An unconventional News Portal.

‘ಮೂಲಗಳು ತಿಳಿಸಿವೆ’: ಸುಳ್ಳು ಸುದ್ದಿ ಪ್ರಕಟಿಸಿ ಪೇಜಿಗೆ ಸಿಲುಕಿದ ಸಿಎನ್‌ಎನ್‌!

‘ಮೂಲಗಳು ತಿಳಿಸಿವೆ’: ಸುಳ್ಳು ಸುದ್ದಿ ಪ್ರಕಟಿಸಿ ಪೇಜಿಗೆ ಸಿಲುಕಿದ ಸಿಎನ್‌ಎನ್‌!

ಅಮೆರಿಕಾದ ಮಾಧ್ಯಮ ಸಂಸ್ಥೆ ಸಿಎನ್ಎನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಕ್ಷಮೆ ಕೇಳಿದೆ.

ಆಗಿದ್ದಿಷ್ಟೆ; ಸಿಎನ್ಎನ್ ಡೊನಾಲ್ಡ್ ಟ್ರಂಪ್ ಆಪ್ತರೊಬ್ಬರ ಬಗ್ಗೆ ಸುದ್ದಿಯೊಂದನ್ನು ಪ್ರಟಿಸಿತ್ತು. ನಂತರ ಈ ಸುದ್ದಿ ಸುಳ್ಳು ಎಂದು ಆ ‘ಆಪ್ತರು’ ಪ್ರತಿಪಾದಿಸಿದ್ದರು. ಆಂತರಿಕ ತನಿಖೆ ನಡೆಸಿ ತನ್ನ ಗೌರವ ಉಳಿಸಿಕೊಳ್ಳಲು ತಪ್ಪಿತಸ್ಥ ಮೂವರು ಪತ್ರಕರ್ತರನ್ನು ಹೊರಗಟ್ಟಿದೆ ಸಿಎನ್‌ಎನ್‌. ಸುದ್ದಿ ಇದಿಷ್ಟೇ ಆದರೂ ಮಾಧ್ಯಮ ಸಂಸ್ಥೆಯೊಂದು ವರದಿಗಳ ಪ್ರಕಟಣೆಗೆ ಅನುಸರಿಸಬೇಕಾದ ಮಾರ್ಗ, ಸುದ್ದಿಗಳ ಆಯ್ಕೆ ಮಾನದಂಡಗಳು, ಮಾಧ್ಯಮ ಸಂಸ್ಥೆಗಳ ಉತ್ತರದಾಯಿತ್ವ ಸುದ್ದಿಯಾಚೆಗಿನ ಚರ್ಚೆಗೆ ಮುನ್ನುಡಿ ಬರೆದಿವೆ.

ಕಳೆದ ಶುಕ್ರವಾರ ಅಮೆರಿಕಾದ ಕಾಂಗ್ರೆಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಾಯಕ ಆ್ಯಂಟನಿ ಸ್ಕರಮುಚ್ಚಿಗೆ ರಷ್ಯಾ ದೇಶದಿಂದ ಹಣ ಹರಿದು ಬಂದಿದೆ . ಈ ಕುರಿತು ತನಿಖೆ ನಡೆಸುತ್ತಿದೆ ಎಂಬ ವರದಿಯನ್ನು ಸಿಎನ್ಎನ್ ಜಾಲತಾಣದಲ್ಲಿ ಸುದ್ದಿಯೊಂದನ್ನು ಪ್ರಕಟಿಸಲಾಗಿತ್ತು. ಆದರೆ ಈ ವರದಿಯನ್ನು ಟ್ರಂಪ್ ಸಹಾಯಕ ತಳ್ಳಿಹಾಕಿದ್ದಲ್ಲದೆ, ಇದೊಂದು ಆಧಾರರಹಿತ ಸುದ್ದಿ ಎಂದು ಗಂಭೀರ ಆರೋಪ ಮಾಡಿದ್ದರು. ಕೊನೆಗೆ, ಸುದ್ದಿಯ ಬಗ್ಗೆ ಆಂತರಿಕ ತನಿಖೆ ನಡೆಸಿದ ಸಿಎನ್‌ಎನ್‌ ಸಂಸ್ಥೆ, ವರದಿ ಮಾಡಿದ ಪತ್ರಕರ್ತರನ್ನು ಹೊರಹಾಕಿದೆ. ಜತೆಗೆ, ಕ್ಷಮಾಪಣೆ ಕೋರಿ, ತನ್ನ ಜಾಲತಾಣದಿಂದ ಸುದ್ದಿಯನ್ನು ತೆಗೆದುಹಾಕಿದೆ.

ವರದಿ ತಯಾರಿಸಿದ ಥೋಮಸ್ ಫ್ರಾಂಕ್, ತನಿಖಾ ವಿಭಾಗದ ಸಂಪಾದಕ, ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಎರಿಕ್ ಲಿಕ್ಟ್ ಬ್ಲಾ ಮತ್ತು ತನಿಖಾ ವಿಭಾಗದ ಮೇಲುಸ್ತುವಾರಿ ವಹಿಸುವ ಲೆಕ್ಸ್ ಹ್ಯಾರಿಸ್ ಸಂಪ್ರದಾಯದಂತೆ ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ಬಿದ್ದಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ನಂತರ ಸಿಎನ್ಎನ್, ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್ ಟೈಮ್ಸ್ ಸಂಸ್ಥೆಗಳ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದರು. ಈಗ ಸುಳ್ಳುಸುದ್ದಿಯನ್ನು ಪ್ರಕಟಿಸುವ ಮೂಲಕ ಸಿಎನ್‌ಎನ್‌ ತನ್ನ ವಿಶ್ವಾಸಾರ್ಹತೆಗೆ ಮಸಿ ಬಳಿದುಕೊಂಡಂತಾಗಿದೆ.

“ರಷ್ಯಾಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಯನ್ನು ಹರಡಿ ಸಿಕ್ಕಿಬಿದ್ದ ನಂತರ ಫೇಕ್ ನ್ಯೂಸ್ ಸಿಎನ್ಎನ್ ಮ್ಯಾನೇಜ್ಮೆಂಟ್‌ನಲ್ಲಿ ದೊಡ್ಡ ಬದಲಾವಣೆಗಳಾಗಲಿವೆ,” ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. “ಸಿಕ್ಕಿಬಿದ್ದಿರುವುದರಿಂದ ಸಿಎನ್ಎನ್ ತಣ್ಣಗಾಗಿದೆ. ಆದರೆ ಇತರ ಎನ್‌ಬಿಸಿ, ಸಿಬಿಎಸ್ ಮತ್ತು ಎಬಿಸಿ ಚಾನಲ್ ಗಳ ಕಥೆ ಏನು? ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಪರಿಸ್ಥಿತಿ ಏನು? ಇವೆಲ್ಲಾ ಫೇಕ್ ನ್ಯೂಸ್!” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಅಧ್ಯಕ್ಷ ಟ್ರಂಪ್.

ಟ್ರಂಪ್ ಹೀಗೆ ಟ್ವೀಟ್ಗಳ ಮೂಲಕ ಮಾಧ್ಯಮಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದರೆ, ಅವರ ಆಪ್ತ ಆ್ಯಂಟನಿ ಸ್ಕರಮುಚ್ಚಿ ಮಾತ್ರ ಸಿಎನ್ಎನ್ ಸಂಸ್ಥೆಯನ್ನು ಕ್ಷಮಿಸಿದ್ದಾರೆ. “ಸಿಎನ್ಎನ್ ಸರಿಯಾದುದನ್ನೇ ಮಾಡಿದೆ. ಸೂಕ್ತವಾದ ನಡೆ. ಕ್ಷಮಾಪಣೆ ಸ್ವೀಕರಿಸಲಾಗದೆ. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಪಾಠ ಕಲಿತು ಮುಂದುವರಿಯತ್ತಿರಲೇಬೇಕು,” ಎಂದು ಟ್ವೀಟ್ ಮಾಡಿದ್ದಾರೆ.

“ಕೇವಲ ಓರ್ವ ಅನಾಮಧೇಯ ವ್ಯಕ್ತಿಯ ಮಾಹಿತಿ ಮೇರೆಗೆ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಸಾಮಾನ್ಯವಾಗಿ ಸುದ್ದಿ ಸಂಸ್ಥೆಗಳು ಸುದ್ದಿಯನ್ನು ಪ್ರಕಟಿಸುವ ಮಾಡುವ ಮೊದಲು ಕನಿಷ್ಠ ಎರಡು ಮೂಲಗಳಿದ ಸುದ್ದಿ ನೈಜತೆಯನ್ನು ಖಚಿತಪಡಿಸಕೊಳ್ಳುಬೇಕಿದೆ,” ಎಂದು ಈ ಕುರಿತಾದ ಬಿಬಿಸಿ ವರದಿ ಹೇಳಿದೆ.

ಮೂಲಗಳ ಹೆಸರಿನಲ್ಲಿ, ಸರಿಯಾದ ಮಾಹಿತಿಯೇ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಂತೆ ಸುದ್ದಿಗಳನ್ನು ಪ್ರಕಟಿಸುವುದು ನಮ್ಮ ಪಾಲಿಗೆ ಅಪರಿಚಿತವೇನಲ್ಲ. ಆದರೆ ವೃತ್ತಿಪರತೆ ವಿಚಾರದಲ್ಲಿ ಇನ್ನೂ ಮಾಗದ ಭಾರತದಲ್ಲಿ ಇಂತಹ ಸುಳ್ಳು ಸುದ್ದಿಗಳಿಗೆ ಉತ್ತರದಾಯಿತ್ವವನ್ನು ಸದ್ಯಕ್ಕೆ ನಿರೀಕ್ಷಿಸುವುದು ಕಷ್ಟ.

Top