An unconventional News Portal.

ಗೋ ರಕ್ಷಕರಿಂದಾಗಿ ಹಿಂದೂಸ್ತಾನ ‘ಲಿಂಚಿಸ್ತಾನ’ವಾಗುತ್ತಿದೆ: ಲೋಕಸಭೆಯಲ್ಲಿ ಖರ್ಗೆ ಆತಂಕ ಮತ್ತು ವಾಸ್ತವ

ಗೋ ರಕ್ಷಕರಿಂದಾಗಿ ಹಿಂದೂಸ್ತಾನ ‘ಲಿಂಚಿಸ್ತಾನ’ವಾಗುತ್ತಿದೆ: ಲೋಕಸಭೆಯಲ್ಲಿ ಖರ್ಗೆ ಆತಂಕ ಮತ್ತು ವಾಸ್ತವ

ಗೋ ರಕ್ಷಣೆ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ದಾಳಿಗಳು ಸೋಮವಾರ ಲೋಕಸಭೆಯಲ್ಲಿ ಪ್ರತಿನಿಧಿಸಿದವು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರವನ್ನು ಪ್ರಸ್ತಾಪಿಸಿದರು. ದೇಶದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಗೆ ಆಡಳಿತ ಪಕ್ಷ ಬಿಜೆಪಿಯ ಬೆಂಬಲ ಇದೆ ಎಂದವರು ಆರೋಪ ಮಾಡಿದರು. ಆದರೆ, ಚರ್ಚೆಯಲ್ಲಿ ಅಂತರವನ್ನು ಕಾಯ್ದುಕೊಂಡ ಬಿಜೆಪಿ, “ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳು ಸರಕಾರಕ್ಕೆ ಕೆಟ್ಟ ಹೆಸರು ತರಲು ಮಾಡುತ್ತಿರುವ ಪ್ರಯತ್ನ,’’ ಎಂದು ಹೇಳಿತು.

ಲೋಕ ಸಭೆಯಲ್ಲಿ:

ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸರಕಾರವೇ ಗೋ ರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವವರನ್ನು ಬೆಂಬಲಿಸುತ್ತಿದೆ ಎಂದು ಆರೋಪ ಮಾಡಿದರು. ಇದರಿಂದ ದೇಶಾದ್ಯಂತ ‘ಭೀತಿ ಮತ್ತು ಭಯ’ ಆವರಿಸಿದೆ ಎಂದರು.

ಚರ್ಚೆಯನ್ನು ಆರಂಭಿಸಿದ ಅವರು, “ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಗೋ ಭಕ್ತರಿಗೆ ಸರಕಾರ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ. ಹೀಗೆ ಮುಂದುರಿದವರೆ ಹಿಂದೂಸ್ತಾನ ಲಿಂಚಿಸ್ತಾನವಾಗಲಿದೆ,’’ ಎಂದರು. ದೇಶದಲ್ಲಿ ಗೋ ರಕ್ಷಕ ಪಡೆಗಳು ಮುಸ್ಲಿಂರ ಮೇಲಿನ ದಾಳಿಗಳನ್ನು ಹೆಚ್ಚಿಸಿದ ನಂತರ ‘ಲಿಂಚಿಂಗ್’ ಎಂಬ ಪದ ಚಾಲ್ತಿಗೆ ಬಂದಿದೆ. ಲಿಂಚಿಂಗ್ ಎಂದರೆ ‘ಯಾವುದೇ ವಿವರಣೆ ಕೇಳದೆ ಗಲ್ಲಿಗೇರಿಸುವುದು’ ಎಂಬರ್ಥವಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಖರ್ಗೆ, “ಹಿಂದೂಸ್ತಾನವನ್ನು ಲಿಂಚಿಸ್ತಾನ ಮಾಡಬೇಡಿ,’’ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಹೆಚ್ಚುತ್ತಿರುವ ಗೋ ರಕ್ಷಣೆ ಹೆಸರಿನ ದಾಳಿಗಳನ್ನು ಪ್ರಸ್ತಾಪಿಸಿದ ಅವರು, “ಪ್ರಧಾನಿ ಮೋದಿ ಮನೆಯಿಂದ ಹೊರಬರಬೇಕು. ಸಾಮೂಹಿಕವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ದಿಟ್ಟ ನಿರ್ಧಾರವನ್ನು ಪ್ರಕಟಿಸಬೇಕು,’’ ಎಂದರು.

2014ರಲ್ಲಿ ಬಿಜೆಪಿ ಅಧಿಕಾರಕ್ಕೆಬಂದ ನಂತರ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. 2010ರಿಂದ ಈವರೆಗೆ ಗೋವಿನ ಹೆಸರಿನಲ್ಲಿ ಮನುಷ್ಯರ ಮೇಲೆ ಸುಮಾರು 63 ದಾಳಿ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮುಸ್ಲಿಂರ ಸಂಖ್ಯೆ ಶೇ. 86 ಪ್ರಕರಣಗಳಲ್ಲಿ ಒಬ್ಬರಲ್ಲ ಒಬ್ಬರು ಸಾವನ್ನಪ್ಪಿದ್ದಾರೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆಬಂದ ನಂತರ ಇಂತಹ ದಾಳಿಗಳ ಪ್ರಮಾಣ ಶೇ. 97ರಷ್ಟು ಹೆಚ್ಚಾಗಿದೆ ಎಂದು ‘ಇಂಡಿಯಾ ಸ್ಪೆಂಡ್’ ಜಾಲತಾಣದ ಸಮೀಕ್ಷೆ ತಿಳಿಸಿತ್ತು.

ಅಂತರ ಕಾಯ್ದುಕೊಂಡ ಬಿಜೆಪಿ:

ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರಗಳು ಅಂತರವೊಂದನ್ನು ಆರಂಭದಿಂದಲೂ ಕಾಯ್ದಕೊಂಡು ಬಂದಿವೆ. ಇಂದೂ ಕೂಡ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಜೆಪಿ ನಾಯಕ ಹುಕುಂದೇವ್ ನಾರಾಯಣ್ ಯಾದವ್, “ಸರಕಾರಕ್ಕೆ ಮಸಿ ಬಳಿಯಲು ನಡೆಯುತ್ತಿರುವ ಕಾರ್ಯಕ್ರಮಗಳು (ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳು) ಇವು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡು ಹಿಡಿಯಬೇಕಿದೆ,’’ ಎಂದರು.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಗೋ ರಕ್ಷಣೆ ಹೆಸರಿನಲ್ಲಿ ದಾಳಿ ನಡೆಸುವವರ ವಿರುದ್ಧ ಪ್ರಧಾನಿ ಮೋದಿ ಎರಡು ಬಾರಿ ಮಾತನಾಡಿದ್ದಾರೆ. ಒಮ್ಮೆ, 2016ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಗೋ ರಕ್ಷಕರನ್ನು ‘ನಕಲಿ’ ಎಂದು ಪ್ರಧಾನಿ ಕರೆದಿದ್ದರು. ಇದಾದ ನಂತರ ಕಳೆದ ಜೂನ್ ತಿಂಗಳಿನಲ್ಲಿ ಗುಜರಾತ್ ಪ್ರವಾಸದ ವೇಳೆ ಗೋ ರಕ್ಷಕರ ವಿರುದ್ಧ ಕಿಡಿಕಾರಿದ್ದರು. ಮುಸ್ಲಿಂರ ಮೇಲೆ ನಡೆಯುವ ದಾಳಿಗಳ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳ ಮಾತುಗಳನ್ನು ಹೇಳಿದ್ದರು.

“ಬಿಜೆಪಿ ಗೋ ರಕ್ಷಕರ ವಿರುದ್ಧ ಕಾನೂನು ಕ್ರಮದ ಮಾತನಾಡುತ್ತಿದೆ. ಆದರೆ ಎಲ್ಲಿ ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿ ನೀಡಿ,’’ ಎಂದು ಖರ್ಗೆ ಲೋಕಸಭೆಯಲ್ಲಿ ಸರಕಾರವನ್ನು ಪ್ರಶ್ನಿಸಿದರು.

ಕೆಲವು ದಿನಗಳ ಹಿಂದೆ ‘ಸಮಾಚಾರ’ಕ್ಕೆ ನೀಡಿದ್ದ ಸಂದರ್ಶನದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಕೂಡ ಗೋ ರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ವಿರೋಧಿಸಿತ್ತು. ‘ದಾಳಿ ನಡೆಸುವವರಿಗೂ, ನಮಗೂ ಸಂಬಂಧ ಇಲ್ಲ,’’ ಎಂದು ಸಂಘದ ನಾಯಕರು ತಿಳಿಸಿದ್ದರು. ಆದರೆ ನಡೆಯುತ್ತಿರುವ ದಾಳಿಗಳು ‘ಆತ್ಮ ರಕ್ಷಣೆ’ಗಾಗಿ ಸ್ವಯಂ ಪ್ರೇರಣೆಯಿಂದ ನಡೆಯುತ್ತಿರುವ ಘಟನೆಗಳು ಎಂದು ಸಮರ್ಥಿಸಿಕೊಂಡಿದ್ದರು.

Leave a comment

Top