An unconventional News Portal.

ಅಮೆರಿಕ ಷೇರುಪೇಟೆ, ಉದ್ಯೋಗ ವೃದ್ಧಿ & ‘ವ್ಯತಿರಿಕ್ತ ಪರಿಣಾಮ’: ಒಳ್ಳೆ ಸುದ್ದಿ ಕೆಟ್ಟ ಪ್ರಭಾವ ಬೀರುತ್ತಿದೆ ಎಂದ ಟ್ರಂಪ್

ಅಮೆರಿಕ ಷೇರುಪೇಟೆ, ಉದ್ಯೋಗ ವೃದ್ಧಿ & ‘ವ್ಯತಿರಿಕ್ತ ಪರಿಣಾಮ’: ಒಳ್ಳೆ ಸುದ್ದಿ ಕೆಟ್ಟ ಪ್ರಭಾವ ಬೀರುತ್ತಿದೆ ಎಂದ ಟ್ರಂಪ್


ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ಷೇರುಗಳ ಬೆಲೆ ಕುಸಿತದ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯ ಮೇಲಾಗಿದೆ. ವಾಲ್‌ ಸ್ಟ್ರೀಟ್‌ನ ಈ ಪರಿಣಾಮದಿಂದ ಜಾಗತಿಕ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಷೇರು ವಹಿವಾಟು ಕಳೆದ ವಾರದಿಂದ ಕುಸಿತ ಕಂಡಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಈ ಬೆಳವಣಿಗೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

“ಒಳ್ಳೆಯದೆಲ್ಲವೂ ಈಗ ಕೆಟ್ಟ ಪ್ರಭಾವ ಬೀರುತ್ತಿದೆ” ಎಂಬ ಟ್ರಂಪ್ ಟ್ವೀಟ್‌ನ ಹಿನ್ನೆಲೆ ಮತ್ತು ಷೇರು ಮಾರುಕಟ್ಟೆಯ ಸೂಚ್ಯಂಕ ಕುಸಿತ, ಅಮೆರಿಕದಲ್ಲಿ ಉದ್ಯೋಗ ಪ್ರಮಾಣದ ಹೆಚ್ಚಳ ಹಾಗೂ ‘ವಾಲ್‌ ಸ್ಟ್ರೀಟ್‌’ ಕುರಿತ ವಿಶ್ಲೇಷಣೆ ಇಲ್ಲಿದೆ…

ಕಳೆದ ವಾರದಿಂದ ಭಾರೀ ಸುದ್ದಿಯಲ್ಲಿರುವ ಷೇರು ಮಾರುಕಟ್ಟೆಯ ಸೂಚ್ಯಂಕ ಕುಸಿತದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಾಡಿರುವ ಟ್ವೀಟ್‌ ಕೂಡಾ ಈಗ ಸದ್ದು ಮಾಡುತ್ತಿದೆ. “ಹಿಂದೆಲ್ಲಾ ಒಳ್ಳೆಯ ಸುದ್ದಿ ಷೇರು ಮಾರುಕಟ್ಟೆಯ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರುತ್ತಿತ್ತು. ಒಳ್ಳೆಯ ಸುದ್ದಿಯಿಂದ ಷೇರು ಮಾರುಕಟ್ಟೆಯ ಸೂಚ್ಯಂಕ ಏರಿಕೆಯಾಗುತ್ತಿತ್ತು. ಆದರೆ, ಈಗ ಒಳ್ಳೆಯ ಸುದ್ದಿ ಷೇರು ಮಾರುಕಟ್ಟೆಯ ಸೂಚ್ಯಂಕ ಕುಸಿತಕ್ಕೆ ಕಾರಣವಾಗುತ್ತಿದೆ. ಇದೊಂದು ದುರಂತ ಮತ್ತು ನಮ್ಮಲ್ಲಿ ಅರ್ಥ ವ್ಯವಸ್ಥೆಯ ಬಗ್ಗೆ ಒಳ್ಳೆಯ ಸುದ್ದಿಯೇ ಇದೆ” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘ಒಳ್ಳೆಯ’ ಮತ್ತು ‘ಕೆಟ್ಟ’ ಸುದ್ದಿಗಳು ಯಾವುವು?

ಟ್ರಂಪ್‌ ಅವರ ಈ ಟ್ವೀಟ್ ಹಿಂದಿರುವ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳು ಯಾವುವು ಎಂಬುದರ ಕಡೆಗೆ ನೋಡಿದರೆ ಅದು ಅಮೆರಿಕದಲ್ಲಿ ಇತ್ತೀಚೆಗೆ ಕಡಿಮೆಯಾಗುತ್ತಿರುವ ನಿರುದ್ಯೋಗ ಪ್ರಮಾಣ. ಡೊನಾಲ್ಡ್ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಬಳಿಕ ತೆಗೆದುಕೊಂಡ ಪ್ರಮುಖ ಕ್ರಮಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿತಗೊಳಿಸುವುದೂ ಆದ್ಯತೆಯ ವಿಷಯವಾಗಿದೆ. ಪ್ರತಿ ತಿಂಗಳೂ ಉದ್ಯೋಗ ಪ್ರಮಾಣವನ್ನು ಹೆಚ್ಚಿಸಿ ಅಮೆರಿಕದಲ್ಲಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪಣ ತೊಟ್ಟಿದ್ದ ಟ್ರಂಪ್ ಆ ಒಳ್ಳೆಯ ಸುದ್ದಿಯೇ ಈಗ ಷೇರು ಮಾರುಕಟ್ಟೆಗೆ ಮುಳುವಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಅಮೆರಿಕದ ಆಂತರಿಕ ಸಮಸ್ಯೆಗಳಲ್ಲಿ ಅಲ್ಲಿನ ನಿರುದ್ಯೋಗ ಸಮಸ್ಯೆಯೂ ಪ್ರಮುಖವಾದುದು. 2010ರಲ್ಲಿ ಅಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ 9.8ರಷ್ಟು ಜನ ನಿರುದ್ಯೋಗಿಗಳಾಗಿದ್ದರು. 1983ರ ಬಳಿಕ ಹೆಚ್ಚಾದ ಗರಿಷ್ಠ ನಿರುದ್ಯೋಗ ಪ್ರಮಾಣ ಇದು. 1983ರಲ್ಲಿ ಈ ಪ್ರಮಾಣ ಶೇಕಡ 10.4ರಷ್ಟಿತ್ತು. 2018ರ ಜನವರಿ ವೇಳೆಗೆ ಅಮೆರಿಕದ ನಿರುದ್ಯೋಗ ಪ್ರಮಾಣ ಶೇಕಡ 4.1ಕ್ಕೆ ತಗ್ಗಿದೆ. 2017ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಾಗ ಇದ್ದ ನಿರುದ್ಯೋಗ ಪ್ರಮಾಣ ಶೇಕಡ 4.8. ಕಳೆದ ವರ್ಷದ ಈ ಅಂಕಿಸಂಖ್ಯೆಗೆ ಹೋಲಿಸಿದರೆ ಟ್ರಂಪ್ ಆಡಳಿತದ ಒಂದು ವರ್ಷದ ಅವಧಿಯಲ್ಲಿ ಈ ಪ್ರಮಾಣ ಶೇಕಡ 0.7ರಷ್ಟು ಕಡಿಮೆಯಾಗಿದೆ. 2017ರ ಡಿಸೆಂಬರ್‌ ವೇಳೆಗೆ ಅಮೆರಿಕದಲ್ಲಿ 1,48,000 ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ತಿಂಗಳಿಗೆ ಕನಿಷ್ಠ 1 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಅಮೆರಿಕ ಸರ್ಕಾರ ಹೊಂದಿದೆ. ಹಂತ ಹಂತವಾಗಿ ಈ ಗುರಿ ಸಾಧನೆಗೆ ಅಲ್ಲಿನ ಸರ್ಕಾರ ಮುಂದಾಗಿದೆ. ಉದ್ಯೋಗ ಹೆಚ್ಚಳದ ಈ ಪ್ರಗತಿಯನ್ನೇ ಟ್ರಂಪ್‌ ಒಳ್ಳೆಯ ಸುದ್ದಿ ಎಂದಿದ್ದಾರೆ. ಆದರೆ, ಈ ಒಳ್ಳೆಯ ಸುದ್ದಿಯೇ ವಾಲ್‌ ಸ್ಟ್ರೀಟ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದಿದ್ದಾರೆ ಟ್ರಂಪ್. ಹಾಗಾದರೆ ಉದ್ಯೋಗ ಸೃಷ್ಟಿ ಷೇರು ಮಾರುಕಟ್ಟೆಯ ಮೇಲೆ ಪ್ರತೀಕೂಲ ಪರಿಣಾಮ ಬೀರಲು ಸಾಧ್ಯವೇ?

ಟ್ರಂಪ್ ಗಿಮಿಕ್

ಉದ್ಯೋಗ ಸೃಷ್ಟಿಗೂ ಷೇರು ಮಾರುಕಟ್ಟೆಗೂ ಟ್ರಂಪ್ ತಳುಕು ಹಾಕುತ್ತಿರುವುದು ಗಿಮಿಕ್ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು. “ಉದ್ಯೋಗ ಸೃಷ್ಟಿಯು ಷೇರು ಮಾರುಕಟ್ಟೆಯ ಮೇಲೆ ಒಳ್ಳೆಯ ಪರಿಣಾಮ ಬೀರಬಹುದೇ ಹೊರತು ಕೆಟ್ಟ ಪರಿಣಾಮ ಬೀರಲು ಸಾಧ್ಯವಿಲ್ಲ. ಇದೆಲ್ಲವೂ ಟ್ರಂಪ್ ಗಿಮಿಕ್. ಉದ್ಯೋಗ ಸೃಷ್ಟಿಯಾದರೆ ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಇದರಿಂದ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇದು ಅರ್ಥ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉದ್ಯೋಗ ಸೃಷ್ಟಿ ಮತ್ತು ಷೇರು ಮಾರುಕಟ್ಟೆಗೆ ಪೂರಕವಾದ ಸಂಬಂಧವಿದೆಯೇ ಹೊರತು ವ್ಯತಿರಿಕ್ತ ಪರಿಣಾಮ ಉಂಟಾಗಲು ಸಾಧ್ಯವಿಲ್ಲ” ಎನ್ನುತ್ತಾರೆ ಆರ್ಥಿಕ ವಿಶ್ಲೇಷಕ ‘ಇಂಡಿಯನ್‌ ಮನಿ’ಯ ಮುಖ್ಯಸ್ಥ ಸಿ. ಎಸ್. ಸುಧೀರ್.

“ಕಳೆದ ವಾರದ ಷೇರುಪೇಟೆ ಸೂಚ್ಯಂಕ ಕುಸಿತದ ಮೇಲೆ ಜಾಗತಿಕ ಮಾರುಕಟ್ಟೆಯ ಪರಿಣಾಮವಿದೆ. ಷೇರು ಮಾರುಕಟ್ಟೆಯಲ್ಲಿ ಇಂಥ ಏರಿಳಿತ ಆಗುವುದು ಸಾಮಾನ್ಯ. ಮಂಗಳವಾರ (ಫೆಬ್ರುವರಿ 6, 2018) ಕುಸಿತ ಕಂಡಿದ್ದ ಪೇರು ಮಾರುಕಟ್ಟೆ ಎರಡು ದಿನಗಳ ಬಳಿಕ ಚೇತರಿಕೆ ಕಂಡಿದೆ. ಷೇರು ಮಾರುಕಟ್ಟೆಯ ಈ ಅನಿಶ್ಚಿತತೆಗೂ ಅಮೆರಿಕದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಳಕ್ಕೂ ಯಾವುದೇ ಸಂಬಂಧವಿಲ್ಲ. ಉದ್ಯೋಗ ಸೃಷ್ಟಿ ಆರ್ಥಿಕತೆಯಲ್ಲಿ ಯಾವಾಗಲೂ ಒಳ್ಳೆಯ ಬೆಳವಣಿಗೆಯೇ. ಈ ಒಳ್ಳೆಯ ಬೆಳವಣಿಗೆಯಿಂದ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ” ಎಂಬುದು ಅವರ ಅಭಿಪ್ರಾಯ.

‘ವಾಲ್‌ ಸ್ಟ್ರೀಟ್’ಗೆ ಈ ಹೆಸರೇಕೆ ಬಂತು?

ಅಮೆರಿಕದ ಷೇರು ಮಾರುಕಟ್ಟೆ ‘ವಾಲ್ ಸ್ಟ್ರೀಟ್’ ಎಂದೇ ಜನಪ್ರಿಯವಾಗಿದೆ. ನ್ಯೂಯಾರ್ಕ್ ಸ್ಟಾಕ್‌ ಎಕ್ಸ್‌ಚೇಂಜ್‌ ಇರುವುದು ಇದೇ ವಾಲ್ ಸ್ಟ್ರೀಟ್‌ ಪ್ರದೇಶದಲ್ಲಿ. ಜಾಗತಿಕ ಮಾರುಕಟ್ಟೆಯ ಪ್ರಮುಖ ಮಾರ್ಗ ಈ ವಾಲ್‌ ಸ್ಟ್ರೀಟ್‌. ನ್ಯೂಯಾರ್ಕ್‌ನ ದಕ್ಷಿಣ ಮ್ಯಾನ್‌ಹಟನ್‌ನಲ್ಲಿ ಈ ಮಾರುಕಟ್ಟೆ ಪ್ರದೇಶ ಇದೆ. ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿ ರಸ್ತೆ ಈ ವಾಲ್‌ ಸ್ಟ್ರೀಟ್. ಮುಂಬೈ ಷೇರು ಮಾರುಕಟ್ಟೆಯನ್ನು ದಲಾಲ್ ಸ್ಟ್ರೀಟ್ ಎಂದು ಕರೆಯುವಂತೆ ಅಮೆರಿಕದ ಈ ಷೇರು ಮಾರುಕಟ್ಟೆ ಪ್ರದೇಶಕ್ಕೆ ವಾಲ್‌ ಸ್ಟ್ರೀಟ್‌ ಎಂಬ ಹೆಸರು ಬಂದಿದೆ. ಆದರೆ, ಈ ಹೆಸರಿನ ಜಾಡು ಹಿಡಿದು ಹೊರಟರೆ ಕುತೂಹಲಕಾರಿ ಕಥೆ ತೆರೆದುಕೊಳ್ಳುತ್ತದೆ. ವಾಲ್ ಎಂದರೆ ಗೋಡೆ, ಸ್ಟ್ರೀಟ್ ಎಂದರೆ ದಾರಿ. ಹಾಗಾದರೆ ಈ ಷೇರು ಮಾರುಕಟ್ಟೆಯ ಹೆಸರು ‘ಗೋಡೆ ದಾರಿ’ ಎಂದು ಏಕೆ ಆಯಿತು ಎಂಬ ಪ್ರಶ್ನೆ ಮೂಡುವುದು ಸಹಜ.

16ನೇ ಶತಮಾನದಲ್ಲಿ ದಕ್ಷಿಣ ಮ್ಯಾನ್‌ಹಟನ್‌ ಪ್ರದೇಶ ಹಣಕಾಸು ಜಿಲ್ಲೆ ಎಂದೇ ಹೆಸರಾಗಿತ್ತು. ನ್ಯೂಯಾರ್ಕ್‌ನಲ್ಲಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುತ್ತಿದ್ದ ಪ್ರದೇಶ ಇದು. ಈ ಪ್ರದೇಶಕ್ಕೆ ಜಲಮಾರ್ಗವಾಗಿ ನಡೆಯಬಹುದಾಗಿದ್ದ ದಾಳಿಗಳನ್ನು ತಡೆಯುವ ಉದ್ದೇಶದಿಂದ 1640ರಲ್ಲಿ ಈ ಪ್ರದೇಶದಲ್ಲಿ ಮೊದಲು ಮರದ ಬೇಲಿ ನಿರ್ಮಿಸಲಾಗಿತ್ತು. 1685ರಲ್ಲಿ ಡಚ್‌ ವೆಸ್ಟ್ ಇಂಡಿಯಾ ಕಂಪೆನಿಯ ಆಫ್ರಿಕನ್‌ ಗುಲಾಮರನ್ನು ಬಳಸಿಕೊಂಡು 12 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿತು. ಈ ಗೋಡೆಯಿಂದ ನಗರದ ಪ್ರದೇಶದ ಕಡೆಗೆ ವ್ಯಾಪಾರ ವಹಿವಾಟು ನಡೆಯುತ್ತಿದ್ದರೆ ಗೋಡೆಯ ಹಿಂದೆ ಗುಲಾಮರ ಕಾಲೊನಿಗಳಿದ್ದವು. ಈ ಕಾಲೊನಿಗಳಿಂದ ಶ್ರೀಮಂತರು ಗುಲಾಮರನ್ನು ಕೊಂಡುಕೊಳ್ಳುವುದು ಕೂಡಾ ನಡೆಯುತ್ತಿತ್ತು ಎನ್ನುತ್ತದೆ ಇತಿಹಾಸ. 1699ರಲ್ಲಿ ಈ ಗೋಡೆಯನ್ನು ಕೆಡವಲಾಯಿತು. ಮತ್ತೊಂದು ಮೂಲದ ಪ್ರಕಾರ ಈ ಪ್ರದೇಶದಲ್ಲಿ ‘ವಾಲ್ಲೂನ್‌’ ಎಂಬ ಸಮುದಾಯ ಜನ ವಾಸಿಸುತ್ತಿದ್ದರು. ವಾಲ್ಲೂನ್‌ ಸಮುದಾಯದ ಜನರಿದ್ದ ಪ್ರದೇಶದ ಉದ್ದವಾದ ಈ ರಸ್ತೆಗೆ ವಾಲ್ಲೂನ್‌ ಸ್ಟ್ರೀಟ್‌ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿ ಗೋಡೆ ನಿರ್ಮಾಣವಾದ ಬಳಿಕ ವಾಲ್ಲೂನ್‌ ಸ್ಟ್ರೀಟ್ ಕ್ರಮೇಣ ವಾಲ್‌ ಸ್ಟ್ರೀಟ್‌ ಎಂದು ಹೆಸರಾಗಿದೆ ಎಂದೂ ಹೇಳಲಾಗುತ್ತದೆ.

Leave a comment

Top