An unconventional News Portal.

‘ಕಾಸ್ಟ್ ಆಫ್ ವಾರ್’: ಯುದ್ಧ ಎಂದರೆ ಬರೀ ಮದ್ದು ಗುಂಡುಗಳ ಕಾದಾಟ ಅಲ್ಲವೋ ಅಣ್ಣಾ!

‘ಕಾಸ್ಟ್ ಆಫ್ ವಾರ್’: ಯುದ್ಧ ಎಂದರೆ ಬರೀ ಮದ್ದು ಗುಂಡುಗಳ ಕಾದಾಟ ಅಲ್ಲವೋ ಅಣ್ಣಾ!

ಯುದ್ಧ ಎಂದರೆ; ಉನ್ಮಾದ, ರಣೋತ್ಸಾಹ, ವಿಜಯ, ಬಲಪ್ರದರ್ಶನ, ಬಲಿದಾನ… ಯುದ್ಧ ಎಂದರೆ; ಸಾವು- ನೋವು, ರಕ್ತಪಾತ, ಅಶಾಂತಿ, ಅನಗತ್ಯ ಕಾದಾಟ… ಅಷ್ಟೇ ಅಲ್ಲ, ಯುದ್ಧ ಎಂದರೆ ಅಪಾರ ಪ್ರಮಾಣದ ಹಣದ ಹೂಡಿಕೆ, ವೆಚ್ಚ ಮತ್ತು ಆರ್ಥಿಕತೆ ಮೇಲೆ ಭಾರಿ ಪರಿಣಾಮ ಕೂಡ.

ಆಧುನಿಕ ಪ್ರಪಂಚದಲ್ಲಿ ಬಹುತೇಕ ದೇಶಗಳು ಒಂದಿಲ್ಲೊಂದು ಕಾರಣಕ್ಕೆ ಯುದ್ಧವನ್ನು ಮಾಡಿವೆ, ಯುದ್ಧದ ಅನುಭವಗಳನ್ನು ಪಡೆದುಕೊಂಡಿವೆ. ಭಾರತ ಕೂಡ ಸ್ವಾತಂತ್ರ್ಯ ನಂತರ ನೆರೆಯ ದೇಶಗಳ ನಡುವೆ ಐದು  ಪ್ರಮುಖ ಯುದ್ಧಗಳನ್ನು ಮಾಡಿದೆ. ಇವುಗಳ ವೆಚ್ಚ ಕಾಲಕಾಲಕ್ಕೆ ಹೆಚ್ಚಾಗುತ್ತಲೇ ಬಂದಿದೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಹಾಗೂ ಭಾರತ ಮತ್ತು ಚೈನಾ ನಡುವೆ ಯುದ್ಧದ ವಾತಾವರಣ ಇದೆ. ಇವತ್ತು ಏನಾದರೂ ಯುದ್ಧ ನಡೆದರೆ ಆಗುವ ವೆಚ್ಚ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ವಿಶ್ಲೇಷಣೆಗಳಿವೆ.

ಈವರೆಗಿನ ವೆಚ್ಚ:

ಸ್ವಾತಂತ್ರ್ಯ ನಂತರ ಭಾರತ ಮೊದಲ ಯುದ್ಧವನ್ನು ಎದುರಿಸಿದ್ದು ಪಾಕಿಸ್ತಾನದ ನಡುವೆ; 1947-48ರಲ್ಲಿ. ಇದರ ವೆಚ್ಚಗಳು ಎಷ್ಟಾಗಿದ್ದವು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಅವತ್ತಿಗೆ ಭಾರತ ಸುಮಾರು ನೂರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿತ್ತು ಎನ್ನಲಾಗುತ್ತಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ಕಡೆಯಿಂದ ವೆಚ್ಚವಾಗಿದ್ದು ವಾರಕ್ಕೆ 200 ಕೋಟಿ ರೂಪಾಯಿ. ಸುಮಾರು 14 ದಿನಗಳ ಕಾಲ ನಡೆದ ಈ ಯುದ್ಧಕ್ಕೆಅಂದಾಜು 400 ಕೋಟಿ ರೂಪಾಯಿ.

ಅದೇ ಕಾರ್ಗಿಲ್ ಯುದ್ಧದ ವಿಚಾರಕ್ಕೆ ಬಂದರೆ ಮಿಲಿಟರಿ ವೆಚ್ಚ ಅನೇಕ ಪಟ್ಟು ಹೆಚ್ಚಾಗಿರುವುದು ಕಂಡು ಬರುತ್ತದೆ. 1998- 99ರಲ್ಲಿ ಭಾರತದ ಸೇನೆಗಾಗಿ ಆಯವ್ಯಯದಲ್ಲಿ ಎತ್ತಿಟ್ಟಿದ್ದ ಮೊತ್ತಲೇ 39,897 ಕೋಟಿ ರೂಪಾಯಿ. ಆದರೆ, ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ 1999- 2000ನೇ ಇಸವಿಯಲ್ಲಿ ಮಿಲಿಟರಿ ಬಜೆಟ್‌ನಲ್ಲಿ ಶೇ. 18ರಷ್ಟು ಹೆಚ್ಚಾಗಿತ್ತು. ಆ ವರ್ಷ ದೇಶದ ತೆರಿಗೆದಾರ ಹಣದಲ್ಲಿ ಮಿಲಿಟರಿಗಾಗಿ ವೆಚ್ಚ ಮಾಡಿದ್ದು 47,071 ಕೋಟಿ ರೂಪಾಯಿ.

‘ಆಪರೇಶನ್ ವಿಜಯ್’ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯ ಖರ್ಚು ವೆಚ್ಚಗಳ ಮಾಹಿತಿ ಈ ಕುರಿತು ಇನ್ನಷ್ಟು ಒಳನೋಟಗಳನ್ನು ನೀಡುತ್ತದೆ. ಒಟ್ಟು 56 ದಿನಗಳ ಕಾಲ ನಡೆದ ಈ ಮಿಲಿಟರಿ ಕಾರ್ಯಾಚರಣೆಗೆ ಪ್ರತಿ ದಿನ ವೆಚ್ಚ ಆಗಿದ್ದು 5- 10 ಕೋಟಿ ರೂಪಾಯಿಗಳು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಈ ಸಮಯದಲ್ಲಿ ನಡೆದ 300ಕ್ಕೂ ಹೆಚ್ಚು ವಾಯುದಾಳಿಗೆ ಖರ್ಚಾಗಿದ್ದೇ ಸುಮಾರು 2 ಸಾವಿರ ಕೋಟಿ. ದಿನಕ್ಕೆ 5 ಕೋಟಿ ಅಂತ ಅಂದುಕೊಂಡರೂ, 56 ದಿನಗಳಿಗೆ ವೆಚ್ಚವಾಗಿದ್ದು ಎಷ್ಟು ಎಂಬುದನ್ನು ನೀವೇ ಲೆಕ್ಕ ಹಾಕಿ ನೋಡಿ.

siachen-1

ಇನ್ನು, ಸಿಯಾಚಿನ್ ಭಾರತದ ಗಡಿಯಲ್ಲಿರುವ ಅತ್ಯಂತ ಎತ್ತರ ಗಡಿ ಪ್ರದೇಶ. ಹಿಮಚ್ಛಾದಿತ 76 ಕಿ. ಮೀ ಉದ್ದದ ಈ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಹುಟ್ಟಿಕೊಂಡಿದ್ದು 1984ರಲ್ಲಿ. ಮುಂದಿನ ಐದಾರು ವರ್ಷಗಳ ಕಾಲ ಭಾರತೀಯ ಸೇನೆ ದೊಡ್ಡ ಮಟ್ಟದಲ್ಲಿ ಈ ಗಡಿ ಪ್ರದೇಶದಲ್ಲಿ ಸೈನಿಕರನ್ನು ನಿಯೋಜನೆ ಮಾಡಿತ್ತು. ಇದಕ್ಕಾಗಿ ಪ್ರತಿ ದಿನ 3 ಕೋಟಿ ಲೆಕ್ಕದಲ್ಲಿ ಒಟ್ಟು 5557 ದಿನಗಳ ಕಾಲ ಸೈನಿಕರು ಗಡಿಯನ್ನು ಕಾಯುವ ಕೆಲಸ ಮಾಡಿದ್ದರು. ಇದಕ್ಕೆ ವೆಚ್ಚವಾಗಿದ್ದು 16,601 ಕೋಟಿ ರೂಪಾಯಿ. ಸಿಯಾಚಿನ್ ಪ್ರದೇಶದಲ್ಲಿ ಒಟ್ಟು 108 ಮಿಲಿಟರಿ ಪೋಸ್ಟ್‌ಗಳಿಗೆ ಆಹಾರವನ್ನು ಒದಗಿಸಲು ಬಳಸುವ ವಿಮಾನಗಳಿಗೆ ಪ್ರತಿ ಗಂಟೆಗೆ 25ರಿಂದ 45 ಸಾವಿರ ವೆಚ್ಚ ಮಾಡಲಾಗಿತ್ತು. 10 ರೂಪಾಯಿಯ ಫ್ರೂಟಿ ಪ್ಯಾಕ್‌ನ್ನು ಸಿಯಾಚಿನ್ ತಲುಪಿಸುವ ಹೊತ್ತಿಗೆ 85 ರೂಪಾಯಿ ಖರ್ಚಾಗಿತ್ತು. ಒಂದು ಲೀಟರ್ ಸೀಮೆಎಣ್ಣೆ ಸಿಯಾಚಿನ್ ತುದಿ ತಲುಪುವ ಹೊತ್ತಿಗೆ 138 ರೂಪಾಯಿಗಳಾಗಿತ್ತು.

ಇಂತಹ ಖರ್ಚು ವೆಚ್ಚಗಳ ಆಚೆಗೂ ಯುದ್ಧ ಎಂದರೆ ಒಂದಷ್ಟು ಸೈನಿಕರ, ನಾಗರಿಕ ಬಲಿದಾನವನ್ನು ಬೇಡುತ್ತದೆ. ಮಾನವ ಸಂಪನ್ಮೂಲದ ನಷ್ಟಕ್ಕೆ ಬೆಲೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇದಿಷ್ಟು ಯುದ್ಧದ ಆರ್ಥಿಕ ಲೆಕ್ಕಾಚಾರಗಳಾದರೆ, ಯುದ್ಧದ ನಂತರದ ಪರಿಣಾಮಗಳೇನು? ಯುದ್ಧದ ನಂತರ ದೇಶದ ಆರ್ಥಿಕತೆಯ ನಲುಗುವಿಕೆ ಹೇಗಿರುತ್ತದೆ? ಈ ಕುರಿತು ನಮ್ಮಲ್ಲಿ ಹೆಚ್ಚಿನ ಅಧ್ಯಯನಗಳ ಕೊರತೆ ಎದ್ದು ಕಾಣಿಸುತ್ತದೆ.

ಅಮೆರಿಕಾ ಉದಾಹರಣೆ:

ಅಮೆರಿಕಾದ ‘ಇನ್ಸ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಅಂಡ್ ಪೀಸ್’ ತನ್ನ ದೇಶ ನಡೆಸಿದ ಯುದ್ಧಗಳು ಹಾಗೂ ನಂತರ ದೇಶದ ಆರ್ಥಿಕತೆ ಮೇಲೆ ಮೂಡಿದ ಪರಿಣಾಮಗಳನ್ನು ಅಂಕಿ ಅಂಶಗಳ ಸಮೇತ ವರದಿಯೊಂದನ್ನು 2012ರಲ್ಲಿ ಬಿಡುಗಡೆ ಮಾಡಿತ್ತು. ಎರಡನೇ ಮಹಾಯುದ್ಧ ಮತ್ತು ನಂತರ ಮಹಾಕುಸಿತ, ಕೋರಿಯನ್ ವಾರ್, ವಿಯಟ್ನಾಂ ವಾರ್, ಶೀಲತ ಸಮರ, ಇರಾಕ್ ಮತ್ತು ಅಫ್ಘಾನಿಸ್ತಾನ ಯುದ್ಧಗಳ ನಂತರ ದೇಶದ ಆರ್ಥಿಕತೆ ಪರಿಣಾಮಗಳನ್ನು 20 ಪುಟಗಳ ವರದಿ ಬಹಿರಂಗ ಪಡಿಸಿತ್ತು. (ಆಸಕ್ತರಿಗೆ ವರದಿ ಇಲ್ಲಿದೆ. )

“ಎರಡನೇ ಮಹಾಯುದ್ಧದ ಸಮಯದಲ್ಲಿ ಮಿಲಿಟರಿ ಮೇಲೆ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿದ್ದರ ಪರಿಣಾಮ ನಿರುದ್ಯೋಗ, ಹಣದುಬ್ಬರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು,” ಎಂದು ವರದಿ ಹೇಳುತ್ತದೆ. ಇದೇ ರೀತಿ, ಅಮೆರಿಕಾದ ಆರ್ಥಿಕತೆ ಹೇಗೆ ಪ್ರತಿ ಯುದ್ಧದ ನಂತರವೂ ಕುಸಿತಕ್ಕೆ ಕಾರಣವಾಯಿತು ಮತ್ತು ದೇಶದ ತೆರಿಗೆದಾರರ ಮೇಲೆ ಹೆಚ್ಚಿನ ಸಾಲ ಹೊರೆಯನ್ನು ಹಾಗೂ ನಿತ್ಯ ಬದುಕಿನಲ್ಲಿ ಹಣದುಬ್ಬರದ ಪರಿಣಾಮಗಳು ಹೇಗಿದ್ದವು ಎಂಬುದನ್ನು ವರದಿ ವಿವರಿಸುತ್ತದೆ.

unemployment

9/11 ದಾಳಿಯ ನಂತರ ಅಮೆರಿಕಾ ಮಾಡಿದ ಯುದ್ಧಗಳಿಗಾಗಿ ಈವರೆಗೆ ಖರ್ಚು ಮಾಡಿದ ಹಣದ ಮೊತ್ತವೇ 4.8 ಟ್ರಿಲಿಯನ್ ಡಾಲರ್ ಎಂಬುದು ಅಲ್ಲಿನ ಕಾಂಗ್ರೆಸ್‌ಗೆ ಸರಕಾರ ನೀಡಿದ ಅಧಿಕೃತ ಮಾಹಿತಿ.

ಯುದ್ಧದ ಕುರಿತು ಭ್ರಮೆಗಳು:

ಇವತ್ತು ಭಾರತ ಮತ್ತು ಚೈನಾ ಗಡಿಯಲ್ಲಿ ರಾಜತಾಂತ್ರಿಕ ಸಂಘರ್ಷ ಆರಂಭವಾಗುತ್ತಿದ್ದಂತೆ ಯುದ್ಧದ ವಾತಾವರಣದ ಕುರಿತು ಟಿವಿ ವಾಹಿನಿಗಳಲ್ಲಿ ಪ್ಯಾನಲ್‌ ಚರ್ಚೆಗಳು ನಡೆಯುತ್ತಿವೆ. ಪರ ಮತ್ತು ವಿರೋಧದ ಆಚೆಗೆ ನೋಡಲು ಸಾಧ್ಯವಾಗದ ಇಂತಹ ಚರ್ಚೆಗಳು ಚರ್ವಿತ ಚರ್ವಣಕ್ಕೆ ಸೀಮಿತವಾಗಿವೆ. ಆದರೆ ದೊಡ್ಡ ಪ್ರಮಾಣದ ಜನ ಸಮೂಹ ಯುದ್ಧದ ಕುರಿತು ಏನು ಯೋಚನೆ ಮಾಡುತ್ತಾರೆ ಎಂಬ ಕುರಿತು ಸಣ್ಣಮಟ್ಟದ ಸಮೀಕ್ಷೆ ಕೂಡ ನಡೆಸುವ ಗೋಜಿಗೆ ಯಾರೂ ಹೋಗಿಲ್ಲ. ಹೋದರೂ ಅಚ್ಚರಿ ಎನ್ನಿಸುವ ಅಂಶಗಳು ಬೆಳಕಿಗೆ ಬರಬಹುದು ಎಂಬುದಕ್ಕೆ 2003ರ ಇರಾಕ್ ಯುದ್ಧಕ್ಕೂ ಮೊದಲು ಸಿಬಿಎಸ್‌/ ನ್ಯೂಯಾರ್ಕ್‌ ಟೈಮ್ಸ್‌ ನಡೆಸಿದ ಸಮೀಕ್ಷೆ ಸಾಕ್ಷಿ. ಈ ಸಮಯದಲ್ಲಿ ಪ್ರತಿಕ್ರಿಯಿಸಿದ ಜನರಲ್ಲಿ ಶೇ. 23 ರಷ್ಟು ಮಂದಿ ಯುದ್ಧದಿಂದ ದೇಶದ ಆರ್ಥಿಕತೆ ಬೆಳವಣಿಗೆಯಾಗುತ್ತದೆ ಎಂದು ಹೇಳಿದ್ದರು. ಶೇ. 41ರಷ್ಟು ಜನ ಇದನ್ನು ಅಲ್ಲಗಳೆದಿದ್ದವು. ಶೇ. 31ರಷ್ಟು ಜನ ಯುದ್ಧ ಆದರೂ, ಆಗದೇ ಹೋದರೂ ತಮ್ಮ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ 2008ರಲ್ಲಿ ಸಿಎನ್‌ಎನ್‌ ನಡೆಸಿದ ಸಮೀಕ್ಷೆಯಲ್ಲಿ ಅಮೆರಿಕಾದ ಶೇ. 71ರಷ್ಟು ಜನ ಯುದ್ಧದಿಂದ ದೇಶದ ಆರ್ಥಿಕತೆ ಹೊಡೆತ ತಿನ್ನುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಐದು ವರ್ಷಗಳ ಅಂತರದಲ್ಲಿ ಅಮೆರಿಕಾದ ಜನರ ಯುದ್ಧದ ಬಗೆಗಿನ ಅಭಿಪ್ರಾಯದಲ್ಲಿ ದೊಡ್ಡ ಬದಲಾವಣೆ ಬಂದಿತ್ತು.

ಸದ್ಯ ನಮ್ಮಲ್ಲಿ ಯುದ್ಧೋನ್ಮಾದ ಅಥವಾ ಶಾಂತಿ ಮಂತ್ರ ಎರಡು ಭಿನ್ನ ನಿಲವುಗಳ ಸುತ್ತ ಯುದ್ಧದ ಪರಿಣಾಮಗಳನ್ನು ಅಳೆಯುವ ಕೆಲಸ ನಡೆಯುತ್ತಿದೆ. ಇದರ ಆಚೆಗೂ ಯುದ್ಧ ಎಂದರೆ ಖರ್ಚು, ವೆಚ್ಚ ಮತ್ತು ಆರ್ಥಿಕತೆ ಮೇಲಿನ ಪರಿಣಾಮಗಳು ಎಂಬುದನ್ನು ಗಮನಿಸಬೇಕಿದೆ. ಯಾವ ಯುದ್ಧವನ್ನೂ ದೇಶದ ಸಾಮಾನ್ಯ ಜನರ ಮಾತನ್ನು ಕೇಳಿ ಘೋಷಣೆ ಮಾಡುವುದಿಲ್ಲವಾದರೂ, ನಂತರದ ಪರಿಣಾಮಗಳಿಗೆ ಬೆಲೆ ತೆರುವವರು ಅವರೇ ಆಗಿರುತ್ತಾರೆ ಎಂಬುದು ವಿಪರ್ಯಾಸ.

(ಸಾಂದರ್ಭಿಕ ಚಿತ್ರಗಳು).

Leave a comment

Top