An unconventional News Portal.

ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ‘ಪ್ರೇಮಿಗಳ ನಗರಿ’: ಪ್ಯಾರೀಸ್ ಬೀದಿಗಳಲ್ಲಿ ಸಾವಿರಾರು ಕಾರ್ಮಿಕರು

ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ‘ಪ್ರೇಮಿಗಳ ನಗರಿ’: ಪ್ಯಾರೀಸ್ ಬೀದಿಗಳಲ್ಲಿ ಸಾವಿರಾರು ಕಾರ್ಮಿಕರು

ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ಘೋಷಿಸಿದ ಬೆನ್ನಿಗೇ, ಸಾವಿರಾರು ಕಾರ್ಮಿಕರು ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಗರದಲ್ಲಿ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಬುಧವಾರಕ್ಕೆ ಮುಷ್ಕರ 6 ನೇ ದಿನಕ್ಕೆ ಕಾಲಿಟ್ಟಿದ್ದು, 55 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ಯಾರೀಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಗೆ ಕಾರ್ಮಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ. ಫ್ರಾನ್ಸ್ ಆಂತರಿಕ ಆಡಳಿತ ಸಚಿವಾಲಯದ ಪ್ರಕಾರ ಕಳೆದ ಒಂದು ವಾರದಿಂದೀಚೆಗೆ 1 ಸಾವಿರಕ್ಕೂ ಅಧಿಕ ಪ್ರತಿಭಟನಾನಿರತರನ್ನು ಬಂಧಿಸಲಾಗಿದೆ.
ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಅರ್ಧ ಲಕ್ಷ ಜನ ಪಾಲ್ಗೊಂಡಿದ್ದರು ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತಿವೆ. ಆದರೆ, ಅಧಿಕಾರಿಗಳು 12 ಸಾವಿರ ಕಾರ್ಮಿಕರು ಪಾಲ್ಗೊಂಡಿರಬಹುದು ಎಂದು ಅಂದಾಜಿಸಿವೆ.
ಪ್ರತಿಭಟನೆ ವೇಳೆ, ಕೆಲವು ಕಡೆಗಳಲ್ಲಿ ಪೊಲೀಸರು ಮತ್ತು ಕಾರ್ಮಿಕರ ನಡುವೆ ಘರ್ಷಣೆ ಉಂಟಾಗಿ, ಹಿಂಸಾಚಾರಕ್ಕೆ ತಿರುಗಿತ್ತು.

ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹಾಗೂ ದೇಶದ ಆರ್ಥಿಕತೆಯನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರುವುದು ಅನಿವಾರ್ಯ ಎಂದು ಫ್ರೆಂಚ್ ಸರಕಾರ ಹೇಳುತ್ತಿದೆ. ಕೆಲಸದ ಸಮಯದ ಮೇಲೆ ನಿಯಂತ್ರಣ ಹಾಗೂ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಹೊಸ ಕಾನೂನು ಸೂಚಿಸುತ್ತಿದೆ.

ಹೊಸ ಕಾನೂನಿನ ಕುರಿತು ಸ್ಥಳೀಯ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ ಮುಕ್ಕಾಲು ಪಾಲು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಹಕ್ಕುಗಳನ್ನು ಹೊಸ ಕಾನೂನು ಕಸಿದುಕೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ,, “ಏನೇ ಅಡೆತಡೆಗಳು ಬಂದರೂ ಕಾರ್ಮಿಕ ಕಾನೂನುಗಳಲ್ಲಿ ತರಲು ಹೊರಟಿರುವ ಬದಲಾವಣೆನ್ನು ತಡೆಯಲು ಸಾಧ್ಯವಿಲ್ಲ. ಬೀದಿಯಲ್ಲಿ ಬೇಕಾದರೂ ಚರ್ಚೆ ನಡೆಸಲಿ. ಆದರೆ ಅಂತಿಮವಾಗಿ ಕಾನೂನು ಜಾರಿಯಾಗಲಿದೆ,” ಎಂದು ಯುರೋಪ್ ಒನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ಕಳೆದ ಹಲವು ಸರಕಾರಗಳು ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸಿ ಸೋತಿವೆ. ಇದರಿಂದ ಫ್ರಾನ್ಸ್ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ,” ಎಂದು ಹೊಲಾಂಡೆ ಹೇಳಿದ್ದಾರೆ.

rise-up-night-protest-1

ತಿಂಗಳ ಹಿಂದೆ ಆಯೋಜಿಸಿದ್ದ ‘ಲಾ ನೈಟ್ ಡಿಬೌಟ್’ ಚಳವಳಿಯ ಸಂಗ್ರಹ ಚಿತ್ರ.

ಎರಡು ತಿಂಗಳ ಹಿಂದೆ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಸರಕಾರ ಪ್ರಕಟಿಸುತ್ತಿದ್ದಂತೆ ದೇಶಾದ್ಯಂತ ಯುವಕರ ನೇತೃತ್ವದಲ್ಲಿ ‘ಲಾ ನೈಟ್ ಡಿಬೌಟ್’ (ರೈಸ್ ಅಪ್ ನೈಟ್) ಹೆಸರಿನಲ್ಲಿ ಚಳವಳಿಯನ್ನು ಹುಟ್ಟುಹಾಕಲಾಯಿತು. ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. ಕಾರ್ಮಿಕ ಕಾನೂನು ಬದಲಾವಣೆಯಿಂದ ಅಸಮಾನತೆ ಇನ್ನಷ್ಟು ಹೆಚ್ಚಲಿದೆ ಎಂದು ಚಳವಳಿಕಾರರು ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.

ಈಗಾಗಲೇ  ಬೆಲ್ಜಿಯಂ, ಜರ್ಮನಿ ಹಾಗೂ ಸ್ಪೇನ್ ಮತ್ತಿತರ ಕಡೆಗಳಲ್ಲಿ ಚಳವಳಿ ವ್ಯಾಪಿಸಿದೆ. ಮುಂದಿನ ಒಂದು ವಾರದಲ್ಲಿ ಹೋರಾಟ ಇನ್ನಷ್ಟು ಬಿರುಸು ಪಡೆದುಕೊಳ್ಳಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೈಲ್ವೆ ಕಾರ್ಮಿಕರು, ಚಾಲಕರು ಹಾಗೂ ತೈಲ ಘಟಕಗಳ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಫ್ರೆಂಚ್ ದೇಶದಲ್ಲಿ ಎದ್ದಿರುವ ಕಾರ್ಮಿಕರ ಹೋರಾಟ ತಣ್ಣಗಾಗುವಂತೆ ಕಾಣಿಸುತ್ತಿಲ್ಲ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top