An unconventional News Portal.

ತಡವಾಗಿ ಪ್ರಕಟವಾದ FDA ಫಲಿತಾಂಶ ಮತ್ತು ಆಯ್ಕೆ ಸುತ್ತ ಮೂಡಿದ ಅನುಮಾನಗಳು!

ತಡವಾಗಿ ಪ್ರಕಟವಾದ FDA ಫಲಿತಾಂಶ ಮತ್ತು ಆಯ್ಕೆ ಸುತ್ತ ಮೂಡಿದ ಅನುಮಾನಗಳು!

  • ಶಂಕರ್ ಸಿಹಿಮೊಗೆ

ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗೆ ನಡೆಸಿದ ಪರೀಕ್ಷೆಯ ಫಲಿತಾಂಶ ತಡವಾಗಿ, ಅಂದರೆ ಎಂಟು ತಿಂಗಳ ನಂತರ ಶುಕ್ರವಾರ ಪ್ರಕಟಗೊಂಡಿದೆ. ಇದರ ಬೆನ್ನಲ್ಲೆ ಆಯ್ಕೆ ಪಟ್ಟಿಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಈ ನಡುವೆ ದ್ವಿತೀಯ ಪಿ.ಯು.ಸಿ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳಾದ ಶಿವಕುಮಾರ್ ಮತ್ತು ಆತನ ಮಗ ಕಿರಣ್ ಸಿಐಡಿ ತನಿಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಹಿರಂಗ ಮಾಡಿರುವುದನ್ನು ಒಪ್ಪಿಕೊಂಡಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಸುದ್ದಿ ವಾಹಿನಗಳು ಈ ಕುರಿತು ವರದಿ ಬಿತ್ತರ ಮಾಡಿವೆ.

fda-exam-karnatakaಈ ಬಾರಿಯ FDA ಪರೀಕ್ಷೆ ಸಮಯದಲ್ಲಿಯೇ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಪರೀಕ್ಷಾ ಸಮಯವನ್ನು ಹಿಂದಿಗಿಂತ 30 ನಿಮಿಷ ಕಡಿತಗೊಳಿಸಲಾಗಿತ್ತು. ಮತ್ತು ಕಳೆದ ಬಾರಿಗಿಂತ ಹೆಚ್ಚು ಹುದ್ದೆಗಳಿಗಾಗಿ ಪರೀಕ್ಷೆ ನಡೆಸಲಾಗಿತ್ತು. ಕಳೆದಬಾರಿ 700+ ಹುದ್ದೆಗಳಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳ ‘1:1 ಕಟ್ ಆಫ್’ ಶೇ. 74% ನಿಂತಿತ್ತು. ಆದರೆ ಈ ಬಾರಿ ಹುದ್ದೆಗಳ ಸಂಖ್ಯೆ ಹೆಚ್ಚಿದ್ದರೂ, ಈ ಕಟ್ ಆಫ್ ಗರಿಷ್ಠ ಅಂಕಗಳಿಗೆ ನಿಂತಿದೆ. ದಾಖಲೆಗಳ ಪರಿಶೀಲನೆಗೆ 1:2 ಸಾಮಾನ್ಯ ವರ್ಗದವರಿಗೆ 156+ ಅಂಕಗಳಿಗೆ ಮತ್ತು ಮೀಸಲಾತಿ ಅಡಿ ಬರುವ ಅಭ್ಯರ್ಥಿಗಳ ಅಂಕಗಳು ಹಿಂದಿನ ಸಾಲಿಗಿಂತಲೂ ಗರಿಷ್ಠ ಅಂಕಗಳಿಗೆ ‘ಕಟ್ ಆಫ್’ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಓ.ಎಮ್.ಆರ್. ಸ್ಕ್ಯಾಂನಿಗ್ ಮಾಡಿ 3 ತಿಂಗಳಲ್ಲಿಯೇ ನೀಡಬಹುದಾದ ಫಲಿತಾಂಶವನ್ನು ಇಷ್ಟು ಸುಧೀರ್ಘಗಳ ಕಾಲ ತೆಗೆದುಕೊಂಡು ಫಲಿತಾಂಶ ನೀಡಿರುವುದು ಯಾಕೆ ಎಂಬ ಸಹಜ ಪ್ರಶ್ನೆ ಮೂಡುತ್ತಿದೆ. ಇದು ನೊಂದ ಅಭ್ಯರ್ಥಿಗಳು ಮುಂದಿಡುತ್ತಿರುವ ಪ್ರಶ್ನೆ.  ಜತೆಗೆ ಒಂದು ಹುದ್ದೆಗೆ ಇಂತಿಷ್ಟು ಹಣ ಎಂದು ಮಾರಾಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾವ ಸರಕಾರ ಬಂದರು ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟಾಚಾರದ ಆಡಳಿತವನ್ನು ಸರಿಮಾಡಲು ಸಾಧ್ಯವಾಗದು ಎಂಬ ಸ್ಥಿತಿ ಇದೆ. ಸಂವಿಧಾನವು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಪ್ರತಿ ವರ್ಷವು ಸಾಬೀತಾಗುತ್ತಿದೆ. ರಾಜ್ಯ ಸರಕಾರ ಕಳಕಿಂತ ಸದಸ್ಯರನ್ನು ಅಮಾನತು ಮಾಡಲು ಹೇಳಿದ್ದರು ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದಾರೆ. ಇದೆ ಕಳಕಿಂತ ಸದಸ್ಯರುಗಳು ಮುಂದುವರೆದಿರುವುದು ಈ ಸಾರಿಯ ದುರಂತ.

ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಗೆ ಫೋನು ಮಾಡಿದರು ಸರಿಯಾಗಿ ಮಾಹಿತಿ ನೀಡುವುದಿಲ್ಲ.
UPSC ಮಾದರಿ ಅನುಸರಿಸಬೇಕೆಂದು ಹೋಟಾ ಸಮಿತಿ ಹೇಳಿದ್ದರು KPSC ವೇಳಾಪಟ್ಟಿಯನ್ನು ಅನುಸರಿಸದೆ ತಮಗೆ ಮನಸಿಗೆ ಬಂದಾಗ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದು ಶಿವಮೊಗ್ಗದ ಅಭ್ಯರ್ಥಿಯೊಬ್ಬರ ಆಕ್ರೋಶದ ಮಾತುಗಳು.

ಈ ನಡುವೆ ಸಿ.ಐ.ಡಿ. ತನಿಖೆಯಲ್ಲಿ ಆರೋಪಿಗಳೇ ಖುದ್ದು ತಪ್ಪನ್ನು ಒಪ್ಪಿಕೊಂಡಿರುವುದರಿಂದ ಹಲವು ನಿಷ್ಠಾವಂತ ಅಭ್ಯರ್ಥಿಗಳು ಕೋರ್ಟಿಗೆ ಹೋಗಲು ನಿರ್ಧರಿಸಿದ್ದಾರೆ. ಜೊತೆಗೆ ಸಿಐಡಿ ಮುಖ್ಯಸ್ಥರಾದ ಕಿಶೋರ ಚಂದ್ರರಿಗೆ ಪತ್ರವನ್ನು ಬರೆದು ಸಾಕ್ಷಿ ನೀಡಲು ಮನವಿ ಮಾಡಿದ್ದಾರೆ. ಈ ಮೊದಲು ಹೈಕೋರ್ಟಿಗೆ PIL ಸಲ್ಲಿಸಲಾಗಿತ್ತಾದರು ಸರಿಯಾದ ಸಾಕ್ಷಿ ಇರದ ಕಾರಣ ಹೈಕೋರ್ಟು ಅರ್ಜಿ ವಜಾ ಮಾಡಿತ್ತು. ಈಗ ಖುದ್ದು ಆರೋಪಿಗಳೇ FDA ಪ್ರಶ್ನೆ ಪತ್ರಿಕೆಯನ್ನೂ ಸೋರಿಕೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿರುವುದರಿಂದ ನಿಷ್ಠಾವಂತ ಅಭ್ಯರ್ಥಿಗಳಿಗೆ ನ್ಯಾಯ ಸಿಗಬಹುದೆಂಬ ಭರವಸೆಯ ಚಿಗುರು ಮೊಳಕೆಯೊಡೆದಿದೆ. ಕಾನೂನು ಹೋರಾಟಕ್ಕೆ FDA ಅಭ್ಯರ್ಥಿಗಳು ಅಣಿಯಾಗುತ್ತಿದ್ದಾರೆ.

Top