An unconventional News Portal.

ಚುನಾವಣೆ- 2016: ಸ್ಥಳೀಯರ ಹೋರಾಟ; ಸಮೀಕ್ಷೆಗಳ ಕೋತಿ ಆಟ; ನಿರೀಕ್ಷಿತ ಫಲಿತಾಂಶಗಳ ‘ರಂಗಿನಾಟ’!

ಚುನಾವಣೆ- 2016: ಸ್ಥಳೀಯರ ಹೋರಾಟ; ಸಮೀಕ್ಷೆಗಳ ಕೋತಿ ಆಟ; ನಿರೀಕ್ಷಿತ ಫಲಿತಾಂಶಗಳ ‘ರಂಗಿನಾಟ’!

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ‘ನೀಲಿ’, ಕೇರಳದಲ್ಲಿ ಎಡಪಕ್ಷಗಳ ‘ಕೆಂಪು’, ತಮಿಳುನಾಡಿನಲ್ಲಿ ಎಐಎಡಿಎಂಕೆಯ ‘ಹಸಿರು’, ಅಸ್ಸಾಂನಲ್ಲಿ ಬಿಜೆಪಿಯ ‘ಕೇಸರಿ’ ಬಣ್ಣಗಳಿಗೆ ಜನರ ಮನ್ನಣೆ…

ಇಂತಹದೊಂದು ‘ರಂಗಿನಾಟ’ಕ್ಕೆ ಸಾಕ್ಷಿಯಾಗಿರುವುದು 2016ರ ವಿಧಾನಸಭಾ ಚುನಾವಣೆಗಳು. ಗುರುವಾರ ಹೊರಬಿದ್ದಿರುವ ನಾಲ್ಕೂ ರಾಜ್ಯಗಳ ಚುನಾವಣಾ ಫಲಿತಾಂಶ, ಕೆಲವು ಕಡೆಗಳಲ್ಲಿ ನಿರೀಕ್ಷಿತ ಫಲ ಕೊಟ್ಟಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಅಚ್ಚರಿ ಮೂಡಿಸಿದೆ.

ಪಶ್ಚಿಮ ಬಂಗಾಳದ ಪಾಲಿಗೆ ‘ಅಗ್ನಿ ದೇವತೆ’ ಎಂದು ಕರೆಸಿಕೊಳ್ಳುತ್ತಿರುವ ಮಮತಾ ದೀದಿ ಮುಖ್ಯಮಂತ್ರಿಯಾಗಿ ಪುನರ್ ಆಯ್ಕೆ ಆಗಿದ್ದಾರೆ. ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಇನ್ನು, ತಮಿಳುನಾಡಿನಲ್ಲಿ ಸಮೀಕ್ಷೆಗಳು ಮೂಡಿಸಿದ ಗೊಂದಲ ಆಚೆಗೂ ನಿರೀಕ್ಷೆಯಂತೆಯೇ ಆಡಳಿತ ವಿರೋಧಿ ಅಲೆಯನ್ನು ಮೀರುವಲ್ಲಿ ಜಯಲಲಿತಾ ಸಫಲರಾಗಿದ್ದಾರೆ. ಎಂಜಿಆರ್ ನಂತರ ಸತತ ಎರಡನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಪದವಿಗೇರುತ್ತಿರುವ ಹೆಗ್ಗಳಿಕೆ ಇವರದ್ದಾಗಲಿದೆ.

ಕೇರಳದಲ್ಲಿ ಆಡಳಿತರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್)ನ್ನು ಮಣಿಸಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ ಡಿಎಫ್) ಅಧಿಕಾರಕ್ಕೆ ಬಂದಿದೆ. ಕೇರಳದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಈ ಚಕ್ರ ಪುನಾವರ್ತನೆಯಾಗುತ್ತಿರುವುದರಿಂದ ಈ ಫಲಿತಾಂಶ ನಿರೀಕ್ಷಿತ. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯವೊಂದರಲ್ಲಿ ಕೇಸರಿ ಪಕ್ಷ ತನ್ನ ಅಧಿಕಾರದ ಖಾತೆ ತೆರೆಯುತ್ತಿದೆ.

ಇನ್ನು, ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದ್ದು, ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರ ರಚಿಸಲಿವೆ.

ರಾಷ್ಟ್ರೀಯ ಆಯಾಮ: 

ಕಳೆದ ಲೋಕಸಭೆ ಚುನಾವಣೆಯಿಂದ ಈಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷದ ಅಧಃಪತನಕ್ಕೆ ಈ ಚುನಾವಣೆಗಳೂ ತಮ್ಮ ಸಾಥ್ ನೀಡಿವೆ. ಈವರೆಗೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಅಸ್ಸಾಂ ಬಿಜೆಪಿ ಪಾಲಾಗಿರುವುದು ಮತ್ತು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸೋಲನ್ನು ಅನುಭವಿಸಿರುವುದು ‘ದೇಶದ ಪುರಾತನ ಪಕ್ಷ’ದ ಪಾಲಿಗೆ ಭಾರಿ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಡಿಎಂಕೆ ಹಾಗೂ ಸಿಪಿಐ (ಎಂ) ನಡುವೆ ಮಾಡಿಕೊಂಡಿರುವ ಹೊಂದಾಣಿಕೆಯಿಂದಲೂ ಕಾಂಗ್ರೆಸ್ಗೆ ಫಲ ಸಿಕ್ಕಿಲ್ಲ. ಇದು ರಾಹುಲ್ ಗಾಂಧಿ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಇಳಿಯುತ್ತಿರುವುದರ ಫಲ ಎನ್ನಲಾಗುತ್ತಿದೆ. “ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಬೇಕಿದೆ,” ಎಂಬುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ.

ಸ್ಥಳೀಯರ ಹೋರಾಟ:

ಹಾಗೆ ನೋಡಿದರೆ, ಈ ಚುನಾವಣೆ ಫಲಿತಾಂಶ ಸ್ಥಳೀಯ ನಾಯಕರ ಹೋರಾಟಕ್ಕೆ ಸಿಕ್ಕ ಪ್ರತಿಫಲದಿಂತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿ ಹೋರಾಟ, ತಮಿಳುನಾಡಿನಲ್ಲಿ ಜಯಲಲಿತಾ ಇಟ್ಟ ನಿಗೂಢ ಗೆಜ್ಜೆಗಳು ಇಡೀ ಚುನಾವಣೆಯ ಕೇಂದ್ರಬಿಂದುಗಳು.

ಇದರ ಜತೆಗೆ, ಕೇರಳದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಖಾತೆ ತೆರೆಯಲು ಅವಕಾಶ ನೀಡಲಾಗಿದೆಯಾದರೂ, ಅದರ ಹಿಂದಿರುವುದು ಕೂಡ ಸ್ಥಳೀಯ ಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿದ ನಾಯಕ ಓ. ರಾಜಗೋಪಾಲ್ ಶ್ರಮಕ್ಕೆ ಜನ ನೀಡಿದ ಮನ್ನಣೆ. ಅಸ್ಸಾಂನಲ್ಲಿಯೂ ಕಾಂಗ್ರೆಸ್ ವಿರೋಧಿ ಅಲೆಯನ್ನು ಹುಟ್ಟುಹಾಕುವಲ್ಲಿ ಸದ್ಯ ಬಿಜೆಪಿಯಿಂದ ಸಿಎಂ ಅಭ್ಯರ್ಥಿಯಾಗಿರುವ ಸರ್ಬಾನಂದ ಸೊನಾವಾಲ್ ಪರಿಶ್ರಮವಿದೆ.

ಹೀಗೆ, ರಾಷ್ಟ್ರೀಯ ಮಟ್ಟದಲ್ಲಿ ಈ ಚುನಾವಣೆಗಳು ತಮ್ಮದೇ ಪರಿಣಾಮಗಳನ್ನು ಬೀರಿದರೂ, ಸ್ಥಳೀಯ ನಾಯಕರ ಹೋರಾಟಕ್ಕೆ ಜನ ಮನ್ನಣೆ ನೀಡಿದ್ದಾರೆ ಮತ್ತು ರಾಷ್ಟ್ರೀಯ ನಾಯಕರನ್ನು ಹೊರಗಿಟ್ಟಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

ಯಾರಿಗೆ ಎಷ್ಟು?: 

ರಾಜ್ಯಾವಾರು ಚುನಾವಣಾ ಫಲಿತಾಂಶ ಹೀಗಿದೆ (ಸಂಜೆ 6.30ರ ಸುಮಾರಿಗೆ)

ಇಂಡಿಯಾ ಟುಡೆ ಗ್ರಾಫಿಕ್ಸ್.

ಇಂಡಿಯಾ ಟುಡೆ ಗ್ರಾಫಿಕ್ಸ್.

 

Top