An unconventional News Portal.

ಆಸಕ್ತಿ ಕಳೆದುಕೊಂಡ ವಿದ್ಯಾರ್ಥಿಗಳು: ಕಳೆಗುಂದುತ್ತಿರುವ ಎಂಜಿನಿಯರಿಂಗ್ ಆಕಾಂಕ್ಷೆ; ನಿರುದ್ಯೋಗದ ಸವಾಲುಗಳು

ಆಸಕ್ತಿ ಕಳೆದುಕೊಂಡ ವಿದ್ಯಾರ್ಥಿಗಳು: ಕಳೆಗುಂದುತ್ತಿರುವ ಎಂಜಿನಿಯರಿಂಗ್ ಆಕಾಂಕ್ಷೆ; ನಿರುದ್ಯೋಗದ ಸವಾಲುಗಳು

ದಶಕದ ಹಿಂದೆ ಮಧ್ಯಮ ವರ್ಗದ ಮನೆಗಳಲ್ಲಿ ಭವಿಷ್ಯ ಕನಸುಗಳನ್ನು ಸೃಷ್ಟಿಸುತ್ತಿದ್ದ ಎಂಜಿನಿಯರಿಂಗ್ ಪದವಿ ರಾಜ್ಯದಲ್ಲಿ ತನ್ನ ‘ಪ್ರಭೆ’ಯನ್ನು ಕಳೆದುಕೊಳ್ಳುವ ಹಂತ ತಲುಪಿದೆ.

ಈ ಸಾರಿ ಕರ್ನಾಟಕ- ಸಾಮಾನ್ಯ ಪ್ರವೇಶ ಪರೀಕ್ಷೆಯ ಕೌನ್ಸಿಲಿಂಗ್ ವೇಳೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಬಯಸುವವರ ಸಂಖ್ಯೆಯಲ್ಲಿ ಶೇ. 20ರಷ್ಟು ಇಳಿಮುಖವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಒಂದು ಕಡೆ ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾದ ನಂತರ ತಂದ ಆಡಳಿತಾತ್ಮಕ ಬದಲಾವಣೆಗಳು ಹಾಗೂ ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿರುವ ಐಟಿ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗಿಗಳ ಹೊರಹಾಕುವಿಕೆ ಪ್ರಕ್ರಿಯೆಗಳ ಪರಿಣಾಮ ಇದು.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಐಟಿ- ಬಿಟಿ ಕ್ರಾಂತಿ ಶುರುವಾಗಿದ್ದು 90ರ ದಶಕದ ಕೊನೆಯಲ್ಲಿ. 20ನೇ ಶತಮಾನದ ಮಧ್ಯಭಾಗದಲ್ಲಿ ಎಂಜಿನಿಯರಿಂಗ್ ಪದವಿ ಬಗ್ಗೆ ಜನರಲ್ಲಿ ಉಜ್ವಲ ಭವಿಷ್ಯದ ಕನಸನ್ನು ಭಿತ್ತಲು ಇದು ನೆರವು ನೀಡಿತು. ಅದೇ ವೇಳೆಗೆ ಎಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. 2016-17ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಇದ್ದ ಎಂಜಿನಿಯರಿಂಗ್ ಪದವಿ ಕಾಲೇಜುಗಳ ಸಂಖ್ಯೆ 195. ಇವುಗಳಲ್ಲಿ ಒಟ್ಟು 1,00,565 ಸೀಟುಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಕೆಲವು ಕಾಲೇಜುಗಳು ತಮಗೆ ಅನುಮತಿ ದೊರೆತ ಸೀಟುಗಳಿಗಿಂತಲೂ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸೀಟು ಹೆಚ್ಚಿಸಲು ಬೇಡಿಕೆಯನ್ನೂ ಸಲ್ಲಿಸುತ್ತಿದ್ದವು. ರಾಜ್ಯದಲ್ಲಿರುವ 35 ಎಂಜಿನಿಯರಿಂಗ್ ಸ್ನಾತ್ತಕೋತ್ತರ ಕಾಲೇಜುಗಳಲ್ಲಿ 12,895 ಸೀಟುಗಳಿಗೆ ಅನುಮತಿ ನೀಡಲಾಗಿತ್ತು. ಅಲ್ಲಿಯೂ ಕೂಡ ಅದೇ ಪರಿಸ್ಥಿತಿ ಇತ್ತು. ಆದರೆ ಸದ್ಯದ ಲೆಕ್ಕಾಚಾರಗಳನ್ನು ನೋಡಿದರೆ, ಈ ಸಾಲಿನಲ್ಲಿ ಸಾಕಷ್ಟು ಎಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸಲಿವೆ.

ದೇಶದಲ್ಲಿ ಒಟ್ಟು 3,286 ಎಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಲ್ಲಿ ಪ್ರತಿ ವರ್ಷ 15,53,809 ಸೀಟುಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ದೇಶದ ಮಟ್ಟದಲ್ಲಿ ಎಂಜಿನಿಯರಿಂಗ್ ಪದವಿ ಬಯಸುವವರ ಸಂಖ್ಯೆಯಲ್ಲಾಗಿರುವ ಏರುಪೇರುಗಳ ಕುರಿತು ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಕೆ- ಸಿಇಟಿ ಕೌನ್ಸಿಲಿಂಗ್ ಆಸಕ್ತಿ ಕುಂದಿರುವುದಕ್ಕೆ ಮುನ್ಸೂಚನೆ ನೀಡುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಉದ್ಯೋಗದ ಭೀತಿ.

“ನನ್ನ ಮಗಳು ಪರೀಕ್ಷೆಯಲ್ಲಿ ಹಾಗೂ ಸಿಇಟಿಯಲ್ಲಿ ಉತ್ತಮ ಅಂಕ ಪಡೆದಿದ್ದಳು. ನಮಗೆ ಎಂಜಿನಿಯರಿಂಗ್ ಸೇರಿಸಬೇಕು ಎಂಬ ಆಸಕ್ತಿ ಇತ್ತು. ಆದರೆ ಆಕೆಯೇ ಬೇಡ ಎಂದಳು. ಅವಳ ಸೀನಿಯರ್ಸ್ ಅವಳಿಗೆ ಎಂಜಿನಿಯರಿಂಗ್ ಬಿಟ್ಟು ಬೇರೆ ಏನಾದರೂ ಓದಲು ಸಲಹೆ ನೀಡಿದ್ದಾರೆ,” ಎನ್ನುತ್ತಾರೆ ಸಿಇಟಿ ಕೌನ್ಸಿಲಿಂಗ್ನಲ್ಲಿ ಪಾಲ್ಗೊಂಡ ಪೋಷಕರೊಬ್ಬರು.

ಉದ್ಯೋಗ ಸೃಷ್ಟಿ ಕೊರತೆ:

ಪ್ರತಿ ವರ್ಷ ದೇಶಾದ್ಯಂತ ಸುಮಾರು 15 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಸೇರುತ್ತಿದ್ದಾರೆ. 2014ರಲ್ಲಿ ದೇಶದ ನಾನಾ ಎಂಜಿನಿಯರಿಂಗ್ ಕಾಲೇಜುಗಳಿಂದ ತೇರ್ಗಡೆಹೊಂದುವ ವಿದ್ಯಾರ್ಥಿಗಳ ಸಂಖ್ಯೆ 13 ಲಕ್ಷ ದಾಟಿತ್ತು. ಆದರೆ ಇಷ್ಟು ಪ್ರಮಾಣದ ಪದವೀದರರಿಗೆ ಸೂಕ್ತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. “ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿಯೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಕೌಶಲ್ಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಯುವಜನರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಲಾಗಿತ್ತು. ಇದಕ್ಕಾಗಿ ಸ್ಕಿಲ್ ಇಂಡಿಯಾ ಹೆಸರಿನಲ್ಲಿ ಪ್ರಚಾರವನ್ನು ಮಾಡಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಯ ಮಾತುಗಳನ್ನಾಡಿತ್ತು. ಆದರೆ ಇವ್ಯಾವುದು ಗುರಿ ಮುಟ್ಟಿಲ್ಲ,” ಎನ್ನುತ್ತಾರೆ ‘ಎಪ್ಲಾಯ್ಮೆಂಟ್ ಫಾರ್ ಕರ್ನಾಟಕ’ ಆಂದೋಲನ ರೂಪಿಸುತ್ತಿರುವ ಮಲ್ಲಿಗೆ.

ಸದ್ಯ ಎಂಜಿನಿಯರಿಂಗ್ ಪದವೀದರರ ಪರಿಸ್ಥಿತಿ ಹೇಗೆ ಎಂದರೆ, ಇತ್ತೀಚೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಇರುವ ಸರಕಾರಿ ವಸತಿ ನಿಲಯದಲ್ಲಿ ಅಡುಗೆ ಕೆಲಸಕ್ಕೆ ನೇಮಕಾತಿಗಾಗಿ ಸರಕಾರ ಸಂದರ್ಶನ ನಡೆಸಿತ್ತು. ಇದರಲ್ಲಿ ಎಂಜಿನಿಯರಿಂಗ್ ಪದವೀದರರೂ ಕೂಡ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು.

ಸದ್ಯದ ಕಾರಣಗಳು:

‘ಅಮೆರಿಕಾ ಫಸ್ಟ್’ ಘೋಷಣೆ ಅಡಿಯಲ್ಲಿ ಚುನಾವಣೆಯಲ್ಲಿ ಗೆದ್ದು ಬಂದ ಡೊನಾಲ್ಡ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ ವಿದೇಶಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕುವ ಆಡಳಿತಾತ್ಮಕ ಸುಧಾರಣೆಗೆ ಮುಂದಾದರು. ಈ ಮೂಲಕ ಸ್ಥಳೀಯರಿಗೆ ಸುಮಾರು 1 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ಇದರ ಪರಿಣಾಮ ಅಮೆರಿಕಾದಲ್ಲಿದ್ದ ಭಾರತೀತ ಐಟಿ ಉದ್ಯೋಗಿಗಳಿಗೆ ಬಿಸಿ ಮುಟ್ಟಿದೆ. ಅಮೆರಿಕಾ ಮಾತ್ರವಲ್ಲ, ಸಿಂಗಪೂರ, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿಯೂ ಇದೆ ಪರಿಸ್ಥಿತಿ ಇದೆ. ತಮ್ಮ ತಮ್ಮ ದೇಶಗಳಲ್ಲಿ ಕೌಶಲ್ಯಭರಿತ ವಲಸೆ ಉದ್ಯೋಗಗಳಿಗೆ ಕಡಿವಾಣ ಹಾಕಲಾಗುತ್ತಿದೆ.

ಇನ್ನೊಂದು ಕಡೆ, ನಾನಾ ಆರ್ಥಿಕ ಕಾರಣಗಳಿಗಾಗಿ ಭಾರತದಲ್ಲಿರುವ ಐಟಿ ಕಂಪನಿಗಳು ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಇದರ ಮೊದಲ ಹೆಜ್ಜೆಯಾಗಿ ಉದ್ಯೋಗಗಳನ್ನು ಸಂಸ್ಥೆಯಿಂದ ಹೊರಹಾಕಲಾಗುತ್ತಿದೆ. ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳಲ್ಲಿಯೇ ಕಳೆದ ಮೂರು ತಿಂಗಳಿನಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 2 ಸಾವಿರ ದಾಟಿದೆ.

ಹೀಗೆ, ಒಂದು ಕಡೆ ಉದ್ಯೋಗಾವಕಾಶದ ಕೊರತೆ ಮತ್ತೊಂದು ಕಡೆ ಬೀಳುತ್ತಿರುವ ಮಾರುಕಟ್ಟೆ, ಎಂಜಿನಿಯರಿಂಗ್ ಕಾಲೇಜುಗಳ ದಾಖಲಾತಿಯಲ್ಲಿ ಪ್ರತಿಫಲಿಸುತ್ತಿದೆ. ಇದು ಆರಂಭ ಅಷ್ಟೆ. ಒಂದು ಕಾಲದಲ್ಲಿ ಭವಿಷ್ಯದ ಕನಸಾಗಿದ್ದ ಎಂಜಿನಿರಿಂಗ್ ಪದವಿ ಮುಂದಿನ ದಿನಗಳಲ್ಲಿ ದುಸ್ವಪ್ನದ ರೀತಿಯಲ್ಲಿ ಬದಲಾಗುವ ಹಾದಿಯಲ್ಲಿ ಸಾಗುತ್ತಿದೆ.

ಚಿತ್ರ: ಸಾಂದರ್ಭಿಕ.

Leave a comment

Top