An unconventional News Portal.

ಜಾಗತಿಕ ಆಹಾರೋದ್ಯಮದ ಭವಿಷ್ಯ: ಪ್ರೊಟೀನ್ ಬೇಡಿಕೆ ಪೂರೈಸುತ್ತಿರುವ ‘ಕೀಟ ಖಾದ್ಯ’ಗಳು!

ಜಾಗತಿಕ ಆಹಾರೋದ್ಯಮದ ಭವಿಷ್ಯ: ಪ್ರೊಟೀನ್ ಬೇಡಿಕೆ ಪೂರೈಸುತ್ತಿರುವ ‘ಕೀಟ ಖಾದ್ಯ’ಗಳು!

ನಮ್ಮ ದೇಶದಲ್ಲಿ ಪ್ರೊಟೀನ್ ಯುಕ್ತ ದನದ ಮಾಂಸದ ಸುತ್ತ ಚರ್ಚೆ, ನ್ಯಾಯಾಲಯದ ಆದೇಶಗಳು ಹೊರಬೀಳುತ್ತಿರುವ ವೇಳೆಯಲ್ಲಿಯೇ, ಜಾಗತಿಕ ಮಾರುಕಟ್ಟೆಯಲ್ಲಿ ಕೀಟಗಳಿಂದ ತಯಾರಾಗುತ್ತಿರುವ ಖಾದ್ಯಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.

ಈ ಹೊಸ ಕೀಟ ಖಾದ್ಯಗಳು ಹೆಚ್ಚುತ್ತಿರುವ ಪ್ರೊಟೀನ್ ಯುಕ್ತ ಆಹಾರದ ಬೇಡಿಕೆಯನ್ನು ಪೂರೈಸಲಿವೆ ಎಂದು ಆಹಾರ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹವಾಮಾನದ ವೈಪರೀತ್ಯಗಳಿಂದಾಗಿ ಜಗತ್ತಿನ ಸಾಂಪ್ರದಾಯಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ, ಆಹಾರ ಬೇಡಿಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಕೀಟಗಳಿಂದ ತಯಾರಿಸಿದ ಖಾದ್ಯಗಳು ಈ ನಿರ್ವಾತವನ್ನು ತುಂಬಲಿವೆ ಎಂದು ನಂಬಲಾಗಿದೆ. ಕೀಟ ಖಾದ್ಯಗಳೇ ಭವಿಷ್ಯದ ಆಹಾರಗಳು ಎನ್ನಲಾಗುತ್ತಿದೆ.

ಮನುಷ್ಯನ ನಾಗರೀಕತೆಯ ಬೆಳವಣಿಗೆಯಲ್ಲಿ ಕೀಟಗಳ ಪಾತ್ರ ದೊಡ್ಡದಿದೆ. ಸುಮಾರು 2 ಸಾವಿರ ತರಹದ ಕೀಟಗಳನ್ನು ಸೇವಿಸುವ 200 ಕೋಟಿ ಜನಸಂಖ್ಯೆ ಜಗತ್ತಿನಾದ್ಯಂತ ಹರಡಿಕೊಂಡಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ನಮ್ಮಲ್ಲಿ ಏರೋಪ್ಲೇನ್ ಚಿಟ್ಟೆಗಳು ಎಂದು ಕರೆಯುವ ಡ್ರಾಗನ್ ಫ್ಲೈಸ್ ಇಂಡೊನೇಷಿಯಾದಲ್ಲಿ ಜನಪ್ರಿಯ ಖಾದ್ಯ. ಹೀಗೆ ಆಯಾ ದೇಶಗಳಲ್ಲಿ ಚಿತ್ರ ವಿಚಿತ್ರ ಕೀಟಗಳ ಖಾದ್ಯಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅಮೆರಿಕಾದ ಕೆಲವು ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಕೀಟ ಖಾದ್ಯಗಳನ್ನು ಸೈಡ್ಸ್ ರೀತಿಯಲ್ಲಿ ಬಳಸಲಾಗುತ್ತಿದೆ.

‘ಇಕೋ ಇನ್ಸೆಕ್ಟ್ ಫಾರ್ಮಿಂಗ್’ ಎಂಬ ಕಂಪನಿಯೊಂದು ಇದೀಗ ಖಾದ್ಯ ತಯಾರಿಕೆಗಾಗಿಯೇ ಕೀಟಗಳ ಉತ್ಪಾದನೆ ಮಾಡುತ್ತಿದೆ. ಈ ಮೂಲಕ ಜಗತ್ತಿನ ಪ್ರೊಟೀನ್ ಬೇಡಿಕೆಯನ್ನು ಪೂರೈಸುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ. ಕೀಟಗಳನ್ನು ಬೆಳೆಸಲು ಕಂಪನಿ ಹುಲ್ಲು ಹಾಸನ್ನು ನಿರ್ಮಿಸಿದ್ದು, ರಾಸಾಯನಿಕಗಳನ್ನು ಬಳದಿರುವುದರಿಂದ ಆರೋಗ್ಯಕಾರಿಯಾದ ಕೀಟಗಳು ಉತ್ಪತ್ತಿಯಾಗುತ್ತಿವೆ ಎಂದು ಕಂಪನಿ ಜಾಹೀರಾತುಗಳು ತಿಳಿಸುತ್ತವೆ.

ಥಾಯ್ ದೇಶದಲ್ಲಿರುವ ಕಂಪನಿ, ಸ್ಥಳೀಯರಿಗಿರುವ ಕೀಟ ಜ್ಞಾನದ ಎರವಲು ಪಡೆದಿದೆ. ಕಳೆದ ಕೆಲವು ವರ್ಷಗಳ ಅಂತರದಲ್ಲಿ ಕೀಟಗಳನ್ನು ಬೆಳೆಸುವ ಹಲವು ಕಂಪನಿಗಳು ಇಲ್ಲಿ ಹುಟ್ಟಿಕೊಂಡಿವೆ. ಆಧುನಿಕ ಮನುಷ್ಯನ ಆಹಾರ ಬೇಡಿಕೆಗಳು ಹಾಗೂ ಅದರ ಸುತ್ತ ಹುಟ್ಟಿಕೊಳ್ಳುತ್ತಿರುವ ಇಂತಹ ಉದ್ಯಮಗಳು ಇವತ್ತು ನೀಡುತ್ತಿರುವ ಹೊಸ ಒಳನೋಟಗಳನ್ನು ಗಮನಿಸಬೇಕಿದೆ.

ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ..

Top