An unconventional News Portal.

‘ಅಯ್ಯೋ ಮಂಜುನಾಥ’: ಗೋ ವಂಚನೆ ಬೆನ್ನಿಗೇ ಧರ್ಮಸ್ಥಳದಲ್ಲಿ ಸರಕಾರಿ ಜಾಗದ ಅಕ್ರಮ ಬಳಕೆ ಬಹಿರಂಗ!

‘ಅಯ್ಯೋ ಮಂಜುನಾಥ’: ಗೋ ವಂಚನೆ ಬೆನ್ನಿಗೇ ಧರ್ಮಸ್ಥಳದಲ್ಲಿ ಸರಕಾರಿ ಜಾಗದ ಅಕ್ರಮ ಬಳಕೆ ಬಹಿರಂಗ!

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಕೊಕ್ಕಡ ಗೋ ಶಾಲೆಯಲ್ಲಿ ಸರಕಾರದ ಯೋಜನೆಯ ಹಣವನ್ನು ದುರುಪಯೋಗ ಪಡಿಸಿಕೊಂಡ ಕುರಿತು ‘ಸಮಾಚಾರ’ ವರದಿ ಮಾಡಿತ್ತು. ಇದೀಗ ಆ ಗೋಶಾಲೆಯ ಜಾಗವನ್ನೂ ಕಾನೂನು ಉಲ್ಲಂಘನೆ ಮಾಡಿ ಸರಕಾರ  ‘ಗೋಶಾಲೆ ನಡೆಸಲು ಅನುಮತಿ’ ನೀಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ‘ಸಮಾಚಾರ’ಕ್ಕೆ ಲಭ್ಯವಾಗಿರುವ ದಾಖಲೆಗಳು, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಎಂದು ಗುರುತಿಸಿಕೊಂಡಿರುವ ಧರ್ಮಸ್ಥಳದಲ್ಲಿ ಅಕ್ರಮ ನಡೆದಿರುವುದನ್ನು ಬಯಲಿಗೆಳೆಯುತ್ತಿವೆ.

ಯಾವುದಿದು ಗೋಶಾಲೆ?:

ಧರ್ಮಸ್ಥಳದ ‘ಧರ್ಮಾಧಿಕಾರಿ’ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್. ಕೆ. ಡಿ. ಆರ್. ಡಿ. ಪಿ) (SKDRDP) ವತಿಯಿಂದ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗೋಶಾಲೆ’ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಸರಕಾರದ ಯೋಜನೆ ಅಡಿಯಲ್ಲಿ ಗೋವಿನ ತಳಿ ಅಭಿವೃದ್ಧಿಗಾಗಿ ಹಣ ಪಡೆದು, ಅಭಿವೃದ್ಧಿಯನ್ನೂ ಮಾಡದೇ; ಇತ್ತ ಗೋವುಗಳನ್ನೂ ಬೆಳೆಸದೆ  ಹಣ ದುರುಪಯೋಗಪಡಿಸಿಕೊಂಡಿವೆ ಎನ್ನುವುದನ್ನು ‘ಕೃಷಿ ತಂತ್ರಜ್ಞರ ಸಮಿತಿ’ಯ ಮೌಲ್ಯಮಾಪನ ವರದಿ ತೆರೆದಿಟ್ಟಿತ್ತು.

ಇದರ ಬೆನ್ನಲ್ಲೇ, ಇದೇ ಗೋಶಾಲೆ ನಡೆಸಲು ಜಮೀನು ನೀಡುವ ವೇಳೆ ಸರಕಾರ ಕಾನೂನು ಉಲ್ಲಂಘನೆ ಮಾಡಿರುವುದು ಈಗ ಬಹಿರಂಗವಾಗಿದೆ. ಕೊಕ್ಕಡದಲ್ಲಿ ಒಟ್ಟು 8 (7+1) ಎಕರೆಯಲ್ಲಿ ಗೋಶಾಲೆ ನಡೆಸಲು ಸರಕಾರ ಎಸ್. ಕೆ. ಡಿ. ಆರ್. ಡಿ. ಪಿ ಗೆ ಅನುಮತಿ ನೀಡಿತ್ತು. ಈ ಅನುಮತಿ ನೀಡುವಾಗ ಕೆಲವೊಂದು ಕಾನೂನುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕುರಿತು ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಬಳಿ ದೂರು ಕೂಡಾ ದಾಖಲಾಗಿದೆ.

ದೂರಿನಲ್ಲಿ ಏನಿದೆ?: 

ಗೋಶಾಲೆಗಾಗಿ ಕೊಕ್ಕಡದಲ್ಲಿ ಜಮೀನು ನೀಡುವಂತೆ ಎಸ್. ಕೆ. ಡಿ. ಆರ್. ಡಿ. ಪಿ ಪರವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 27-03-2016ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕಾರ 21-06-2016ರಂದು ಅವತ್ತಿನ ಪುತ್ತೂರು ಸಹಾಯಕ ಕಮಿಷನರ್ ಆಗಿದ್ದ ಸುಬ್ರಾಯ ಕಾಮತ್ ಕೊಕ್ಕಡ ಗ್ರಾಮದ ಸರ್ವೆ ನಂಬರ್ 298: 2 ರಲ್ಲಿ 7 ಎಕರೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದರು.

ಅನುಮತಿ ನೀಡುವ ನಡವಳಿಯಲ್ಲಿ ಸಹಾಯಕ ಆಯುಕ್ತರು ನಿಯಮಗಳನ್ನು ಉಲ್ಲೇಖ ಮಾಡಿದ್ದಾರೆ. ಆದರೆ ಅವುಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. 7 ಎಕರೆ ಜಮೀನು ಗೋಮಾಳವಾಗಿರುವುದರಿಂದ ಅದನ್ನು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಕೊಡದಂತೆ ಉಚ್ಛ ನ್ಯಾಯಾಲಯದ ಆದೇಶ ಇರುವುದನ್ನೂ ಪ್ರಸ್ತಾಪಿಸಿದ್ದಾರೆ.

ಆದರೆ ಇಷ್ಟೆಲ್ಲಾ ಆಗಿ ಕೊನೆಗೆ ಗೋಮಾಳವನ್ನು ಗೋಮಾಳವಾಗಿಯೇ ಮುಂದುವರಿಸಿಕೊಂಡು ಹೋಗತಕ್ಕದ್ದಲ್ಲದೇ ಬೇರಾವ ಉಪಯೋಗಕ್ಕೆ ನಿರ್ಭಂಧಿಸಿದೆ ಎಂಬ ಶರತ್ತನ್ನು ವಿಧಿಸಿ SKDRDPಗೆ ‘ಗೋಶಾಲೆ’ ನಡೆಸಲು ಅನುಮತಿ ನೀಡಿದ್ದಾರೆ. ಸದ್ಯ ನಿಯಮಬಾಹಿರವಾಗಿ ಗೋಮಾಳದ ಜಾಗದಲ್ಲಿ ಗೋಶಾಲೆ ಕಾರ್ಯ ನಿರ್ವಹಿಸುತ್ತಿದೆ.

dharmastala-kokkada-goshale

ಅದೇ ರೀತಿ ಸರಕಾರ ಅನುಮತಿ ನೀಡಿದ ಜಮೀನಿನ ಮೇಲೆ ಸಂಸ್ಥೆ (ಎಸ್. ಕೆ. ಡಿ. ಆರ್. ಡಿ. ಪಿ)ಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಕಮಿಷನರ್ ಅವರ ನಡಾವಳಿಯಲ್ಲಿದೆ. ಆದರೆ ಸರಕಾರವೇ ನೀಡಿರುವ ಗೇಣಿ ಮತ್ತು ಪಹಣಿ ಪತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ  (ರಿ) ಇವರಿಗೆ ಗೋಶಾಲೆ ಉಪಯೋಗಕ್ಕಾಗಿ 7.00 ಎಕರೆಯನ್ನು ಅನುಮತಿಸಿದೆ ಎಂದು ಕಾಲಂ 11 (ಹಕ್ಕುಗಳು) ರಲ್ಲಿ ದಾಖಲಾಗಿದೆ. ನಡಾವಳಿಯಲ್ಲಿ ಈ ರೀತಿ ಹಕ್ಕು ನೀಡಲು ಅನುಮತಿ ಇಲ್ಲ ಎಂದು ಸಹಾಯಕ ಆಯುಕ್ತರು ಉಲ್ಲೇಖಿಸಿದ ನಂತರವೂ, ಭೂಮಿಯ ಹಕ್ಕುಗಳನ್ನು ಸರಕಾರ ಎಸ್. ಕೆ. ಡಿ. ಆರ್. ಡಿ. ಪಿಗೆ ಹೇಗೆ ನೀಡಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಇದಲ್ಲದೇ 1 ಎಕರೆ ಜಾಗ ‘ಭಾಗಶಃ ಅರಣ್ಯ ಪ್ರದೇಶ’ವಾಗಿರುವುದರಿಂದ ಪ್ರಸ್ತಾವನೆಯಿಂದ ಕೈಬಿಡುವಂತೆ ಆಯುಕ್ತರು ನಡಾವಳಿಯಲ್ಲಿ ಹೇಳಿದ್ದಾರೆ. ಆದರೆ ಗೇಣಿ ಮತ್ತು ಪಹಣಿ ಪತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ) ಹೆಸರು ಹಕ್ಕುಗಳಲ್ಲಿ ದಾಖಲಾಗಿದೆ. ಇದೇ ವಿಚಾರವಾಗಿ ಆರ್ಟಿಐ ಮುಲಕ ಕೋರಿದ ಮಾಹಿತಿಗೆ ‘ಅರಣ್ಯ ಸಂರಕ್ಷಣಾ ಖಾಯ್ದೆ 1980’ರ ಅಡಿಯಲ್ಲಿ ಸರಕಾರದಿಂದ ಯಾವುದೇ ಆದೇಶ ಆಗಿರುವುದಿಲ್ಲ ಎಂದೂ ಹೇಳಲಾಗಿದೆ. ಸರಕಾರದ ಆದೇಶವಾಗದೇ ಈ ಜಮೀನನ್ನು ಹೇಗೆ ಗೋಶಾಲೆ ನಡೆಸಲು ನೀಡಲಾಗಿದೆ? ಯಾವುದೇ ಹಕ್ಕಿರುವುದಿಲ್ಲ ಎಂದು ಹೇಳಿಯೂ ಹಕ್ಕನ್ನು ಪಹಣಿ ಪತ್ರದಲ್ಲಿ ನಮೂದಿಸಿದ್ದು ಹೇಗೆ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಇಲ್ಲಿ ಅಕ್ರಮ ನಡೆದಿರುವ ಕಡೆಗೆ ಬೆರಳು ತೋರಿಸುತ್ತಿವೆ.

dharmastala-kokkada

ದಾಖಲಾದ ದೂರು:

ಸಂಸ್ಥೆಗೆ ಕಾಯ್ದಿರುಸುವಿಕೆ, ಮಂಜೂರಾತಿ ಆದೇಶವಾಗಿರದೆ ಗೋಶಾಲೆ ನಡೆಸಲು ಅನುಮತಿ ನೀಡಿ, ಆರ್.ಟಿ.ಸಿಯಲ್ಲಿ ಹಕ್ಕುಗಳ ಅಡಿಯಲ್ಲಿ ಉಲ್ಲೇಖ ಮಾಡಿರುವುದರ ವಿರುದ್ಧ ರಂಜನ್ ರಾವ್ ಯರ್ಡೂರು ಎಂಬುವವರು ಪುತ್ತೂರು ಸಹಾಯಕ ಆಯುಕ್ತರಿಗೆ ದಿನಾಂಕ 07-07-2015ರಂದು ದೂರು ಸಲ್ಲಿಸಿದ್ದಾರೆ. ‘ಗೋಮಾಳವಾಗಿಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿ ಗೋಶಾಲೆ ತೆರೆಯಲಾಗಿದೆ. ಗೋಶಾಲೆಗೂ ಗೋಮಾಳಕ್ಕೂ ವ್ಯತ್ಯಾಸವಿದೆ. ಎರಡೂ ಒಂದೇ ಅಲ್ಲ’ ಎಂಬುದನ್ನು ಉಲ್ಲೇಖಿಸಿ ಅವರು ಪತ್ರ ಬರೆದಿದ್ದಾರೆ. ಇದಲ್ಲದೇ SKDRDP ಚಾರಿಟೇಬಲ್ ಸಂಸ್ಥೆಯಾಗಿದ್ದು ಕರ್ನಾಟಕ ಲ್ಯಾಂಡ್ ರಿಫಾರ್ಮ್ಸ್ ಆಕ್ಟ್ – 1961ರ ಸೆಕ್ಷನ್ 79- ಬಿ ಪ್ರಕಾರ ಯಾವುದೇ ಕೃಷಿ ಭೂಮಿಯನ್ನು ಪಡೆಯಲು ಅವಕಾಶವಿರುವುದಿಲ್ಲ. ಆದರೆ ಇಲ್ಲಿ ಅನುಮತಿ ಎಂದು ಹೇಳಿದ್ದೀರಿ. ‘ಅನುಮತಿ’ ಎಂದರೆ ಏನು? ಎಂದು ವಿವರಣೆ ಕೋರಿ ಪತ್ರ ಬರೆದಿದ್ದಾರೆ. ಈ ಕುರಿತು ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಬಳಿ ಕೇಳಿದಾಗ ಅವರು ಹೇಳಿದ್ದಿಷ್ಟು,

“ಈ ಬಗ್ಗೆ ವೆರಿಫೈ ಮಾಡಲು ತಹಶೀಲ್ದಾರಿಗೆ ಒಂದು ವಾರದ ಗಡುವು ನೀಡಿ ನೊಟೀಸ್ ಜಾರಿ ಮಾಡಿದ್ದೇನೆ. ಒಂದು ವಾರದೊಳಗೆ ರಿಪೋರ್ಟ್ ನೀಡದಿದ್ದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಹೇಳಿದ್ದೇನೆ. ವರದಿ ಬಂದ ನಂತರ ನಾನೇ ಖುದ್ದಾಗಿ ಸ್ಥಳಪರಿಶೀಲನೆ ಮಾಡುತ್ತೇನೆ” – ಕೆ.ವಿ ರಾಜೇಂದ್ರ, ಪುತ್ತೂರು ಸಹಾಯಕ ಆಯುಕ್ತರು.

ಆದರೆ ಈ ಬಗ್ಗೆ SKDRDP ನಿರ್ದೇಶಕ ಎಲ್.ಎಚ್ ಮಂಜುನಾಥ್ ಹೇಳುವುದೇ ಬೇರೆ, “ಇದು ಸರಕಾರಕ್ಕೆ ಬಿಟ್ಟ ವಿಚಾರ. ಇದರಲ್ಲಿ ನಮ್ಮದೇನೂ ಪಾತ್ರವಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಲ್ಲೊಂದು ಗೋಶಾಲೆ ನಡೆಸಿ ಎಂದು ವೀರೇಂದ್ರ ಹೆಗ್ಗಡಯವರಲ್ಲಿ ಕೇಳಿಕೊಂಡಿದ್ದರು. ಹೆಗ್ಗಡೆಯವರು ಪತ್ರ ಬರೆದರು, ಹಾಗೆ ಜಾಗ ಮಂಜೂರು ಮಾಡಿದರು. 2008ರಲ್ಲಿ ನಮಿಗೆ ಆ ಭೂಮಿ ಕೈಗೆ ಸಿಕ್ಕಾಗ ಬಂಜರು ಭೂಮಿಯಾಗಿತ್ತು. ಒಂದು ಹುಲ್ಲು ಕೂಡಾ ಇರಲಿಲ್ಲ. ಆದರೆ ಅದು ಇಂದು ನಂದನವನವಾಗಿದೆ. ಹುಲ್ಲು ಬೆಳೆಸಿದ್ದೇವೆ, ದನಗಳು ತಿನ್ನುವ ಎಲೆಗಳಿವೆ, ಪಶುಗಳನ್ನು ಆರೋಗ್ಯಕರವಾಗಿ  ನೋಡಿಕೊಂಡಿದ್ದೇವೆ. ನೈಸರ್ಗಿಕವಾಗಿ ಗರ್ಭಧಾರಣೆ ಮಾಡುತ್ತಿದ್ದೇವೆ. ನಮಗೆ ಕೃತಕ ಗರ್ಭಧಾರಣೆ ಮಾಡುವಂತೆ ಸರಕಾರ ಯಾವತ್ತೂ ಆದೇಶ ನೀಡಿಲ್ಲ. ನಮಗೆ ಏನು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಕಲ್ಪನೆ ಇದೆ. ಜಾಗಕ್ಕೆ ಬೇಲಿ ಹಾಕಿ ನಾವು ಅಲ್ಲಿ ಗೋಶಾಲೆ ನಡೆಸುತ್ತಿದ್ದೇವೆ. ಕಟ್ಟಡಗಳನ್ನು ಕಟ್ಟಿದ್ದೇವೆ. ಬೀಡಾಡಿ ದನಗಳನ್ನು ತಂದು ಸಾಕುತ್ತಿದ್ದೇವೆ. ಸರಕಾರದ ಯೋಜನೆಯೊಂದಕ್ಕೆ ಧರ್ಮಸ್ಥಳದ ವತಿಯಿಂದ ಹಣ ವಿನಿಯೋಗ ಮಾಡುತ್ತಿದ್ದೇವೆ. ಯಾವುದೇ ಲಾಭ ಮಾಡಿಕೊಳ್ಳುತ್ತಿಲ್ಲ. ಸರಕಾರ ಅದನ್ನು ಗೋಮಾಳವಾಗಿಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರೆ ನಮ್ಮ ಯಾವ ಅಭ್ಯಂತರವೂ ಇಲ್ಲ. ಸರಕಾರ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಮುಕ್ತವಾಗಿದೆ. ನಮಗೆ ಯಾವ ವಿರೋಧವೂ ಇಲ್ಲ. ಇದು ಸರಕಾರದ ಸಮಸ್ಯೆ. ನಮಗೂ ಇದಕ್ಕೂ ಸಂಬಂಧವಿಲ್ಲ,” ಎನ್ನುತ್ತಾರೆ ಅವರು.

ಸಾಂದರ್ಭಿಕ ಚಿತ್ರ

Top