವರೂಪಕ್ಕೂ ಸಾಮ್ಯತೆಯೊಂದು ಗೋಚರಿಸುತ್ತಿದೆ. ಅಲ್ಲಿ ಜನ ರಾಜರ ಆಳ್ವಿಕೆ ವಿರುದ್ಧ ಭಾರಿ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದರು. ಅವರಿಗೆ ಸರಿಯಾದ ನಾಯಕತ್ವವೇ ಇರಲಿಲ್ಲ; ನಿರ್ದಿಷ್ಟ ಬೇಡಿಕೆ ಎಂಬುದು ಇರಲಿಲ್ಲ. ಈಜಿಪ್ಟ್ ರಾಜಧಾನಿ ಖೈರೋದಲ್ಲಿ ಸಾವಿರಾರು ಜನ ರಾತ್ರೋರಾತ್ರಿ ಬೀದಿಗಳಿದಾಗ ಅದನ್ನು ಅರಬ್ ದೇಶದ ವಾಹಿನಿಗಳು, ವಿಶೇಷವಾಗಿ ‘ಅಲ್ ಝಜೀರಾ’ ಒಟ್ಟು 16 ದಿನಗಳ ಕಾಲ ನಿರಂತರ ಪ್ರಸಾರ ಮಾಡಿತು. “ಇದರಿಂದಾಗಿಯೇ ಈಜಿಪ್ಟ್ ಅಧಿಕಾರಿಗಳು ಜನರ ಮೇಲೆ ನಡೆಸುವ ಹಲ್ಲೆ ಕಡಿಮೆಯಾಯಿತು,” ಎಂದು ನಂತರ ನಡೆದ ಕೆಲವು ಅಂತರಾಷ್ಟ್ರೀಯ ಸಮೀಕ್ಷೆಗಳು ಹೇಳಿದವು.

ಈಗ, ಮತ್ತೆ ಬೆಂಗಳೂರು ಪಿಎಫ್ ಪ್ರತಿಭಟನೆ ವಿಚಾರಕ್ಕೆ ವಾಪಾಸಾಗೋಣ. ಸೋಮವಾರ ಮುಂಜಾನೆಯಿಂದಲೇ ಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ ಆರಂಭವಾಯಿತಾದರೂ, ಯಾವ ಸುದ್ದಿ ವಾಹಿನಗಳು ಅದನ್ನೊಂದು ಗಂಭೀರ ವಿಚಾರ ಎಂದು ಪರಿಗಣಿಸಲೇ ಇಲ್ಲ. ಇದ್ದದ್ದರಲ್ಲಿ, ನ್ಯೂಸ್ ಪೋರ್ಟಲ್ಗಳು ‘ಪಿಎಫ್ಗಾಗಿ ಪ್ರತಿಭಟನೆ’ ಎಂದು ಸುದ್ದಿಯನ್ನು ಪ್ರಕಟಿಸಿದವು. ಆದರೆ, ಅದೊಂದು ‘Live’ ಈವೆಂಟ್ ಬೇಡುವ ಸರಕು ಎಂದು ಅವು ಕೂಡ ಗ್ರಹಿಸಲಿಲ್ಲ. ಸಂಜೆ ಹೊತ್ತಿಗೆ, ಯಾವಾಗ ಸ್ಥಳದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಆರಂಭವಾಯಿತು. ಆಗ, ಟಿವಿ 9 ವಾಹಿನಿಯಲ್ಲಿ ವಿಸ್ತೃತ ವರದಿಯೊಂದು ಪ್ರಕಟವಾಯಿತು. ಆದರೆ, ಪ್ರತಿಭಟನೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ, ಟಿವಿ 9 ಸೇರಿದಂತೆ ಎಲ್ಲಾ ವಾಹಿನಿಗಳು ಸೋತು ಹೋಗಿದ್ದವು. ವರದಿಗೆ ಸೀಮಿತಗೊಂಡವು.

ಮಾರನೆ ದಿನ ಬೆಳಗ್ಗಿನ ಪತ್ರಿಕೆಗಳಲ್ಲಿ ‘ಪಿಎಫ್ ಪ್ರತಿಭಟನೆ’ ಸುದ್ದಿ ಮುಖಪುಟದಲ್ಲಿ ಪ್ರಕಟವಾಯಿತಾದರೂ, ಅದರ ಒಳಸುಳಿಗಳನ್ನು ಪ್ರಿಂಟಿ ಮೀಡಿಯಾ ಕೂಡ ಮಿಸ್ ಮಾಡಿಕೊಂಡಿತ್ತು. ಅದಕ್ಕಿಂತ ಹೆಚ್ಚಾಗಿ ಪ್ರತಿಭಟನಾಕಾರರು, ಅವರ ಮುಂದಿನ ನಡೆ, ಮಂಗಳವಾರ ಬೆಂಗಳೂರಿನಲ್ಲಿ ನಡೆಯಬಹುದಾದ ಎರಡನೇ ಸುತ್ತಿನ ಪ್ರತಿಭಟನೆಯನ್ನು ಗ್ರಹಿಸುವಲ್ಲಿ ‘ಗ್ರೌಂಡ್ ರಿಪೋರ್ಟ್’ಗಳ ಕೊರತೆ ಎದ್ದು ಕಾಣಿಸುತ್ತಿತ್ತು.

pf-protest-bangalore

ಬೆಂಗಳೂರಿನಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಪ್ರತಿಭಟನೆ.

ಮಂಗಳವಾರ ಪ್ರತಿಭಟನೆ ಆರಂಭವಾಗುತ್ತಿದ್ದಂತೆ, ಎಚ್ಚೆತ್ತುಕೊಂಡ ನ್ಯೂಸ್ ಮೀಡಿಯಾಗಳು, ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಗೆ ಆದ್ಯತೆ ನೀಡಿ ಸುದ್ದಿ ಪ್ರಸಾರ ಮಾಡಲಾರಂಭಿಸಿದವು. ಆದರೆ, ಅದನ್ನು ಮೂಲದಲ್ಲಿಯೇ ಗ್ರಹಿಸುವ ಸಮಸ್ಯೆ ಇದ್ದ ಕಾರಣ, ಮತ್ತದೇ ಪ್ಯಾನಲ್ ಚರ್ಚೆಗೆ ಮುಂದಾದವು. ವ್ಯಂಗ್ಯ ಏನೆಂದರೆ, ಬೀದಿಗಳಿದ ಕಾರ್ಮಿಕರ ಬಗ್ಗೆ ಗೊತ್ತೇ ಇಲ್ಲದ ಕಾರ್ಮಿಕ ಮುಖಂಡರು, ಕಾನೂನಿನ ಪರಿಣಾಮಗಳನ್ನು ಲೆಕ್ಕಿಸದೆ ನಡೆಯುತ್ತಿದ್ದ ಪ್ರತಿಭಟನೆಗೆ ಕಾನೂನಿನ ವ್ಯಾಖ್ಯೆ ಮಾಡುವ ವಕೀಲರನ್ನು ಪ್ಯಾನಲ್ ಚರ್ಚೆಗೆ ಬಳಸಿಕೊಂಡಿದ್ದು. “ನಮಗೆ ಯಾರನ್ನಾದರೂ ಈ ವಿಚಾರದಲ್ಲಿ ಮಾತನಾಡುವವರು ಬೇಕು, ಕರೆದುಕೊಂಡು ಬನ್ನಿ ಎಂದರು. ನಾವೂ ಈ ಬಗ್ಗೆ ಹೆಚ್ಚು ಯೋಚಿಸಲು ಸಮಯ ಸಿಗಲಿಲ್ಲ,” ಎಂಬುದು ಟಿವಿ ಪತ್ರಕರ್ತರೊಬ್ಬರ ಸಮಜಾಯಿಷಿ. “ಒತ್ತಡ ಹೇಗಿತ್ತು ಎಂದರೆ, ನಾವು ಸ್ಥಳದಲ್ಲಿದ್ದ ವರದಿಗಾರರು ನೀಡುವ ಸುದ್ದಿಯನ್ನಷ್ಟೆ ಪೋಸ್ಟ್ ಮಾಡುತ್ತಿದ್ದೆವು. ಅದರ ಜತೆಗೆ ಬೇರೆ ವಿಚಾರಗಳೂ ಇದ್ದದರಿಂದ ಹೆಚ್ಚು ಯೋಚನೆ ಮಾಡಲು ಹೋಗಲಿಲ್ಲ,” ಎನ್ನುತ್ತಾರೆ ‘ಈನಾಡು ಕನ್ನಡ’ ನ್ಯೂಸ್ ಪೋರ್ಟಲ್ ಪತ್ರಕರ್ತ ಸುರೇಂದ್ರ.

“ಮಂಗಳವಾರ ಯಾವಾಗ ಪ್ರತಿಭಟನೆ ಜೋರಾಯಿತೋ, ಆಗ ನಾವು ಎಚ್ಚರಾದೆವು,” ಎಂಬುದು ‘ವಿಜಯ ಕರ್ನಾಟಕ’ ದಿನ ಪತ್ರಿಕೆಯ ಸಹಾಯಕ ಸಂಪಾದಕ ಅಶೋಕ್ ರಾಮ್ ಅವರ ಪ್ರತಿಕ್ರಿಯೆ. ಮಾರನೇ ದಿನ(ಬುಧವಾರ) ಪಿಎಫ್ ಪ್ರತಿಭಟನೆಯ ಕುರಿತು ‘ವಿಜಯ ಕರ್ನಾಟಕ’ ಒಂದಷ್ಟು ಒಳಸುಳಿಗಳನ್ನು ನೀಡಲು ಪ್ರಯತ್ನಿಸಿದೆ. ಇದಕ್ಕೆ ಪೂರಕ ಎನ್ನಿಸುವ ಸುದ್ದಿಗಳನ್ನು ಅದು ಪ್ರಕಟಿಸಿದೆ. ಆದರೆ, ‘ವಿಕ’ ಸೇರಿದಂತೆ ಹಲವು ಕನ್ನಡ ಪತ್ರಿಕೆಗಳು ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯನ್ನು ‘ದಂಗೆ’ ಎಂದು ಕರೆದಿವೆ. ‘ದಂಗೆ’ಯ ಸ್ವರೂಪಕ್ಕೂ, ಅಸಂಘಟಿತ ವಲಯ ಬೀದಿಗೆ ಇಳಿದಾಗ ನಡೆಯುವ ಪ್ರತಿಭಟನೆಯ ಸ್ವೂರೂಪಗಳಿಗೂ ಇರುವ ವ್ಯತ್ಯಾಸವನ್ನು ಅವು ಮರೆತಂತಿದೆ.

ಬಹುಶಃ ಇಂತಹದೊಂದು ಪ್ರತಿಭಟನೆಯನ್ನು ಸಂಘಟನಾತ್ಮಕ ಕ್ಷೇತ್ರವೇನಾದರೂ ನಡೆಸಿದ್ದರೆ, ಅವರ ಮೇಲೆ ಪೊಲೀಸರು ಹೀಗೆ ಮನಬಂದಂತೆ ವರ್ತಿಸಿದ್ದರೆ, ಇವತ್ತಿಗೆ ಕರ್ನಾಟಕ ಹೊತ್ತಿ ಉರಿಯುತ್ತಿತ್ತು. ಮಾಧ್ಯಮಗಳಲ್ಲಿ ಇದೇ ವಿಚಾರ ನಿರಂತರ ಪ್ರಸಾರ ಪಡೆದುಕೊಳ್ಳುತ್ತಿತ್ತು. ಆದರೆ, ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರು ಅಸಂಘಟಿತಾರಾಗಿರುವ ಹಿನ್ನೆಲೆಯಲ್ಲಿ, ಅವರಿಗೆ ‘ಲೈವ್ ಕವರೇಜ್’ ಸಿಗಲಿಲ್ಲ. ರಾಜ್ಯದ ಇತರ ಜಿಲ್ಲೆಗಳಿಗೆ ಪ್ರತಿಭಟನೆಯ ಕಾವು ಹಬ್ಬಲಿಲ್ಲ.

“ಏನೇ ಆದರೂ, ಸರಕಾರದ ಮನಬಂದಂತೆ ವರ್ತಿಸಿದರೆ ಜನ ಸುಮ್ಮನೆ ಕೂರುವ ಕಾಲ ಹೋಯಿತು. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ,” ಎನ್ನುತ್ತಾರೆ ಅಶೋಕ್ ರಾಮ್. ಇದು ಉದಾಹರಣೆ ಮಾತ್ರವಲ್ಲ; ರಾಜ್ಯದ ಮಾಧ್ಯಮಗಳಿಗೆ ದೊಡ್ಡ ಪಾಠ ಕೂಡ.

 

Leave a comment

Top