An unconventional News Portal.

‘ಡಾಗ್ ಮೈ ಲವ್’: ಪ್ರಪಂಚ ಮರೆಸಿದ್ದ ಶ್ವಾನ ಪ್ರೇಮ ಮತ್ತು ನೋವಿನ ನಿರ್ಗಮನ!

‘ಡಾಗ್ ಮೈ ಲವ್’: ಪ್ರಪಂಚ ಮರೆಸಿದ್ದ ಶ್ವಾನ ಪ್ರೇಮ ಮತ್ತು ನೋವಿನ ನಿರ್ಗಮನ!

  • ಮಂಜುಳಾ ಮಾಸ್ತಿಕಟ್ಟೆ

pet-dog-6ಸಣ್ಣವಳಿದ್ದಾಗಲಿಂದಲೂ ಹಾಗೆ; ನಾಯಿ ಮರಿ ಅಂದರೆ ಅದೇನೋ ಪ್ರೀತಿ. ಎಲ್ಲೇ ನಾಯಿ ಮರಿ ಕಂಡರೂ ಮನೆಗೆ ತರುತ್ತಿದ್ದೆವು. ಅಮ್ಮ ಬೈದರೂ ಪರವಾಗಿಲ್ಲ, ಸಿಕ್ಕ ನಾಯಿಯಂತೂ ಮನೆ ತನಕ ಬರುತ್ತಿತ್ತು. ಅವುಗಳ ಜೊತೆಯೇ ಆಟ, ಕುಸ್ತಿ ಎಲ್ಲವೂ ನಡೀತಿತ್ತು. ಹಾಗೆ ನಾವೊಂತರ ಬೆಳೆದಿದ್ದೇ, ಬಾಲ್ಯದಲ್ಲಿ ಗಟ್ಟಿಯಾದ ಸಂಬಂಧವೊಂದನ್ನು ಬೆಳೆಸಿಕೊಂಡಿದ್ದು ನಾಯಿಗಳ ಜೊತೆಯಲ್ಲಿ.

ನಮ್ಮೂರಲ್ಲಿ ಪ್ರತಿ ವರ್ಷ ನಾಯಿ ಸಾಯಿಸುವವರು ಬರುತ್ತಿದ್ದರು, ಅವರಿಗೆ ನಾವು ಹಾಕದೇ ಇರೋ ಶಾಪವೇ ಇಲ್ಲ. ಒಮ್ಮೆ ನನ್ನ ಪ್ರೀತಿಯ ಟೈಗರ್ ಅವರ ಬಲೆಗೆ ಸಿಕ್ಕಿದ್ದ. ಅವತ್ತಂತೂ ವಾಚಾಮಗೋಚರ ಬೈಗುಳ ಆತನಿಗೆ. ಅವತ್ತಿಡೀ ಊಟ ತಿಂಡಿ ಇಲ್ಲ. ಆಗ ನಾನಿನ್ನು ಚಿಕ್ಕವಳು. ನಮ್ಮ ಮನೆಯಿಂದ ಪೇಟೆ ಸುಮಾರು ಒಂದು ಕಿಲೋಮೀಟರ್ ದೂರವಿದೆ. ನನ್ನ ಕಿರಿಯಣ್ಣನ ವಯಸ್ಸಿನಲ್ಲಿ ಹೆಚ್ಚೇನು ಅಂತರ ಇಲ್ಲದ ಕಾರಣ ನಮ್ಮ ನಡುವೆ ಹೊಡೆದಾಟಗಳು ಹೆಚ್ಚಿರುತ್ತಿತ್ತು. ಇದರ ನಡುವೆ ಪೇಟೆಗೂ ಒಟ್ಟಿಗೆ ಹೋಗುತ್ತಿದ್ದೆವು.

ಆ ದಿನ ನಾನು ಆಣ್ಣ ಹೀಗೆ ಏನೋ ತರಲೆಂದು ಪೇಟೆಗೆ ಹೋಗಿದ್ದೆವು. ನಾವು ಸಣ್ಣ ಚೀಲ ದೊಡ್ಡದಾಗಿತ್ತು. ಇನ್ನೇನು ಮನೆಗೆ ವಾಪಾಸಾಗಲು ಪೇಟೆಯ ರಸ್ತೆ ದಾಟುತ್ತಿದ್ದೆವು. ದೂರದಲ್ಲಿ ಒಂದು ಲಾರಿ ಯಮನಂತೆ ಬರುತ್ತಿತ್ತು. ಇತ್ತ ರಸ್ತೆಯಲ್ಲೊಂದು ಪುಟ್ಟ ನಾಯಿ; ತೀರಾ ಚಿಕ್ಕದು. ಅತಿ ವೇಗದಿಂದ ಬರುತ್ತಿದ್ದ ಲಾರಿಗೆ ಪುಟ್ಟ ನಾಯಿಯ ಅರಿವಿಲ್ಲ. ನನಗೆ ಗೊತ್ತು ಆ ಲಾರಿ ಈ ನಾಯಿಯ ಮೇಲೆಯೇ ಹರಿಯೋದು. ಆದ್ರೂ ಅದನ್ನು ಬದುಕಿಸಲು ನನ್ನಿಂದಾಗಲಿಲ್ಲ. ಇದು ನಡೆದು ಸುಮಾರು 15 ವರ್ಷಗಳಾಗಿರಬಹುದು. ಆದರೆ ಇನ್ನು ನೆನಪು ಮಾತ್ರ ಮಾಸುತ್ತಿಲ್ಲ. ಮರೆಯಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನನ್ನ ಮತ್ತು ನಾಯಿ ಮರಿಗಳ ಸಂಬಂಧವೇ ಹಾಗಿತ್ತು. ಅವುಗಳ ಜೊತೆ ಮಾತುಕತೆ ಹೆಚ್ಚು ಆಪ್ತವೆನಿಸುತ್ತಿತ್ತು. ಒಂದಲ್ಲ ಒಂದು ನಾಯಿ ನಮ್ಮ ಮನೆಯಲ್ಲಿ ಇದ್ದೇ ಇರುತ್ತಿತ್ತು.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನನ್ನೂರು ಬಿಟ್ಟು ಸಿಟಿಗೆ ಬಂದಿದ್ದೆ. ಆಗ ನಮ್ಮ ಮನೆಯಲ್ಲಿ ಇದ್ದದ್ದು ಜುಮ್ಮ ಎನ್ನುವ ಪ್ರೀತಿಯ ನಾಯಿ. ಬೇರೆ ಎಲ್ಲ ನಾಯಿಗಳಿಗಿಂತ ಜುಮ್ಮ ಮತ್ತು ನನ್ನ ನಡುವೆ ಹೆಚ್ಚಿನ ಬಾಂದವ್ಯವಿತ್ತು. ಅವನೊಂತರ ನನಗೆ ತಮ್ಮನಂತಿದ್ದ. ಪ್ರತಿ ಬಾರಿ ನಾನು ಮನೆಗೆ ಬಂದಗಲೂ ಅಪ್ಪ ಇರದೇ ಇದ್ದರೆ ನನ್ನ ವಾಪಾಸ್ ಕಳಿಸಲು ಬರುತ್ತಿದ್ದದ್ದು ಇದೇ ಜುಮ್ಮ. ಬಸ್ ಕಾದು, ನನ್ನ ಬಸ್ ಹತ್ತಿಸಿ ಅದು ವಾಪಾಸ್ ಹೋಗುತ್ತಿತ್ತು. ಒಮ್ಮೆ ಬಸ್ ಹತ್ತಿಸಲು ಬಂದಿದ್ದ ಜುಮ್ಮ ನನ್ನ ಜೊತೆಗೆ ಬಸ್ ಹತ್ತಿದ್ದ. ಕೊನೆಗೆ ಕಂಡಕ್ಟರ್ ಬೈದು ಬಸ್ ಇಳಿಸಿದ್ದ. ಓದು ಮುಗಿದು ಮಹಾನಗರ ಸೇರಿದ್ದೆ. ಜುಮ್ಮನ ಪ್ರೀತಿ ಹಾಗೆ ಇತ್ತು. ಅದೊಂದು ದಿನ ಜುಮ್ಮ ಇಲ್ಲ ಅಂತಾ ಅಮ್ಮ ಹೇಳಿದ್ದರು. ಅಲ್ಲಿಂದ ನಾಯಿಗಳ ಜೊತೆಗೆ ಒಡನಾಟ ಕಡಿಮೆ ಆಗಿತ್ತು.

pet-dog-5ಬೆಂಗಳೂರಿನಂತಾ ನಗರಗಳಲ್ಲಿ ನಾಯಿಗಳನ್ನು ಸಾಕುವುದು ಅಷ್ಟು ಸುಲಭವಲ್ಲ. ಇಲ್ಲಿ ನಮ್ಮ ಕೆಲಸವೇ ಹೆಚ್ಚಿರುತ್ತದೆ. ಬಾಡಿಗೆ ಮನೆ; ಮಾಲೀಕರ ನಿರ್ಬಂಧಗಳು. ಹಾಗಾಗಿ ನಾಯಿ ಸಾಕುವ ಮಾತೆಲ್ಲಿಂದ. ಹೀಗಿರುವಾಗಲೇ ಪುಟ್ಟ ಕಂದಮ್ಮವೊಂದು ನಮ್ಮ ಮನೆಗೆ ಬಂದಿತ್ತು; ಸ್ನೇಹಿತೆ ತಂದಿದ್ದು. ಲ್ಯಾಬ್ರಾಡಾರ್ ಜಾತಿಗೆ ಸೇರಿದ್ದು. ಇನ್ನು ಪುಟ್ಟ ಮಗು ಅದು. ತರುವಾಗಲೇ ವಾಸನೆಗಟ್ಟಿದ್ದ ಅದಕ್ಕೆ ಬಿಸಿ ನೀರಿನ ಸ್ನಾನವೂ ಅಗಿತ್ತು. ಎಷ್ಟೇ ಮಾತಾಡಿದರೂ ಅದರಿಂದ ಒಂದು ಸ್ವರವೂ ಹೊರಡಲಿಲ್ಲ. ಚೂರು ಹಾಲು ಕುಡಿದು ಬೆಚ್ಚಗೆ ಮಲಗುತ್ತಿತ್ತು. ರಾತ್ರಿ ತನಕ ಕಾದರೂ ಅದರಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ, ಒಂದು ಸಂಶಯ ಕಾಡಲು ಆರಂಭವಾಯಿತು. ಅದಕ್ಕೆ ಕೂಗಲು ಬರತ್ತ ಇಲ್ಲವೋ? ಸಣ್ಣ ಮರಿ ಬೇರೆ; ನಾಯಿ ಬಾಷೆ ಗೊತ್ತೇ ಇಲ್ಲವೇನೋ ಎನ್ನುವ ತರ್ಕ ಶುರುವಾಯಿತು. ಏನಾದರಾಗಲಿ ಅಂತಾ ಕೊನೆ ಪ್ರಯತ್ನ ಎನ್ನುವಂತೆ ನಾಯಿ ತರ ನಾನು ಕೂಗೋಕೆ ಆರಂಭ ಮಾಡಿದ ಮೇಲೆ ಸಣ್ಣದೊಂದು ಶಬ್ದ ಹೊರಬಂತು.

ನಮ್ಮ ಸ್ನೇಹಿತರ ಬಳಗದಲ್ಲಿ ಯಾರಿಗಾದರೂ ಪ್ರೀತಿಯಿಂದ ಕರೆಯುವ ಹೆಸರು ಗುಬ್ಬಾಣಿ ಎಂದು. ಅದೇ ಹೆಸರನ್ನು ನಮ್ಮ ಪುಟ್ಟ ಕಂದಮ್ಮನಿಗೂ ಇಡಲಾಯಿತು. ಹೀಗೆ ನಮ್ಮ ಮನೆಗೊಬ್ಬ ಹೊಸ ಸದಸ್ಯನ ಆಗಮನವಾಗಿತ್ತು. ಅವನಿಗೆ ಊಟ, ಸ್ನಾನ ಹೀಗೆ ಸಮಯ ಕಳೆಯುತ್ತಿತ್ತು. ಗುಬ್ಬಾಣಿ ತುಂಬಾ ಪಾಪದ್ದು ಅಂದರೆ, ಊಟ ಹಾಕಿ ಮನೆಯಲ್ಲಿ ಕಟ್ಟಿ ಬಂದರೆ ನಾವು ಕೆಲಸ ಮುಗಿಸಿ ವಾಪಾಸ್ ಹೋಗುವವರೆಗೂ ನಮಗಾಗಿ ಕಾಯುತ್ತಿತ್ತು. ಅವನನ್ನು ಬಿಟ್ಟು ಬಂದಾಗ ಯಾಕಾದರೂ ಈ ಕೆಲಸ ಎನ್ನಿಸುತ್ತಿತ್ತು. ಅವನನ್ನು ನೋಡುವ, ಬೇಗ ಮನೆ ತಲುಪುವ ತವಕ ನನಗೆ. ಕೆಲಸದ ನಡುವೆಯೂ ಅವನ ಚಿಂತೆ. ಅವನನ್ನು ವಾಕಿಂಗ್ ಕರೆದುಕೊಂಡು ಹೋಗಬೇಕಿತ್ತು. ಅದಕ್ಕೂ ನನ್ನನ್ನೇ ಕಾಯುತ್ತಿದ್ದ. ಹೋಗುವುದು ಸ್ವಲ್ಪ ಲೇಟಾದರೆ ಅಲ್ಲೇ ಗಲೀಜು ಮಾಡುತ್ತಿದ್ದ. ಮನೆಗೆ ಬಂದರೆ ಬಾಲ ಕುಣಿಸಿ ನನ್ನ ಸುಮ್ಮನಾಗಿಸುತ್ತಿದ್ದ.

ಅವನನ್ನು ನಾನು ಮಗ ಅಂತಲೇ ಕರೆಯುತ್ತಿದ್ದದ್ದು. ಅವನು ಬಂದ ಮೇಲೆ ಸಮಯ ಹೋಗುವುದೇ ತಿಳಿಯುತ್ತಿರಲಿಲ್ಲ. ಬೇರೆ ಯಾವ ಚಿಂತೆಗಳು ಬರುತ್ತಿರಲಿಲ್ಲ. ನನ್ನಿಡೀ ಪ್ರಪಂಚವೇ ಗುಬ್ಬಾಣಿ ಆಗಿದ್ದ. ಅಂಗೈನಲ್ಲಿ ಕೂರುತ್ತಿದ್ದ ಗುಬ್ಬಾಣಿ ಬಹಳ ಬೇಗ ಬೆಳೆಯತೊಡಗಿದ್ದ. ಪಿಡಿಗ್ರಿ ಅವನಿಷ್ಟದ ಫುಡ್. ನಾನ್ವೇಜ್ ಬೇಕಿತ್ತು; ಕನಿಷ್ಟ ಮೊಟ್ಟೆ ಇಲ್ಲದೇ ಅವನು ಊಟ ಮಾಡುತ್ತಿರಲಿಲ್ಲ. ಗುಬ್ಬಾಣಿಗೆ ಏನಾದ್ರು ಅಂದರೆ ಬಹಳ ಬೇಗ ಬೇಸರ ಮಾಡಿಕೊಳ್ಳುತ್ತಿದ್ದ. ಹೀಗೆ ಒಂದು ದಿನ ನಾನವನಿಗೆ ಬೈದಿದ್ದಕ್ಕೆ ನನ್ನ ಹತ್ತಿರವೇ ಬಂದಿರಲಿಲ್ಲ. ಕೊನೆಗೆ ಕಂಪ್ರೊಮೈಸ್ ಮಾಡಿಸುವಷ್ಟರಲ್ಲಿ ನನ್ನ ಸ್ನೇಹಿತರಿಗೆ ಸಾಕು ಸಾಕಾಗಿತ್ತು.

ಒಂದು ದಿನ ನಾನು ಗುಬ್ಬಾಣಿ ವಾಕಿಂಗ್ ಹೋಗಿದ್ದೆವು. ರಾತ್ರಿ ಸುಮಾರು ಒಂಭತ್ತರ ಸಮಯ, ನಾವಿರುವ ಕಡೆಯೇ ಒಂದು ಬೈಕ್ ಬಂತು. ಅದು ಮೈದಾನ ಪ್ರದೇಶ. ಬೈಕ್ ಸ್ಟಾರ್ಟ್‍ಲ್ಲೇ ಇತ್ತು. ಓರ್ವ ಬೈಕಿಂದ ಇಳಿದು ಚೀಲವೊಂದನ್ನು ಮೂಲೆಯಲ್ಲಿ ಇಟ್ಟು ಮತ್ತೆ ಬೈಕ್ ಹತ್ತಿದ. ನಾನು ಗುಬ್ಬಾಣಿ ನೋಡುತ್ತಲೇ ಇದ್ದೆವು. ಚೀಲದಲ್ಲಿ ಏನಿದೆಯೋ ಎನ್ನುವ ಭಯ ಒಂದೆಡೆ, ಸುತ್ತಮುತ್ತ ಬೇರೆ ಯಾರು ಇಲ್ಲ. ಭಯದಿಂದ ಚೀಲವನ್ನೇ ನೋಡುತ್ತಿದ್ದೆ. ಆ ಚೀಲ ಸರಿದಾಡತೊಡಗಿತು. ಅದರೊಳಗಿಂದ ಪುಟ್ಟ ನಾಯಿಮರಿ ಹೊರಬಂದಿತ್ತು. ಈಗ ತಾನೆ ಜಗತ್ತಿಗೆ ಬಂದಂತಿತ್ತು. ಬಹುಶಃ ಅದು ಕಣ್ಣು ಬಿಟ್ಟ ತಕ್ಷಣ ಅದನ್ನು ಇಲ್ಲಿ ತಂದು ಬಿಡಲಾಗಿತ್ತು. ಸುತ್ತ ಯಾರು ಎಲ್ಲ. ದೂರದಲ್ಲೆಲ್ಲೋ ಬೀದಿ ನಾಯಿ ಬೊಗಳುವ ಶಬ್ದ. ಅಲ್ಲೇ ಬಿಟ್ಟರೆ ಬೀದಿ ಹೆಣ ಆಗೋದು ಖಚಿತ; ಹೀಗೆ ಯೋಚಿಸಿ ಅದನ್ನು ನಮ್ಮ ಮನೆಗೆ ಕರೆತಂದಿದ್ದೆ.

ನನಗೆ ನೆನಪಿರುವಂತೆ ನಾಯಿ ಸದಾ ಕಾಲಕ್ಕೂ ನನ್ನ ಫ್ರೆಂಡ್ ಆಗಿತ್ತು. ಆದರೆ ಈ ಪುಟ್ಟ ನಾಯಿ ಮರಿ ವಿಶೇಷವಾದದ್ದು. ಅದಕ್ಕೆ ಇಟ್ಟ ಹೆಸರು ರಾಣಿ. ಈ ಹೆಸರಿಗೂ ಕಾರಣ ಇದೆ. ರಾಣಿ ನಮ್ಮ ಮನೆಗೆ ಬರುವ ಹೊತ್ತಿಗೆ ಗುಬ್ಬಾಣಿ ದೊಡ್ಡವನಾಗಿದ್ದ. ವಯಸ್ಸಿಗೂ ಮೀರಿದ ದೇಹದ ಬೆಳವಣಿಗೆ ಅವನದು. ಅವನು ಮೈ ಮೇಲೆ ಬಿದ್ದರೆ ರಾಣಿ ಸತ್ತು ಹೋಗುವಂತಿತ್ತು. ಅಂದರೆ ಅಷ್ಟು ಸಣ್ಣದು ಅದು. ಆದರೂ ಗುಬ್ಬಾಣಿಗೆ ರಾಣಿ ಹೆದರಿಸುತ್ತಿದ್ದಳು. ನಾವು ಬೈದರೂ ಸುಮ್ಮನಿರುತ್ತಿರಲಿಲ್ಲ. ವಿಚಿತ್ರ ಆಟಿಟ್ಯೂಡ್ ಅದರದ್ದು. ಹಸಿವಾದಾಗ ಊಟ ಕೇಳುತ್ತಿತ್ತು, ನಿದ್ರೆ ಬಂದರೆ ಮಲಗುತ್ತಿತ್ತು. ಈ ನಿದ್ರೆಯ ವಿಚಾರ ಬಂದರೆ ಸಾಮಾನ್ಯ ಎಲ್ಲರೂ ನಾಯಿಯ ನಿದ್ದೆ ಇರಬೇಕು ಅಂತಾರೆ. ಅಂದರೆ ಚೂರು ಸದ್ದಾದರೂ ನಾಯಿಗಳು ಎಚ್ಚರಗೊಳ್ಳುತ್ತವೆ. ಆದರೆ ನಮ್ಮ ರಾಣಿ ಇದಕ್ಕೆ ಅಪವಾದ. ಅದಕ್ಕೆ ನಿದ್ದೆ ಬಂದಾಗ ಯಾರೂ ಅದನ್ನು ಡಿಸ್ಟರ್ಬ್ ಮಾಡುವುದನ್ನು ಅದು ಸಹಿಸುತ್ತಿರಲಿಲ್ಲ. ಅವಳು ನಿದ್ದೆಗೆ ಜಾರಿದಾಗ ಪಕ್ಕದಲ್ಲಿ ಬಸ್ ಹೋದರೂ ಅವಳು ಎಚ್ಚರಗೊಳ್ಳುತ್ತಿರಲಿಲ್ಲ. ಅವಳನ್ನು ಎತ್ತಿ ಬೇರೆಡೆ ಮಲಗಿಸಿದರೂ ಅವಳು ಎಚ್ಚರಗೊಳ್ಳುತ್ತಿರಲಿಲ್ಲ. ಅಂತಾ ಕುಂಭಕರ್ಣನ ವಂಶಸ್ಥೆ ಅವಳು.

pet-dog-1ನೋಡೋಕೆ ಪುಟ್ಟ ಪಕ್ಕಾ ಕಂತ್ರಿ ನಾಯಿ ಅವಳು. ಆದರೆ ಅವಳ ಸ್ವರನೋ… ಅಬ್ಬಾ! ಇಡೀ ಏರಿಯಾಕ್ಕೆ ಕೇಳಿಸುವಂತೆ ಕೂಗುತ್ತಿತ್ತು. ನಮ್ಮ ಕಡೆ ಒಂದು ಗಾದೆ ಹೇಳ್ತಾರೆ; ಉಂಡು ತಿಂದು ಮಂಡೆ ರೋಗ ಅಂತಾ. ರಾಣಿನೂ ಹಾಗೆ, ಹೊಟ್ಟೆ ತುಂಬಾ ಊಟ ಮಾಡಿ, ಕಣ್ತುಂಬಾ ನಿದ್ದೆ ಮಾಡಿದರೂ; ಕೂಗೋದು ಮಾತ್ರ ಬಿಡುತ್ತಿರಲಿಲ್ಲ. ಏನೇ ಸಮಾಧಾನ ಮಾಡಿದರೂ ಸುಮ್ಮನಾಗುತ್ತಿರಲಿಲ್ಲ. ಅವಳಿಗೆ ಸಾಕು ಅನ್ನಿಸಿದಾಗ ಮಾತ್ರವೇ ತಣ್ಣಗೆ ಇದ್ದು ಬಿಡುತ್ತಿದ್ದಳು.

ರಾಣಿಗೆ ಸುತ್ತಾಟ ಅಂದ್ರೆ ಬಹಳ ಇಷ್ಟ. ಮನೆಗೆ ಬಂದು ಒಂದು ವಾರ ಆಗಿತ್ತಷ್ಟೆ. ಗೇಟ್ ಓಪನ್ ಆಗಿತ್ತು. ಅದನ್ನೇ ಕಾಯುತ್ತಿದ್ದ ರಾಣಿ ಎಸ್ಕೇಪ್ ಆಗಿದ್ದಳು. ಇಡೀ ದಿನ ಅವಳಿಗಾಗಿ ಹುಡುಕಾಡಿದರೂ ಅವಳ ಸುಳಿವಿಲ್ಲ. ಏನಾದರೂ ಆಯಿತೋ, ಎನೋ ಎಂಬ ಭಯವಾಗುತ್ತಿತ್ತು. ಇತ್ತ ಗುಬ್ಬಾಣಿ ಅಷ್ಟರಲ್ಲಾಗಲೇ ಅವಳನ್ನು ಹಚ್ಚಿಕೊಂಡಿದ್ದ. ಅವಳು ಬಂದ ಮೇಲೆ ಅವನ ಇಡೀ ಪ್ರಪಂಚವೇ ಅವಳಾಗಿದ್ದಳು. ನಾವು ಹೆಚ್ಚು ಅವನಿಗೆ ಬೇಕಾಗಿರಲಿಲ್ಲ. ಹೀಗಿರುವಾಗಲೇ, ರಾಣೀ ಹೋಗಿದ್ದು ಅವನಿಗೆ ಕಷ್ಟವಾಗಿತ್ತು. ಯಾವ ಮಟ್ಟಿಗೆ ಅಂದ್ರೆ ಅವನು ಊಟವನ್ನೇ ಬಿಟ್ಟಿದ್ದ. ಅವನದ್ದೊಂದೇ ಬೇಡಿಕೆ; ಅದು ರಾಣಿಯಾಗಿದ್ದಳು.

ಇಡೀ ಏರಿಯಾ ಜಾಲಾಡಿದರೂ ಅವಳ ಸುಳಿವಿಲ್ಲ. ರಾತ್ರಿ ಹನ್ನೆರಡರವರೆಗೆ ನಾನು, ನನ್ನ ಸ್ನೇಹಿತರು ಹುಡುಕಿದ್ದೇ ಬಂತು, ರಾಣಿಯ ಪತ್ತೆ ಇಲ್ಲ. ಕೊನೆಗೆ ಅವಳ ಆಸೆ ಎಲ್ಲರೂ ಬಿಟ್ಟೆವು. ಆದರೆ ಒಂದು ಭರವಸೆ ಇತ್ತು. ರಾಣಿಯನ್ನ ಯಾರಾದರೂ ತೆಗೆದುಕೊಂಡು ಹೋಗಿದ್ದರೆ, ಮತ್ತೆ ತಂದು ಬಿಡುತ್ತಾರೆ ಎಂಬುದು. ಯಾಕೆಂದರೆ ಅವಳನ್ನು ಮತ್ತು ಅವಳ ಕೂಗಾಟವನ್ನು ಸಹಿಸಿಕೊಳ್ಳೋದು ಅಷ್ಟು ಸುಲಭವಾಗಿರಲಿಲ್ಲ. ಬೆಳಗಿನ ಜಾವ ಮೂರರ ಸಮಯ.ಜೋರು  ಕೂಗಾಟ, ಎದ್ದು ನೋಡಿದರೆ ರಾಣಿ. ನಾವು ಎಣಿಸಿದಂತೆಯೇ ಆಗಿತ್ತು, ರಾಣಿಯ ಕೊರಳಲ್ಲಿ ದಾರವೊಂದಿತ್ತು. ನಿರೀಕ್ಷೆಯಂತೆ ತೆಗೆದುಕೊಂಡು ಹೋದವರು ವಾಪಾಸ್ ತಂದು ಬಿಟ್ಟಿದ್ದರು.

ಅಂತೂ ಮತ್ತೆ ರಾಣಿ ಮನೆಗೆ ಬಂದಿದ್ದು ಎಲ್ಲರಿಗಿಂತಾ ಹೆಚ್ಚು ಖುಷಿ ಕೊಟ್ಟಿದ್ದು ಮಾತ್ರ ಗುಬ್ಬಾಣಿಗೆ. ಅವರಿಬ್ಬರ ಆಟ, ಪ್ರೀತಿ ನಡುವೆ ಜಗತ್ತೇ ಮರೆತು ಹೋಗುತ್ತಿತ್ತು. ರಾಣಿ, ಗುಬ್ಬಾಣಿ ಇಬ್ಬರೂ ರಾತ್ರಿ ಲೈಟ್ ಆಫ್ ಆದರೆ ಕೆಳಗೆ ಮಲಗುತ್ತಿದ್ದವು. ಆದರೆ ರಾಣಿಗೆ ಒಂದು ನಿದ್ದೆ ಆಗಿ ಎಚ್ಚರ ಆದರೆ ಮಂಚದ ಬಳಿ ಬರುತ್ತಿದ್ದಳು. ಎರಡು ಕಾಲನ್ನು ಮಂಚದ ಮೇಲೆತ್ತಿ ನಿಧಾನ ಕೂಗೋಕೆ ಶುರು ಮಾಡುತ್ತಿದ್ದಳು. ನನಗೋ ನಿದ್ದೆ ಮಂಪರು ಅಷ್ಟೊತ್ತಿಗೆ. ಹಾಗೆ ಅವಳನ್ನು ಎತ್ತಿ ನನ್ನ ಮೇಲೆ ಮಲಗಿಸಿಕೊಳ್ಳುತ್ತಿದ್ದೆ. ಮತ್ತೆ ನಾ ಏಳೋ ತನಕ ಅವಳ ಸುದ್ದಿ ಇರುತ್ತಿರಲಿಲ್ಲ; ಅಂತಾ ಕುಂಭಕರ್ಣಿ ಅವಳು.

ದಿನಗಳು ಉರುಳುತ್ತಿತ್ತು, ರಾಣಿ, ಗುಬ್ಬಾಣಿಗಳು ಬೆಳೆಯುತ್ತಿದ್ದವು. ಇರೋ ಪುಟ್ಟ ಜಾಗ ಅವುಗಳಿಗೆ ಸಾಕಾಗುತ್ತಿರಲಿಲ್ಲ. ನಾನು ಕೆಲಸಕ್ಕೆ ಹೋದರೆ ಅವುಗಳಿಗೆ ಊಟದ್ದೂ ಸಮಸ್ಯೆ. ಅವುಗಳನ್ನು ಬಿಟ್ಟು ಎಲ್ಲೂ ಹೋಗಲಾಗುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವುಗಳನ್ನು ಅಜ್ಜಿ ಮನೆಗೆ ಕಳಿಸಲು ತೀರ್ಮಾನಿಸಿದೆ. ಅಜ್ಜಿ ಮನೆ ಅಂದರೆ ನನ್ನ ಊರಿನ ಮನೆ.
ಆ ದಿನ ಬಂದಿತ್ತು. ಕೊನೆದಾಗಿ ಇಬ್ಬರಿಬ್ಬರಿಗೂ ಊಟ ಹಾಕಿದ್ದೆ. ಕಾರಿನಲ್ಲಿ ಕೂತ ಅವೆರಡೂ ಬೇಸರಗೊಂಡಿದ್ದವು. ನನ್ನ ಬಳಿ ಬೇರೆ ಆಯ್ಕೆಗಳು ಇರಲಿಲ್ಲ. ಅಂತೂ ಅಜ್ಜಿ ಮನೆಗೆ ಹೋದವು. ಈಗ ಮನೆಯಲ್ಲಿ ಯಾರೋ ಕಾಯುತ್ತಾರೆ ಎನ್ನುವ ಭಾವನೆಯಿಲ್ಲ. ದಿನಕ್ಕೆ ಎರಡು ಬಾರಿ ಮನೆ ಸ್ವಚ್ಛಗೊಳಿಸೋ ತಾಪತ್ರಯ ಇಲ್ಲ. ದಿನಕ್ಕೆ ಮೂರು ಮೊಟ್ಟೆ ಖರ್ಚಿಲ್ಲ. ಅವು ತೋರುತ್ತಿದ್ದ ಪ್ರೀತಿಯೂ ಇಲ್ಲ. ಮನೆ ಖಾಲಿ ಖಾಲಿ. ಮನಸ್ಸೂ…..

(ಲೇಖಕಿ ರಾಜ್ ನ್ಯೂಸ್ ಕನ್ನಡ ವಾಹಿನಿಯಲ್ಲಿ ಸುದ್ದಿ ನಿರೂಪಕಿ.)

Top