An unconventional News Portal.

‘ಅನಾಣ್ಯೀಕರಣ’: ಅಂದು ‘ವ್ಯವಸ್ಥಿತ ಲೂಟಿ’ ಅಂದಿದ್ದ ಸಿಂಗ್ ಇಂದು ಪಟೇಲ್ ನೆರವಿಗೆ ಬಂದರು!

‘ಅನಾಣ್ಯೀಕರಣ’: ಅಂದು ‘ವ್ಯವಸ್ಥಿತ ಲೂಟಿ’ ಅಂದಿದ್ದ ಸಿಂಗ್ ಇಂದು ಪಟೇಲ್ ನೆರವಿಗೆ ಬಂದರು!

ಬುಧವಾರ ಸಂಜೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗೌರ್ನರ್ ಊರ್ಜಿತ್ ಪಟೇಲ್ ಸಹಾಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂದಾದರು.

ಅನಾಣ್ಯೀಕರಣದ ನಂತರ ದೇಶಾದ್ಯಂತ ಎದ್ದಿದ್ದ ಆರ್ಥಿಕ ಹಾಹಾಕಾರ ಮತ್ತು ಆರ್ಬಿಐ ತೆಗೆದುಕೊಂಡ ನಿಲುವುಗಳ ಬಗ್ಗೆ ಸಂಸದೀಯ ಸಮಿತಿ ತನ್ನ ಮುಂದೆ ಹಾಜರಾಗಿ ಮಾಹಿತಿ ನೀಡುವಂತೆ ಊರ್ಜಿತ್ ಪಟೇಲ್ ಅವರಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸಮಿತಿ ಮುಂದೆ ಪಟೇಲ್ ಹಾಜರಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಮಯದಲ್ಲಿ ‘ಸಮಸ್ಯೆ ತದ್ದೊಡ್ಡುವ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಮಿತಿ ಸಮ್ಮುಖದಲ್ಲಿಯೇ ಊರ್ಜಿತ್ ಪಟೇಲ್ ಅವರ ಸಹಾಯಕ್ಕೆ ಬಂದರು ಎಂದು ವರದಿಗಳು ಹೇಳುತ್ತಿವೆ.

ಸಮಿತಿ ಸದಸ್ಯರಾದ ಸಂಸದರಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಊರ್ಜಿತ್ ಪಟೇಲ್ ಮುಂದೆ ಇಡಲಾಗಿತ್ತು. ಅನಾಣ್ಯೀಕರಣದಿಂದ ಸಮಸ್ಯೆ ತಲೆದೋರಿದ ಸಮಯದಲ್ಲಿ ಅವುಗಳಿಗೆ ಕಡಿವಾಣ ಹಾಕಲು ಕಾಲಮಿತಿಯನ್ನು ಹಾಕಲು ಯಾಕೆ ಸಾಧ್ಯವಾಗಿಲ್ಲ? ಎಂದು ಪಟೇಲ್ ಅವರನ್ನು ಪ್ರಶ್ನಿಸಲಾಯಿತು.

ಈ ಸಮಯದಲ್ಲಿ ಸಮಿತಿ ಮುಂದೆ ಮಾಹಿತಿ ನೀಡಿದ ಪಟೇಲ್, ‘ಈವರೆಗೆ ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಯಾದ ನಂತರ ಅಪಮೌಲ್ಯೀಕರಿಸಿದ ಹಣದಲ್ಲಿ ಶೇ. 60 (9. 2 ಲಕ್ಷ ಕೋಟಿ) ರಷ್ಟು ಹಣವನ್ನು ಹೊಸ ನೋಟುಗಳ ರೂಪದಲ್ಲಿ ಚಲಾವಣೆಗೆ ಬಿಡಲಾಗಿದೆ’ ಎಂದು ತಿಳಿಸಿದರು. ಆದರೆ, ಈವರೆಗೆ ಬ್ಯಾಂಕುಗಳಿಗೆ ಹಿಂದಿರುಗಿದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳೆಷ್ಟು ಎಂಬ ನಿಖರ ಮಾಹಿತಿ ನೀಡುವಲ್ಲಿ ಅವರು ವಿಫಲರಾದರು. ಈ ಸಮಯದಲ್ಲಿ ಪಟೇಲ್ ಅವರನ್ನು ಸಮಿತಿ ತರಾಟೆಗೆ ತೆಗೆದುಕೊಂಡಿತು ಎಂದು ವರದಿಗಳು ಹೇಳುತ್ತಿವೆ.

ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್, ಎಟಿಎಂನಲ್ಲಿ ಹಣವನ್ನು ಪಡೆಯಲು ಹೇರಿದ ನಿರ್ಬಂಧನೆಗಳ ಬಗ್ಗೆ ಸೂಕ್ತ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಮನಮೋಹನ್ ಸಿಂಗ್ ಅವರು ಇನ್ನಷ್ಟು ಕಠಿಣ ಪ್ರಶ್ನೆಗಳನ್ನು ಕೇಳದಂತೆ ತಡೆದರು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ವೀರಪ್ಪ ಮೋಯ್ಲಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಮುಂದೆ ಆರ್ಬಿಐ ಗೌವರ್ನರ್ ಊರ್ಜಿತ್ ಪಟೇಲ್, ಉಪ ಗೌವರ್ನರ್ ಆರ್. ಗಾಂಧಿ, ಎಸ್. ಎಸ್. ಮುಂದ್ರಾ ಕರೆಯ ಮೇರೆಗೆ ಪಾಲ್ಗೊಂಡಿದ್ದರು. ಇಂದು ಸಭೆಯಲ್ಲಿ ಎಲ್ಲಾ ಸದಸ್ಯರ ಪ್ರಶ್ನೋತ್ತರಕ್ಕೆ ಕಾಲಾವಕಾಶ ಸಾಕಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.

ದೇಶದಲ್ಲಿ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನ. 8, 2016ರಂದು ಪ್ರಧಾನಿ ಮೋದಿ ಅಮಾನ್ಯಗೊಳಿಸುವ ಘೋಷಣೆ ಮಾಡಿದ್ದರು. ನಂತರ ಸಾಮಾನ್ಯ ಜನತೆ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಹಾಗಾಗಿತ್ತು. ಜತೆಗೆ, ಎಟಿಎಂಗಳಿಂದ ಮತ್ತು ಬ್ಯಾಂಕುಗಳಿಂದ ಹಣ ಪಡೆಯಲು ಮಿತಿಯನ್ನು ಹೇರಿದ್ದು ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟವನ್ನು ತಂದೊಡ್ಡಿತ್ತು. ಈ ಸಮಯದಲ್ಲಿ ಆರ್ಬಿಐ  ಮತ್ತು ವಿತ್ತ ಇಲಾಖೆಯ ಅಧಿಕಾರಿಗಳನ್ನು ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ತನ್ನ ಮುಂದೆ ಹಾಜರಾಗಿವಂತೆ ನೋಟಿಸ್ ಜಾರಿ ಮಾಡಿತ್ತು.

ಸದ್ಯ, ನಡೆದಿರುವ ಸಭೆಯಲ್ಲಿ ಪ್ರಶ್ನೆಗಳನ್ನು ಮುಂದಿಡಲಾಗಿದ್ದರೂ, ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮುಂದಿನ ಬಜೆಟ್ ಅಧಿವೇಶನ ನಂತರ ಮತ್ತೆ ಸಮಿತಿ ಸಭೆ ಕರೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಅನಾಣ್ಯೀಕರಣದ ತೀರ್ಮಾನಗಳು ಹಾಗೂ ನಂತರದ ಬೆಳವಣಿಗೆಗಳ ಕುರಿತು ಸ್ಪಷ್ಟತೆ ಸಿಗಬಹುದು ಎಂದು ಭಾವಿಸಲಾಗಿದೆ.

ಈ ಹಿಂದೆ ನಡೆದ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅನಾಣ್ಯೀಕರಣ ಘೋಷಣೆಯನ್ನು ‘ವ್ಯವಸ್ಥಿತ ಲೂಟಿ’ ಎಂದು ಜರಿದಿದ್ದನ್ನು ಸ್ಮರಿಸಬಹುದು.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top