An unconventional News Portal.

‘ಯುಪಿ ಎಫೆಕ್ಟ್’: ಸಾಲ ಮನ್ನಾ ಮಾಡಲು ಆಗ್ರಹ; ರೈತರ ಮೇಲೆ ಅರೆ ಸೇನಾಪಡೆ ಫೈರಿಂಗ್

‘ಯುಪಿ ಎಫೆಕ್ಟ್’: ಸಾಲ ಮನ್ನಾ ಮಾಡಲು ಆಗ್ರಹ; ರೈತರ ಮೇಲೆ ಅರೆ ಸೇನಾಪಡೆ ಫೈರಿಂಗ್

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆಸಿದ ಗೋಲಿಬಾರ್‌ಗೆ  ರೈತರು ಐವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದಾರೆ. ಮಂಗಳವಾರ ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾಗಿರುವ ಬೆಲೆ ಹಾಗೂ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ನಡೆದ ಫೈರಿಂಗ್ ಸಮಯದಲ್ಲಿ ಇಬ್ಬರು ರೈತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಆದರೆ ಪೊಲೀಸರಿಂದ ಗುಂಡಿನ ದಾಳಿ ನಡೆದಿಲ್ಲ ಎಂದು ರಾಜ್ಯ ಗೃಹ ಸಚಿನ ಭುಪೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲು ಸಿಆರ್‌ಪಿಎಫ್ ಅರೆಸೇನಾ ಪಡೆಯನ್ನು ನೇಮಕ ಮಾಡಲಾಗಿತ್ತು. ಅವರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ. ರೈತರು ಬಸ್‌ಗಳಿಗೆ ಬೆಂಕಿ ಹಚ್ಚಿದಾಗ, ನಿಯಂತ್ರಣ ಮಾಡಲು ಫೈರಿಂಗ್ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಪ್ರತಿಭಟನೆಯಲ್ಲಿ ಕೆಲವು ಗೂಂಡಾಗಳು ಪಾಲ್ಗೊಂಡಿದ್ದರು. ಅವರು ಹಿಂಸಾತ್ಮಕ ವಾತಾವರಣ ನಿರ್ಮಿಸಿದಾಗ ಘಟನೆ ನಡೆದಿದೆ,” ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಮಧ್ಯಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈರುಳ್ಳಿ ಹಾಗೂ ಬೇಳೆಗೆ ನ್ಯಾಯಯುತವಾಗಿರುವ ಬೆಲೆಯನ್ನು ನೀಡಬೇಕು. ಉತ್ತರ ಪ್ರದೇಶದ ಬಿಜೆಪಿ ಸರಕಾರದ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಮಧ್ಯ ಪ್ರದೇಶದಲ್ಲಿಯೂ ಬಿಜೆಪಿ ಆಡಳಿತ ನಡೆಸುತ್ತಿದೆ. “ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ರೈತರಿಗೆ 37 ರೂಪಾಯಿ ವೆಚ್ಚವಾಗುತ್ತಿದೆ. ಹೀಗಾಗಿ ಸರಕಾರ ಬೆಂಬಲ ಬೆಲೆಯ ಮೂಲಕ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿ ನೀಡಬೇಕು,” ಎಂದು ಪ್ರತಿಭಟನಾನಿರತರು ಆಗ್ರಹಿಸುತ್ತಿದ್ದಾರೆ.

ಮಂಗಳವಾರ ಬೆಳಗ್ಗೆಯಷ್ಟೆ ಮಂಡಸೌರ್ ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಸಿಂಗ್‌, “ಪರಿಸ್ಥಿತಿ ಹತೋಟಿಯಲ್ಲಿದೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅವರು ಹೇಳಿಕೆ ನೀಡದ ಕೆಲವೇ ಹೊತ್ತಿನಲ್ಲಿ ಫೈರಿಂಗ್ ನಡೆದಿದೆ. ಈ ನಡುವೆ ಇನ್ನೊಬ್ಬ ರೈತರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ವರದಿಗಳು ಹೇಳುತ್ತಿವೆಯಾದರೂ, ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.

ಕಳೆದ ವಾರ ರೈತರ ಪ್ರತಿಭಟನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ್ ಮುನ್ನಡೆಸುತ್ತಿತ್ತು. ಭಾನುವಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜತೆ ಮಾತುಕತೆ ನಂತರ ಸಂಘ್ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿತ್ತು. ಆದರೆ ತಳಮಟ್ಟದಲ್ಲಿ ಹೋರಾಟ ಮಾಡುತ್ತಿದ್ದ ರೈತರ ಆಕ್ರೋಶ ಇನ್ನಷ್ಟು ಹೆಚ್ಚಾಗಿತ್ತು. ರಾಜ್ಯದ ನೀಮಚ್‌ ಪ್ರದೇಶದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು. ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಚೌಹಾಣ್, “ರೈತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಗುಡುಗಿದ್ದರು. ಅದಾದ ಮರುದಿನವೇ ನಡೆದಿರುವ ಫೈರಿಂಗ್‌ನಲ್ಲಿ ಐವರು ರೈತರು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಪ್ರಭಾವ: 

ರೈತರ ಪ್ರತಿಭಟನೆ ಮಧ್ಯಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿಯೂ ರೈತರು ಬೀದಿಗೆ ಇಳಿದಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಘೋಷಣೆ ನಂತರ ಈ ರಾಜ್ಯಗಳಲ್ಲಿಯೂ ಅದೇ ಮಾದರಿಯ ನಡೆಯನ್ನು ರೈತರು ಸರಕಾರಗಳಿಂದ ನಿರೀಕ್ಷೆ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂದೆ ಸಾಲ ಮನ್ನಾಕ್ಕಾಗಿ ಆಗ್ರಹಗಳು ಹೆಚ್ಚಿವೆ. ರೈತರು ಲೀಟರ್‌ಗಟ್ಟಲೆ ಹಾಲನ್ನು ಚೆಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಹಾರ ಪದಾರ್ಥಗಳನ್ನು ರಸ್ತೆಗಳಿಗೆ ಸುರಿಯಲಾಗಿದೆ. ಹೀಗಾಗಿ ರಾಜಧಾನಿ ಮುಂಬೈ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಹಾಲಿ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಪುಣೆಗೆ ತರಕಾರಿ ಮತ್ತು ಆಹಾರ ಪದಾರ್ಥಗಳ ಸರಬರಾಜು ನಿಂತು ಹೋಗಿದೆ ಎಂದು ವರದಿಗಳು ಹೇಳುತ್ತಿವೆ. ಮಹಾರಾಷ್ಟ್ರ ದೇಶದ ಎರಡನೇ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಜತೆಗೆ, ಸೋಯಾ, ಹತ್ತಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮುಂದಿದೆ.

ಕರ್ನಾಟಕದಲ್ಲಿಯೂ ರೈತರ ಸಾಲಮನ್ನಾಕ್ಕಾಗಿ ಆಗ್ರಹಗಳು ಸಣ್ಣಮಟ್ಟದಲ್ಲಿ ಕೇಳಿಬರುತ್ತಿವೆ. ಕೇಂದ್ರ ಸರಕಾರ ನೆರವು ನೀಡಿದರೆ ಸಾಲ ಮನ್ನಾ ಮಾಡಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ದಿಲ್ಲಿಯ ಪ್ರಧಾನಿ ನಿವಾಸದ ಮುಂದೆ ತಮಿಳುನಾಡು ರೈತರು ನಡೆಸಿದ ಪ್ರತಿಭಟನೆಯನ್ನು ಇಲ್ಲಿ ಸ್ಮರಿಸಬಹುದು.

Top