An unconventional News Portal.

ಬಂಗಾಳದಲ್ಲಿ ‘ಅಗ್ನಿ ದೇವತೆ’, ‘ಅಮ್ಮ’ನ ಮಡಿಲಿಗೆ ತಮಿಳುನಾಡು, ಕೇರಳದಲ್ಲಿ ಕೆಂಬಾವುಟ, ಅಸ್ಸಾಂನಲ್ಲಿ ಕೇಸರಿ ಝಂಡಾ!

ಬಂಗಾಳದಲ್ಲಿ ‘ಅಗ್ನಿ ದೇವತೆ’, ‘ಅಮ್ಮ’ನ ಮಡಿಲಿಗೆ ತಮಿಳುನಾಡು, ಕೇರಳದಲ್ಲಿ ಕೆಂಬಾವುಟ, ಅಸ್ಸಾಂನಲ್ಲಿ ಕೇಸರಿ ಝಂಡಾ!

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಂತಿಮ ಹಂತದ ಮತದಾನ ಮುಗಿದ ಬೆನ್ನಿಗೇ ಮತದಾನೋತ್ತರ ಚುನಾವಣಾ ಸಮೀಕ್ಷೆ ವರದಿಗಳು ಹೊರಬಿದ್ದಿವೆ.
ಸೋಮವಾರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಲ್ಲಿ ಮತದಾನ ಮುಗಿದಿದೆ. ಈ ಐದೂ ಕಡೆಗಳಲ್ಲಿ ಮೇ. 19ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದರ ನಡುವೆಯೇ, ಮತದಾನೋತ್ತರ ಚುನಾವಣಾ ಸಮೀಕ್ಷೆಗಳು ಹೊರಬಿದ್ದಿವೆ. ಕೆಲವು ಕಡೆಗಳಲ್ಲಿ ಮತದಾನ ಪೂರ್ವ ಸಮೀಕ್ಷೆಗಳು ತಲೆಕೆಳಗಾಗಿದ್ದು ಕುತೂಹಲ ಮೂಡಿಸಿದೆ.
ಮತದಾನೋತ್ತರ ಸಮೀಕ್ಷೆಯ ವಿವರಗಳು ಇಲ್ಲಿದೆ.
ಪಶ್ಚಿಮ ಬಂಗಾಳ:
ರಾಜ್ಯದ 253 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಟಿಎಂಸಿ ಕನಿಷ್ಟ 233 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಸಿಪಿಎಂ- ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟಕ್ಕೆ 38- 51 ಸ್ಥಾನಗಳು ಲಭಿಸಬಹುದು. ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಗೆ 1-5 ಸ್ಥಾನಗಳು ಸಿಕ್ಕರೆ ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಅಸ್ಸಾಂ:
ಆದರೆ ಬಿಜೆಪಿ ಪಾಲಿಗೆ ಅಸ್ಸಾಂ ಮತದಾನೊತ್ತರ ಸಮೀಕ್ಷೆ ಶುಭ ಸಂದೇಶವನ್ನು ಹೊತ್ತು ತಂದಿವೆ. ಅಸ್ಸಾಂನಲ್ಲಿ 81 ಸ್ಥಾನಗಳನ್ನು ಗಳಿಸುವ ಮೂಲಕ ಕೇಸರಿ ಪಾಳೆಯ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಎನ್ನಲಾಗಿದೆ. ಕಾಂಗ್ರೆಸ್ 31 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಸ್ಥಳೀಯ ಪಕ್ಷ ಎಐಯುಡಿಎಫ್ 10 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.
ಮತದಾನ ಪೂರ್ವ ಸಮೀಕ್ಷೆಯಲ್ಲಿ, ಅಸ್ಸಾಂನಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾಗಬಹುದು ಎಂದು ‘ಇಂಡಿಯಾ ಟಿವಿ- ಸಿ- ವೋಟರ್’ ಸಮೀಕ್ಷೆಗಳು ಅಂದಾಜಿಸಿದ್ದವು. ಸದ್ಯದ ಸಮೀಕ್ಷೆ ವರದಿಗಳನ್ನು ನೋಡುತ್ತಿದ್ದರೆ ದೇಶದ ಈಶಾನ್ಯ ರಾಜ್ಯಗಳಲ್ಲಿ ಇದೇ ಮೊದಲ ಬಾರಿಗೆ ಕಮಲ ಪಕ್ಷ ಅಧಿಕಾರ ಗ್ರಹಣ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.
ತಮಿಳುನಾಡು:
2011ರಲ್ಲಿ ತಮಿಳುನಾಡಿನ 243 ಸ್ಥಾನಗಳ ಪೈಕಿ 203 ಸ್ಥಾನಗಳನ್ನು ಗಳಿಸಿದ್ದ ಜಯಲಲಿತಾ ನೇತೃತ್ವದ ಎಐಎಡಿಎಂ ಈ ಬಾರಿಯೂ ಅಧಿಕಾರ ಹಿಡಿಯುವುದಾಗಿ ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕೆಲವು ವಿಧಾನಸಭಾ ಕ್ಷೇತ್ರಗಳನ್ನು ಅದು ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಜಯಲಲಿತಾ ಪಕ್ಷ 130 ಸ್ಥಾನಗಳನ್ನು ಗಳಿಸಲಿದೆ, ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ 70 ಸ್ಥಾನಗಳನ್ನು ಗಳಿಸಲಿದೆ. ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ 14 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆ ಹೇಳಿವೆ. ಬಿಜೆಪಿ ಖಾತೆ ತೆರೆಯುವುದು ಕಷ್ಟವಾಗಲಿದೆ.
ಕೇರಳ:
ದೇವರ ನಾಡು ಕೇರಳದಲ್ಲಿ ಕೆಂಪು ಬಾವುಟ ಹಾರಾಡಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಸಿಪಿಐ (ಎಂ) ನೇತೃತ್ವದ ಎಡರಂಗಕ್ಕೆ 86 ಸ್ಥಾನಗಳು ಲಭಿಸಲಿವೆ. ಸಂಯುಕ್ತ ರಂಗಕ್ಕೆ 55-60 ಸ್ಥಾನಗಳು ಲಭಿಸಲಿವೆ. ಪ್ರಧಾನಿ ಮೋದಿ ವಿವಾದಿತ ಚುನಾವಣಾ ಭಾಷಣದ ಹೊರತಾಗಿಯೂ ಕೇರಳದಲ್ಲಿ 3-5 ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ಪುದುಚೇರಿ
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯಲ್ಲಿ ಕಾಂಗ್ರೆಸ್- ಎಡಿಎಂಕೆ ಮೈತ್ರಿಕೂಟಕ್ಕೆ 17 ಸ್ಥಾನಗಳು ಲಭಿಸಲಿವೆ. ಇಲ್ಲಿ 30 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸ್ಥಳೀಯ ಪಕ್ಷ ಎಐಎನ್‍ಆರ್‍ಸಿಗೆ 7 ಸ್ಥಾನಗಳು ಹಾಗೂ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಸಮೀಕ್ಷೆ ಹೇಳಿವೆ.

Top