An unconventional News Portal.

45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ: ನೂತನ ಅಧ್ಯಕ್ಷರ ‘ಗುರಿ ತಪ್ಪದ’ ಭಾ‍ಷಣ

45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ: ನೂತನ ಅಧ್ಯಕ್ಷರ ‘ಗುರಿ ತಪ್ಪದ’ ಭಾ‍ಷಣ

Donald Trump Sworn Inಅಮೆರಿಕಾದ 45ನೇ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ಹೋಲಿಸಿದರೆ, ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಜನರ ಸಮ್ಮುಖದಲ್ಲಿ ಜಗತ್ತಿನ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು.

70 ವರ್ಷದ ಟ್ರಂಪ್ ಅವರಿಗೆ ಮುಖ್ಯನ್ಯಾಯಮೂರ್ತಿ ಜಾನ್ ಜಿ. ರಾಬರ್ಟ್ ಜ್ಯೂನಿಯರ್ ಪ್ರಮಾಣ ವಚನ ಬೋಧಿಸಿದರು. ಈ ಸಮಯದಲ್ಲಿ ಪತ್ನಿ ಮೆಲಿನಾ ಟ್ರಂಪ್ ಪಕ್ಕದಲ್ಲಿಯೇ ನಿಂತಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ಟ್ರಂಪ್ ತಾಯಿ 1955ರಲ್ಲಿ ನೀಡಿದ್ದ ಬೈಬಲ್ ಪುಸ್ತಕದ ಪ್ರತಿ ಹಾಗೂ ಅಧ್ಯಕ್ಷ ಲಿಂಕನ್ ಬಳಸಿದ್ದ ಬೈಬಲ್ ಪ್ರತಿಗಳನ್ನು ಬಳಸಿಕೊಳ್ಳಲಾಯಿತು.

‘ಸಂಯುಕ್ತ ಅಮೆರಿಕಾ ಸಂಸ್ಥಾನ ನಿಮ್ಮ ದೇಶ’ ಎಂಬ ಘೋಷಣೆಯೊಂದಿಗೆ ಮಾತು ಆರಂಭಿಸಿದ ಟ್ರಂಪ್ ‘ಈ ದೇಶವನ್ನು ಮತ್ತೆ ಜನ ಆಳ್ವಿಕೆ ನಡೆಸುತ್ತಾರೆ’ ಎನ್ನುವ ಮೂಲಕ ತಮ್ಮನ್ನು ಗಮನಿಸುತ್ತಿದ್ದ ಹಿಂದಿನ ಮೂವರು ಮಾಜಿ ಅಧ್ಯಕ್ಷರುಗಳನ್ನು ಪರೋಕ್ಷವಾಗಿ ಹೀಗಳೆದರು.

“ಇವತ್ತು ಒಂದು ಆಡಳಿತದಿಂದ ಮತ್ತೊಂದು ಆಡಳಿತಕ್ಕೆ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಆಳ್ವಿಕೆ ಹಸ್ತಾಂತರ ನಡೆಯುತ್ತಿಲ್ಲ. ಬದಲಿಗೆ ವಾಷಿಂಗ್ಟನ್ ಡಿಸಿಯಿಂದ ಜನರ ಕೈಗೆ ಅಧಿಕಾರ ಹಸ್ತಾಂತರವಾಗುತ್ತಿದೆ,’’ ಎಂದು ಟ್ರಂಪ್ ಘೋಷಿಸಿದರು.

“ಹಿಂದಿನಿಂದಲೂ ದೇಶದ ರಾಜಧಾನಿಯಲ್ಲಿರುವ ಸಣ್ಣ ಜನರ ತಂಡ ಅಧಿಕಾರದ ಫಲವನ್ನು ಅನುಭವಿಸುತ್ತಾ ಬಂದಿದ್ದಾರೆ. ಜನ ಅದಕ್ಕಾಗಿ ಬೆಲೆ ತೆತ್ತಿದ್ದಾರೆ. ರಾಜಕಾರಣಿಗಳು ಉದ್ಧಾರವಾದರು, ಆದರೆ ಜನ ಕೆಲಸ ಕಳೆದುಕೊಂಡರು, ಕಾರ್ಖಾನೆಗಳು ಮುಚ್ಚಿಹೋದವು,’’ ಟ್ರಂಪ್ ದೂರಿದರು.

ಭಾಷಣದ ಉದ್ದಕ್ಕೂ ಟ್ರಂಪ್ ಅಮೆರಿಕಾದ ಇವತ್ತಿನ ಪರಿಸ್ಥಿತಿಯ ಕುರಿತು ನಿರಾಶಾದಾಯಕ ದನಿಯಲ್ಲಿಯೇ ಮಾತನಾಡಿದರು.

“ನಾವು ಇವತ್ತು ಇಲ್ಲಿ ಹೊಸ ಘೋಷಣೆಯನ್ನು ಮೊಳಗಿಸಲು ಸೇರಿದ್ದೀವಿ. ಇವತ್ತಿಂದ ಮುಂದೆ ಹೊಸ ದೃಷ್ಟಿಕೋನವನ್ನು ಈ ನಾಡಿನ ಆಡಳಿತ ಹೊಂದಲಿದೆ. ಇನ್ನು ಮುಂದೆ ಅಮೆರಿಕಾವೇ ಮೊದಲು, ಅಮೆರಿಕಾವೇ ಮೊದಲು,’’ ಎಂದು ಟ್ರಂಪ್ ಉಚ್ಚರಿಸಿದರು.

‘ಅಮೆರಿಕಾವೇ ಮೊದಲು’ ಎಂಬ ವಾಕ್ಯವನ್ನು ಟ್ರಂಪ್ ತಮ್ಮ ಪ್ರಚಾರದುದ್ದಕ್ಕೂ ಬಳಸಿಕೊಂಡೇ ಬಂದಿದ್ದರು ಎಂಬುದು ಗಮನಾರ್ಹ.

“ವಹಿವಾಟು, ತೆರಿಗೆ, ವಲಸೆ, ವಿದೇಶಿ ವ್ಯವಹಾರ ಎಲ್ಲವನ್ನೂ ಅಮೆರಿಕಾದ ಕೆಲಸಗಾರರು ಮತ್ತು ಅಮೆರಿಕಾದ ಕಾರ್ಖಾನೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ರೂಪಿಸಲಾಗುವುದು,’’ ಎಂದು ಅವರು ಖಚಿತಪಡಿಸಿದರು. ಈ ಮೂಲಕ ವಲಸಿಗರಿಗೆ ಅಮೆರಿಕಾದಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ ಎಂಬ ಶಂಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದರು. “ಅಮೆರಿಕಾ ಉತ್ಪನ್ನಗಳನ್ನೇ ಕೊಳ್ಳಿ; ಅಮೆರಿಕನ್ನರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ” ಎಂದವರು ಸ್ಪಷ್ಟ ಕರೆ ನೀಡಿದರು.

ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಹೊರಹೋಗುತ್ತಿರುವ ಅಧ್ಯಕ್ಷ ಬರಾಕ್ ಒಬಾಮರನ್ನು ಸಂಪ್ರದಾಯದಂತೆ ಶ್ವೇತಭವನದಲ್ಲಿ ಭೇಟಿ ಮಾಡಿದರು. ರಿಯಲ್ ಎಸ್ಟೇಟ್ ಉದ್ಯಮಿ, ಟಿವಿ ರಿಯಾಲಿಟಿ ಶೋ ಮೂಲಕ ಖ್ಯಾತಿಗೆ ಬಂದಿದ್ದ ಟ್ರಂಪ್ ಒಬಾಮರನ್ನು ‘ಸುಳ್ಳುಗಾರ’ ಎಂದು ಜರಿದಿದ್ದರು. ಅದಕ್ಕಿಂತ ಹೆಚ್ಚಾಗಿ ಒಬಾಮ ಹುಟ್ಟಿದ್ದು ಕೀನ್ಯಾದಲ್ಲಿ ಎಂದು ಅವರು ಪದೇ ಪದೇ ಹೇಳಿಕೆ ನೀಡಿದ್ದರು. 2016ರ ಅಧ್ಯಕ್ಷೀಯ ಚುನಾವಣೆ ಪ್ರಚಾರ ಕೊನೆಯಲ್ಲಿ ಒಬಾಮ ಅಮೆರಿಕಾದಲ್ಲಿಯೇ (ಹವಾಯಿ) ಹುಟ್ಟಿದವರು ಎಂಬುದನ್ನು ಟ್ರಂಪ್ ಒಪ್ಪಿಕೊಂಡಿದ್ದರು. ಒಬಾಮ ಕೂಡ ಟ್ರಂಪ್ ಮಾತಿನ ವೈಖರಿಯನ್ನು ಜರಿಯುತ್ತಲೇ ಬಂದಿದ್ದರು.

ಇವತ್ತು ಅದೇ ಒಬಾಮ ಹೊರನಡೆದ ಜಾಗದಲ್ಲಿ ಒಂದು ಕಾಲದ ಉದ್ಯಮಿ ಟ್ರಂಪ್ ಅಧಿಕಾರವನ್ನು ಅನುಭವಿಸಲಿದ್ದಾರೆ.

ಪ್ರತಿಭಟನೆಯ ಬಿಸಿ:

trump-protest

ಪ್ರತಿಭಟನಾಕಾರರನ್ನು ದಾಟಿಕೊಂಡು ಟ್ರಂಪ್ ಅಭಿಮಾನಿಗಳು ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ ಕ್ಷಣ.

ಅತ್ತ ಶ್ವೇತಭವನದಲ್ಲಿ ಅಮೆರಿಕಾದ ನೂತನ ಅಧ್ಯಕ್ಷ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಾಷಿಂಗ್ಟನ್ ಬೀದಿಗಳಲ್ಲಿ ಪ್ರತಿಭಟನೆಯ ಕಾವು ಏರತೊಡಗಿತ್ತು. ಮಳೆ ಬಿದ್ದು, ಒದ್ದೆಯಾದ ರಸ್ತೆಗಳಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತ, ಟ್ರಾಫಿಕ್ ಜಾಮ್ ಸೃಷ್ಟಿದ್ದರು. ಒಂದು ಹಂತದಲ್ಲಿ ಪ್ರತಿಭಟನಾಕಾರರು ಸ್ಥಳೀಯ ವಾಣಿಜ್ಯ ಸಂಕೀರ್ಣಗಳ ಮೇಲೆ ದಾಳಿಗಳನ್ನು ನಡೆಸಿದರು. ಕೊನೆಗೆ ಹಿಂಸಾಚಾರಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆ ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿದರು. ಪ್ರತಿಭಟನಾಕಾರರ ನಡುವೆಯೇ ಟ್ರಂಪ್ ಅಭಿಮಾನಿಗಳು ಪ್ರಮಾಣವಚನ ಸ್ವೀಕಾರದ ಕ್ಷಣಗಳನ್ನು ಕಣ್ತುಂಬಿಕೊಂಡರು.

Top