An unconventional News Portal.

ತೈಲಬೆಲೆ ಏರಿಕೆ ಸಾಧ್ಯತೆ; ಮತ್ತೊಂದು ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆಯಾ ದೇಶ?

ತೈಲಬೆಲೆ ಏರಿಕೆ ಸಾಧ್ಯತೆ; ಮತ್ತೊಂದು ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಲಿದೆಯಾ ದೇಶ?

ತೈಲ ಬೆಲೆಯ ಹೆಚ್ಚಳ ರಾಷ್ಟ್ರದ ಆರ್ಥಿಕತೆಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಹುದು? ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿರುವ ಪ್ರಕಾರ 2018-19ರಲ್ಲಿ ಕಚ್ಚಾ ತೈಲದ ಬೆಲೆಯು ಶೇ. 12ರಷ್ಟು ಏರಿಕೆಯಾಗಲಿದೆ. ಒಂದು ಬ್ಯಾರಲ್ ಕಚ್ಚಾತೈಲದ ಬೆಲೆಯು  ಸಧ್ಯದ ಬೆಲೆಗಿಂತ ಸುಮಾರು 650 ರೂಗಳಷ್ಟು ಏರಿಕೆ ಕಾಣಲಿದೆ. ಈ ಅಂತರರಾಷ್ರ್ಟೀಯ ವಿದ್ಯಮಾನ ಖಂಡಿತವಾಗಿಯೂ ದೇಶದ ಆರ್ಥಿಕತೆಯ ಮೇಲೆ ತೀವ್ರತರದ ಪರಿಣಾಮವನ್ನು ಬೀರಲಿದೆ.

ಕಚ್ಚಾ ತೈಲದ ಬೆಲೆ 10 ಡಾಲರ್‌ನಷ್ಟು ಏರಿಕೆಯಾದರೆ ದೇಶದ ಜಿಡಿಪಿ ದರವು ಶೇ.0.2ರಿಂದ ಶೇ.0.3ರಷ್ಟು ಕುಸಿಯಬಹುದು ಎಂದು ವರದಿಗಳು ಹೇಳುತ್ತವೆ. ಹೆಚ್ಚಾದ ತೈಲ ಬೆಲೆ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಅದಾಯವನ್ನು ಮತ್ತು ಹೆಚ್ಚಿನ ಖರ್ಚನ್ನು ಒಟ್ಟಿಗೆ ತರಲಿದೆ. ಸೀಮೆ ಎಣ್ಣೆ, ಎಲ್‌ಪಿಜಿಗಳ ಮೇಲೆ ನೀಡುತ್ತಿರುವ ಸಹಾಯಧನದ ಮೊತ್ತವು ಈಗಿರುವುದರ ಜೊತೆಗೆ ಇನ್ನೂ ರೂ. 18,400 ಕೋಟಿಗಳಷ್ಟು ಏರಿಕೆಯಾಗಲಿದೆ. ಆದಾಗ್ಯೂ ಕೂಡ ಈ ಬೆಲೆ ಏರಿಕೆ ಖರ್ಚಿಗಿಂತಲೂ ಹೆಚ್ಚಿನ ಅದಾಯವನ್ನು ಸರಕಾರಕ್ಕೆ ತರಲಿದೆ.

ಜಫ್ಫರೀಸ್ ಪ್ರೈವೇಟ್ ಲಿಮಿಟೆಡ್‌ನ ವಿಶ್ಲೇಷಕರು ಹೇಳುವಂತೆ ಪೆಟ್ರೋಲ್ ಅಥವಾ ಡೀಸೆಲ್ ಮೇಲಿನ ಸುಂಕಗಳು ಸರಕಾರಕ್ಕೆ ಹೆಚ್ಚಿನ ಹಣವನ್ನೇನು ತರುವುದಿಲ್ಲ. ಆದರೆ ಕಸ್ಟಮ್ ಡ್ಯೂಟಿ, ಜಿಎಸ್‌ಟಿ, ರಾಯಲ್ಟಿ, ಸೆಸ್ ಶುಲ್ಕ, ಸರಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬರುವ ಲಾಭಾಂಶ, ಕಾರ್ಪೊರೇಟ್ ತೆರಿಗೆ, ಲಾಭಾಂಶದ ಮೇಲಿನ ತೆರಿಗೆಗಳಿಂದ ಹೆಚ್ಚು ಹಣ ಹರಿದು ಬರಲಿದೆ.

ಕಳೆದ ಅರ್ಥಿಕ ವರ್ಷಗಳಲ್ಲಿ ವಿಧಿಸಿದಷ್ಟು ಹೆಚ್ಚಿನ ಸುಂಕಗಳನ್ನು ಸರಕಾರ ಈ ವರ್ಷ ಮುಂದುವರೆಸಲಾಗುವುದಿಲ್ಲ. “ಸುಂಕಗಳ ಕಡಿತವು ಹಾನಿ ಉಂಟುಮಾಡುವುದು,” ಎಂದಿರುವ ಇಂಡಸ್‌ಇಂಡ್ ಬ್ಯಾಂಕ್‌ನ ಮುಖ್ಯ ಆರ್ಥಿಕತಜ್ಞ ಗೌರವ್ ಕಪೂರ್, ತೀವ್ರವಾಗಿ ಏರಿರುವ ತೈಲ ಬೆಲೆ ಸುಂಕಗಳನ್ನು ಕಡಿಮೆಗೊಳಿಸುವಂತೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಕೇರ್‌ ರೇಟಿಂಗ್ಸ್‌ನ ಮುಖ್ಯ ಆರ್ಥಿಕ ತಜ್ಞ ಮದನ್ ಸಬ್ನಾವಿಸ್ ಹೇಳುವಂತೆ ಹಣದುಬ್ಬರವನ್ನು ಮುಖ್ಯವಾದ ಅಂಶವನ್ನಾಗಿ ಪರಿಗಣಿಸಬೇಕಿದ್ದು, ದೇಶದ ಎಲ್ಲಾ ಜನತೆಗೂ ಸೂಕ್ತವಾಗುವಂತಹ ನಿರ್ಧಾರಗಳನ್ನು ಸರಕಾರ ಕೈಗೊಳ್ಳಬೇಕಿದೆ. “2019ರ ಹಣಕಾಸು ವರ್ಷದಲ್ಲಿ ತೈಲದ ಉತ್ಪನ್ನಗಳಿಗೆ ಸರಕಾರ ನಿಡುತ್ತಿರುವ ಸಹಾಯಧನದ ಮೊತ್ತ ಸಧ್ಯ ಇರುವುದಕ್ಕಿಂತಲೂ ಸುಮಾರು 5,000-10,000 ಕೋಟಿಗೆ ಏರಿಕೆಯಾಗಲಿದ್ದು, ಸರಕಾರ ತೆರಿಗೆ ದರಗಳನ್ನು ಕಡಿತಗೊಳಿಸದೇ ಇರಬಹುದು.” ಎಂಬುದು ಅವರ ಅಭಿಪ್ರಾಯ.

ಗೌರವ್ ಕಪೂರ್ ಹೇಳುವಂತೆ ತೈಲದ ಮೇಲಿನ ಸಹಾಯಧನವನ್ನು ಸರಕಾರ ಹೆಚ್ಚಿಸಲೇಬೆಕಾದ ಅನಿವಾರ್ಯತೆಯಲ್ಲಿದೆ. ಆರ್ಥಿಕ ಸಮೀಕ್ಷೆ ಪ್ರಕಾರ ಭಾರತದಲ್ಲಿ ತೈಲ ಬೆಲೆ ಹೆಚ್ಚಳವು ದೇಶದ ಆರ್ಥಿಕತೆ ಮತ್ತು ಚಾಲ್ತಿ ಖಾತೆಗಳು ತೊಂದರೆಗೆ ಒಳಗಾಗುವಂತೆ ಮಾಡಲಿದೆ. ಸಮೀಕ್ಷೆ ಹೇಳುವಂತೆ, “ಹಣಕಾಸಿನ ದೌರ್ಬಲ್ಯವನ್ನು ಮೀರಬೇಕೆಂದರೆ ಜಿಡಿಪಿ ಮತ್ತು ತೆರಿಗೆ ಅನುಪಾತಗಳ ಜಡತ್ವವನ್ನು ಮುರಿಯಬೇಕಿದೆ. ಭಾರತದ ಇತಿಹಾಸದಲ್ಲಿ ಅತಿ ವೇಗವಾಗಿ ಆಗುತ್ತಿರುವ ಶೇ.6.5ರಷ್ಟು ಆರ್ಥಿಕ ಬೆಳವಣಿಗೆಯನ್ನು ಬಿಟ್ಟರೆ,  1980ರಿಂದ ತೆರಿಗೆ-ಜಿಡಿಪಿಗಳ ಅನುಪಾತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ,” ಎಂದು ಸಮೀಕ್ಷೆ ತಿಳಿಸುತ್ತದೆ. ಜಿಎಸ್‌ಟಿ ಈ ಆರ್ಥಿಕ ಸ್ಥಗಿತತೆಯಿಂದ ಹೊರಬರಲು ಸಹಾಯ ಮಾಡುತ್ತಿದೆ. ವರದಿ ಹೇಳುವಂತೆ ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿ ಅವಧಿಯಲ್ಲಿ ತೆರಿಗೆದಾರರ ಸಂಖ್ಯೆಯಲ್ಲಿ ಗಮನಾರ್ಹವಾದ ಬೆಳವಣಿಗೆ ಕಂಡು ಬಂದಿದೆ.

ಈ ಕುರಿತಾಗಿ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದ ಪೆಟ್ರೋಲ್ ಬಂಕ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ, “ಪೆಟ್ರೋಲ್ ಬೆಲೆ ಏರಿಕೆ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಅಂತರರಾಷ್ಟ್ರೀಯ ತೈಲ ಬೆಲೆ ಇಳಿಕೆಯಾದಾಗಲೂ ಭಾರತದಲ್ಲಿ ಬೆಲೆ ಕಡಿಮೆಯಾಗಿಲ್ಲ. ಅಂತರರಾಷ್ಟ್ಟೀಯ ಮಟ್ಟದಲ್ಲಿ ತೈಲಬೆಲೆ ಏರಿಕೆ ಆಗಲಿದೆ ಎಂದಕೂಡಲೇ ಹೇಳಿಕೆಗಳನ್ನು ನೀಡುತ್ತಿರುವವರು ಅಂದಿನಿಂದಲೂ ಏಕೆ ಸುಮ್ಮನಿದ್ದಾರೆ? ಜನರು ಈ ಕುರಿತಾಗಿ ದನಿ ಎತ್ತಬೇಕಿದೆ. ಹೆಚ್ಚಳ ಮಾಡಿದ ಹಣವನ್ನು ಎಲ್ಲಿ ಬಳಕೆ ಮಾಡಲಾಗುತ್ತಿದೆ, ಯಾರು ಅದರ ಫಲಾನುಭವಿಗಳು ಎಂಬುದು ನಮಗೂ ತಿಳಿದಿಲ್ಲ. ಕೇಂದ್ರ ಸರಕಾರ ಈ ಸಂಬಂಧ ಉತ್ತರಿಸಬೇಕು,” ಎಂದರು.

ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದಿಂದ ದೇಶ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಇದೀಗ ಸಹಜ ಸ್ಥಿತಿಯತ್ತ ಮರಳಲು ಯತ್ನಿಸುತ್ತಿದೆ. ಈ ವೇಳೆ ಮತ್ತೆ ದಿನಬಳಕೆಯ ಇಂಧನಗಳ ಬೆಲೆ ಹೆಚ್ಚಳವಾದರೆ, ಮತ್ತೆ ಆರ್ಥಿಕ ಬಿಕ್ಕಟ್ಟಿಗೆ ದೇಶ ಸಾಕ್ಷಿಯಾಗುವ ಸಾಧ್ಯತೆಯಿದೆ. ಈ ಎಲ್ಲದರ ನಡುವೆ, ಕೇಂದ್ರ ಸರಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳದಂತೆ ತಡೆಯುವ ಕಾರ್ಯ ಮಾಡಲಿದೆಯಾ ಎಂಬ ಪ್ರಶ್ನೆಗೆ ಸಮಯವೇ ಉತ್ತರಿಸಬೇಕು.

Leave a comment

Top