An unconventional News Portal.

FDA ಮರುಪರೀಕ್ಷೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದಾಖಲೆಗಳಿಲ್ಲಎಂದ ಕೆಪಿಎಸ್ಸಿ

FDA ಮರುಪರೀಕ್ಷೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದಾಖಲೆಗಳಿಲ್ಲಎಂದ ಕೆಪಿಎಸ್ಸಿ

ವಿವಾದಕ್ಕೆ ಕಾರಣವಾಗಿರುವ FDA ಮರು ಪರೀಕ್ಷೆಗೆ ಆಗ್ರಹಿಸಿ ಜೂ. 8ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಅಭ್ಯರ್ಥಿಗಳು ತೀರ್ಮಾನಿಸಿದ್ದಾರೆ.

ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮನವಿಯನ್ನು ಸ್ವೀಕರಿಸಿದ್ದರು. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕಳೆದ ತಿಂಗಳು ಹೇಳಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ,” ಎಂದು ಮಾಹಿತಿ ನೀಡಿದರು.

ಈ ನಡುವೆ ಕೆಪಿಎಸ್ಸಿ ಎಸ್ಡಿಎ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ಎಫ್ಡಿಎ ಅಭ್ಯರ್ಥಿಗಳ ಪಟ್ಟಿಯನ್ನು ಅದು ಪ್ರಕಟಿಸಿತ್ತು.

ಸೋರಿಕೆ ಮಾಹಿತಿ:

ಕಳೆದ ತಿಂಗಳ ಮಧ್ಯದಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ತನಿಖೆ ನಡೆಸುತ್ತಿದ್ದ ಸಿಐಡಿ ಮುಂದೆ ಆರೋಪಿಗಳು ಎಫ್ಡಿಎ ಪ್ರಶ್ನೆ ಪತ್ರಿಕೆಗಳನ್ನೂ ಸೋರಿಕೆ ಮಾಡಿರುವ ಮಾಹಿತಿ ನೀಡಿದ್ದು ಬಹಿರಂಗವಾಗಿತ್ತು. ಈ ಕುರಿತು ತನಿಖೆ ನಡೆಸುವ ಅಧಿಕಾರ ಸಿಐಡಿಗೆ ಇಲ್ಲದಿದ್ದರೂ, ಸರಕಾರಕ್ಕೆ ಮಾಹಿತಿ ನೀಡಿತ್ತು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಎಫ್ಡಿಎ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದು. ಇದರ ನಡುವೆ ಕೆಪಿಎಸ್ಸಿ ಪ್ರಕಟಿಸಿದ್ದ ಎಫ್ಡಿಎ ಅರ್ಹತಾ ಪಟ್ಟಿಯಲ್ಲಿಯೂ ಲೋಪಗಳಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ‘ಕೆಪಿಎಸ್ಸಿ ಚಲೋ’ ಹಮ್ಮಿಕೊಳ್ಳಲಾಗಿತ್ತು. ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಭಟನೆ ನಡೆಸುತ್ತಿದ್ದ ಪ್ರತಿನಿಧಿಗಳನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಮಾಹಿತಿ ಪಡೆದುಕೊಂಡಿದ್ದರು.

ಕೆಪಿಎಸ್ಸಿ ಮಾಹಿತಿ:

ಎಫ್ಡಿಎ ಮರು ಪರೀಕ್ಷೆ ಸಂಬಂಧ ಸ್ವತಃ ಸಿಎಂ ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿ ಸರಕಾರದ ತೀರ್ಮಾನಕ್ಕೆ ಬದ್ಧವಾಗಿರಲು ಕೆಪಿಎಸ್ಸಿ ತೀರ್ಮಾನಿಸಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, “ಈವರೆಗೆ ಸರಕಾರದ ಕಡೆಯಿಂದ ಯಾವುದೇ ತೀರ್ಮಾನ ಬಂದಿಲ್ಲ. ನಮ್ಮಿಂದ ವರದಿ ಕೇಳಿದ್ದರು. ಅದನ್ನು ಕಳುಹಿಸಿ ಕೊಟ್ಟಿದ್ದೇವೆ. ಎಫ್ಡಿಎ ಪರೀಕ್ಷೆ ಪತ್ರಿಕೆಗಳು ಸೋರಿಕೆ ಸಂಬಂಧ ಯಾವುದೇ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಅದನ್ನೇ ವರದಿಯಲ್ಲಿ ತಿಳಿಸಲಾಗಿದೆ,” ಎಂದು ಆಯೋಗದ ಸದಸ್ಯರೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆಗೆ ಆಯೋಗದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಲಭ್ಯರಾಗಲಿಲ್ಲ.

ಪ್ರತಿಭಟನೆ ಕರೆ:

ಇದರ ನಡುವೆಯೇ ಅಭ್ಯರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಪ್ರತಿಭಟನೆಗೆ ಕರೆ ನೀಡಿದ ಸಂದೇಶಗಳು ಹರಿದಾಡುತ್ತಿವೆ. ಅದರ ಪೂರ್ಣ ಪಾಠ ಇಲ್ಲಿದೆ.

Kpsc FDA/SDA ಪರೀಕ್ಷಾ ಅಕ್ರಮದ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹ.

ಎಫ್.ಡಿ.ಎ. ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರವಾಗಿ
ಸಿ.ಐ.ಡಿ. ತನಿಖೆಯ ವರದಿಗಳು ಎಲ್ಲಾ ಮಾಧ್ಯಮಗಳಲ್ಲಿಯು ಬಿತ್ತರವಾಗಿದೆ ಮತ್ತು ರಾಜ್ಯಾದ್ಯಂತ ನೊಂದ ಅಭ್ಯರ್ಥಿಗಳು ಪ್ರತಿಭಟನೆ ಮಾಡಿ ಸ್ವತಃ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಸಹ ಕ್ರಮಕೈಗೊಳ್ಳದೆ ಇರುವುದನ್ನು ಖಂಡಿಸಿ ಇದೇ ದಿನಾಂಕ: 08/06/2016 ಬುಧವಾರ
ಸಮಯ: 11 ಘಂಟೆಯಿಂದ ನ್ಯಾಯ ಸಿಗುವವರೆಗೂ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾಡಲು ನಿರ್ಧರಿಸಲಾಗಿದೆ ಮತ್ತು ಈ ಉಪವಾಸ ಸತ್ಯಾಗ್ರಹದಲ್ಲಿ ಕರ್ನಾಟಕದ ಎಲ್ಲಾ 30 ಜಿಲ್ಲೆಯ ನೊಂದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

Top