An unconventional News Portal.

ಕೊನೆಗೂ, ಮೃತದೇಹ ಆಸ್ಪತ್ರೆಯಿಂದ ಹೊರಬಂದಾಗ ಮಡುಗಟ್ಟಿದ ದುಃಖದ ಕಟ್ಟೆ ಒಡೆಯಿತು…

ಕೊನೆಗೂ, ಮೃತದೇಹ ಆಸ್ಪತ್ರೆಯಿಂದ ಹೊರಬಂದಾಗ ಮಡುಗಟ್ಟಿದ ದುಃಖದ ಕಟ್ಟೆ ಒಡೆಯಿತು…

“ಬಡವರಿಗೆ ಕಾಯಿಲೆ ಬರಬಾರದು. ಬಂದರೂ ಸಾವು ಬರಬಾರದು. ಸತ್ತರೂ ಇಂತಹ ಆಸ್ಪತ್ರೆಗಳಲ್ಲಿ ಸಾಯಬಾರದು…” ಹೀಗಂತ ಹೇಳುತ್ತಲೇ ಕಣ್ಣಿನಲ್ಲಿ ನೀರು ತುಂಬಿಕೊಳ್ಳಲು ಪ್ರಯತ್ನಿಸಿದರು ಕಂಪ್ಲಿ ಮೂಲದ ಮೆಹಬೂಬ್.

ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಕಚೇರಿಯ ಮುಂದೆ ನಿಂತಿದ್ದ ಅವರಲ್ಲಿ ಭಾವನೆಗಳೇ ಸತ್ತು ಹೋದಂತಿತ್ತು.  ಸತತ 40ಕ್ಕೂ ಹೆಚ್ಚು ಗಂಟೆಗಳ ಕಾಲ ಆಸ್ಪತ್ರೆ, ಪೊಲೀಸ್‌ ಠಾಣೆ ಸುತ್ತಾಟದಲ್ಲಿ ಮೃತಪಟ್ಟ ಪತ್ನಿಗಾಗಿ ಕಣ್ಣೀರು ಸುರಿಸಲು ಅವರ ಬಳಿ ಸಮಯ ಕೂಡ ಇರಲಿಲ್ಲ; ವಾತಾವರಣವೂ ಇರಲಿಲ್ಲ. ಆದರೂ ಹವಾನಿಯಂತ್ರಣ ಕೊಠಡಿಯ ಒಳಗೆ ಕುಳಿತಿದ್ದ ಅವರು, ಪತ್ನಿ ದೇಹವನ್ನು ನೀಡಲು ಸಿದ್ಧತೆಗಳು ಆರಂಭವಾಗುತ್ತಿದ್ದಂತೆ ದುಃಖದ ಮಡುವಿಗೆ ಜಾರತೊಡಗಿದರು.

ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂದೆ ಮೆಹಬೂಬ್‌ ಅವರ ಮಗಳು ತಬಸ್ಸುಮ್‌ ಹಾಗೂ ಪುತ್ರ ಸಮೀರ್ ಕೂಡ ತಾಯಿಯ ಸಾವಿನ ಶೋಕಕ್ಕಿಂತ ಹೆಣ ಸಿಕ್ಕರೆ ಸಾಕು ಎಂಬ ಭಾವ ಹೊತ್ತು ನಿಂತಿದ್ದರು. “ಅಮ್ಮ ಸತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಅತ್ತೆ. ಆಮೇಲೆ ಹೆಣ ಕೊಡೊಲ್ಲ ಅಂದರು. ಪೊಲೀಸ್‌ ಸ್ಟೇಷನ್ ಸುತ್ತಾಡಿಸಿದರು. ನಿನ್ನೆ ಬೆಳಗ್ಗೆಯಿಂದ ಏನೂ ತಿಂದಿಲ್ಲ. ರಾತ್ರಿ ರೈಲ್ವೆ ಸ್ಟೇಷನ್‌ನಲ್ಲಿ ಮಲಗಿಕೊಂಡು, ಬೆಳಗ್ಗೆ ಮತ್ತೆ ಇಲ್ಲಿಗೆ ಬಂದು ಕಾಯುತ್ತಿದ್ದೇವೆ,” ಎಂದು ಸಮೀರ್ ಶನಿವಾರ ಮುಂಜಾನೆಯಿಂದ ಭಾನುವಾರದ ಮಧ್ಯಾಹ್ನದವರೆಗೆ ನಡೆದ ಘಟನೆಗಳನ್ನು ವಿವರಿಸತೊಡಗಿದ. ಆತನಿಗೆ ಹೇಗಾದರೂ ಮಾಡಿ, ತಾಯಿ ಶವವನ್ನು ಕೊಟ್ಟರೆ ಸಾಕು ಎಂದು ಅನ್ನಿಸಿತ್ತು. ಹೆತ್ತಮ್ಮನ ಮರಣಕ್ಕೆ ಕಣ್ಣೀರು ಹಾಕಲು ಆಗದಷ್ಟು ಸುತ್ತಲಿನ ವಾತಾವರಣ ಆತನನ್ನು ಗಟ್ಟಿಗೊಳಿಸಿದಂತಿತ್ತು.

ನಿಯಮ ಉಲ್ಲಂಘನೆ: 

ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆ ಶಬೀರಾ ಪ್ರಕರಣದಲ್ಲಿ ಸರಕಾರದ ವಿಮಾ ಯೋಜನೆಯ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಭಾಗದಿಂದ ಬಂದ ಅವರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡುವ ವಿಚಾರದಲ್ಲಿಯೂ ತಪ್ಪೆಸಗಿದೆ. “ಸದ್ಯ ಲಭ್ಯ ಇರುವ ದಾಖಲೆಗಳ ಪ್ರಕಾರ, ಆಸ್ಪತ್ರೆಗೆ ಸಕಾಲದಲ್ಲಿ ದಾಖಲು ಮಾಡಿಕೊಳ್ಳದೆ ಅಗತ್ಯ ಆರೋಗ್ಯ ಸೇವೆಯಿಂದ ಶಬೀರಾ ವಂಚಿತರಾಗಿದ್ದಾರೆ. ಸರಕಾರದ ಆರೋಗ್ಯ ವಿಮೆ ಅಡಿಯಲ್ಲಿ ಶಬೀರಾ ಅವರಿಗೆ ಜುಲೈ. 5ರಂದು 20 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಸುಮಾರು 17 ಸಾವಿರ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ಸಿಟಿ ಸ್ಕ್ಯಾನ್ ಮಾಡಿಸಿದೆ. ಆದರೆ ಅವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿಲ್ಲ. ಇದೀಗ, ನಮ್ಮ ಆಸ್ಪತ್ರೆಯಲ್ಲಿ ರೋಗಿಯೇ ದಾಖಲಾಗಿರಲಿಲ್ಲ ಎಂದು ಕುಟುಂಬದ ಕಡೆಯಿಂದ ಬರೆಸಿಕೊಂಡಿದೆ,” ಎನ್ನುತ್ತಾರೆ ಜನಾರೋಗ್ಯ ಚಳವಳಿಯ ಡಾ. ಅಖಿಲಾ.

ಆರೋಗ್ಯ ವಿಮೆ ಅಡಿಯಲ್ಲಿ ಶಬೀರಾ ಅವರ ಚಿಕಿತ್ಸೆಗೆ ಬಿಡುಗಡೆಯಾದ 20 ಸಾವಿರ ರೂಪಾಯಿ ಮತ್ತು ಆಸ್ಪತ್ರೆಯ ದಾಖಲೆಗಳು.

ಆರೋಗ್ಯ ವಿಮೆ ಅಡಿಯಲ್ಲಿ ಶಬೀರಾ ಅವರ ಚಿಕಿತ್ಸೆಗೆ ಬಿಡುಗಡೆಯಾದ 20 ಸಾವಿರ ರೂಪಾಯಿ ಮತ್ತು ಆಸ್ಪತ್ರೆಯ ದಾಖಲೆಗಳು.

ಈ ದಾಖಲೆಗಳನ್ನು ಇಟ್ಟುಕೊಂಡು ಜನಾರೋಗ್ಯ ಚಳವಳಿ ಕಡೆಯಿಂದ ಆಸ್ಪತ್ರೆ ವಿರುದ್ಧ ದೂರು ದಾಖಲು ಮಾಡಲು ಸಿದ್ಧತೆ ನಡೆದಿದೆ.

ಸ್ವಾಮೀಜಿ ಫೋನ್ ಕಾಲ್:

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ‘ಸಮಾಚಾರ’ ವರದಿ ಪ್ರಕಟಿಸಿದ ನಂತರ ಅದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರ ಗಮನಕ್ಕೆ ಬಂದಿದೆ. ಅವರಿಂದ ಆಸ್ಪತ್ರೆಗೆ ಕರೆ ಹೋಗಿದೆ. “ಸ್ವಾಮೀಜಿ ಕರೆ ಮಾಡಿ, ಮೃತ ದೇಹ ನೀಡಲು ಕ್ರಮ ಕೈಗೊಳ್ಳಿ; ಅನಗತ್ಯವಾಗಿ ಸಮಸ್ಯೆ ಮಾಡಿಕೊಳ್ಳಬೇಡಿ,” ಎಂದು ಹೇಳಿದ್ದಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮೇಲುಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಯೊಬ್ಬರು ತಿಳಿಸಿದರು. ಆ ನಂತರವೇ, ಮೃತ ದೇಹವನ್ನು ಮೆಹಬೂಬ್ ಕುಟುಂಬಕ್ಕೆ ನೀಡಲು ಸಿದ್ಧತೆಗಳು ಆರಂಭಗೊಂಡವು. ಆದರೆ ಈ ಸಮಯದಲ್ಲಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಮೆಹಬೂಬ್ ಅವರ ಕಡೆಯಿಂದ ‘ಶಬೀರಾ ಆಸ್ಪತ್ರೆಯಲ್ಲಿ ದಾಖಲಾಗಿರಲೇ ಇಲ್ಲ’ ಎಂದು ಲಿಖಿತ ಹೇಳಿಕೆಯನ್ನು ಬರೆಸಿಕೊಳ್ಳಲಾಯಿತು.

ಕಟ್ಟೆ ಒಡೆದ ದುಃಖ:

ಸಂಜೆ 6 ಗಂಟೆ ಸುಮಾರಿಗೆ ಆಸ್ಪತ್ರೆಯ ಮಾರ್ಚರಿಯಿಂದ ಶಬೀರಾ ದೇಹವನ್ನು ಹೊರತರುತ್ತಿದ್ದಂತೆ ಅಲ್ಲೀವರೆಗೂ ಮಡುಗಟ್ಟಿದ್ದ ಕುಟುಂಬದ ದುಃಖದ ಕಟ್ಟೆ ಒಡೆಯಿತು. ಮಗಳು ತಬುಸ್ಸುಮ್ ತಾಯಿಯ ದೇಹದ ಮುಂದೆ ಕಣ್ಣೀರಾದಳು. “ನಮಗೂ ಕೂಡ ಯಾಕೆ ಆಸ್ಪತ್ರೆಯವರು ಹೆಣ ನೀಡದೆ ಸತಾಯಿಸಿದರು ಎಂದು ಗೊತ್ತಿಲ್ಲ. ಬಡವರು ಇಂತಹ ಜಾಗಕ್ಕೆ ಬಂದರೆ ಇಂತಹದ್ದೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ,” ಎಂದು ಆ್ಯಂಬುಲೆನ್ಸ್‌ ಸಿಬ್ಬಂದಿ ಕೂಡ ಕುಟುಂಬದ ಕಷ್ಟಕ್ಕೆ ಕಣ್ಣೀರಾದರು.

ಆಸ್ಪತ್ರೆಯಲ್ಲಿ ತಾಯಿಯ ಶವದ ಮುಂದೆ ಮಗಳು ತಬುಸ್ಸುಮ್..

ಆಸ್ಪತ್ರೆಯಲ್ಲಿ ತಾಯಿಯ ಶವದ ಮುಂದೆ ಮಗಳು ತಬುಸ್ಸುಮ್..

ಕುಟುಂಬಕ್ಕೆ ನೆರವು:

ಕಂಪ್ಲಿಯಲ್ಲಿ ಮೆಹಬೂಬ್ ಮೀನುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 100 ರೂಪಾಯಿ ದುಡಿಮೆಯಾದರೆ ಹೆಚ್ಚು. ಮಗ ಸಮೀರ್ ಮಾಲೂರಿನ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಿಗೆ 9 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಬಡ ಕುಟುಂಬದ ಮೆಹಬೂಬ್ ಪತ್ನಿ ಶಬೀರಾ ಕ್ಯಾನ್ಸರ್‌ ಕಾಯಿಲೆಗೆ ತುತ್ತಾದಾಗ ನೆರವಿಗೆ ಬಂದಿದ್ದು ಸರಕಾರದ ಆರೋಗ್ಯ ವಿಮಾ ಯೋಜನೆ. ಮೊದಲ ಬಾರಿ, 2012ರಲ್ಲಿ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ವಿಮೆ ಹಣದ ನೆರವಿನಿಂದ ಚಿಕಿತ್ಸೆ ನೀಡಲಾಗಿತ್ತು. ಎರಡನೇ ಬಾರಿ ಕೂಡ ವಿಮೆ ಹಣ ಬಿಡುಗಡೆಯಾಗಿತ್ತು. ಆದರೆ ವಿಮೆ ಹಣವನ್ನು ಬಳಸಿಕೊಂಡ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ. ಸಾಲದ್ದಕ್ಕೆ ಮೃತ ದೇಹವನ್ನು ನೀಡಲು 40 ಗಂಟೆ ಸತಾಯಿಸುವ ಕೆಲಸವೂ ನಡೆದಿದೆ.

ಕಂಪ್ಲಿಯಲ್ಲಿರುವ ಮಹಬೂಬ್ ಅವರ ಮನೆ.

ಕಂಪ್ಲಿಯಲ್ಲಿರುವ ಮಹಬೂಬ್ ಅವರ ಮನೆ.

ಬೆಂಗಳೂರಿನಿಂದ ಕಂಪ್ಲಿಗೆ ಹೆಣ ಸಾಗಿಸಲು ಆಂಬ್ಯುಲೆನ್ಸ್‌ಗೂ ಕುಟುಂಬದ ಬಳಿ ಹಣ ಇರಲಿಲ್ಲ. ಕೊನೆಗೆ, ಕಂಪ್ಲಿಯಲ್ಲಿಯೇ ಸಮುದಾಯದ ಕಡೆಯಿಂದ ಹಣದ ವ್ಯವಸ್ಥೆಯನ್ನು ಮಾಡಲಾಯಿತು.

 ಕಾಯ್ದೆಯ ಅನಿವಾರ್ಯತೆ: 

ರಾಜ್ಯ ಸರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ತಿದ್ದುಪಡಿ ಕಾಯ್ದೆಯೊಂದನ್ನು ತರುವ ಪ್ರಯತ್ನದಲ್ಲಿದೆ. ಬಡ ರೋಗಿಗಳ ರಕ್ಷಣೆಗೆ ಕಾಯ್ದೆಯ ಅಗತ್ಯತೆಯನ್ನು ಈ ಪ್ರಕರಣ ಮತ್ತೊಮ್ಮೆ ಸಾರಿ ಹೇಳುತ್ತಿದೆ. ಖಾಸಗಿ ಪಂಚತಾರಾ ಆಸ್ಪತ್ರೆಗಳಲ್ಲಿ ನಡೆಯುವ ಇಂತಹ ಪ್ರಕರಣಗಳು ಸುದ್ದಿಯಾಗುವುದು ಕಡಿಮೆ. “ಇದೇ ಪ್ರಕರಣ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಸರಕಾರಿ ಆರೋಗ್ಯ ಸೇವೆ ಸಂಪೂರ್ಣವಾಗಿ ರೋಗಗ್ರಸ್ಥವಾಗಿದೆ ಎಂಬ ಭ್ರಮೆ ಮೂಡಿಸುವ ಪ್ರಯತ್ನ ನಡೆಯುತ್ತಿತ್ತು. ಆದರೆ ಹಣದಾಹದ ಖಾಸಗಿ ಆಸ್ಪತ್ರೆಗಳ ಲಾಬಿಯ ಕಾರಣಕ್ಕೆ ಇಂತಹ ಪ್ರಕರಣಗಳು ನಡೆದರೂ ಸುದ್ದಿಯಾಗುವುದಿಲ್ಲ. ಇವರಿಗೆ ಕಾನೂನಿನ ಅಡಿಯಲ್ಲಿಯೇ ಪಾಠ ಕಲಿಸುವುದು ನಮ್ಮ ಮುಂದಿರುವ ದಾರಿ ಅಷ್ಟೆ,” ಎನ್ನುತ್ತಾರೆ ಡಾ. ಅಖಿಲಾ.

Leave a comment

Top