An unconventional News Portal.

ಟೀಕೆ ಅತಿಯಾಯ್ತು; ಸಮಸ್ಯೆ ಮರೆಯಾಯ್ತು: ಬಳ್ಳಾರಿ ರೈತ ‘ಆತ್ಮಹತ್ಯೆ ಡ್ರಾಮಾ’ದ ಅಸಲಿ ಕತೆ ಇದು!

ಟೀಕೆ ಅತಿಯಾಯ್ತು; ಸಮಸ್ಯೆ ಮರೆಯಾಯ್ತು: ಬಳ್ಳಾರಿ ರೈತ ‘ಆತ್ಮಹತ್ಯೆ ಡ್ರಾಮಾ’ದ ಅಸಲಿ ಕತೆ ಇದು!

“ಬಳ್ಳಾರಿಯಲ್ಲಿ ರೈತರ ಸಮಸ್ಯೆ ಇರುವುದು ನಿಜ ಸರ್. ಅವರ ಸಂಕಷ್ಟಗಳು ಘೋರವಾಗಿವೆ. ನಾವೇನೂ ಸಮಸ್ಯೆಯೇ ಇಲ್ಲದೇ ಡ್ರಾಮಾ ಮಾಡಲು ಹೊರಟಿರಲಿಲ್ಲ. ಇದೀಗ ಮಾಧ್ಯಮದವರೆಲ್ಲಾ ಸೇರಿಕೊಂಡು ಇದನ್ನೇ ಕಾಂಟ್ರಾವರ್ಸಿ ಮಾಡುತ್ತಿದ್ದಾರೆ. ಇದರಿಂದ ರೈತರ ಸಮಸ್ಯೆಯನ್ನು ಎಲ್ಲರೂ ಮರೆಯುತ್ತಿದ್ದಾರೆ,” ಎಂದು ವಿಷಾದದ ದನಿಯಲ್ಲೇ ಮಾತು ಆರಂಭಿಸಿದರು ಬಳ್ಳಾರಿ ಮೂಲದ ರೈತ ಮುಖಂ ಪುರುಷೋತ್ತಮ್ ಗೌಡ.

ಗುರುವಾರ ಬೆಳಿಗ್ಗೆ ಬಳ್ಳಾರಿಯ ಕೊರಲಗುಂದಿ ಗ್ರಾಮದಲ್ಲಿ ನಡೆದಿರುವ ರೈತರೊಬ್ಬರ ವಿಷ ಸೇವನೆ ಪ್ರಹಸನದಿಂದಾಗಿ ರೈತರ ಸಮಸ್ಯೆಗಳು ಸುದ್ದಿ ಕೇಂದ್ರಕ್ಕೆ ಬರುವ ಹಾದಿಯಲ್ಲಿಯೇ ದಿಕ್ಕು ತಪ್ಪಿವೆ. ವಿವಾದ ಮತ್ತು ಮಾಧ್ಯಮಗಳ ಮೇಲಿನ ಟೀಕೆಯ ಭರದಲ್ಲಿ ತುಂಗಭದ್ರಾ ನಾಲೆಯ ಅಂಚಿನಲ್ಲಿರುವ ನೀರಾವರಿ ಪ್ರದೇಶದ ರೈತರ ಸಂಕಷ್ಟಗಳು ಮನ್ನಣೆ ಕಳೆದುಕೊಳ್ಳುವಂತಾಗಿದೆ. ಜತೆಗೆ, ತಳಮಟ್ಟದ ಸಮಸ್ಯೆಗಳ ಜಾಗದಲ್ಲಿ ಸಿನಿಕತೆಯೊಂದು ಹುಟ್ಟಿಕೊಂಡಿರುವುದು ವಿಪರ್ಯಾಸ.

ನಡೆದಿದ್ದೇನು?:

chilly-plant-1ಬಳ್ಳಾರಿ ನಗರದಿಂದ 12 ಕಿಲೋಮೀಟರ್ ದೂರದಲ್ಲಿರುವ ಕೊರ್ಲಗುಂದಿ ಊರು ಅದು. ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕುರುಬರ ಕುಮಾರೆಪ್ಪ ಎನ್ನುವವರಿಗೆ 4 ವರೆ ಎಕರೆ ಜಮೀನಿದೆ. ತುಂಗಭದ್ರಾ ನಾಲೆಗಳ ನೀರನ್ನೇ ಅವಲಂಬಿಸಿರುವ ಜಮೀನಿದು. ಇವರು ಸೇರಿದಂತೆ ಈ ಊರಿನ ರೈತರೆಲ್ಲಾ ಹೆಚ್ಚಾಗಿ ಬೆಳೆಯುವುದು ಮೆಣಸು ಮತ್ತು ಹತ್ತಿಯನ್ನು. ಕಳೆದ ವರ್ಷ ಮೆಣಸಿಗೆ ಉತ್ತಮ ಬೆಲೆ ಬಂದಿದ್ದರಿಂದ ಕುಮಾರೆಪ್ಪಾ ಈ ಬಾರಿಯೂ ಮೆಣಸನ್ನೇ ಹಾಕಿದ್ದರು. ಒಂದು ಎಕರೆಗೆ ಮೆಣಸಿನ ಬೆಳೆ ಹಾಕಲು ಸುಮಾರು 40 ಸಾವಿರ ಖರ್ಚಾಗುತ್ತಿದೆ. ಇದಕ್ಕಾಗಿ ಬ್ಯಾಂಕಿನಿಂದ ಸಾಲವನ್ನೂ ಮಾಡಿದ್ದ ಕುಮಾರೆಪ್ಪ, ಒಟ್ಟು 1 ವರೆ ಲಕ್ಷ ರೂಪಾಯಿಗಳ ಬಂಡವಾಳವನ್ನು ಭೂಮಿಗೆ ಹಾಕಿ ಕುಳಿತಿದ್ದರು.

ಆದರೆ ಈ ಬಾರಿ ಬರಗಾಲ ಬಂದಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ಬೇಕಾದಷ್ಟು ನೀರಿಲ್ಲ. “ಮೆಣಸಿಗೆ ಕನಿಷ್ಟ ಹತ್ತು ದಿನಕ್ಕೊಮ್ಮೆಯಾದರೂ ನೀರು ಬೇಕು. ಆದರೆ ಇಲ್ಲಿ ‘ಆನ್ ಆಫ್’ ವ್ಯವಸ್ಥೆಯಿಂದಾಗಿ, ಹತ್ತು ದಿನಗಳ ವರೆಗೆ ನೀರು ಬಿಟ್ಟರೂ ನಾಲೆಯ ಕೊನೆಯಲ್ಲಿರುವ ಕುಮಾರೆಪ್ಪ ಜಮೀನಿನವರೆಗೂ ನೀರು ಬರುವುದಿಲ್ಲ,” ಎನ್ನುತ್ತಾರೆ ರೈತ ಮುಖಂಡರಾದ ಪುರುಷೋತ್ತಮ್ ಗೌಡ.

ಸರಿಯಾಗಿ ನೀರು ಬಿಡಿ ಎಂದರೆ ನೀರಾವರಿ ಅಧಿಕಾರಿಗಳು ನಿರ್ವಹಣೆಗಾಗಿ ಊರಿಗೆ ಬರಲು ಹೆದರುತ್ತಾರೆ; ಎಲ್ಲಿ ನೀರಿಲ್ಲದೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಅಧಿಕಾರಿಗಳಿಗೆ. ಈ ಎಲ್ಲಾ ಕಾರಣಗಳಿಂದ ಕುಮಾರೆಪ್ಪರ ಬೆಳೆ ನೀರಿಲ್ಲದೆ ಒಣಗಿ ಹೋಗಿತ್ತು. ಹೀಗಾಗಿ ಮೊನ್ನೆ ಅವರು ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶಕ್ಕೆ ಯೋಚಿಸಿದ್ದಾರೆ. “ಭೂಮಿಯಲ್ಲಿ ಅರ್ಧಂಬರ್ಧ ಬೆಳೆದ ಬೆಳೆ ಇದ್ದರೆ ಬ್ಯಾಂಕಿನವರು ಸಾಲ ಕಟ್ಟಲು ನೋಟಿಸ್ ನೀಡುತ್ತಾರೆ ಎಂಬ ಭಯ ಆತನಿಗೆ. ಆದರೆ ಬೆಳೆ ನೋಡಿ ಮನಸ್ಸು ಮರುಗಿ ಆತನ ಮನೆಯವರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಆತ ನಿನ್ನೆ (ಬುಧವಾರ) ಬೆಳಿಗ್ಗೆ 8ಗಂಟೆಗೆ ‘ಕ್ರಿಮಿ ನಾಶಕ’ ಸೇರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಆತನನ್ನು ತಡೆದಿದ್ದಾರೆ,” ಎನ್ನುತ್ತಾರೆ ಪುರುಷೋತ್ತಮ್ ಗೌಡ.

ಮಾಧ್ಯಮಗಳ ಮುಂದೇನಾಯಿತು?:

ಮಾಧ್ಯಮಗಳಿಗೆ ರೈತ ಮುಖಂಡರು ತಲುಪಿಸಿದ್ದ ಆತ್ಮಹತ್ಯೆ ಯತ್ನದ ಚಿತ್ರ.

ಮಾಧ್ಯಮಗಳಿಗೆ ರೈತ ಮುಖಂಡರು ತಲುಪಿಸಿದ್ದ ಆತ್ಮಹತ್ಯೆ ಯತ್ನದ ಚಿತ್ರ.

“ಪ್ರತಿಬಾರಿ ಇಂಥಹ ಘಟನೆಗಳಾದ ಜನಕ್ಕೆ ಈ ಮಾಹಿತಿ ತಲುಪಲಿ ಎಂದು ನಾವೇ ಕ್ಯಾಮೆರಾಮನ್ ಕರೆದುಕೊಂಡು ಬಂದು ಪೊಟೋ ತೆಗೆದು, ಜೊತೆಗೆ ಮಾಹಿತಿಗಳನ್ನೂ ಪತ್ರಿಕೆಗಳಿಗೆ ನೀಡುತ್ತೇವೆ. ಆದರೆ ದೃಶ್ಯ ಮಾಧ್ಯಮದವರಿಗೆ ವೀಡಿಯೋಗಳು ಬೇಕೆಂದು ಎಲ್ಲಾ ಟಿವಿಗಳ ಕ್ಯಾಮೆರಾಮನ್ ಮತ್ತು ವರದಿಗಾರರನ್ನು ಕೊರ್ಲಗುಂದಿ ಗ್ರಾಮಕ್ಕೆ ಕರೆದುಕೊಂಡು ಹೋದೆವು. ಮಾಧ್ಯಮದವರು ಬಂದಾಗ ಜನ ಮತ್ತು ಕ್ಯಾಮೆರಾಮನ್ಗಳು ವಿಷಯದ ಗಂಭೀರತೆ ಒತ್ತುಕೊಟ್ಟು ಮತ್ತೊಮ್ಮೆ ಕ್ಯಾಮೆರಾ ಮುಂದೆ ವಿಷ ಕುಡಿಯುವಂತೆ ತಿಳಿಸಿದರು. ಅದೇ ನಾವು ಮಾಡಿದ ತಪ್ಪಾ, ಇಷ್ಟೆಲ್ಲಾ ರಂಪಾಟವಾಗಿ ಹೋಯಿತು,” ಎಂದು ಪುರುಷೋತ್ತಮ್ ಮಾಹಿತಿ ನೀಡಿದರು.

ಈ ಕುರಿತು ಮೊದಲು ಸುದ್ದಿ ಮಾಡಿದ ‘ಪ್ರಜಾವಾಣಿ’ ಬಳ್ಳಾರಿ ವರದಿಗಾರ ಕೆ. ನರಸಿಂಹಮೂರ್ತಿ, “ಸುದ್ದಿ ಮಾಡಲು ದೃಶ್ಯ ಮಾಧ್ಯಮಗಳನ್ನು ಮಾತ್ರವೇ ಕರೆದುಕೊಂಡು ಹೋಗಲಾಗಿತ್ತು. ನಂತರ ನಮಗೆ ಪತ್ರಿಕಾ ಹೇಳಿಕೆ ಜತೆಗೆ ಚಿತ್ರವನ್ನು ತಲುಪಿಸಿದ್ದರು. ಅದನ್ನು ನೋಡಿದ ನಂತರ ಸಂಶಯಗೊಂಡು ವಿಚಾರಿಸಿದಾಗ ದೃಶ್ಯಾವಳಿ ಸಿಕ್ಕಿತು,” ಎಂದರು.

ಹಾಗೆ ನೋಡಿದರೆ, ಸದ್ಯ ಆತ್ಮಹತ್ಯೆ ಯತ್ನದ ರಿಹರ್ಸಲ್ ನಡೆಸುವ ವಿಡಿಯೋ ಕೂಡ ವೃತ್ತಿಪರ ಕ್ಯಾಮೆರಾದಲ್ಲಿಯೇ ಶೂಟ್ ಆಗಿದೆ. ಹೀಗಾಗಿ, ಇದು ಇನ್ನೊಂದು ವಾಹಿನಿಯ ಕ್ಯಾಮೆರಾ ಮೆನ್ ಕಡೆಯಿಂದ ಬಹಿರಂಗವಾಗಿರುವ ಸಾಧ್ಯತೆಗಳಿವೆ.

“ಕ್ಯಾಮೆರಾಮನ್ಗಳ ಮಧ್ಯೆ ಏನೇನು ಜಗಳ ಇದೆಯೋ ಗೊತ್ತಿಲ್ಲ. ಯಾರೋ ಅವರೇ ಈ ರೀತಿ ಸುದ್ದಿ ಮಾಡಿದ್ದಾರೆ. ರೈತರ ಸಮಸ್ಯೆಯನ್ನು ಮಾತ್ರ ತೋರಿಸಿಲ್ಲ. ಅಲ್ಲಿಗೆ ಬಂದವರಿಗೆ ಇಲ್ಲಿನ ಪಕ್ಕದ ಜಮೀನನ್ನೂ ತೋರಿಸಲಾಗಿತ್ತು. ಅಲ್ಲಿ ರೈತರೊಬ್ಬರು ಟ್ಯಾಂಕರ್ ನೀರು ಹಾಕಿ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಒಂದು ಎಕರೆಗೆ 15 ಟ್ಯಾಂಕರ್ ನೀರು ಬೇಕು. 15 ಸಾವಿರ ಖರ್ಚಾಗುತ್ತದೆ. ಆದರೆ ಈ ವೀಡಿಯೋ ತೆಗೆದುಕೊಂಡು ಹೋದ ಯಾವ ಮಾಧ್ಯಮಗಳೂ ವರದಿ ಹಾಕಲಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

“ಚಾನಲಿನವರು ನಿಮ್ಮ ಸ್ಪರ್ಧೆಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ರೈತರನ್ನು ಹಾಳು ಮಾಡಬೇಡಿ. ನೀವು ಬೇಕಿದ್ದರೆ ಐಎಎಸ್/ಐಪಿಎಸ್ ಆಫೀಸರ್ಗಳನ್ನು ಬೆನ್ನಿಗೆ ಬೀಳಿ. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ ರೈತ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ. ಇದ್ದ ಬದ್ದವರೆಲ್ಲಾ ಫೋನ್ ಮಾಡಿದ್ದರಿಂದ ಆತನ ಕುಟುಂಬ ಕಂಗಾಲಾಗಿದೆ. ಇವತ್ತು ಮಧ್ಯಾಹ್ನ ಆತನ ಮಕ್ಕಳು ಫೋನನ್ನೇ ಒಡೆದು ಹಾಕಿದ್ದಾರೆ,” ಎಂದು ಅವರು ಹೇಳುತ್ತಾರೆ. ಒಟ್ಟಾರೆ, ಮಾಧ್ಯಮಗಳ ಮೇಲಿನ ಟೀಕೆಯಲ್ಲಿ ಬಳ್ಳಾರಿಯ ರೈತರ ಸಂಕಷ್ಟ ಕಳೆದು ಹೋಗಿದೆ.

ಇದು ಅನಿವಾರ್ಯ ಕರ್ಮ:

ಸಾಮಾನ್ಯವಾಗಿ ದೃಶ್ಯ ಮಾಧ್ಯಮಗಳ ವಿಚಾರಕ್ಕೆ ಬಂದಾಗ, ವೀಡಿಯೋ ಇಲ್ಲದ ಸುದ್ದಿಗಳು ಸುದ್ದಿಗಳೇ ಅಲ್ಲ ಎಂಬ ವಿವೇಚನೆ ಬಹುತೇಕರಲ್ಲಿದೆ. ಈ ಕಾರಣಕ್ಕೆ ವೀಡಿಯೋ ಇದ್ದರೆ ಉತ್ತಮ ಎಂದು ಅಲ್ಲಿದ್ದ ಜನರಿಗೆ ಮತ್ತು ಕ್ಯಾಮೆರಾನ್ಗಳಿಗೆ ಅನಿಸಿದೆ. ಅದು ಇಂತಹದೊಂದು ಅಪಸವ್ಯವನ್ನು ಸೃಷ್ಟಿಸಿದೆ.

ಹಿಂದೊಮ್ಮೆ ಬಿಟಿವಿಗೆ ಭೇಟಿ ನೀಡಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಯು ಆರ್ ಅನಂತಮೂರ್ತಿ, “ಮಾಧ್ಯಮದವರು ಕಂಡಿದ್ದನ್ನಷ್ಟೇ ಅಲ್ಲ, ಕೇಳಿದ್ದನ್ನೂ ಸುದ್ದಿ ಮಾಡುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಬೇಕು,” ಎಂದು ಹೇಳಿದ್ದರು. ಆ ಮಾತಿನ ಅರ್ಥವನ್ನುಅಂತರ್ಗತ ಮಾಡಿಕೊಂಡಿದ್ದರೆ, ದೃಶ್ಯಾವಳಿಗಳು ಸಿಗದೆಯೂ, ಹೇಗೆ ರೈತನೊಬ್ಬ ಆತ್ಮಹತ್ಯೆಗೆ ಪ್ರಯತ್ನಪಟ್ಟ ಎಂಬ ಸುದ್ದಿಯನ್ನು ಮನೋಜ್ಞವಾಗಿ ಜನರಿಗೆ ತಲುಪಿಸಲು ಕೆಲಸವನ್ನು ಮಾಡಬಹುದಿತ್ತು. ಅಂತಹದೊಂದು ಅವಕಾಶವನ್ನು ಮಾಧ್ಯಮಗಳು ಕೈ ಚೆಲ್ಲಿದವು, ಅಷ್ಟೆ.

Leave a comment

Top