An unconventional News Portal.

FDA ಅಭ್ಯರ್ಥಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಅತ್ತ ಕೆಪಿಎಸ್ಸಿ ಕಾಯಕಲ್ಪ ಕಡೆಗಣನೆ!

FDA ಅಭ್ಯರ್ಥಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಅತ್ತ ಕೆಪಿಎಸ್ಸಿ ಕಾಯಕಲ್ಪ ಕಡೆಗಣನೆ!

FDA ಅಭ್ಯರ್ಥಿಗಳ ಹೋರಾಟ ನಿರ್ಣಾಯಕ ತಿರುವಿಗೆ ಬಂದು ಬಂದು ನಿಂತಿದೆ.

ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಸರಕಾರಿ ಉದ್ಯೋಗ ಆಕಾಂಕ್ಷಿಗಳು ಕೆಪಿಎಸ್ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ FDA ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾ ರೆಡ್ಡಿ, ಎಐಡಿಎಸ್ಓ ಸಂಘಟನೆಯ ಹರೀಶ್ ಮತ್ತಿತರರು ಪಾಲ್ಗೊಂಡು ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿದರು.

ಸಿಎಂ ಸ್ಪಂದನೆ:

ಪ್ರತಿಭಟನಾಕಾರರನ್ನು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸ್ವೀಕರಿಸಿದ್ದು ಈ ಪ್ರತಿಭಟನೆ ಹೈಲೈಟ್ಸ್. ಸಾಮಾನ್ಯವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಹೋರಾಟಗಳು ಸಂಬಂಧ ಪಟ್ಟ ಕೆಳಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮುಕ್ತಾಯಗೊಳ್ಳುತ್ತವೆ. ಹೋರಾಟ ಜೋರಾದರೆ ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ಸಚಿವರು ಮನವಿಗೆ ಕಿವಿಗೊಡುತ್ತಾರೆ.

ಆದರೆ FDA ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಆರಂಭಿಸಿದ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಸ್ಪಂದಿಸಿರುವುದು ವಿಶೇಷ. “ನಮ್ಮ ಹೋರಾಟ ಆರಂಭವಾಗುತ್ತಿದ್ದಂತೆ ಪೊಲೀಸರು ಐವರು ಪ್ರತಿನಿಧಿಗಳಿಗೆ ವಿಧಾನಸೌಧಕ್ಕೆ ಬರುವಂತೆ ತಿಳಿಸಿದರು. ಅಲ್ಲಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದೆವು. ಕೆಪಿಎಸ್ಸಿ ಕಾರ್ಯದರ್ಶಿ ಜತೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು,” ಎಂದು ಆಯೋಜಕ ನರೇಂದ್ರ ಬಾಬು ‘ಸಮಾಚಾರ’ಕ್ಕೆ ತಿಳಿಸಿದರು.

ಮುಂದೇನು?:

kpsc-3

FDA ಮರು ಪರೀಕ್ಷೆ ಹಾಗೂ ಈಗಾಗಲೇ ಕೆಪಿಎಸ್ಸಿ ಪ್ರಕಟಿಸಿರುವ ಸಂದರ್ಶನ ಆಯ್ಕೆ ಪಟ್ಟಿಯಲ್ಲಿ ಅವ್ಯವಹಾರ ಗುಮಾನಿ ಇದ್ದು, ತನಿಖೆಗೆ ಆಗ್ರಹಗಳು ಹೆಚ್ಚಿವೆ. “ಕೆಪಿಎಸ್ಸಿ ಪ್ರಕಟಿಸಿರುವ ಅರ್ಹತಾ ಪಟ್ಟಿಯಲ್ಲಿ ಒಂದೇ ಜಿಲ್ಲೆಯ ಅಭ್ಯರ್ಥಿಗಳೇ ಅಧಿಕವಾಗಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ರದ್ಧುಪಡಿಸಬೇಕು ಹಾಗೂ ಮರು ಪರೀಕ್ಷೆ ನಡೆಸಬೇಕು,” ಎಂದು ಸಂಘಟನೆಯ ಹರೀಶ್ ರೈ ತಿಳಿಸಿದರು.

“ಮಂಗಳವಾರ ವಕೀಲರೊಬ್ಬರು ನಮ್ಮ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಆಗಿರುವ ಅನ್ಯಾಯದ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಂಡಿದ್ದೇವೆ. ಜತೆಗೆ, ಸರಕಾರದ ತೀರ್ಮಾನಕ್ಕೂ ಕಾಯುತ್ತೇವೆ,” ಎಂಬುದು ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರಾದ ಶಂಕರ್ ಸಿಹಿಮೊಗೆಯವರ ಪ್ರತಿಕ್ರಿಯೆ.

ಕೆಪಿಎಸ್ಸಿ ಕರ್ಮಕಾಂಡ:

ಕೆಪಿಎಸ್ಸಿಗೆ ಖಾಲಿ ಇರುವ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳಿಗೆ ನೇಮಕಾತಿ ಮಾಡಿ ಮೇ. 18ರಂದೇ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಕಳಂಕಿತ ಅಧಿಕಾರಿ ಶಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ತರಲಾಗಿದೆ. ಸದಸ್ಯರಾಗಿ ಲಕ್ಷ್ಮಿ ನರಸಯ್ಯ ಹಾಗೂ ಸಯೀದ್ ಅಹಮದ್ ಖಾನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಈಗಾಗಲೇ ಹಗರಣಗಳಿಂದ ಹಳಿ ತಪ್ಪಿರುವ ಕೆಪಿಎಸ್ಸಿ ಪಾಲಿಗೆ ಇದು ಆಘಾತಕಾರಿ ಬೆಳವಣಿಗೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Top