An unconventional News Portal.

ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ತಾಯಿ ಶವಕ್ಕಾಗಿ 36 ಗಂಟೆಗಳಿಂದ ಕಾಯುತ್ತಿದೆ ಕಂಪ್ಲಿಯ ಬಡ ಕುಟುಂಬ

ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ತಾಯಿ ಶವಕ್ಕಾಗಿ 36 ಗಂಟೆಗಳಿಂದ ಕಾಯುತ್ತಿದೆ ಕಂಪ್ಲಿಯ ಬಡ ಕುಟುಂಬ

ಕ್ಯಾನ್ಸರ್‌ ಕಾಯಿಲೆಯಿಂದ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪಡೆಯಲು ಕಂಪ್ಲಿ ಮೂಲದ ಕುಟುಂಬವೊಂದು ಸುಮಾರು 36 ಗಂಟೆಗಳಿಂದ ಪರದಾಡುತ್ತಿರುವ ಸನ್ನಿವೇಶ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಈಗ ಜಾರಿಯಲ್ಲಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಸರಕಾರದ ವಿಮಾ ಯೋಜನೆ ಧನ ಸಹಾಯ ನೀಡುತ್ತದೆ. ಖಾಸಗಿ ಆಸ್ಪತ್ರೆಗಳ ಮೂಲಕ ಸರಕಾರದ ವಿಮೆ ಹಣದಲ್ಲಿ ಆರೋಗ್ಯ ಸೇವೆಯನ್ನು ಈ ಕುಟುಂಬಗಳು ಪಡೆದುಕೊಳ್ಳುತ್ತವೆ. ಆದರೆ ಅಂತಿಮ ಹಂತದಲ್ಲಿ ಆಸ್ಪತ್ರೆಗಳು ‘ವಿನಾಕಾರಣ’ ಸೃಷ್ಟಿಸುವ ಸನ್ನಿವೇಶಗಳು ಹೇಗೆ ಶವವನ್ನು ಪಡೆಯಲು ಒಂದೂವರೆ ದಿನಗಳಿಂದ ಪರದಾಡುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ‘ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆ’ಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರಕಾರ ಆಲೋಚನೆ ಮಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳ ಶವವನ್ನು ನೀಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಸತಾಯಿಸಬಾರದು ಎಂಬ ಕಾರಣಕ್ಕೆ ಕಾನೂನು ರಚಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಿರುವಾಗಲೇ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆ ಕಾಯ್ದೆಯ ಅನುಷ್ಠಾನದ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ.

ಏನಿದು ಪ್ರಕರಣ?:

ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ವಾಸಿಸುತ್ತಿದ್ದ ಶಬೀರಾ ಮಧ್ ಯವಯಸ್ಸಿನ ಮಹಿಳೆ. ಅವರಿಗೆ 2012ರಲ್ಲಿ ಕ್ಯಾನ್ಸರ್‌ ಕಾಯಿಲೆ ಇದೆ ಎಂದು ಗೊತ್ತಾದ ನಂತರ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಮಯದಲ್ಲಿ ವಾಜಪೇಯಿ ಆರೋಗ್ಯ ವಿಮಾ ಯೋಜನೆ ಅಡಿಯಲ್ಲಿ ಸರಕಾರದ ಕಡೆಯಿಂದ ಧನ ಸಹಾಯವೂ ಸಿಕ್ಕಿತ್ತು. ಐದು ವರ್ಷಗಳ ಹಿಂದೆ ಚಿಕಿತ್ಸೆ ಪಡೆದು ಗುಣಮುಖರಾದ ಶಬೀರಾ ಕಂಪ್ಲಿಗೆ ಹಿಂದುರಿಗಿದ್ದರು. ಆದರೆ ಜೂ. 29ರಂದು ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು.

“ಈ ಸಮಯದಲ್ಲಿ ಸ್ಕ್ಯಾನಿಂಗ್‌ ಮಾಡಿದ ವೈದ್ಯರು ಕ್ಯಾನ್ಸರ್‌ ಮತ್ತೆ ಮರುಕಳಿಸಿದೆ. ಕಿಮೋ ಥೆರಪಿ ಮಾಡಬೇಕು ಎಂದು ಹೇಳಿದರು. ವೈದ್ಯರು ಹೇಳಿದ ರೀತಿಯಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಿದೆವು. ಶನಿವಾರ ಮುಂಜಾನೆ ಅಮ್ಮ ಸಾವನ್ನಪ್ಪಿದರು. ಆದರೆ ದೇಹವನ್ನು ತೆಗೆದುಕೊಂಡು ಹೋಗಲು ಶವ ಪರೀಕ್ಷೆ ಮಾಡಿಸಿ ಎಂದು ವೈದ್ಯರು ಹೇಳಿದರು,” ಎಂದು ‘ಸಮಾಚಾರ’ಕ್ಕೆ ಮಾಹಿತಿ ನೀಡದರು ಶಬೀರಾ ಅವರ ಮಗ ಸಮೀರ್.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸಮೀರ್ ವೈದ್ಯರ ಸಲಹೆ ಮೇರೆಗೆ ಕೆಂಗೇರಿ ಪೊಲೀಸ್‌ ಠಾಣೆಗೆ ಹೋದರು. “ಪೊಲೀಸರಿಗೆ ತಾಯಿಯ ಶವವನ್ನು ಪರೀಕ್ಷೆಗೆ ಒಳಪಡಿಸಿ ಎಂದು ಕೇಳಿಕೊಂಡೆವು. ಆದರೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದು ಸಹಜ ಸಾವಾಗುತ್ತದೆ. ಹೀಗಾಗಿ ನಮಗೆ ಬರುವುದಿಲ್ಲ ಎಂದು ಹೇಳಿದರು,” ಎಂದು ಸಮೀರ್‌ ಹೇಳಿದರು.

ಒಂದು ಕಡೆ ಶವ ಪರೀಕ್ಷೆ ಮಾಡದೆ ಶವ ನೀಡುವುದಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿದರೆ, ಇನ್ನೊಂದು ಕಡೆ ಸಹಜ ಸಾವು ಎಂಬ ಕಾರಣಕ್ಕೆ ನಮಗೆ ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ, ಆಸ್ಪತ್ರೆ ಮತ್ತು ಪೊಲೀಸ್‌ ಠಾಣೆ ನಡುವೆ ಹಗ್ಗಜಗ್ಗಾಟದಲ್ಲಿ ಸುಮಾರು 36 ಗಂಟೆಗಳು ಕಳೆದು ಹೋಗಿವೆ.

ಯಾಕೆ ಶವ ಪರೀಕ್ಷೆ?:

ಮೀನುಗಾರರಾಗಿರುವ ಶಬೀರಾ ಗಂಡ ಹಾಗೂ ಮಗ ಶವಕ್ಕಾಗಿ ಪರದಾಡುತ್ತಿರುವ ಮಾಹಿತಿ ಭಾನುವಾರ ಮುಂಜಾನೆ ಜನಾರೋಗ್ಯ ಚಳವಳಿಯನ್ನು ಮುನ್ನಡೆಸುತ್ತಿರುವ ಡಾ. ಅಖಿಲಾ ಅವರ ಗಮನಕ್ಕೆ ಬಂದಿದೆ. ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. “ಜೂನ್ 29ರಿಂದ ಇಲ್ಲೀವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ಪೂರಕವಾದ ದಾಖಲೆಗಳೂ ಕುಟುಂಬದ ಬಳಿ ಇದೆ. ಹೀಗಿದ್ದೂ ಪೊಲೀಸರಿಗೆ ಶಬೀರಾ ಆಸ್ಪತ್ರೆಗೆ ಬರುವ ಹೊತ್ತಿಗಾಗಲೇ ಸಾವನ್ನಪ್ಪಿದ್ದರು ಎಂದು ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಆಡಳಿತ ಮಂಡಳಿ ಕಡೆಯಿಂದ ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಯಾಕೆ ಎಂಬುದನ್ನು ಕೇಳಲು ಆಡಳಿತ ಮಂಡಳಿ ಕಡೆಯಿಂದ ಯಾರೂ ಲಭ್ಯವಾಗಲಿಲ್ಲ. ಭಾನುವಾರವಾದ್ದರಿಂದ ಎಲ್ಲರೂ ರಜೆಯಲ್ಲಿದ್ದಾರೆ ಎಂಬ ಪ್ರತಿಕ್ರಿಯೆ ಬಂತು,” ಎಂದರು ಡಾ. ಅಖಿಲಾ.

ಈ ಕುರಿತು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲು ಕೆಂಗೇರಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದರೆ, “ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಕಡೆಯಿಂದ ಶನಿವಾರ ಮೆಮೋ ಬಂದಿದೆ. ರೋಗಿಯನ್ನು ಆಸ್ಪತ್ರೆಗೆ ತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ಕಂಪ್ಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದೇವೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅವರಿಗೂ ಕೂಡ ಆಸ್ಪತ್ರೆಯ ಆಡಳಿತ ಮಂಡಳಿ ಶವಪರೀಕ್ಷೆಗೆ ಒತ್ತಾಯ ಮಾಡುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಅತ್ತ 400 ಕಿ. ಮೀ ದೂರದ ಕಂಪ್ಲಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದರೆ, “ಶಬೀರಾ ಅವರದ್ದು ಕ್ಯಾನ್ಸರ್‌ನಿಂದ ಆದ ಸಾವು. ಅದಕ್ಕೆ ಶವಪರೀಕ್ಷೆಯ ಅಗತ್ಯವಿಲ್ಲ. ನಾವು ಇಷ್ಟು ದೂರದಿಂದ ಅಲ್ಲಿಗೆ ಬರಲು ಸಾಧ್ಯವಿಲ್ಲ,” ಎಂದು ಉತ್ತರ ಬಂತು.

ಆಸ್ಪತ್ರೆ ಪ್ರತಿಕ್ರಿಯೆ ಏನು?:

ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಒಂದು ವಾರಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡಿದ ರೋಗಿ ಸಾವನ್ನಪ್ಪಿದ ನಂತರ ಶವಪರೀಕ್ಷೆಗೆ ಯಾಕೆ ಒತ್ತಾಯ ಮಾಡಿತು ಎಂಬುದಕ್ಕೆ ಈವರೆಗೂ ಅಧಿಕೃತ ಉತ್ತರ ಆಡಳಿತ ಮಂಡಳಿ ಕಡೆಯಿಂದ ಲಭ್ಯವಾಗಲಿಲ್ಲ. “ಭಾನುವಾರ ರಜೆಯ ದಿನ. ಹೀಗಾಗಿ ಎಲ್ಲರೂ ರಜೆಯಲ್ಲಿದ್ದಾರೆ,” ಎಂದು ಸಿದ್ಧಮಾದರಿಯ ಪ್ರತಿಕ್ರಿಯೆ ಲಭ್ಯವಾಯಿತು. ‘ಸಮಾಚಾರ’ ಶಬೀರಾ ಅವರಿಗೆ ಚಿಕಿತ್ಸೆ ನೀಡಿದ ಡಾ. ಜೆ. ಮಾತಂಗಿ ಅವರನ್ನ ಸಂಪರ್ಕಿಸಿದಾಗ, “ನಿಮಗೆ ನನ್ನ ನಂಬರ್ ಕೊಟ್ಟವರು ಯಾರು?” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ನಾನು ಈ ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ. ಆಡಳಿತ ಮಂಡಳಿ ಪ್ರತಿಕ್ರಿಯೆ ಪಡೆದುಕೊಳ್ಳಿ,” ಎಂದು ಸ್ಪಷ್ಟೀಕರಣ ನೀಡಲು ನಿರಾಕರಿಸಿದರು.

ಶಬೀರಾ ಅವರ ಚಿಕಿತ್ಸೆಗೆ ಸರಕಾರದ ವಿಮೆ ನೆರವು ಪಡೆದುಕೊಂಡ ಹಿನ್ನೆಲೆಯಲ್ಲಿ ಅವರ ಪ್ರಕರಣ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಸರಕಾರಿ ಆರೋಗ್ಯ ವಿಮೆಯ ಮೇಲುಸ್ತುವಾರಿಯ ಹೊಣೆ ಇವರ ಮೇಲಿದೆ) ಅಡಿಯಲ್ಲಿ ಬರುತ್ತದೆ. ಅದರ ಸಂಯೋಜಕ ಆನಂದ್‌ ಅವರನ್ನು ಸಂಪರ್ಕಿಸಿದಾಗ, “ಆಸ್ಪತ್ರೆ ಕಡೆಯಿಂದ ವಿನಾಕಾರಣ ರೋಗಿ ಕಡೆಯವರಿಗೆ ತೊಂದರೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಇವತ್ತು ಭಾನುವಾರ. ಸೋಮವಾರ ಹೆಚ್ಚಿನ ಮಾಹಿತಿ ಸಿಗಲಿದೆ,” ಎಂದರು.

ಒಟ್ಟಾರೆ, ಸರಕಾರದ ವಿಮೆ ಯೋಜನೆಯ ಸಹಾಯ ಪಡೆದ ಬಡಕುಟುಂಬ ಖಾಸಗಿ ಆಸ್ಪತ್ರೆಯ ‘ವಿನಾಕಾರಣ’ ತೀರ್ಮಾನದಿಂದಾಗಿ 36 ಗಂಟೆಗಳಿಗೂ ಹೆಚ್ಚು ಕಾಲ ಶವವನ್ನು ಪಡೆಯಲು ಪರದಾಡುತ್ತಿದೆ. ಈ ವರದಿಯನ್ನು ಪ್ರಕಟಿಸುತ್ತಿರುವ ಈ ಕ್ಷಣಕ್ಕೂ ಸಮೀರ್‌ ಕುಟುಂಬ ತಮ್ಮ ತಾಯಿಯ ಶವಕ್ಕಾಗಿ ಬಿಜಿಎಸ್‌ ಗ್ಲೋಬಲ್‌ ಅಸ್ಪತ್ರೆಯ ಮುಂದೆ ಕಾಯುತ್ತಲೇ ಇದೆ.

Top