An unconventional News Portal.

ಬ್ರದರ್’ಗಳು ಬಿಟ್ಟ ಬಾಣಕ್ಕೆ ಗೌಡರಿಗಾದ ಮರ್ಮಘಾತ ಮತ್ತು ಸ್ಥಳೀಯ ಪಕ್ಷವೊಂದರ ಅವಸಾನ!

ಬ್ರದರ್’ಗಳು ಬಿಟ್ಟ ಬಾಣಕ್ಕೆ ಗೌಡರಿಗಾದ ಮರ್ಮಘಾತ ಮತ್ತು ಸ್ಥಳೀಯ ಪಕ್ಷವೊಂದರ ಅವಸಾನ!

ಕುಟುಂಬದ ಯಜಮಾನರ ನಿರ್ಧಾರಗಳಲ್ಲಿನ ಗೊಂದಲ, ಮನೆ ಮಂದಿಗೆಲ್ಲಾ ಅಧಿಕಾರದ ಹಪಾಹಪಿ, ಅಪಾತ್ರರಿಗೆ ಮಣೆ ಹಾಕಿದ್ದಕ್ಕೆ ತೆರಬೇಕಾದ ದಂಡ, ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಜತೆಯಲ್ಲಿದ್ದವರಿಗೆ ಬಗೆದ ದ್ರೋಹ. ಇವುಗಳ ಜತೆಗೆ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂಬಂತೆ ರಾಜಕೀಯ ವಿರೋಧಿಗಳು ಹೆಣೆದ ರಣತಂತ್ರ…

ಫಲಿತಾಂಶ; ಅವಸಾನದ ಅಂಚಿನಲ್ಲಿ ಬಂದು ನಿಂತ ರೈತರ ಪರ, ಜಾತ್ಯಾತೀತ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಸ್ಥಳೀಯ ಪಕ್ಷ ಜಾತ್ಯಾತೀತ ಜನತಾದಳ.

ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಜಿ ಪ್ರಧಾನಿ ದೇವೇಗೌಡರ ಮುಖ ಹಿಂದೆಂದಿಗಿಂತಲೂ ಹೆಚ್ಚು ಕಪ್ಪಿಟ್ಟಿದೆ. ಅವರ ಹಿರಿಯ ಪುತ್ರ ರೇವಣ್ಣ ಅವರಲ್ಲಿ ಹಿಂದೆಂದೂ ಇಲ್ಲದ ಅಶಾಂತಿಯೊಂದು ಮೂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮ್ಮ ಮಗನ ಚಿತ್ರೀಕರಣದ ಹೆಸರಿನಲ್ಲಿ ವಿದೇಶಕ್ಕೆ ಹೊರಟು ಹೋಗಿದ್ದಾರೆ. ಇವತ್ತು ಪಕ್ಷಕ್ಕೆ ದ್ರೋಹ ಬಗೆದರು ಎಂದು ಎಂಟು ಜನ ಶಾಸಕರನ್ನು ಅಮಾನತ್ತುಗೊಳಿಸಿ, ಕಾಂಗ್ರೆಸ್ ವಿರುದ್ಧ ಏನೇ ಮಾತನಾಡಿದರೂ, ಪಕ್ಷದ ನೈತಿಕ ಬಲ ಕುಸಿದು ಹೋಗಿದೆ. ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಕನಿಷ್ಟ ಸೀಟುಗಳಿದ್ದರೆ ಸಾಕು, ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು ಆಟಾಡಿಸಬಹುದು ಎಂಬ ಲೆಕ್ಕಾಚಾರ ತಲೆ ಕೆಳಗಾಗಿ ಹೋಗಿದೆ. ಜೆಡಿಎಸ್ ನೋಡು ನೋಡುತ್ತಿದ್ದಂತೆ ಅವಸಾನದ ಅಂಚಿಗೆ ಬಂದು ನಿಂತಿದೆ. ಜನತಾ ಪರಿವಾರದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಪಕ್ಷವೊಂದು ಯಾಕೆ ಇಂತಹ ಪರಿಸ್ಥಿತಿಗೆ ಬಂದು ನಿಂತಿತು? ಇದಕ್ಕೆ ಹಲವು ಆಯಾಮಗಳಲ್ಲಿ ಉತ್ತರ ಲಭ್ಯವಿದೆ.

ಗೌಡರ ಗೊಂದಲಗಳು:

ಕರ್ನಾಟಕದ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಸಾಕ್ಷಿಯಾದ ಕೆಲವೇ ನಾಯಕರಲ್ಲಿ ದೇವೇಗೌಡರು ಒಬ್ಬರು. ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡವರು. ಇಂತವರು ತಮ್ಮದೇ ಪಕ್ಷದ ವಿಚಾರಕ್ಕೆ ಬಂದರೆ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೋತು ಹೋಗಿದ್ದಾರೆ ಎಂಬುದನ್ನು ಸದ್ಯದ ಜೆಡಿಎಸ್ ಪರಿಸ್ಥಿತಿಗಳು ಬಿಡಿಸಿಡುತ್ತಿವೆ. ಇದಕ್ಕೆ ಕಾರಣ, ಮತ್ತದೇ ದೊಡ್ಡ ಗೌಡರ ಪುತ್ರ ಪ್ರೇಮ.

ಪದ್ಮನಾಭನಗರದ ಮನೆಯನ್ನು ಹತ್ತಿರದಿಂದ ಬಲ್ಲವರ ಪ್ರಕಾರ, “ಇತ್ತೀಚೆಗೆ ದೇವೇಗೌಡರಿಗೆ ತಮ್ಮ ಹಿರಿಯ ಪುತ್ರ ರೇವಣ್ಣ ಅವರಿಗೆ ಅಧಿಕಾರ ಕೊಡಿಸುವ ಉಮೇದಿಯೊಂದು ಹುಟ್ಟಿಕೊಂಡಿದೆ.”  ಕಿರಿಯ ಮಗ ಕುಮಾರಸ್ವಾಮಿ ಹೇಗಾದರೂ ಬದುಕಿಕೊಳ್ಳುತ್ತಾನೆ, ಆದ್ರೆ ನಮ್ಮ ರೇವಣ್ಣ ಪಾಪಾ ಕಂಡ್ರಿ ಎಂದು ಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಇದು ಪಕ್ಷದ ಮೇಲೆ ಪರಿಣಾಮ ಬೀರಿದೆ. ಪಕ್ಷವನ್ನು ಕಟ್ಟುವ ಸಾಧ್ಯತೆ ಇರುವ ಕುಮಾರಸ್ವಾಮಿ ಈ ಹಿನ್ನೆಲೆಯಲ್ಲಿ ಕ್ರೀಯಾಶೀಲರಾಗುವುದು ಮತ್ತೊಂದಿಷ್ಟು ಕಾಲ ಸುಮ್ಮನಾಗುವುದು ನಡೆದುಕೊಂಡು ಬಂದಿದ್ದಕ್ಕೆ ಇದು ಕಾರಣ ಎನ್ನುತ್ತಾರೆ. ದೊಡ್ಡ ಗೌಡರೊಳಗಿನ ಈ ಗೊಂದಲದಿಂದಾಗಿ ಜೆಡಿಎಸ್ ಸಾರಥಿ ಯಾರು ಎಂಬ ಬಗ್ಗೆ ಅತಂತ್ರತೆಯೊಂದು ಸೃಷ್ಟಿಯಾಗಿದೆ. ಇದರ ಜತೆಗೆ, “ಕುಟುಂಬದ ಪ್ರತಿಯೊಬ್ಬರು ಅಧಿಕಾರ ಮತ್ತು ರಾಜಕೀಯ ಆಕಾಂಕ್ಷೆಗೆ ಬಿದ್ದಿದ್ದು ಕೂಡ ಜೆಡಿಎಸ್ ಬೆಳವಣಿಗೆಗೆ ದೊಡ್ಡ ಪ್ರಮಾಣದ ಹೊಡೆತ ಕೊಟ್ಟಿದೆ.” ಎನ್ನುತ್ತಾರೆ ಜೆಡಿಎಸ್ ಮುಖಂಡರೊಬ್ಬರು.

ಅಪಾತ್ರರಿಗೆ ಮಣೆ:

ಜೆಡಿಎಸ್ ಜನತಾ ಪರಿವಾರದ ಬೇರುಗಳನ್ನು ಹೊಂದಿದ್ದ ಪಕ್ಷ. ಅದರ ಒಂದು ಕಾಲದ ನಾಯಕರು ತತ್ವ, ಸಿದ್ಧಾಂತಗಳ ಜತೆಗೆ ರಾಜಕಾರಣ ಮಾಡಿಕೊಂಡು ಬಂದವರು. ಆದರೆ, ಕುಮಾರಸ್ವಾಮಿ ಪಕ್ಷವನ್ನು ಹತೋಟಿಗೆ ತೆಗೆದುಕೊಂಡ ನಂತರ ಬಂದ ಇದೇ ಚಲುವರಾಯ ಸ್ವಾಮಿ, ಜಮೀರ್ ಅಹಮದ್, ಮಾಗಡಿ ಬಾಲಕೃಷ್ಣ ಮತ್ತಿತರರಿಗೆ ಜನತಾ ಪರಿವಾರವಾಗಲೀ, ಪಕ್ಷದ ತತ್ವ ಸಿದ್ಧಾಂತಗಳಾಗಲೀ ಅರ್ಥವಾಗುವ ಹಿನ್ನೆಲೆಯೇ ಇರಲಿಲ್ಲ. “ಅಂತವರ ಜತೆಗೆ ಕುಮಾರಸ್ವಾಮಿ ಗೆಳೆತನ ಬೆಳೆಯಿತು. ಬ್ರದರ್ ಬ್ರದರ್ ಎನ್ನುತ್ತಲೇ ಹಾದಿ ತಪ್ಪಿದರು,” ಎನ್ನುತ್ತಾರೆ ಹಿರಿಯ ರಾಜಕೀಯ ವರದಿಗಾರರೊಬ್ಬರು.

ಹಾಗೆ, ಗೆಳೆಯರ ಜತೆ ರೆಸಾರ್ಟ್, ವಿದೇಶ ಸುತ್ತಿಕೊಂಡಿದ್ದ ಕುಮಾರಸ್ವಾಮಿ ಅಧಿಕಾರ ಬರುತ್ತಲೇ ಒಮ್ಮೆಗೇ ಈ ಗೆಳೆಯರಿಂದ ಒಂದು ಅಂತರವನ್ನು ಕಾಯ್ದುಕೊಳ್ಳಲು ಶುರು ಮಾಡಿದರು. ಅದು ಇವರ ನಡುವೆ ಸಂಬಂಧ ಹಳಸಲು ಶುರುವಾಯಿತು. ಕೊನೆಗೆ, ‘ಅವನು ಏನು ನಮಗೆ ಗೊತ್ತಿಲ್ವೇನ್ರಿ,’ ಎಂದು ಬಹಿರಂಗವಾಗಿ ಸವಾಲು ಎಸೆಯುವ ಹಂತಕ್ಕೆ ಬಂದು ನಿಂತಿತು. ಈ ಸಮಯದಲ್ಲಿ ಪಕ್ಷದ ಚೌಕಟ್ಟನ್ನು ಶುದ್ಧವಾಗಿಡಬಲ್ಲ ನಾಯಕರು ದೂರವಾಗಿದ್ದರು.

ವಿರೋಧಿಗಳ ಖೆಡ್ಡಾ:

ಹೀಗೆ ಪಕ್ಷದೊಳಗಿನ ಅತಂತ್ರತೆ, ನಾಯಕರಾಗಿ ಬೆಳೆದವರ ನಡುವಿನ ಭಿನ್ನಾಭಿಪ್ರಾಯದ ಲಾಭಗಳನ್ನು ಪಡೆದುಕೊಳ್ಳಲು ಖೆಡ್ಡಾ ರೂಪಿಸಿದ್ದು ಕಾಂಗ್ರೆಸ್; ವಿಶೇಷವಾಗಿ ಸಿಎಂ ಸಿದ್ದರಾಮಯ್ಯ. ಅದನ್ನು ಕಾರ್ಯರೂಪಕ್ಕೆ ಇಳಿಸಲು ದೂರಗಾಮಿ ಯೋಜನೆ ರೂಪಿಸಿದವರು ಡಿ. ಕೆ. ಶಿವಕುಮಾರ್.

ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದ ಜೆಡಿಎಸ್ ಶಾಸಕರನ್ನು ಹತ್ತಿರ ಕರೆದು ಜೋಳಿಗೆಗೆ ಹಾಕಿಕೊಳ್ಳುವ ತಂತ್ರವೊಂದು ತುಂಬಾ ಹಿಂದೆಯೇ ಶುರುವಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಇದರ ವಾಸನೆ ಬಡಿಯಲಾರಂಭಿಸಿತ್ತು. ಒಳಗೇ ನಡೆಯುತ್ತಿದ್ದ ಈ ಬೆಳವಣಿಗೆಗಳು ಇದೀಗ ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಬಹಿರಂಗವಾಗಿವೆ ಅಥವಾ ಅಧಿಕೃತವಾಗಿವೆ. ಕಾಂಗ್ರೆಸ್ ರಣತಂತ್ರ ಸಫಲವಾಗಿದೆ. ಜೆಡಿಎಸ್ ಪಕ್ಷವನ್ನು ಅದರದ್ದೇ ಬತ್ತಳಿಕೆಯ ಬಾಣಗಳಿಂದ ಮರ್ಮಘಾತವಾಗುಂತೆ ಇರಿಯಲಾಗಿದೆ. ಒಂದು ಕಾಲದಲ್ಲಿ ಕುಮಾರಸ್ವಾಮಿ ಅಧಿಕಾರದ ಗದ್ದುಗೆ ಏರಲು ನೆರವಾದವರೇ ಇಂದು ತಿರುಗುಬಾಣವಾಗಿ ಹೋಗಿದ್ದಾರೆ.

ಇವತ್ತು ಎಂಟು ಮಂದಿ ಶಾಸಕರನ್ನು ಜೆಡಿಎಸ್ ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಅವರ ಶಾಸಕ ಸ್ಥಾನವನ್ನು ರದ್ಧುಗೊಳಿಸುವಂತೆ ಸ್ಪೀಕರ್ಗೆ ದೂರು ನೀಡಲಾಗಿದೆ. ಮುಂದೇನು ಮಾಡಬೇಕು ಎಂದು ಕಾನೂನು ತಜ್ಞರ ಮೊರೆ ಹೋಗಲಾಗಿದೆ.

ಈ ಎಲ್ಲಾ ಬೆಳವಣೆಗಳ ಕೇಂದ್ರಬಿಂದು ಕುಮಾರಸ್ವಾಮಿ ಮಗನ ಶೂಟಿಂಗ್ ನೆಪದಲ್ಲಿ ನಾಪತ್ತೆಯಾಗಿದ್ದಾರೆ. ದೊಡ್ಡ ಗೌಡರು ಮಾತ್ರ, ಪಕ್ಷದ ಕಾರ್ಯಕರ್ತರಲ್ಲಿ ಹುಸಿ ಭರವಸೆ ತುಂಬುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಅವರ ಮುಖದ ಮೇಲಿರುವ ಆತಂಕದ ಗೆರೆಗಳು ಪಕ್ಷ ಅವಸಾನದ ಅಂಚಿಗೆ ಬಂದು ನಿಂತಿರುವುದನ್ನು ಸೂಚ್ಯವಾಗಿ ಹೇಳುತ್ತಿವೆ.

ಈ ಸಮಯದಲ್ಲಿ ಜೆಡಿಎಸ್ ಪಕ್ಷದ ಇವತ್ತಿನ ಸ್ಥಿತಿಗೆ ಕಾರಣ ಏನು ಎಂದು ಹುಡುಕಿಕೊಂಡು ಹೊರಟರೆ ‘ಸೆಲ್ಫ್ ಸೂಸೈಡ್’ ಎಂಬ ಅಪಭ್ರಂಶ ಪದವೊಂದು ಉತ್ತರ ರೂಪದಲ್ಲಿ ಎದುರಾಗುತ್ತದೆ.

Leave a comment

Top