An unconventional News Portal.

‘ಇನ್ಫೋಸಿಸ್ ಅಂತರಂಗ’: ಮೋದಿಯನ್ನು ಹೋಲುವ ವಿಶಾಲ್ ಸಿಕ್ಕಾ; ಅದ್ವಾನಿ ಆಗಲು ಒಪ್ಪದ ನಾರಾಯಣ ಮೂರ್ತಿ!

‘ಇನ್ಫೋಸಿಸ್ ಅಂತರಂಗ’: ಮೋದಿಯನ್ನು ಹೋಲುವ ವಿಶಾಲ್ ಸಿಕ್ಕಾ; ಅದ್ವಾನಿ ಆಗಲು ಒಪ್ಪದ ನಾರಾಯಣ ಮೂರ್ತಿ!

ಬೆಂಗಳೂರು ಮೂಲದ ಸಾಫ್ಟ್’ವೇರ್ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗಿನ ಇತ್ತೀಚಿನ ಬೆಳವಣಿಗೆಗಳು ಸದ್ಯಕ್ಕೆ ಸರಿಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

2014ರಲ್ಲಿ ಕಂಪನಿಯ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ವಿಶಾಲ್ ಸಿಕ್ಕಾ ಸದ್ಯ ರಾಜೀನಾಮೆ ನೀಡಿದ್ದಾರೆ. ಕೆಲಕಾಲ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರ ಜಾಗಕ್ಕೆ ಹಂಗಾಮಿ ಕಾರ್ಯನಿರ್ಹಣಾಧಿಕಾರಿ ನೇಮಕ ಮಾಡಲಾಗಿದೆ. ಈಗಾಗಲೇ ಶೇರು ಮಾರುಕಟ್ಟೆಯಲ್ಲಿ ಸಾವಿರದ ಗಡಿ ದಾಟಿದ್ದ ಇನ್ಫೋಸಿಸ್ ಶೇರುಗಳ ಬೆಲೆ ಇಳಿಮುಖವಾಗಿದೆ. ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನಡುವಿನ ಬಹಿರಂಗ ಕಿತ್ತಾಟಗಳು, ಸಾಕಷ್ಟು ಹೆಸರು ಮಾಡಿದ್ದ ಸಿಕ್ಕಾ ರಾಜೀನಾಮೆ, ಅವರ ಸ್ಥಾನಕ್ಕೆ ತಕ್ಷಣದ ಬದಲಾವಣೆ ಮೂಲಕ ಭರವಸೆ ಮೂಡಿಸಲು ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣಗಳು. ಇದರ ಜತೆಗೆ, ಮಾರುಕಟ್ಟೆಯಲ್ಲಿ ಇನ್ಫೋಸಿಸ್ಗೆ ಪೈಪೋಟಿ ನೀಡುತ್ತಿರುವ ಟಿಸಿಎಸ್, ಕಾಗ್ನಿಸೆಂಟ್, ಅಸೆಂಚರ್ ಮತ್ತಿತರ ಐಟಿ ಕಂಪನಿಗಳು ಈ ಅವಕಾಶವನ್ನು ಬಳಸಿಕೊಂಡು, ಇನ್ಫೋಸಿಸ್ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿರುವುದು ಕೂಡ ಶೇರು ಮಾರುಕಟ್ಟೆಯಲ್ಲಿ ಇನ್ಫಿ ಶೇರುಗಳ ಬೆಲೆ ಇಳಿಯಲು ಕಾರಣವಾಗಿದೆ.

ಸದ್ಯದ ಬೆಳವಣಿಗೆಗಳು ಗಮನಿಸಿದರೆ, ಶೇರು ಮಾರುಕಟ್ಟೆಯ ಆಚೆಗೆ, ದೂರಗಾಮಿ ನೆಲೆಯಲ್ಲಿ ಬೆಂಗಳೂರು ಮೂಲದ ಐಟಿ ಕಂಪನಿ ಪರಿಣಾಮಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಮುಂದಿನ ಎರಡು ಅಥವಾ ಮೂರು ತಿಂಗಳುಗಳ ಕಾಲ ಇದೇ ಅನಿಶ್ಚಿತತೆ ಇನ್ಫೋಸಿಸ್ ಸಂಸ್ಥೆಯನ್ನು ಕಾಡುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳುತ್ತಿವೆ. ಹಣಕಾಸಿನ ಸೇವೆಗಳು, ಇಂಧನ ಮತ್ತು ಸಂಹವನ ಸೇವೆಗಳು ಹಾಗೂ ಸಗಟು ಸಾಫ್ಟ್’ವೇರ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಇನ್ಫೋಸಿಸ್ ತನ್ನ ಗತಕಾಲದ ಪ್ರಭೆಯನ್ನು ಕಳೆದುಕೊಳ್ಳುವ ಅನುಮಾನಗಳನ್ನು ಸೃಷ್ಟಿಸಿದೆ.

ಅಂದು ಸಿಕ್ಕಾ:

“ಇದೊಂತರ ಕಾಕತಾಳೀಯ ಇರಬಹುದು. 2014ರಲ್ಲಿ ದೇಶಕ್ಕೆ ಹೊಸ ಪ್ರಧಾನಿಯಾಗಿ ಮೋದಿ ಅಧಿಕಾರವಹಿಸಿಕೊಂಡರು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಇನ್ಫೋಸಿಸ್ಗೆ ವಿಶಾಲ್ ಸಿಕ್ಕಾ ಸಿಇಓ ಆಗಿ ನೇಮಕಗೊಂಡರು. ಇಬ್ಬರ ಕಾರ್ಯಶೈಲಿಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದವು. ಸಿಕ್ಕಾ ಬಂದ ಮೇಲೆ 100 ಮಿಲಿಯನ್ಗೂ ಹೆಚ್ಚು ಮೊತ್ತದ ಒಪ್ಪಂದ ಮಾಡಿಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಯಿತು. ಹೀಗಾಗಿ 2015ರಲ್ಲಿ ಕಂಪನಿಯ ವಹಿವಾಟು 1.9 ಬಿಲಿಯನ್ನಿಂದ 2017ರ ಹೊತ್ತಿಗೆ 3.5 ಬಿಲಿಯನ್ಗೆ ಏರಿಕೆಯಾಯಿತು. ಇದು ಸಾಧ್ಯವಾಗಿದ್ದು, ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನೆರಳಿನಲ್ಲಿ ಕೆಲಸ ಮಾಡದೇ, ಸ್ವತಂತ್ರ ತೀರ್ಮಾನಗಳನ್ನು ಸಿಕ್ಕಾ ತೆಗೆದುಕೊಂಡಿದ್ದರಿಂದ ಎಂಬುದನ್ನು ಗಮನಿಸಬೇಕು. ಸಿಕ್ಕಾ ಕಾರ್ಯಶೈಲಿಯೇ ಹಾಗಿತ್ತು. ತನ್ನ ಕೆಳಗೆ ಎರಡನೇ ಹಂತದ ನಾಯಕತ್ವವನ್ನು ಅವರು ಕಂಪನಿಯಲ್ಲಿ ಬೆಳೆಸಿದರು. ಇದು ದಶಕಗಳ ಕಾಲ ಒಂದು ಸ್ಥರದಲ್ಲಿ ನಾಯಕತ್ವವವನ್ನು ಹಿಡಿದಿಟ್ಟುಕೊಂಡಿದ್ದ ಕಂಪನಿಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿತು,” ಎನ್ನುತ್ತಾರೆ ಇನ್ಫೋಸಿಸ್ ಪರವಾಗಿ ಸದ್ಯ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು. ಬೆಂಗಳೂರು ಮೂಲದ ಅವರು ಕಳೆದ ಒಂದು ದಶಕದಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂರು ವರ್ಷಗಳ ಅಂತರದಲ್ಲಿ ಇನ್ಫೋಸಿಸ್, ಸಿಕ್ಕಾ ನೇತೃತ್ವದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡಿತ್ತು. ಸಿಕ್ಕಾ ಕಾರ್ಯಶೈಲಿ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಗಳಿಸಿದರೂ, ನಂತರ ದಿನಗಳಲ್ಲಿ ಸಂಸ್ಥೆಯ ಹಿರಿಯರ ಮಾತಿಗೆ ಅವಕಾಶಗಳು ಸಿಗದೇ ಹೋದ ಪರಿಣಾಮ ಸಂಘರ್ಷಕ್ಕೆನಾಂದಿ ಹಾಡಿತು. ಇದೇ, ಸಿಕ್ಕಾ ಅವರ ಶೈಲಿ ಮೋದಿ ಆಡಳಿತದ ಶೈಲಿಯನ್ನು ಹೋಲುತ್ತಿದೆ ಎಂದು ಸಂಸ್ಥೆಯ ಅಂತರಂಗದಲ್ಲಿ ಮಾತುಕತೆಗೆ ನಾಂದಿ ಹಾಡಿತ್ತು. ಮೋದಿ ಕೂಡ ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಲೇ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ್ ಜೋಷಿ ಅಂತವರನ್ನು ಕಡೆಗಣಿಸಿದರು. ತಮ್ಮದೇ ಪ್ರತ್ಯೇಕ ತಂಡ ಕಟ್ಟುವ ಮೂಲಕ ಸರಕಾರ ಮತ್ತು ಪಕ್ಷವನ್ನು ಹತೋಟಿಗೆ ತೆಗೆದುಕೊಂಡರು. ಆದರೆ ಬಿಜೆಪಿಯ ಹಿರಿಯ ನಾಯಕ ಅದ್ವಾನಿ ಮೌನಕ್ಕೆ ಶರಣಾದರೆ, ಇಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಿಕ್ಕಾ ಅವರ ‘ಸರ್ವಾಧಿಕಾರಿ’ ನಡೆಗಳ ವಿರುದ್ಧ ದ್ವನಿ ಎತ್ತಿದರು.

ನಾರಾಯಣ ಮೂರ್ತಿ ಪತ್ರಗಳು:

ಬೆಂಗಳೂರಿನ ಜಯನಗರದಲ್ಲಿ ಸಿಕ್ಕದೊಂದು ಕಚೇರಿಯ ಮೂಲಕ ನಾರಾಯಣ ಮೂರ್ತಿ ಹುಟ್ಟುಹಾಕಿದ ಸಂಸ್ಥೆ ಇನ್ಫೋಸಿಸ್. ಅದನ್ನು ದೇಶದ ನಂಬರ್ 1 ಸಾಫ್ಟ್’ವೇರ್ ರಫ್ತು ಸಂಸ್ಥೆಯಾಗಿ ಬೆಳೆಸಿದ್ದರ ಹಿಂದೆ ಅವರ ಶ್ರಮವಿತ್ತು. ಕೊನೆಗೊಮ್ಮೆ, ಅವರು ತಮ್ಮ ಹೆಸರಿನಲ್ಲಿದ್ದ ಬಹುತೇಕ ಶೇರುಗಳನ್ನು ಮಾರಾಟ ಮಾಡಿ, ಆಡಳಿತ ಮಂಡಳಿಯಿಂದ ಹೊರಗುಳಿದರು. ಆ ಸಮಯದಲ್ಲಿ ಅಧಿಕಾರ ವಹಿಸಿಕೊಂಡವರು ಸಿಕ್ಕಾ. ಅವರ ವೇಗ, ಕಾರ್ಯಕ್ಷಮತೆ, ಹೊಸ ವಿಧಾನಗಳು ಕಂಪನಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿತು. ಅದೇ ವೇಳೆ, ಆರ್ಥಿಕ ವಿಚಾರಗಳಲ್ಲಿ ಸಿಕ್ಕಾ ದಾರಾಳವಾಗಿ ನಡೆದುಕೊಂಡಿದ್ದು ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಕೆಂಗಣ್ಣಿಗೆ ಗುರಿಯಾಯಿತು. ಅವರು ಆಡಳಿತ ಮಂಡಳಿಗೆ ಪತ್ರ ಬರೆಯಲು ಆರಂಭಿಸಿದರು. ಇದು ಸುಮಾರು ಮೂರು ವರ್ಷಗಳ ಸುದೀರ್ಘ ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿತು.

ಹೀಗಿರುವಾಗಲೇ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ನಾರಾಯಣ ಮೂರ್ತಿ ಅವರನ್ನು ಮತ್ತೆ ಆಡಳಿತ ಮಂಡಳಿಗೆ ವಾಪಾಸ್ ಕರೆಸಿಕೊಳ್ಳುವ ಪ್ರಸ್ತಾವ ಸುದ್ದಿಯಾಗಿತ್ತು. ಬಹುಶಃ ಇದು, ವಿಶಾಲ್ ಸಿಕ್ಕಾ ಅವರ ತಕ್ಷಣದ ರಾಜೀನಾಮೆಗೆ ಪ್ರೇರಣೆ ನೀಡಿರಬಹುದು. ತಮ್ಮ ರಾಜೀನಾಮೆ ಪತ್ರದಲ್ಲಿ, “ನಿರಂತರ ಅಡೆತಡೆಗಳ” ವಿಚಾರವನ್ನು ಸಿಕ್ಕಾ ಪ್ರಸ್ತಾಪಿಸಿದರು ಕೂಡ. ಸಿಕ್ಕಾ ರಾಜೀನಾಮೆ ಬೆನ್ನಲ್ಲೇ ಆಡಳಿತ ಮಂಡಳಿ ನಾರಾಯಣ ಮೂರ್ತಿ ಅವರ ವಿರುದ್ಧ ಬಹಿರಂಗ ಆರೋಪ ಮಾಡಿತು. ಇವೆಲ್ಲವುಗಳ ಪರಿಣಾಮ, ಗತಕಾಲದಲ್ಲಿ ಬೆಂಗಳೂರಿಗೆ ಸಿಲಿಕಾನ್ ಸಿಟಿ ಗರಿ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಇನ್ಫೋಸಿಸ್ ಅಂತರಂಗದಲ್ಲಿ ಕೋಲಾಹಲ ಎಬ್ಬಿಸಿತು.

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಇದು ಸದ್ಯಕ್ಕೆ ಮುಗಿಯುವ ಐಟಿ ರಾಮಾಯಣದಂತೆ ಕಾಣಿಸುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರುವಂತೆ ಅಮೆರಿಕಾದ ಮೂರು ಕಾನೂನು ಸಂಸ್ಥೆಗಳು ಇನ್ಫೋಸಿಸ್ ನಿರ್ದೇಶಕರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿವೆ. ಇದೂ ಕೂಡ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ವಸ್ತುನಿಷ್ಟತೆಯನ್ನು ಕಳೆದುಕೊಂಡಿರುವ ಸಂಸ್ಥೆಗೆ ದುಬಾರಿಯಾಗಿ ಪರಿಣಮಿಸಲಿದೆ. ಒಂದು ಕಡೆ ಆಂತರಿಕ ಅಭದ್ರತೆ, ಮತ್ತೊಂದು ಕಡೆ ಹೊರಗಿನ ಮಾರುಕಟ್ಟೆಯ ಪೈಪೋಟಿ ನಡುವೆ ಇನ್ಫೋಸಿಸ್ ಎದ್ದು ಬರಲು ಸಾಕಷ್ಟು ಸಮಯ ಹಿಡಿಯಬಹುದು. ಅಷ್ಟೊತ್ತಿಗೆ, ನಾರಾಯಣ ಮೂರ್ತಿ ಅವರ ಕನಸಿನ ಇನ್ಫೋಸಿಸ್ ಏನಾಗಿರಲಿದೆ ಎಂಬುದು ಊಹೆ ಮಾಡಬೇಕಿದೆ. ಆದರೆ, ಮುಂದೊಂದು ದಿನ ಇತಿಹಾಸದ ಪುಟಗಳಲ್ಲಿ ಇನ್ಫೋಸಿಸ್ ದಿನಗಳ ಪ್ರಸ್ತಾಪ ಬಂದಾಗ, ನಾರಾಯಣ ಮೂರ್ತಿ ಬಿಜೆಪಿಯ ಹಿರಿಯ ನಾಯಕ ಅದ್ವಾನಿಯಾಗಲಿ ಬಯಸಲಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ದಾಖಲಾಗಿರುತ್ತದೆ.

 

Leave a comment

Top