An unconventional News Portal.

‘ಹಳೇ ಸ್ಕೂಟರ್ ಮೇಲಿದ್ದ ಸಂಗ; ಖುರ್ಚಿ ಸಿಕ್ಕಾಗ ಭಂಗ’: ಬಿಜೆಪಿ ಆಂತರಿಕ ಕಲಹದ ಅಸಲಿ ಕತೆ

‘ಹಳೇ ಸ್ಕೂಟರ್ ಮೇಲಿದ್ದ ಸಂಗ; ಖುರ್ಚಿ ಸಿಕ್ಕಾಗ ಭಂಗ’: ಬಿಜೆಪಿ ಆಂತರಿಕ ಕಲಹದ ಅಸಲಿ ಕತೆ

ಉತ್ತರ ಭಾರತದಲ್ಲಿ ‘ಮೋದಿ ಅಲೆ’ಯ ಮೇಲೆ ಬಿಜೆಪಿ ತೇಲುತ್ತಿರುವ ಹೊತ್ತಿಗೇ, ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಪಕ್ಷದ ನಾಯಕರ ನಡುವಿನ ಕಲಹ ಮರುಕಳಿಸಿದೆ.

ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತೃಪ್ತ ನಾಯಕರು ಆಯೋಜಿಸಿದ್ದ ‘ಪಕ್ಷ ಸಂಘಟನೆ’ ಸಮಾವೇಶ ನಿರೀಕ್ಷೆಯಂತೆಯೇ ಸಾರ್ವಜನಿಕ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ‘ಸರ್ವಾಧಿಕಾರಿ ಧೋರಣೆ’ಯ ಆರೋಪವನ್ನು ಮತ್ತೊಬ್ಬ ನಾಯಕ ಕೆ. ಎಸ್. ಈಶ್ವರಪ್ಪ ಮತ್ತೊಮ್ಮೆ ಎತ್ತಿ ಆಡಿದ್ದಾರೆ. ತಮ್ಮ ನಾಲಿಗೆ ಮೇಲೆ ಆಗಾಗ್ಗೆ ಹಿಡಿತ ತಪ್ಪುವ ಈಶ್ವರಪ್ಪ, ಈ ಬಾರಿಯೂ ಆರೋಪಗಳ ಗದ್ದಲದಲ್ಲಿ ಕೆಳಮಟ್ಟಕ್ಕೆ ಇಳಿದರು.

ಬೆಳಗ್ಗೆ 11.30ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಮ್ಮ ಭಾಷಣದಲ್ಲಿ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಅವರ ಬೆಂಬಲಿಗರ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು. ಇದರಿಂದ ಕೆರಳಿದ ಯಡಿಯೂರಪ್ಪ ಬೆಂಬಲಿಗ ಶಿವಣ್ಣ ನೇರವಾಗಿ ವೇದಿಕೆ ಮುಂಭಾಗ ಬಂದು, “ನೀನು (ಭಾನುಪ್ರಕಾಶ್) ಅಯೋಗ್ಯ. ಯಡಿಯೂರಪ್ಪರ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ,” ಎಂದು ಗುಡುಗಿದರು.

ಇದರಿಂದ ಸಮಾವೇಶದಲ್ಲಿ ಒಂದು ಕ್ಷಣ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ವತಃ ಭಾನುಪ್ರಕಾಶ್ ಕೂಡ ಕ್ಷಣಕಾಲ ಗಲಿಬಿಲಿಯಾದರು. ಈ ಹಂತದಲ್ಲಿ ಬಿಎಸ್‍ವೈ ಬೆಂಬಲಿಗರು ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆಯಿತು. ಭಾನುಪ್ರಕಾಶ್‍ಗೆ ಟೀಕಿಸಿದ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿ ಕುತ್ತಿಗೆ ಪಟ್ಟಿ ಹಿಡಿದು ಹೊರಗೆ ಹಾಕಲಾಯಿತು.

ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಇವೆಲ್ಲವೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಪಿತೂರಿ,” ಎಂದು ಕಿಡಿಕಾರಿದು.

ಹೀಗೆ, ಬಿಜೆಪಿ ನಾಯಕರ ಕಿತ್ತಾಟದ ಹಳೆಯ ಎಪಿಸೋಡು ಮತ್ತೊಮ್ಮೆ ರಿಪೀಟ್ ಆಯಿತು.

ಅಂದಕಾಲತ್ತಿಲ್ ಸ್ನೇಹ:

ಅಂದು ಬಿಎಸ್‌ವೈ ಮತ್ತು ಕೆಎಸ್‌ಇ. (ಕೃಪೆ: ದಿ ಹಿಂದೂ)

ಅಂದು ಬಿಎಸ್‌ವೈ ಮತ್ತು ಕೆಎಸ್‌ಇ. (ಕೃಪೆ: ದಿ ಹಿಂದೂ)

ಇವತ್ತು ಬಿಜೆಪಿ ಒಳಗಿನ ಈ ಆಂತರಿಕ ಕಲಹದ ಮೂಲವನ್ನು ಹುಡುಕಿಕೊಂಡು ಹೊರಟರೆ ಹೋಗಿ ನಿಲ್ಲವುದು ಶಿವಮೊಗ್ಗ ಜಿಲ್ಲೆಗೆ. ಕೇಸರಿ ಪಕ್ಷದಲ್ಲಿ ನಡೆಯುತ್ತಿರುವ ಕಿತ್ತಾಟದ ಪಾತ್ರಧಾರಿಗಳ ಪೈಕಿ ಪ್ರಮುಖರ ಮೂಲ ಶಿವಮೊಗ್ಗ. ಅದರಲ್ಲೂ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ತಮ್ಮೆಲ್ಲಾ ಮಿತಿಗಳ ನಡುವೆ ಪಕ್ಷವನ್ನು ಕಟ್ಟಿದವರು. ಒಟ್ಟಿಗೆ ಉದ್ಯಮಗಳನ್ನು ನಡೆಸಿದವರು. ಒಟ್ಟಾಗಿಯೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದವರು. ಪೈಪೋಟಿಗೆ ಬಿದ್ದವರಂತೆ ಆಸ್ತಿಗಳನ್ನು ಮಾಡಿಕೊಂಡರು.

“ಅವತ್ತು ಈಶ್ವರಪ್ಪ ಕಡಲೆಕಾಯಿ ಮಾರಾಟ ಮಾಡುತ್ತಿದ್ದರು. ಯಡಿಯೂರಪ್ಪ ಶಿಕಾರಿಪುರದಲ್ಲಿ ರೈಸ್‌ ಮಿಲ್ ರೈಟರ್ ಆಗಿದ್ದರು. ಆ ದಿನಗಳಲ್ಲಿ ಬಿಜೆಪಿ ಕಟ್ಟಲು ಇಬ್ಬರೂ ಕಷ್ಟ ಪಟ್ಟಿದ್ದಾರೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಯಡಿಯೂರಪ್ಪ ಅವರನ್ನು ತಮ್ಮ ಹಳೆಯ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಈಶ್ವರಪ್ಪ ಸುತ್ತಾಡಿಸುತ್ತಿದ್ದರು. ಪಕ್ಷದ ಚಟುವಟಿಕೆಗಳನ್ನು ಮುಗಿಸಿ ಸಂಜೆ ವೇಳೆ ಇಬ್ಬರೂ ತರಕಾರಿ, ದಿನಸಿ ತೆಗೆದುಕೊಂಡು ಮತ್ತೆ ಯಡಿಯೂರಪ್ಪ ಅವರನ್ನು ಶಿಕಾರಿಪುರಕ್ಕೆ ಬಸ್ ಹತ್ತಿಸುತ್ತಿದ್ದವರು ಈಶ್ವರಪ್ಪ,” ಎಂದು ನೆನಪು ಮಾಡಿಕೊಳ್ಳುತ್ತಾರೆ ಶಿವಮೊಗ್ಗ ಮೂಲದ ಪತ್ರಕರ್ತ ಶೃಂಗೇಶ್. ಶೃಂಗೇಶ್ ಶಿವಮೊಗ್ಗದಲ್ಲಿ ‘ಜನ ಹೋರಾಟ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದಾರೆ.

ಆ ದಿನಗಳಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ಇಬ್ಬರೂ ಸೇರಿ ಜೆಎಂಜೆ ಎಂಬ ಕಂಪನಿಯೊಂದನ್ನು ಹುಟ್ಟು ಹಾಕಿದ್ದರು. ಜೆ ಎಂದರೆ ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ, ಎಂ ಎಂದರೆ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿಯವರ ಹೆಸರುಗಳನ್ನು ಸೂಚಿಸುತ್ತಿದ್ದವು. ಇವರು ಒಟ್ಟಾಗಿ ಶಿವಮೊಗ್ಗದಲ್ಲಿ ಪೈಪ್‌ ಬಿಜಿನೆಸ್‌, ರಿಯಲ್ ಎಸ್ಟೇಟ್ ಹೀಗೆ ಹಲವು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಆ ಸಮಯದಲ್ಲಿ ಇವರ ಜತೆಗೆ ಇದ್ದ ಮತ್ತೊಬ್ಬ ಹಿರಿಯ ನಾಯಕ ಡಿ. ಎಚ್. ಶಂಕರಮೂರ್ತಿ. ಯಾವತ್ತೂ ಇವರ ನಡುವೆ ಹಣಕಾಸಿ ವಿಚಾರಕ್ಕೆ ಕಿತ್ತಾಟಗಳಾಗಿರಲಿಲ್ಲ ಎಂಬುದು ಗಮನಾರ್ಹ.

ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಸ್ನೇಹ ಹೇಗಿತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ. “ಆಗ ಯಡಿಯೂರಪ್ಪ ಪತ್ರ ವಿಜಯೇಂದ್ರ ಶಿವಮೊಗ್ಗದಲ್ಲಿ ರೂಮ್ ಮಾಡಿಕೊಂಡು ಡಿವಿಎಸ್‌ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಕೊನೆಗೆ ಈಶ್ವರಪ್ಪ ಮತ್ತಿತರರು ಗೋವಾದಿಂದ ಅವರನ್ನು  ಹುಡುಕಿ ಕರೆತಂದಿದ್ದರು,” ಎಂಬ ಹಳೆಯ ಬಿಜೆಪಿ ಒಡನಾಡಿಗಳ ನೆನಪುಗಳನ್ನು ಶೃಂಗೇಶ್ ಹಂಚಿಕೊಳ್ಳುತ್ತಾರೆ.

ಹೀಗೆ, ಉದ್ಯಮದಲ್ಲಿ, ರಾಜಕೀಯ ಚಿಂತನೆಗಳಲ್ಲಿ ಸಮಾನಾಂತರವಾಗಿ ಬೆಳೆದು ಬಂದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಕಂದಕವೊಂದು ಸೃಷ್ಟಿಯಾಗಿದ್ದು ಯಡಿಯೂರಪ್ಪ ಉಪಮುಖ್ಯಮಂತ್ರಿಯಾದ ಸಮಯದಲ್ಲಿ.

ಶ್ರೀಮಂತ ಬಿಕ್ಕಟ್ಟು: 

ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಕೇಂದ್ರಕ್ಕೆ ಬಂದ ಬಿಜೆಪಿ ಸಮ್ಮಿಶ್ರ ಸರಕಾರವನ್ನು ರಚಿಸಿತು. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಈ ಸಮಯದಲ್ಲಿ ಈಶ್ವರಪ್ಪ ಸಚಿವರಾಗಿದರು. ಆದರೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ಯಡಿಯೂರಪ್ಪ ಉಳಿಸಿಕೊಂಡರು. ಮೊದಲ ಬಾರಿಗೆ ಈಶ್ವರಪ್ಪ ತಮ್ಮ ತವರು ನೆಲದಲ್ಲಿ ಹಿಡಿತವನ್ನು ಕಳೆದುಕೊಳ್ಳಬೇಕಾಗಿ ಬಂತು. ನಿಧಾನವಾಗಿ ಅದು ಇಬ್ಬರ ನಡುವಿನ ಕಿತ್ತಾಟಕ್ಕೆ ಕಾರಣವಾಯಿತು.

ಮುಂದೆ, ಪೂರ್ಣಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮೊದಲ ಹಂತದಲ್ಲಿಯೇ ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ತಾಕಲಾಟ ಕಂಡು ಬಂತು.

ಇದಾದ ನಂತರ, ಶಿವಮೊಗ್ಗದಲ್ಲಿ ನಡೆದ ಸಮಸ್ತ ‘ಅಭಿವೃದ್ಧಿ’ ಕೆಲಸಗಳಲ್ಲಿ ಈಶ್ವರಪ್ಪ ಅವರ ಅನುಪಸ್ಥಿತಿ ಎದ್ದು ಕಾಣಿಸುತ್ತಿತ್ತು. ಅಲ್ಲಿನ ಬಸ್‌ ನಿಲ್ದಾಣದಿಂದ ಶುರುವಾಗಿ ರಸ್ತೆ, ಮಾರುಕಟ್ಟೆ ನಿರ್ಮಾಣದವರೆಗೆ ಯಡಿಯೂರಪ್ಪ ಅವರೇ ನೇರವಾಗಿ ನಿಭಾಯಿಸತೊಡಗಿದರು. ಅಂತಿಮವಾಗಿ ಈಶ್ವರಪ್ಪ ತವರು ಕ್ಷೇತ್ರ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಸಭೆಗಳು ಅವರು ಇಲ್ಲದೆ ನಡೆಯಲು ಶುರುವಾದವು.

ಯುಡಿಯೂರಪ್ಪ ಮತ್ತು ಈಶ್ವರಪ್ಪ ರಾಜಕೀಯವಾಗಿ ಅಧಿಕಾರಕ್ಕೆ ಹತ್ತಿರಾಗುವ ಕೆಲವು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾಕರಾಗಿದ್ದವರು ಸಂತೋಷ್‌. ಅವರಾಗ ಸೈಕಲ್ ಹೊಡೆದುಕೊಂಡು ಸುತ್ತಾಡುತ್ತಿದ್ದರು. ಇನ್ನೊಂದು ಆಯಾಮದಲ್ಲಿ ಶಿವಮೊಗ್ಗದ ಕೇಶವ ಕೃಪಾದಲ್ಲಿ ನಡೆಯುತ್ತಿದ್ದ ಬಿಜೆಪಿ ಸಭೆಗಳಲ್ಲಿ ಈ ಇಬ್ಬರನ್ನೂ ಹತ್ತಿರದಿಂದ ನೋಡಿದ್ದವರು ಸಂತೋಷ್‌. ಸಂತೋಷ್‌ ಅವರನ್ನು ಬಿಜೆಪಿಗೆ ಕರೆತಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಇತ್ತು. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಒಳಗೆ ಯಡಿಯೂರಪ್ಪ ವಿರುದ್ಧ ಅಪಸ್ವರಗಳು ಎದ್ದ ನಂತರ ಸಂತೋಷ್ ತಿರುಗಿ ಬಿದ್ದರು. ಯಡಿಯೂರಪ್ಪ ವಿರುದ್ಧ ಸಂಘರ್ಷ ನಡೆಸುತ್ತಿರುವ ಕೆ. ಎಸ್‌. ಈಶ್ವರಪ್ಪ ಬೆನ್ನಿಗೆ ನಿಂತರು.

ಕೊನೆಯ ಆಯ್ಕೆ: 

bsy-kse-1

ಇವತ್ತು ಕರ್ನಾಟಕ ಬಿಜೆಪಿಯನ್ನು ಮುನ್ನಡೆಸಲು ಇರುವ ಏಕೈಕ ಆಯ್ಕೆ ಯಡಿಯೂರಪ್ಪ. ಅವರನ್ನು ಎದುರುಹಾಕಿಕೊಳ್ಳುವ ಸಾಧ್ಯತೆ ಇರುವ ಇನ್ನೊಬ್ಬ ನಾಯಕ ಇಲ್ಲ. ಈ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರನ್ನು ಬಗ್ಗಿಸಲು ಇರುವ ಪರ್ಯಾಯ ಈಶ್ವರಪ್ಪ. ಪಕ್ಷವನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಆದರೆ, ವಯಸ್ಸಿನಲ್ಲಿ ಚಿಕ್ಕವರಾದರೂ ಈಶ್ವರಪ್ಪ ಜತೆಜತೆಗೆ ಹೆಜ್ಜೆ ಹಾಕಿಕೊಂಡು ಬಂದವರು.

ಹೀಗಾಗಿಯೇ, ಆರ್‌ಎಸ್‌ಎಸ್‌ ನಾಯಕರ ಒಂದು ಗುಂಪು ಈಶ್ವರಪ್ಪರನ್ನು ಮುಂದೆ ಬಿಟ್ಟು ‘ದೂರ್ವಾಸ ಮುನಿ’ಗೆ ಕಡಿವಾಣ ಹಾಕಲು ಹೊರಟಿರುವುದು ಗುಟ್ಟಾಗೇನೂ ಉಳಿದಿಲ್ಲ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈಶ್ವರಪ್ಪ ಹೊರಹೊಮ್ಮುವ ಸಾಧ್ಯತೆಯನ್ನು ಬಲ್ಲ ಯಡಿಯೂರಪ್ಪ, ಶಿವಮೊಗ್ಗ ಜಿಲ್ಲಾ ಬಿಜೆಪಿಗೆ ಅಧ್ಯಕ್ಷರನ್ನಾಗಿ ತಮ್ಮ ಗುಂಪಿನ ರುದ್ರೇಗೌಡರನ್ನು ನೇಮಕ ಮಾಡಿದ್ದಾರೆ. ಕಾರ್ಯಾಲಯ ಕಾರ್ಯದರ್ಶಿ ಹುದ್ದೆಯನ್ನೂ ತಮಗೆ ಬೇಕಾದವರಿಗೆ ನೀಡಿದ್ದಾರೆ. ಈ ಮೂಲಕ ಶಿವಮೊಗ್ಗ ಬಿಜೆಪಿಯನ್ನು ಈಶ್ವರಪ್ಪ ಮಾತ್ರವಲ್ಲ, ಆರ್‌ಎಸ್‌ಎಸ್‌ ಹಿಡಿತದಿಂದಲೂ ಬಿಡಿಸಿಕೊಂಡಿದ್ದಾರೆ. ಇದು ಉರಿಯುವ ಬೆಂಕಿಗೆ ಇನ್ನೊಂದಿಷ್ಟು ತುಪ್ಪ ಸುರಿದಿರುವ ಸಾಧ್ಯತೆಯೂ ಇದೆ.

ಪರಿಣಾಮ, ಆಗಾಗ್ಗೆ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಗುಡುಗುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾದರೂ ಹೈ ಕಮಾಂಡ್ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಶಿವಮೊಗ್ಗದ ‘ಕೇಶವ ಕೃಪಾ’ದಲ್ಲಿ ಒಬ್ಬರ ನಡುವೆ ಮೊದಲ ಸಂಧಾನದ ನಾಟಕ ನಡೆಯುತ್ತದೆ. ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಪ್ರಹಸನ ಜರುಗುತ್ತದೆ. ಅಂತಿಮವಾಗಿ ದಿಲ್ಲಿಯಲ್ಲಿ ಸಂಧಾನ ಸಮಾಪ್ತಿಯಾಯಿತು ಎಂಬ ಸಂದೇಶ ಹೊರಬೀಳುತ್ತದೆ.

ಅಲ್ಲಿಂದ ವಾಪಾಸಾಗುವ ಈಶ್ವರಪ್ಪ ಮತ್ತೆ ಕಾಲು ಕೆದರಿಕೊಂಡು ಯಡಿಯೂರಪ್ಪ ಮೇಲೆ ಮುಗಿಬೀಳುತ್ತಾರೆ. ಅವರ ಹಿನ್ನೆಲೆಯಲ್ಲಿ ಶಿವಮೊಗ್ಗ ಆರ್‌ಎಸ್‌ಎಸ್‌ ನರಳು ಢಾಳಾಗಿ ಕಾಣಿಸುತ್ತದೆ. ಹೀಗೆ, ಹಳೆಯ ಸ್ನೇಹಿತರ ಹೊಸ ರಂಪಾಟಗಳ ಎಪಿಸೋಡು ಪುನರಾವರ್ತನೆಯಾಗುತ್ತದೆ.

ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗೆ ಇರುವ ಒಂದೇ ಸಂಕಷ್ಟ ಏನೆಂದರೆ, ಈ ಪ್ರಹಸನ ಮುಗಿದು, ಅಂಕ ಸರಿಯುವ ಒಳಗೆ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಿದೆ, ಅಷ್ಟೆ.

Leave a comment

Top