An unconventional News Portal.

ಫಲಿತಾಂಶದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ನೆನಪಾದ ದೇಶದ ಮೊದಲ ‘ಅಂಡರ್ ಬ್ರಿಡ್ಜ್’ ಶಾಲೆ!

ಫಲಿತಾಂಶದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ನೆನಪಾದ ದೇಶದ ಮೊದಲ ‘ಅಂಡರ್ ಬ್ರಿಡ್ಜ್’ ಶಾಲೆ!

ತಮ್ಮ ಕಿರಾಣಿ ಅಂಗಡಿಯನ್ನು ತೆರೆಯುವ ಮುನ್ನ, ಪ್ರತಿ ದಿನ ಬೆಳಗ್ಗೆ 46 ವರ್ಷದ ರಾಜೇಶ್ ಕುಮಾರ್ ಶರ್ಮಾ ದಿಲ್ಲಿಯ ಮೆಟ್ರೊ ಮೇಲ್ಸೇತುವೆ ಬಳಿ ಹೋಗುತ್ತಾರೆ. ಮೇಲ್ಸೇತುವೆ ಬಳಿ ಅಂದರೆ ಅದರ ಅಡಿಯಲ್ಲಿರುವ ಅವರ ಕನಸಿನ ತಾಣಕ್ಕೆ!

ಅಲ್ಲೊಂದು ಶಾಲೆ ನಡೆಯುತ್ತಿದೆ. ಶಾಲೆ ಎಂದರೆ ಕಟ್ಟಡವಿಲ್ಲ, ಗೋಡೆ ಇಲ್ಲ, ಆಟದ ಮೈದಾನವಿಲ್ಲ. ಅಲ್ಲಿ ಪ್ರತಿ ದಿನ ಸುಮಾರು 300 ಮಕ್ಕಳು, ಹೆಚ್ಚಾಗಿ ವಲಸೆ ಕಾರ್ಮಿಕರ ಕುಟುಂಬದ ಪುಟಾಣಿಗಳಿಗೆ ಶಿಕ್ಷಣ ಕಲಿಯುವ ಪುಟ್ಟ ಅವಕಾಶವೊಂದನ್ನು ಕಲ್ಪಿಸಲಾಗಿದೆ.

“ನಮ್ಮ ಈ ಶಾಲೆಗೆ ಈಗ ದಶಮಾನೋತ್ಸವದ ಸಂಭ್ರಮ. 2006ರಲ್ಲಿ ಇಲ್ಲಿ ಶಾಲೆ ಶುರು ಮಾಡಿದೆ,” ಎಂದು ಶಾಲೆ ಹುಟ್ಟಿದ ಬಗೆಯನ್ನು ರಾಜೇಶ್ ನಿರೂಪಿಸುತ್ತಾರೆ.

“ಬಡವರು ಎಂಬ ಒಂದೇ ಕಾರಣಕ್ಕೆ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ನೋಡಿಕೊಂಡು ಇರಲು ಸಾಧ್ಯವಿಲ್ಲ,” ಎನ್ನುತ್ತಾರೆ ಅವರು.

free-school-under-bridge-2

ಕಿರಾಣಿ ಅಂಗಡಿ ನಡೆಸುವ ರಾಜೇಶ್ ಈ ಶಾಲೆಯ ಜತೆಗೊಂದು ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.

“ನಾನು ಎಂಜಿನಿಯರ್ ಆಗಬೇಕು ಎಂಬ ಕನಸು ಇಟ್ಟುಕೊಂಡಿದ್ದೆ. ಆದರೆ, ಹಣಕಾಸಿನ ತೊಂದರೆಯಿಂದ ನನ್ನ ಕನಸು ನೆರವೇರಲಿಲ್ಲ. ಇಲ್ಲಿರುವ ಮಕ್ಕಳು ನನ್ನ ಕನಸನ್ನು ಜೀವಿಸುತ್ತಿದ್ದಾರೆ,” ಎನ್ನುತ್ತಾರೆ ಅವರು.

ಪ್ರತಿ ದಿನ ಈ ಶಾಲೆಯಲ್ಲಿ ಎರಡು ತರಗತಿಗಳು ನಡೆಯುತ್ತವೆ. ಬೆಳಗ್ಗೆ 2 ಗಂಟೆ ಬಾಲಕರಿಗೆ ಪಾಠ ಮಾಡುವ ರಾಜೇಶ್, ಮಧ್ಯಾಹ್ನ 120ಕ್ಕೂ ಹೆಚ್ಚು ಬಾಲಕಿಯರಿಗೆ ಶಿಕ್ಷಣ ನೀಡುತ್ತಾರೆ.

ಇಲ್ಲಿರುವ ಬಹುತೇಕ ಮಕ್ಕಳು ಹತ್ತಿರದ ಸರಕಾರಿ ಶಾಲೆಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಂತವರಿಗೆ ಇಂಗ್ಲಿಷ್, ಹಿಂದಿ, ವಿಜ್ಞಾನ, ಇತಿಹಾಸ, ಭೂಗೋಳ ಹೀಗೆ ಹಲವು ವಿಷಯಗಳ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ. ಇದೊಂದು ರೀತಿಯಲ್ಲಿ, ಅವರ ಪಾಲಿಗೆ ಮನೆ ಪಾಠವಿದ್ದಂತೆ.

“ಇಲ್ಲಿರುವ ಮಕ್ಕಳಿಗೆ ಸರಕಾರಿ ಶಾಲೆಗೆ ಸೇರುವಂತೆ ನಾನು ಒತ್ತಾಯಿಸುತ್ತೇನೆ. ಆ ಮೂಲಕವಾದರೂ ಅವರಿಗೆ ಉಚಿತ ಊಟ ಸಿಗುತ್ತದೆ,” ಎನ್ನುತ್ತಾರೆ ರಾಜೇಶ್.

free-school-under-bridge-3

ರಾಜೇಶ್ ಕನಸಿನ ಶಾಲೆಗೆ ಬರುವ ಮಕ್ಕಳು ತಮ್ಮ ಛಾಯೆಯನ್ನು ಇಲ್ಲಿಯೇ ಉಳಿಸಿ ಹೋಗಿದ್ದಾರೆ. ಮೆಟ್ರೊ ಮೇಲ್ಸೇತುವೆ ಪಿಲ್ಲರ್ಗಳ ಮೇಲೆ ಅವರು ಬಿಡಿಸಿರುವ ಚಿತ್ರಗಳು ಅದಕ್ಕೆ ಸಾಕ್ಷಿ. ಶಾಲೆಯಲ್ಲಿ ಮಕ್ಕಳು ಕುಳಿತುಕೊಳ್ಳಲು ಕೆಲವರು ಮ್ಯಾಟ್ಗಳನ್ನು ದಾನ ನೀಡಿದ್ದಾರೆ. ಹಾಜರಾತಿ ಪುಸ್ತಕ ಮತ್ತಿತರ ಪರಿಕರಗಳನ್ನು ಇಟ್ಟುಕೊಳ್ಳಲು ಎರಡು ಸ್ಟೀಲ್ ಟ್ರಂಕ್ಗಳಿವೆ. ಶಾಲೆ ಆರಂಭವಾಗುವ ಮುನ್ನ ಪ್ರತಿ ದಿನ ಬೆಳಗ್ಗೆ ಮಕ್ಕಳು ಜಾಗವನ್ನು ಗುಡಿಸಿ, ಸ್ವಚ್ಚಗೊಳಿಸಿ ಇಡುತ್ತಾರೆ. ರಾಜೇಶ್ ಜತೆ ಇನ್ನೂ ಹಲವರು ಇಲ್ಲಿ ಬಂದು ಪಾಠ ಮಾಡುತ್ತಾರೆ.

ಅವರಲ್ಲಿ ಲಕ್ಷ್ಮಿ ಚಂದರ್ ಕೂಡ ಒಬ್ಬರು. ಗಣಿತವನ್ನು ಬೋಧಿಸುವ ಅವರು, “2011ರಿಂದ ಇಲ್ಲಿನ ಮಕ್ಕಳಿಗೆ ಪಾಠ ಮಾಡಲು ಶುರುಮಾಡಿದೆ. ಇದೀಗ ನನ್ನ ಮನೆಯಂತೆಯೇ ಆಗಿ ಹೋಗಿದೆ,” ಎನ್ನುತ್ತಾರೆ ಅವರು.

ಸಮಾಜಕ್ಕೆ ನಾನೇನು ಕೊಟ್ಟೆ ಎಂದು ಕೇಳಿಕೊಳ್ಳುವುದಷ್ಟೆ ಕಾಳಜಿ ಅನ್ನಿಸಿಕೊಳ್ಳುವುದಿಲ್ಲ. ಕೊಡುವುದಕ್ಕೆ ಹೇಗೆಲ್ಲಾ ದಾರಿಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ರಾಜೇಶ್ ಹಾಗೂ ಅವರ ಜತೆಗಾರರು ಮಾದರಿಯಾಗಿ ನಿಲ್ಲುತ್ತಾರೆ. ಎಸ್ಎಸ್ಎಲ್ಸಿ ಫಲಿತಾಂಶನ್ನು ಸಂಭ್ರಮಿಸುವ ಸಮಯದಲ್ಲಿ ನೆನಪಾದ ಶಾಲೆಯ ಕತೆ ಇದು.

free-school-under-bridge-4

ಕೃಪೆ: ಆಲ್ ಜಝೀರಾ

Top