An unconventional News Portal.

‘ದಿ ಸ್ಟೋರಿ ಆಫ್ ಸಮಾಚಾರ’: ಸ್ವತಂತ್ರ ಮಾಧ್ಯಮ ಕಟ್ಟುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ; ಧನ್ಯವಾದಗಳು!

‘ದಿ ಸ್ಟೋರಿ ಆಫ್ ಸಮಾಚಾರ’: ಸ್ವತಂತ್ರ ಮಾಧ್ಯಮ ಕಟ್ಟುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ; ಧನ್ಯವಾದಗಳು!

ಅದು 2016ರ ಜನವರಿ ತಿಂಗಳು. ಅಷ್ಟೊತ್ತಿಗಾಗಲೇ ಕರ್ನಾಟಕದ ಸಾಕಷ್ಟು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಮಿಂದೆದ್ದ ಒಂದು ಚಿಕ್ಕ ಪತ್ರಕರ್ತರ ತಂಡಕ್ಕೆ ‘ಸ್ವಾತಂತ್ರ್ಯ’ದ ಮಹತ್ವ ಅರಿವಿಗೆ ಬಂದಿತ್ತು. ಮಾಧ್ಯಮಗಳು ರಾಜಕೀಯ ವ್ಯಕ್ತಿಗಳಿಂದ, ಪಕ್ಷಗಳಿಂದ, ಕಾರ್ಪೊರೇಟ್ ರಂಗದಿಂದ, ಉದ್ಯಮಿಗಳಿಂದ ಹೀಗೆ ನಾನಾ ಬಂಡವಾಳದ ಮೂಲಗಳಿಂದ ಮುಕ್ತವಾಗಿರಬೇಕು ಎಂದು ಅನ್ನಿಸಿತ್ತು. ಆದರೆ ಅದು ಆಶಯ ಮಾತ್ರ. ವಾಸ್ತವದಲ್ಲಿ ಹಣವಿಲ್ಲದೆ, ಬಂಡವಾಳ ಹೂಡುವವರು ಇಲ್ಲದೆ ಮಾಧ್ಯಮ ನಡೆಸುವುದು ಸಾಧ್ಯವಾ? ಸಾಧ್ಯವಿದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ಇಳಿಸದೆ ಜನರನ್ನು ನಂಬಿಸುವುದು ಕಷ್ಟವಿತ್ತು.

ಅವತ್ತಿಗೆ ನಾವು ಹಾಕಿಕೊಂಡ ಈ ‘ಸ್ವತಂತ್ರ ಮಾಧ್ಯಮ’ ಯೋಜನೆಯನ್ನು ಸಾಕಷ್ಟು ಜನ ಕೇಳಿ ನಕ್ಕಿದ್ದರು. ಒಂದಷ್ಟು ಜನ ‘ಇವೆಲ್ಲಾ ವ್ಯರ್ಥ ಪ್ರಯತ್ನಗಳು’ ಎಂದು ನಯವಾಗಿಯೇ ಹೇಳಿದ್ದರು. ಕನ್ನಡದಲ್ಲಿ ‘ಮುಂಗಾರು’ ತರಹದ ಪತ್ರಿಕೋದ್ಯಮ ಪ್ರಯತ್ನಗಳ ಸೋಲುಗಳನ್ನು ನಮ್ಮ ಮುಂದಿಟ್ಟಿದ್ದರು. ಆದರೆ, ಇಂತಹ ಎಲ್ಲಾ ನಿರಾಶಾದಾಯಕ ಸ್ಥಿತಿಯಲ್ಲೂ ಆಶಾವಾದಿಗಳಾಗಿರಲು ನಮಗೆ ಹಲವು ಕಾರಣಗಳಿದ್ದವು. ಮಾಧ್ಯಮಗಳ ಮೂಲ ಸ್ವರೂಪದ ಬದಲಾಗುತ್ತಿದ್ದ ಕಾಲಘಟ್ಟದಲ್ಲಿ ನಾವಿದ್ದೆವು. ‘ಡಿಜಿಟಲ್ ಮೀಡಿಯಾ’ ಭವಿಷ್ಯದಲ್ಲಿ ಅಸ್ತ್ರವಾಗಬಲ್ಲದು ಎಂಬುದನ್ನು ಹಲವು ದೇಶಗಳಲ್ಲಿ ನಿರೂಪಿಸುವ ಕೆಲಸ ನಡೆದಿತ್ತು.

ಒಂದಷ್ಟು ಅಧ್ಯಯನ, ಅನುಭವದ ಪಾಠಗಳು ಹಾಗೂ ಹಲವರ ಸಲಹೆ ಸೂಚನೆಗಳನ್ನು ಜತೆಗಿಟ್ಟುಕೊಂಡು, ಅದೇ ವರ್ಷದ ಜನವರಿಯಲ್ಲಿ ರಾಜಧಾನಿಯ ವಿಲ್ಸನ್‌ ಗಾರ್ಡನ್‌ನ ಪುಟ್ಟ ಕೋಣೆಯೊಂದರಲ್ಲಿ ಕೆಲಸ ಶುರುಮಾಡಿದೆವು. ಅವತ್ತಿಗೆ ನಮ್ಮ ಬಳಿ ಇದ್ದದ್ದು ಒಂದು ಪೆಂಟಿಯಂ ಕ್ವಾರ್ಡ್‌ಕೋರ್ ಲ್ಯಾಪ್‌ಟಾಪ್‌ ಹಾಗೂ ಒಂದಷ್ಟು ಲಕ್ಷ ರೂಪಾಯಿಗಳ ಸೇವಿಂಗ್ಸ್ ಹಣ ಅಷ್ಟೆ. ಅದರಲ್ಲಿ ಸೃಷ್ಟಿಯಾಗಿದ್ದು ‘ಸಮಾಚಾರ’. 2016, ಏಪ್ರಿಲ್ ತಿಂಗಳ 2ನೇ ತಾರೀಖು ಕುಪ್ಪಳ್ಳಿಯ ಕವಿಮನೆಯಲ್ಲಿ ನಡೆದ ಕಳ್ಳತನದ ಕುರಿತ ತನಿಖಾ ವರದಿಯೊಂದರ ಮೂಲಕ ಕನ್ನಡದ ಅನ್‌ಕನ್ವೆಷನಲ್ ವೆಬ್‌ಸೈಟ್‌ ನಿಮ್ಮ ಓದಿನ ಖುಷಿಗೆ ಲಭ್ಯವಾಯಿತು.

ಮಾರ್ಚ್, 2016: ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕೆಲವು ಸಹೃದಯರಿಗಾಗಿ 'ಸಮಾಚಾರ'ದ ಫರ್ಸ್ಟ್ ಲುಕ್ ಬಿಡುಗಡೆ ಮಾಡಿದ ಸಂದರ್ಭ.

ಮಾರ್ಚ್, 2016: ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕೆಲವು ಸಹೃದಯರಿಗಾಗಿ ‘ಸಮಾಚಾರ’ದ ಫರ್ಸ್ಟ್ ಲುಕ್ ಬಿಡುಗಡೆ ಮಾಡಿದ ಸಂದರ್ಭ.

ಅವತ್ತಿಗೆ ಬರೆಯುತ್ತಿದ್ದವರು ಇಬ್ಬರೇ. ಒಂದಷ್ಟು ಜನ ಅಪರೂಪಕ್ಕೆ ನಮಗೆ ಕಾಂಟ್ರಿಬ್ಯೂಟ್ ಮಾಡುತ್ತಿದ್ದರು. ವರದಿಗಾರಿಕೆಯ ಕಸುವು ಹಾಗೂ ಕನಸು ಎರಡನ್ನೂ ಇಟ್ಟುಕೊಂಡ ನಮಗೆ ಸುದ್ದಿಗಳಿಗೆ ಸಮಸ್ಯೆಯಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಮಗೆ ಸಿಕ್ಕ ಯಾವುದೇ ಸುದ್ದಿಯನ್ನಾದರೂ ಅದರ ವಸ್ತುನಿಷ್ಠತೆಯನ್ನು ಪರೀಕ್ಷಿಸಿ ಪ್ರಕಟಿಸುವ ಸ್ವಾತಂತ್ರ್ಯವಿತ್ತು. ‘ದಿ ಸ್ಟೋರಿ ಆಫ್ ಕೆ. ಜೆ. ಜಾರ್ಜ್’, ‘ಧರ್ಮಸ್ಥಳದ ಮೀಟರ್ ಬಡ್ಡಿ ಮಾಫಿಯಾ’, ‘ಸಿದ್ದರಾಮಯ್ಯ ಬೆಲ್ಜಿಯಂ ವೀಸಾ’, ‘ಬಾಳಿಗ ಫೈಲ್ಸ್’ ಸೇರಿದಂತೆ ಸಾಲು ಸಾಲು ತನಿಖಾ ವರದಿಗಳು ಹೊರಬಂದವು. ಜತೆಗೆ, ಆಲೋಚನೆಗೆ ದೂಡುವಂತಹ ಸಾಕಷ್ಟು ಸಮಗ್ರ ವರದಿಗಳನ್ನು ನಿಮ್ಮ ಮುಂದಿಟ್ಟೆವು.

ಕಡಿಮೆ ಅವಧಿಯಲ್ಲಿಯೇ ಓದುಗರ ಗಮನವನ್ನು ಸೆಳೆದ ‘ಸಮಾಚಾರ’ವನ್ನು ಮುಂದೆ ತೆಗೆದುಕೊಂಡು ಹೋಗಲು ‘ಪೀಪಲ್ ಮೀಡಿಯಾ ಫೌಂಡೇಶನ್’ ರೂಪುಗೊಂಡಿತು. ಇಷ್ಟರ ನಡುವೆ ನಮ್ಮ ಬಳಿ ಇದ್ದ ಹಣ ಖಾಲಿ ಆಗಿತ್ತು. ಒಂದಷ್ಟು ಸಾಲ ಮಾಡಿದೆವಾದರೂ, ಹೆಚ್ಚು ದಿನ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿತ್ತು.  ನಾವು ಇಂತಹದೊಂದು ಸನ್ನಿವೇಶಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೆವು ಕೂಡ. ‘ಪ್ಲಾನ್‌- ಬಿ’ ಜಾರಿಗೆ ಬಂತು. ಒಂದಷ್ಟು ಜನ ಅವರ ಮಾಸಿಕ ಸಂಬಳದಲ್ಲಿ ನಮಗಾಗಿಯೇ ಚಿಕ್ಕ ಮೊತ್ತವನ್ನು ನೀಡಲು ಶುರುಮಾಡಿದರು. ನಾವುಗಳೂ ಕೂಡ ಹಣಕ್ಕಾಗಿ ಹೊರಗೆ ಕೆಲಸ ಮಾಡತೊಡಗಿದೆವು. ಓದುಗರೂ ಕೂಡ ಒಂದು ಚಿಕ್ಕ ಮೊತ್ತವನ್ನು ಕೈಗಿತ್ತು; ಒಳ್ಳೆಯದಾಗಲಿ ಎಂದು ಹರಿಸಿದರು. ಹೇಗೋ ‘ಸಮಾಚಾರ’ ಜೀವಂತವಾಗಿ ಹೊರಗೆ ಕಾಣಿಸುತ್ತಿತ್ತು. ಈ ಸಮಯದಲ್ಲಿ ಒಂದಷ್ಟು ದಿನ ಸುಮ್ಮನಾದರೆ, ‘ಯಾವುದೋ ದೊಡ್ಡ ಸ್ಟೋರಿ ಹಿಂದೆ ಬಿದ್ದ ಹಾಗಿದೆ’ ಎಂದು ಸ್ನೇಹಿತರು ನೀಡುತ್ತಿದ್ದ ಹುಸಿ ಹುರುಪೇ ಜೀವಾಳವಾಗಿತ್ತು. ಈ ನಡುವೆ, ನಮ್ಮ ಗಮನಕ್ಕೆ ಬಂದಿದ್ದು ‘ಇಂಡಿಪೆಂಡೆಂಟ್ ಅಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್’ (ಐಪಿಎಸ್‌ಎಂಎಫ್‌).

ಬೆಂಗಳೂರು ಮೂಲದ ‘ಐಪಿಎಸ್‌ಎಂಎಫ್‌’ ಶುರುವಾಗಿದ್ದು 2015ರಲ್ಲಿ. 2016ರಲ್ಲಿ ಅವರು ‘ದಿ ವೈರ್’, ‘ಗಾಂವ್ ಕನೆಕ್ಷನ್’, ‘ಇಂಡಿಯಾ ಸ್ಪೆಂಡ್’ನಂತಹ ಡಿಜಿಟಲ್ ಪತ್ರಿಕೋದ್ಯಮದ ಪ್ರಯತ್ನಗಳಿಗೆ ದೇಣಿಗೆ ರೂಪದಲ್ಲಿ ಹಣ ನೀಡಿದ್ದರು. ‘ಸಮಾಚಾರ’ ಕೂಡ 2016ರ ಕೊನೆಯಲ್ಲಿ ‘ಐಪಿಎಸ್‌ಎಂಎಫ್‌’ ಮುಂದೆ ದೇಣಿಗೆಗಾಗಿ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಜತೆಯಲ್ಲಿದ್ದ ಶ್ರೇಯಸ್ ಹಾಗೂ ಸಚ್ಚು ಹೇಳತೊಡಗಿದರು. ಹಾಗೆ, ಒಂದು ದೂರದ ನಿರೀಕ್ಷೆಯನ್ನಿಟ್ಟುಕೊಂಡು ಮೊದಲ ಬಾರಿಗೆ ದೊಡ್ಡ ಮೊತ್ತಕ್ಕಾಗಿ ‘ಸಮಾಚಾರ’ ಕೈಚಾಚಿತು. 4-5 ತಿಂಗಳು ನಡೆದ ಪ್ರಕ್ರಿಯೆ, ಪರೀಕ್ಷೆಗಳ ನಂತರ 2017ರ ಮೇ ತಿಂಗಳಿಗೆ ‘ಐಪಿಎಸ್‌ಎಂಎಫ್‌’ ಬೋರ್ಡ್‌ ಕನ್ನಡದ ವೆಬ್‌ ಮೀಡಿಯಾದ ಪ್ರಯತ್ನಕ್ಕೂ ದೇಣಿಗೆ ನೀಡಲು ಒಪ್ಪಿಗೆ ಸೂಚಿಸಿತು. ಈ ಮೂಲಕ ‘ಐಪಿಎಸ್‌ಎಂಎಫ್‌’ನ ಪಟ್ಟಿಯಲ್ಲಿ ಕನ್ನಡದ ಮೊದಲ ವೆಬ್‌ಸೈಟ್‌ ಆಗಿ ‘ಸಮಾಚಾರ’ವೂ ಸೇರಿಕೊಂಡಿತು.

ಕೃಪೆ: ಐಪಿಎಸ್‌ಎಂಎಫ್‌.

ಕೃಪೆ: ಐಪಿಎಸ್‌ಎಂಎಫ್‌.

ಅದರ ಬೆನ್ನಲ್ಲೇ ‘ಆದಾಯ ತೆರಿಗೆ ಇಲಾಖೆ’ಯಿಂದ ತೆರಿಗೆ ವಿನಾಯಿತಿಯ ಒಂದು ಪತ್ರದ ಅಗತ್ಯವೂ ಬಿತ್ತು. ಅದು ಮತ್ತೊಂದು ಸುತ್ತಿನ ಹೋರಾಟ. ಒಂದು ರೂಪಾಯಿ ಕೂಡ ಲಂಚ ನೀಡುವ ಪರಿಸ್ಥಿತಿಯಲ್ಲಿ ನಾವಿರಲಿಲ್ಲ. ಕಳೆದ ಸೆಪ್ಟೆಂಬರ್ ಹೊತ್ತಿಗೆ ಸತತ ಪ್ರಯತ್ನದ ನಂತರ, ಆದಾಯ ತೆರಿಗೆ ಇಲಾಖೆ ನಮ್ಮೆಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿ ವಿನಾಯಿತಿಯನ್ನು ನೀಡಿತು. ಈ ಸಮಯದಲ್ಲಿ ಒಂದಷ್ಟು ಸಹೃದಯರು ನಮ್ಮ ಜತೆಗೆ ನಿಂತರು ಕೂಡ.

ಇದೀಗ, ‘ಪೀಪಲ್ ಮೀಡಿಯಾ ಫೌಂಡೇಶನ್’ ಬಳಿ ‘ಸಮಾಚಾರ’ದ ಸಂಪಾದಕೀಯ ವಿಭಾಗದ ನಿರ್ವಹಣೆಗೆ ಹಣ ಇದೆ. ‘ಐಪಿಎಸ್‌ಎಂಎಫ್‌’ ಯಾವುದೇ ನಿರ್ಬಂಧವೂ ಇಲ್ಲದೆ ದೇಣಿಗೆ ನೀಡಿದೆ. ‘ಕನ್ನಡದಲ್ಲಿ ಗುಣಮಟ್ಟದ, ಸ್ವತಂತ್ರ ಡಿಜಿಟಲ್ ಪತ್ರಿಕೋದ್ಯಮ ಕಟ್ಟಿ’ ಎಂಬುದಷ್ಟೆ ಅವರು ನಮ್ಮ ಜತೆ ಮಾಡಿಕೊಂಡಿರುವ ‘ಅಗ್ರಿಮೆಂಟ್’. ಇದರ ಜತೆಗೆ ಇನ್ನೊಂದಿಷ್ಟು ಹಣವನ್ನು ನಾವು ಓದುಗರಿಂದಲೂ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಬೇಕಿದೆ.

ಇದನ್ನು ಹೊರತುಪಡಿಸಿದರೆ, ‘ಸ್ವತಂತ್ರ ಮಾಧ್ಯಮ’ವನ್ನು ಕಟ್ಟುವ ಮೊದಲ ಹಂತವನ್ನು ನಾವು ಯಶಸ್ವಿಯಾಗಿ ಮುಗಿಸಿದ್ದೇವೆ. ಇನ್ನೇನಿದ್ದರೂ ಮುಂದಿನ ಹಂತಕ್ಕೆ ಜಿಗಿಯುವ ನಿಟ್ಟಿನಲ್ಲಿ ಆಲೋಚನೆ ಮಾಡುವುದು ಅಷ್ಟೆ. 

ನಿಧಾನವಾಗಿ ಹೆಜ್ಜೆಯ ಮೇಲೊಂದು ಪುಟ್ಟ ಹೆಜ್ಜೆಯನ್ನು ಇಟ್ಟುಕೊಂಡು ಈವರೆಗೂ ಬಂದ ‘ಸಮಾಚಾರ’ಕ್ಕೆ ಪೂರ್ಣಾವಧಿಯಲ್ಲಿ ಕೆಲಸ ಮಾಡಲು ಪತ್ರಿಕೋದ್ಯಮದ ಬಗೆಗೆ ಪ್ಯಾಶನ್ ಇಟ್ಟುಕೊಂಡವರ ಅಗತ್ಯವಿದೆ. ಈ ಕುರಿತು ನಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಒಂದು ಪ್ರಕಟಣೆಯನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹೊರಗಿನವರಿಂದಲೂ ವರದಿಗಳನ್ನು, ಲೇಖನಗಳನ್ನು ತೆಗೆದುಕೊಳ್ಳುವ ಯೋಜನೆ ಇದೆ. ಆ ಕುರಿತು ವಿಸ್ತೃತವಾಗಿ ಮುಂದಿನ ದಿನಗಳಲ್ಲಿ ಇಲ್ಲಿಯೇ ಮಾಹಿತಿ ನೀಡಲಿದ್ದೇವೆ. ಆಸಕ್ತರು ಸಂಪರ್ಕಿಸಿ.

ಅಂದಹಾಗೆ, ಕೆಲವು ವರ್ಷಗಳ ಹಿಂದೆ ಲ್ಯಾಟಿನ್ ಅಮೆರಿಕಾದ ‘El Faro‘, ‘ La Silla Vacia‘, ‘Lado B‘, ‘Efecto Cocuyo‘ ತರಹದ ಡಿಜಿಟಲ್ ಮಾಧ್ಯಮಗಳ ಬಗ್ಗೆ ಓದಿ ನಾವು ಪ್ರೇರಣೆಗೊಂಡಿದ್ದೆವು. ಇದೀಗ ಅಂತಹದೊಂದು ಪ್ರಯತ್ನವನ್ನು ಕನ್ನಡದಲ್ಲಿ, ಕರ್ನಾಟಕದಲ್ಲಿ ನಿಜವಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದ್ದೇವೆ. ಈ ಅವಧಿಯಲ್ಲಿ ಆಗಿರುವ ಅನುಭವಗಳು, ಡಿಜಿಟಲ್ ಪತ್ರಿಕೋದ್ಯಮ ಎಂದರೆ ನಿಜಕ್ಕೂ ಏನು?, ಪತ್ರಿಕೋದ್ಯಮದಲ್ಲಿ ಹೂಡಿಕೆಗಳಿಂದ ಮುಕ್ತವಾದರೆ ಸಿಗುವ ಸ್ವಾತಂತ್ರ್ಯದ ಸವಿ ಎಂತದ್ದು? ಎಂಬುದನ್ನು ನಮಗೆ ಬೇರೆಯದೇ ಆಯಾಮದಲ್ಲಿ ಪರಿಚಯವನ್ನು ಮಾಡಿಕೊಟ್ಟಿವೆ. ಇವೆಲ್ಲವನ್ನೂ ಮುಂದಿನ ದಿನಗಳಲ್ಲಿ ನಿಮ್ಮ ನಡುವೆಯೇ ಚರ್ಚೆಗೆ ತರಲಿದ್ದೇವೆ.

ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಸಮಯದಲ್ಲಿ ಇದಿಷ್ಟನ್ನು ನಮ್ಮ ಓದುಗರಾದ ನಿಮ್ಮ ಜತೆ ಹಂಚಿಕೊಳ್ಳಬೇಕಿತ್ತು. ಹೊಸ ವರ್ಷ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಒಳಿತನ್ನು ತರಲಿ. ನಾವೂ ಕೂಡ 2018ರಲ್ಲಿ ಇನ್ನಷ್ಟು ಗುಣಮಟ್ಟದ ಪತ್ರಿಕೋದ್ಯಮವನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ಮುಂದುವರಿಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಸಲಹೆ- ಸೂಚನೆ ಹಾಗೂ ಟೀಕೆ- ಟಿಪ್ಪಣಿಗಳಿಗೆ ನಮ್ಮ ಈ ಪುಟ್ಟ ತಂಡ ಎದುರು ನೋಡುತ್ತಿದೆ.

‘ಸಮಾಚಾರ’ದ ಪರವಾಗಿ,

ಪ್ರಶಾಂತ್ ಹುಲ್ಕೋಡು. 

Leave a comment

Top