An unconventional News Portal.

‘ಜೈಲಿನಿಂದ ಬಂದ ನಂತರವೂ ಕಿರುಕುಳ’: ಡಿಜಿಪಿ ಓಂಪ್ರಕಾಶ್ ವಿರುದ್ಧ ಮತ್ತೊಂದು ಸುತ್ತಿನ ಆರೋಪ

‘ಜೈಲಿನಿಂದ ಬಂದ ನಂತರವೂ ಕಿರುಕುಳ’: ಡಿಜಿಪಿ ಓಂಪ್ರಕಾಶ್ ವಿರುದ್ಧ ಮತ್ತೊಂದು ಸುತ್ತಿನ ಆರೋಪ

“ಡಿಜಿಪಿ ಓಂಪ್ರಕಾಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನೀಡುತ್ತಿದ್ದ ಕಿರುಕುಳವನ್ನು ಮುಂದುವರಿಸಿದ್ದಾರೆ. ಜೈಲಿನಿಂದ ಹೊರಬಂದ ನಂತರ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮೇಲೆ ಇನ್ನಷ್ಟು ಕೇಸುಗಳನ್ನು ಹಾಕಿಸುವುದಾಗಿ ಬೇರೆಯವರ ಮೂಲಕ ಹೇಳಿಸುತ್ತಿದ್ದಾರೆ. ಸದ್ಯದಲ್ಲಿಯೇ ನನ್ನ ಮೇಲೆ ಹಲ್ಲೆ ಅಥವಾ ಅಪಘಾತ ಮಾಡಿಸುವ ಸಾಧ್ಯತೆ ಇದೆ. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದರೆ ಪೊಲೀಸರು, ಮಹಿಳಾ ಸಹಾಯವಾಣಿ ಅಥವಾ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬದಲಿಗೆ ಇನ್ನಷ್ಟು ಕಿರುಕುಳ ಹೆಚ್ಚಾಗುತ್ತಿದೆ…

ಹೀಗೊಂದು ಗಂಭೀರ ಆರೋಪವನ್ನು ಮಾಡುತ್ತಿರುವವರು ಸಧನಾ ಅಲಿಯಾಸ್ ರಾಜಲಕ್ಷ್ಮಿ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರ ಸರಕಾರಿ ನಿವಾಸದ ಮುಂದೆಯೇ ಏಪ್ರಿಲ್ ಕೊನೆಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದ ಮಹಿಳೆ ಈಕೆ.

ಅದಾದ ಮಾರನೇ ದಿನವೇ ಇವರನ್ನು ಜಾತಿ ನಿಂದನೆ ಪ್ರಕರಣವೊಂದರಲ್ಲಿ ಬಂಧಿಸಿ ರಾಮನಗರ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಹೊರಬಂದ ಸಧನಾ ಮುಖ್ಯವಾಹಿನಿಯಿಂದ ಕಣ್ಮರೆಯಾಗಿದ್ದರು. ಶುಕ್ರವಾರ ಅಜ್ಞಾತ ಸ್ಥಳವೊಂದರಲ್ಲಿ ‘ಸಮಾಚಾರ’ವನ್ನು ಭೇಟಿ ಮಾಡಿದ ಅವರು ಆತಂಕಗೊಂಡಿದ್ದರು.

ಕಳೆದ 15 ದಿನಗಳಲ್ಲಿ ಅನುಭವಿಸುತ್ತಿರುವ ಯಾತನೆ, ರಾಜ್ಯ ಪೊಲೀಸ್ ಇಲಾಖೆಯ ದಂಡನಾಯಕನನ್ನೇ ಎದುರು ಹಾಕಿಕೊಂಡು ನಡೆಸುತ್ತಿರುವ ಏಕಾಂಗಿ ಹೋರಾಟ, ಅದರಿಂದಾಗಿ ತಮ್ಮ ಮನೆಯ ಮೇಲೆ ರಾತ್ರಿ ಬೀಳುತ್ತಿರುವ ಕಲ್ಲುಗಳು, ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಎದುರಾಗುತ್ತಿರುವ ಅಪರಿಚಿತರು, ಪ್ರತಿ ಚಲನವಲನಗಳನ್ನೂ ಗಮನಿಸಲು ಮನೆಯ ಮುಂದೆ ಹಾಕಲಾಗಿರುವ ಸಿಸಿ ಕ್ಯಾಮೆರಾ ಕಣ್ಗಾವಲು, ಇದನ್ನೆಲ್ಲಾ ತಪ್ಪಿಸಿಕೊಂಡು ವಕೀಲರನ್ನು ಭೇಟಿಯಾಗಲು ಹೋದರೆ, ಚಿಕ್ಕಮಗಳೂರಿನಲ್ಲಿರುವ ಮನೆಗೆ ಹೋಗುತ್ತಿರುವ ಕರೆಗಳು, ಊರು ಬಿಡಬೇಕು ಎಂಬ ಧಮಕಿಗಳು… ಸಧನಾ ಡಿಜಿಪಿ ಓಂಪ್ರಕಾಶ್ ವಿರುದ್ಧ ಮಾಡಿರುವ ಹೊಸ ಆರೋಪಗಳ ಮುಖ್ಯಾಂಶಗಳಿವು.

ಹುಚ್ಚಿ ಪಟ್ಟ: 

ಡಿಜಿ-ಐಜಿಪಿ ಓಂಪ್ರಕಾಶ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಮಾರನೇ ದಿನವೇ ಜಾತಿ ನಿಂದನೆ ಪ್ರಕರಣವೊಂದನ್ನು ಕನಕಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಸಧನಾರನ್ನು ಮಂಡ್ಯ ಜೈಲಿಗೆ ಕಳುಹಿಸಲಾಯಿತು. “ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಡ್ಯ ಸರಕಾರಿ ಆಸ್ಪತ್ರೆಯಲ್ಲಿ ಇಡೀ ರಾತ್ರಿ ಉಳಿಸಿಕೊಂಡು ಕೆಲವು ಕಾಗದ ಪತ್ರಗಳಿಗೆ ಸಹಿ ಪಡೆದುಕೊಳ್ಳಲಾಯಿತು. ಈ ಸಮಯದಲ್ಲಿ ಮನಃಶಾಸ್ತ್ರಜ್ಞರ ಮೂಲಕ ತಪಾಸಣೆ ನಡೆಸಿದರು. ನನಗೆ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು,” ಎಂದು ಸಧನಾ ಆರೋಪಿಸುತ್ತಾರೆ.

ಎಸಿಪಿ ಬೆದರಿಕೆ:

“ಜೈಲಿನಿಂದ ಹೊರಬಂದ ನಂತರವೂ ರಾಜಾಜಿನಗರ ಠಾಣೆಗೆ ದೂರು ನೀಡಲು ಹೋಗಿದ್ದೆ. ಆದರೆ, ಅಲ್ಲಿ ದೂರು ಸ್ವೀಕರಿಸಲಿಲ್ಲ. ಎಸಿಪಿ ಅರುಣ್ ನಾಯಕ್ ಮೂಲಕ ಬೆದರಿಕೆ ಹಾಕಿಸಲಾಗುತ್ತಿದೆ. ನನ್ನ ಬಂಧಿಸಿದ ಸಮಯದಲ್ಲಿ ಪೊಲೀಸರು ತೆಗೆದುಕೊಂಡ ಎರಡೂ ಮೊಬೈಲ್ ಫೋನ್ಗಳು ಇಂದಿಗೂ ಚಲಾವಣೆಯಲ್ಲಿವೆ,” ಎಂದು ಅವರು ದೂರಿದ್ದಾರೆ. ಮಹಿಳಾ ಸಹಾಯವಾಣಿಯಲ್ಲಿಯೂ ದೂರು ಸ್ವೀಕರಿಸುವುದಕ್ಕೆ ಒಪ್ಪಲಿಲ್ಲ ಎಂದವರು ಹೇಳುತ್ತಿದ್ದಾರೆ.

ಕಲ್ಪನಾ ಪಿತೂರಿ:

“ಪ್ರಕರಣದಲ್ಲಿ ಕಲ್ಪನಾ ಎಂಬಾಕೆ ಸಹಾಯ ಮಾಡುವುದಾಗಿ ಬಂದರು. ನಂತರ ಮಧ್ಯವರ್ತಿಯಂತೆ ವರ್ತಿಸಲು ಶುರುಮಾಡಿದರು. ನಿಮ್ಮಿಂದ ನನಗೆ ಯಾವ ಸಹಾಯವೂ ಬೇಡ ಎಂದು ತಿಳಿಸಿದೆ. ನನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ ವಕೀಲರ ಜತೆ ಆಕೆ ನನ್ನ ರಾಜಾಜಿನಗರ ಮನೆಗೆ ಬಂದಿದ್ದರು. ಆಕೆಯ ಪಿತೂರಿಯಿಂದಲೇ ನನ್ನ ಮೇಲೆ ದೂರು ದಾಖಲಿಸಲಾಗಿದೆ,” ಎಂಬುದು ಸಧನಾ ಮಾಡುತ್ತಿರುವ ಆರೋಪ.

ದಾಖಲೆಗಳಿವೆ:

“ನಾನು ಯಾರು ಎಂದು ಗೊತ್ತೇ ಇಲ್ಲ ಎಂದು ಡಿಜಿಪಿ ಓಂಪ್ರಕಾಶ್ ಹೇಳಿದ್ದಾರೆ. ನನ್ನ ಬಳಿ ಅದಕ್ಕೆಲ್ಲಾ ದಾಖಲೆಗಳಿಗೆ. ಫೊಟೋಗಳು, ವಿಡಿಯೋಗಳನ್ನು ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುತ್ತೇನೆ. ಅವರಿಂದ ಹೀಗೆ ಕಿರುಕುಳ ಮುಂದುವರಿದರೆ ನನಗೆ ಬೇರೆ ದಾರಿಗಳಿಲ್ಲ,” ಎಂದು ಸಧನಾ ಹೇಳುತ್ತಾರೆ.

ಇಡೀ ಪ್ರಕರಣದಲ್ಲಿ ಅವರು ಡಿಜಿಪಿ ಓಂಪ್ರಕಾಶ್ ಹಾಗೂ ಅವರ ಪುತ್ರ ಕಾರ್ತಿಕೇಶ್ ಹಾಗೂ ರವಿಶಂಕರ್ ಎಂಬುವವರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈವರೆಗೂ ಅದಕ್ಕಿರಬಹುದಾದ ಹಿನ್ನೆಲೆ ಕುರಿತು ಬಾಯಿ ಬಿಡುತ್ತಿಲ್ಲ.

“ಆಕೆಯ ಬಳಿ ದಾಖಲೆಗಳಿವೆ. ಆದರೆ, ಅವುಗಳನ್ನು ಬಹಿರಂಗ ಪಡಿಸುವುದಕ್ಕೆ ಮುಂದೆ ಬರುತ್ತಿಲ್ಲ. ಕೇಸು ದಾಖಲಿಸುವುದಕ್ಕೂ ತಯಾರಿಲ್ಲ. ನನ್ನ ವೈಯುಕ್ತಿಕ ಬದುಕು ಹಾಳಾಗುತ್ತದೆ ಎಂದು ಹಿಂದೇಟು ಹಾಕುತ್ತಿದ್ದಾರೆ,” ಎನ್ನುತ್ತಾರೆ ಸಧನಾ ಪರವಾಗಿ ವಕಾಲತ್ತು ವಹಿಸಿಕೊಂಡಿರುವ ವಕೀಲ ಪ್ರೊ. ಬಸವರಾಜು.

ಆಕೆಯ ಬಳಿ ಇರುವ ದಾಖಲೆಗಳು ಏನೇ ಇರಲಿ, ಪೊಲೀಸ್ ಇಲಾಖೆಯ ಅತ್ಯಂತ ಹಿರಿಯ ಅಧಿಕಾರಿಯೊಬ್ಬರ ಬಗ್ಗೆ ಹೀಗೊಂದು ಗಂಭೀರ ಆರೋಪ ಕೇಳಿಬಂದರೂ ಸರಕಾರ ಕೇಳಿಸಿಯೂ, ಕೇಳಿಸದಂತೆ ವರ್ತಿಸುತ್ತಿರುವುದು ಮಾತ್ರ ಅಚ್ಚರಿ ಮೂಡಿಸುತ್ತಿದೆ. ಗೃಹ ಸಚಿವ ಜಿ. ಪರಮೇಶ್ವರ್ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹವನ್ನು ಸಧನಾ ಮುಂದಿಡುತ್ತಿದ್ದಾರೆ.

“ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಐಡಿಗೆ ವಹಿಸಲಿ. ನಾನು ಮಾಡುತ್ತಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆಯಾಗಲಿ. ನನ್ನ ಬಳಿ ಇರುವ ಅಷ್ಟೂ ದಾಖಲೆಗಳನ್ನು ನೀಡುತ್ತೇನೆ,” ಎನ್ನುತ್ತಾರೆ ಸಧನಾ.

ಈ ಕುರಿತು ಪ್ರತಿಕ್ರಿಯೆಗೆ ಡಿಜಿಪಿ ಓಂಪ್ರಕಾಶ್ ಲಭ್ಯರಾಗಲಿಲ್ಲ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top