An unconventional News Portal.

‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

‘ದಿಡ್ಡಳ್ಳಿ ಫಾಲೋಅಪ್’: ಸಂಕಷ್ಟಗಳ ಸುಧಾರಣೆ ಹಾದಿಯಲ್ಲಿ ಈ ಸಾವು ನ್ಯಾಯವೇ?

‘ಲೈನ್ ಮನೆ’ ಜೀತದ ನೋವಿನಲ್ಲೇ ಪ್ರಾಣ ಬಿಟ್ಟ ಆದಿವಾಸಿ ನಂಜಪ್ಪ.. ದಿಡ್ಡಳ್ಳಿಗೆ ಕಾಲಿಟ್ಟ ಹೋರಾಟಗಾರರ ವಿರುದ್ಧ ಪೊಲೀಸರಿಗೆ ದೂರು.. ಪುನರ್ವಸತಿಗೆ ಸರಕಾರದ ಕಡೆಯಿಂದ ನಿಧಾನಗತಿಯ ಪ್ರಕ್ರಿಯೆ.. ಇವಿಷ್ಟು ರಾಜ್ಯದ ಸುದ್ದಿಕೇಂದ್ರದಲ್ಲಿ ವಾರಗಳ ಕಾಲ ಜಾಗ ಪಡೆದುಕೊಂಡಿದ್ದ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸದ್ಯದ ಸ್ಥಿತಿಗತಿ.

ಕೊಡಗಿನ ‘ಲೈನ್ ಮನೆ’ ಜೀತದಿಂದ ಬೇಸತ್ತು ದಿಡ್ಡಳ್ಳಿಯಲ್ಲಿ ಬಿಡಾರ ಹೂಡಿದ್ದ ಆದಿವಾಸಿ ಎರವರ ನಂಜಪ್ಪ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ ಅವರ ಜೀವ ಬಲಿ ಪಡೆದುಕೊಂಡಿದ್ದರೆ, ವಾಸ್ತವದಲ್ಲಿ ಜೀತ ಪದ್ಧತಿ ನೋವು ಅವರ ಜೀವಕ್ಕೆ ಕುತ್ತಾಗಿದೆ ಎನ್ನಲಾಗಿದೆ.

ನಂಜಪ್ಪ ಕೊಡಗಿನ ವಿರಾಜಪೇಟೆ ತಾಲೂಕಿನ, ಕಾನೂರು ಗ್ರಾಮದ ತೂಚಮನಕೇರಿಯ ಪೆಮ್ಮಂಡ ಧರ್ಮಜ್ಜರವರ ಲೈನ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು. ದಿಡ್ಡಳ್ಳಿಯಲ್ಲಿ ಆದಿವಾಸಿಗಳು ಬಂದು ನೆಲೆ ನಿಲ್ಲಲು ಆರಂಭಿಸಿದಾಗ ನಂಜಪ್ಪ ಕೂಡಾ ಅಲ್ಲಿಗೆ ಬಂದು ವಾಸಿಸಲು ಆರಂಭಿಸಿದರು. ಈಗ್ಗೆ 8 ತಿಂಗಳಿನಿಂದ ದಿಡ್ಡಳ್ಳಿಯೇ ಅವರ ಊರಾಗಿತ್ತು. ಸರಕಾರದಿಂದ ಮನೆ ಸಿಗುತ್ತದೆ ಎಂಬುದು ಅವರು ದಿಡ್ಡಳ್ಳಿಯಲ್ಲಿ ಬಂದು ವಾಸಿಸಲು ಕಾರಣವಾಗಿತ್ತು. ಮನೆ ಸಿಕ್ಕಿದರೆ ಲೈನ್ ಮನೆ ಜೀತದಿಂದ ಹೊರ ಬರಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದರು.

ಆದರೆ ಅವರ ಹೆಂಡತಿ ಮಕ್ಕಳನ್ನು ಕರೆದುಕೊಂದು ಬರಲು ಮಾಲಿಕರು ಬಿಟ್ಟಿರಲಿಲ್ಲ. “ನಿನ್ನ ಮೇಲೆ 1,80,000 ಸಾಲವಿದೆ. ಅದನ್ನು ಕಟ್ಟು, ಕಟ್ಟಿದರೆ ಮಾತ್ರ ಹೆಂಡತಿ ಮಕ್ಕಳನ್ನು ಕಳುಹಿಸಿ ಕೊಡುತ್ತೇವೆ,” ಎಂದು ಮಾಲಿಕರು ದಬಾಯಿಸಿದ್ದರು. ಹೀಗಾಗಿ ದಿಡ್ಡಳ್ಳಿಯಲ್ಲಿ ನಂಜಪ್ಪ ಒಂಟಿಯಾಗಿದ್ದರು. ಮಳೆ, ಗಾಳಿ ಚಳಿಯ ನಡುವೆ ಹೆಂಡತಿ ಮಕ್ಕಳು ಜತೆಗಿಲ್ಲದ ಕೊರಗು ಅವರನ್ನು ಮಾನಸಿಕವಾಗಿ ಜರ್ಝರಿತರನ್ನಾಗಿಸಿತ್ತು.  “ಕೇವಲ ಮೂರು ದಿನಗಳ ಹಿಂದಷ್ಟೇ ಅವರು ಹೆಂಡತಿ ಮಕ್ಕಳನ್ನು ನೋಡಿಕೊಂಡು ಬಂದಿದ್ದರಂತೆ. ಹಾಗೆ ಬಂದ ನಂತರ ಅವರು ತೀವ್ರ ನೋವಿನಲ್ಲಿದ್ದರು. “ಒಂದು ಲಕ್ಷ ಎಂಬತ್ತು ಸಾವಿರವಂತೆ. ಅಷ್ಟು ದುಡ್ಡು ನಾನ್ಯಾವತ್ತು ತಗಂಡಿದ್ದೆ? ನನ್ನ ಹೆಂಡತಿ ಮಕ್ಕಳ ಗತಿ ಏನಾಗುತ್ತೋ? ಎಂದು ನೋವು ತೋಡಿಕೊಳ್ಳುತ್ತಿದ್ದರು,” ಎನ್ನುತ್ತಾರೆ ವಸಂತ್. ಹಾಗೆ ಹೆಂಡತಿ ಮಕ್ಕಳನ್ನು ಭೇಟಿಯಾಗಿ ಬಂದವರು ಭಾನುವಾರ ಬೆಳಿಗ್ಗೆ ಪ್ರಾಣ ಬಿಟ್ಟಿದ್ದಾರೆ.

ಸಾವಿನಲ್ಲೂ ರಾಜಕೀಯ:

ಕುಟುಂಬಸ್ಥರನ್ನು ಕರೆತಂದ ಪೊಲೀಸರು

ಕುಟುಂಬಸ್ಥರನ್ನು ಕರೆತಂದ ಪೊಲೀಸರು

ಬೆಳಗ್ಗೆ 6 ಗಂಟೆ ವೇಳೆಗೆ ಮುಖ ತೊಳೆಯುತ್ತಿದ್ದ ನಂಜಪ್ಪರಿಗೆ ಹಠಾತ್ತನೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ನಂಜಪ್ಪರ ಅಣ್ಣ ಬೊಳಕ ಹಾಗೂ ಮತ್ತಿತರರು ಸೇರಿ ಸರಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಂತರ ಮೃತದೇಹವನ್ನು ದಿಡ್ಡಳ್ಳಿಯಲ್ಲಿಟ್ಟು ಪೊನ್ನಂಪೇಟೆ ಸಮೀಪದ ತೂಚಮನಕೇರಿಯ ಕಾಫಿ ತೋಟಲ್ಲಿದ್ದ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಕುಟುಂಬದವರು ಸ್ಥಳಕ್ಕೆ ಆಗಮಿಸಲೇ ಇಲ್ಲ. ಕೊನೆಗೆ ಪೊಲೀಸರೇ ತೂಚಮನಕೇರಿ ಗ್ರಾಮಕ್ಕೆ ತೆರಳಿ ಪತ್ನಿ ಮತ್ತು ಮಕ್ಕಳನ್ನು ತಮ್ಮದೇ ಜೀಪಿನಲ್ಲಿ ಕರೆದುಕೊಂಡು ಬಂದಿರು.

ಈ ಸಂದರ್ಭ ಜೀತ ಸಮಸ್ಯೆಗೆ ಪರಿಹಾರ ಆಗಲೇಬೇಕು ಅಲ್ಲಿವರೆಗೆ ಹೆಣ ಎತ್ತಲು ಬಿಡುವುದಿಲ್ಲ ಎಂದು ದಿಡ್ಡಳ್ಳಿ ಆದಿವಾಸಿಗಳು ಪಟ್ಟು ಹಿಡಿದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪೋಸ್ಟ್ ಮಾರ್ಟಂ ನೆಪದಲ್ಲಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ ಅಖಾಡಕ್ಕೆ ಇಳಿದಾಗಿತ್ತು. ಅವರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮೃತದೇಹವನ್ನು ಸಿದ್ದಾಪುರ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ನಂತರ ಅಲ್ಲಿ ತಹಶೀಲ್ದಾರ್ ಮಹದೇವಸ್ವಾಮಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಮೃತದೇಹ ದಿಡ್ಡಳ್ಳಿಗೆ ಹಿಂದಕ್ಕೆ ಬರಲೇ ಇಲ್ಲ. ಅಲ್ಲಿಂದ ನೇರ ತೂಚಮನಕೇರಿಯ ಲೈನ್ ಮನೆಗೇ ಹೋಯಿತು.

ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ ಮಾಧ್ಯಮದೊಂದಿಗೆ ಮಾತನಾಡಿ, “ನಿರಾಶ್ರಿತ ಸ್ಥಳದಲ್ಲಿ ನಂಜ ಎಂಬವರು ಬೆಳಿಗ್ಗೆ ಮುಖ ತೊಳೆಯುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥನಾಗಿದ್ದರು. ಈ ಸಂದರ್ಭ ಪೊಲೀಸ್ ವಾಹನದಲ್ಲಿ ಸಿದ್ದಾಪುರ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯಾಧಿಕಾರಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೃತನ ಸಹೋದರ ಬೊಳಕ ನೀಡಿದ ದೂರಿನ ಹಿನ್ನಲೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಟುಂಬದವರು ಯಾವುದೇ ದೂರುಗಳನ್ನು ನೀಡಿಲ್ಲ; ದೂರು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದಿದ್ದಾರೆ.

ಈ ರೀತಿ ಪೊಲೀಸರು ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಖಾಡಕ್ಕೆ ಇಳಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. “ಪೋಸ್ಟ್ ಮಾರ್ಟಂ ಮುಗಿಯುತ್ತಿದ್ದಂತೆ ಹೆಣವನ್ನು ದಿಡ್ಡಳ್ಳಿಗೆ ವಾಪಸ್ಸು ತರದೇ ನೇರ ತೂಚಮನಕೇರಿಯ ಲೈನ್ ಮನೆಗೆ ಕೊಂಡೊಯ್ದು ಮಾಲಿಕರ ಜಮೀನಿನಲ್ಲೇ ದಫನ ಮಾಡಲಾಗಿದೆ. ಅವರಿಗೆ ಕೇರಳದಲ್ಲಿ ಓದುತ್ತಿರುವ ಇನ್ನೊಬ್ಬಳು ಮಗಳಿದ್ದಾಳೆ. ಆಕೆ ಬರುವ ಮೊದಲೇ ದಫನ ಮಾಡಿದ್ದು ಅನುಮಾನ ಮೂಡಿಸುತ್ತಿದೆ. ಪೊಲೀಸರು ಮತ್ತು ಮಾಲಿಕರು ಸೇರಿಕೊಂಡು ಆಕೆಯ ಬ್ರೈನ್ ವಾಷ್ ಮಾಡಿರಲೇಬೇಕು,” ಎನ್ನುತ್ತಾರೆ ವಸಂತ್.

ಇದಕ್ಕೆ ಪುಷ್ಟಿ ನೀಡುವಂತೆ ನಂಜಪ್ಪ ಹೆಂಡತಿ ಬೋಜ ಕೂಡಾ ಗೊಂದಲದ ಹೇಳಿಕೆಗಳನ್ನ ಮಾಧ್ಯಮಗಳ ಮುಂದೆ ನೀಡಿದ್ದಾರೆ. “ನಾನು ಸ್ವಲ್ಪ ದಿನ ನಂತರ ಇಲ್ಲಿಗೆ ಬರುತ್ತೇನೆ,” ಎಂದರೆ ಮತ್ತೊಮ್ಮೆ “ಮಾಲಿಕರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಲ್ಲಿಗೇ ಹೋಗುತ್ತೇನೆ. ಜೀತ ಏನಿಲ್ಲ,” ಎಂದಿದ್ದಾರೆ. ಹೀಗೆ ಕ್ಷಣಕ್ಕೊಮ್ಮೆ ಆಕೆ ಹೇಳಿಕೆಯನ್ನೂ ಬದಲಿಸುತ್ತಿದ್ದರು. “ನಿನ್ನ ಪರವಾಗಿ ಹೋರಾಡುತ್ತೇವೆ ಎಂದು ನಮ್ಮ ವಸಂತ್, ಮುತ್ತಪ್ಪ, ಅಪ್ಪಾಜಿ ಎಷ್ಟೇ ಕೇಳಿಕೊಂಡರೂ ಆಕೆ ಒಪ್ಪಿಲ್ಲ. ಆಕೆಯ ಸ್ಥಿತಿಯಲ್ಲಿ ಯಾರಾದರೂ ಅಷ್ಟೇ ಮಾಡುತ್ತಿದ್ದರನೋ,” ಎನ್ನುತ್ತಾರೆ ಸಿರಿಮನೆ ನಾಗರಾಜ್. ಪೊಲೀಸರು ಆಡಿದ ನಾಟಕದ ಬಗ್ಗೆ ಅವರು ಆಕ್ರೋಶಿತರಾಗಿದ್ದರು.

ಮಕ್ಕಳ ಕಾಲಿನ ಕೆಸರು ಬಾಲ ಕಾರ್ಮಿಕರ ಜೀತಕ್ಕೆ ಪುಷ್ಟಿ ನೀಡುತ್ತಿತ್ತು

ಬಾಲಕಿಯ ಕಾಲು ಲೈನ್ ಮನೆಯ ಬದುಕಿನ ಸ್ಥಿತಿಯನ್ನು ಸಾರಿ ಹೇಳುತ್ತಿದೆ.

ಆಕೆ ಜೀತ ಮಾಡುತ್ತಿರುವ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಸ್ಥಳಕ್ಕೆ ಬಂದ ಮಕ್ಕಳ ಕಾಲಿನಲ್ಲಿಯೂ ಕೆಲಸ ಮಾಡಿದ್ದರ ಕುರುಹಾಗಿ ಕೆಸರು ಮೆತ್ತಿಕೊಂಡಿತ್ತು. “ಶಾಲೆಯ ದಾಖಲಾತಿಯಲ್ಲಿ ಅವರುಗಳ ಹೆಸರಿದೆ. ಆದರೆ ಶಾಲೆಗೆ ಹೋಗುತ್ತಿರಲಿಕ್ಕಿಲ್ಲ. ಈಗ ಕಾಫಿ ಸೀಸನ್; ತೋಟದ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರಬಹುದು,” ಎನ್ನುತ್ತಾರೆ ವಸಂತ್.

ಇನ್ನು ನಂಜಪ್ಪ ಕುಟುಂಬದ ಜೀತದ ಬಗ್ಗೆ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಆರ್ ಡಿ’ಸೋಜಾ ಬಳಿ ಕೇಳಿದರೆ, “ಆ ಬಗ್ಗೆ ಮಾಹಿತಿಯಿಲ್ಲ. ಪರಿಶೀಲಿಸುತ್ತೇನೆ,” ಎಂದಷ್ಟೇ ಹೇಳಿದರು.

ಮೃತರು ಪತ್ನಿ ಬೋಜ ಹಾಗೂ ಮಕ್ಕಳಾದ ಸರಸು, ಗಂಗೆ, ಕಾವ್ಯ ಮತ್ತು ರವಿಯನ್ನು ಅಗಲಿದ್ದಾರೆ. ಮೃತನ ಕುಟುಂಬಕ್ಕೆ ಕಂದಾಯ ಇಲಾಖೆಯ ವತಿಯಿಂದ ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂಪಾಯಿಗಳನ್ನು ನೀಡಲಾಯಿತು.

 

ಕೊಡಗು ಜಿಲ್ಲೆಯಲ್ಲಿ ಜೀತಪದ್ಧತಿ ಜೀವಂತವಾಗಿದ್ದು, ಹಲವಾರು ಘಟನೆಗಳು ನಡೆದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ದಿಡ್ಡಳ್ಳಿ ನಿರಾಶ್ರಿತ ಸ್ಥಳದಲ್ಲಿ ಮೃತಪಟ್ಟ ನಂಜಪ್ಪ ಸಾವಿನ ಪ್ರಕರಣದಲ್ಲಿ ತನಿಖೆಯಾಗಬೇಕು. ಮೃತನ ಕುಟುಂಬ ಜೀತ ಪದ್ಧತಿಯಲ್ಲಿ ಇಲ್ಲದಿದ್ದರೆ ಆತನ ಪತ್ನಿ ಮತ್ತು ಮಕ್ಕಳನ್ನು ಕರೆತರಲು ಪೊಲೀಸರು ತಮ್ಮ ವಾಹನದಲ್ಲಿ ತೂಚಮನಕೇರಿ ಗ್ರಾಮಕ್ಕೆ ತೆರಳಿ ಅವರನ್ನು ಕರೆತರುವ ಅವಶ್ಯಕತೆ ಏನಿತ್ತು? ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿರುವುದಕ್ಕೆ ಕಣ್ಣಾಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ದುಡಿಸಿಕೊಂಡ ಘಟನೆಯೇ ಸಾಕ್ಷಿಯಾಗಿದೆ. ಬಾಲ ಕಾರ್ಮಿಕ ಹಾಗೂ ಜೀತಪದ್ಧತಿ ಜೀವಂತವಾಗಿದ್ದರೂ ಅಧಿಕಾರಿಗಳು ಯಾವುದೇ ತನಿಖೆ ಮಾಡುತ್ತಿಲ್ಲ. ಶಾಲೆಗೆ ತೆರಳಬೇಕಾದ ವಿದ್ಯಾರ್ಥಿಗಳು ಕಾಫಿ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಸಾಲ ಪಡೆದಿರುವ ಆರೋಪ ಹೊರಿಸಿ ಜೀತಪದ್ಧತಿಯಲ್ಲಿ ದುಡಿಸಿಕೊಳ್ಳುವುದರ ಮೂಲಕ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಿಸುತ್ತಿದ್ದಾರೆ. -ವೈ.ಕೆ ಗಣೀಶ್ ರಾಜ್ಯ ಆದಿವಾಸಿ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ.

ದಿಡ್ಡಳ್ಳಿ ಪುನರ್ವಸತಿಗೆ ನಿಧಾನಗತಿಯ ಚಾಲನೆ:

ದಿಡ್ಡಳ್ಳಿ ಆದಿವಾಸಿಗಳಿಗೆ ಭೂಮಿ ಮತ್ತು ನಿವೇಶನ ಕೊಡುವ ವಿಚಾರದಲ್ಲಿ ಸರಕಾರ ನಿಧಾನಗತಿಯಲ್ಲಿ ಹೆಜ್ಜೆ ಹಾಕಿದೆ. “ಈಗಾಗಲೇ ಅಲ್ಲಿರುವ ಆದಿವಾಸಿಗಳ ಕುಟುಂಬಕ್ಕೆ ವಾರಕ್ಕೆ 15 ಕೆಜಿ ಅಕ್ಕಿ, ಬೇಳೆ, ಉಪ್ಪು, ಸಕ್ಕರೆ, ಎಣ್ಣೆ, ನೀರುಳ್ಳಿ ಸೇರಿದಂತೆ ಸರಕಾರ ಪಟ್ಟಿ ಮಾಡಿದ ಕೆಲವು ತರಕಾರಿಗಳನ್ನೂ ನೀಡುತ್ತಿದ್ದೇವೆ. ಇಲ್ಲಿವರೆಗೆ 500 ಟಾರ್ಪಲಿನ್ ಹಂಚಿದ್ದೇವೆ. ಶನಿವಾರ ಒಂದು ಹಂತದ ನೋಂದಣಿ ಮುಗಿದಿದ್ದು 611 ಕುಟುಂಬಗಳ ರಿಜಿಸ್ಟ್ರೇಷನ್ ಆಗಿದೆ. ಇವರಲ್ಲಿ ಒಂದಷ್ಟು ಜನ ಹೊರಗೆ ಇದ್ದಾರೆ. ಇನ್ನೊಮ್ಮೆ ಪಂಚಾಯತ್ ಮಟ್ಟದಲ್ಲಿ ಪರಿಶೀಲನೆ ಮಾಡಬೇಕಾಗಿದೆ. ಮೂರು ತಿಂಗಳೊಳಗೆ ನಿವೇಶನಕ್ಕೆ ಭೂಮಿಯನ್ನು ನೀಡುತ್ತೇವೆ. ಆ ನಂತರ ಮನೆ ಕಟ್ಟಿ ಕೊಡುತ್ತೇವೆ,” ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಪ್ರಕಾಶ್. ಇನ್ನು ವಿನ್ಸೆಂಟ್ ಡಿ ಸೋಜಾ ಕೂಡಾ ಇದೇ ಮಾತನಾಡಿದ್ದಾರೆ. “ಈಗಾಗಲೇ ಮೂರು ನಾಲ್ಕು ಕಡೆ ಜಮೀನು ನೋಡಿದ್ದೇವೆ. ಭೂಮಿ ನೀಡುವ ವಿಚಾರ ಪರಿಶೀಲನೆಯಲ್ಲಿದೆ. ಮೂರು ತಿಂಗಳಿಗೂ ಮೊದಲೇ ಭೂಮಿ ನೀಡುತ್ತೇವೆ,” ಎಂದು ಅವರು ಭರವಸೆಯ ಮಾತುಗಳನ್ನಾಡಿದರು.

ದಿಡ್ಡಳ್ಳಿಗೆ ಕಾಲಿಟ್ಟವರ ಮೇಲೆ ದೂರು:

ಡಿಸೆಂಬರ್  23ರಂದು ಸಚಿವ ಆಂಜನೇಯ ದಿಡ್ಡಳ್ಳಿಗೆ ಭೇಟಿ ನೀಡಿ, ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ವಾಪಾಸಾಗಿದ್ದರು. ಮಾತುಕತೆ ಫಲಪ್ರದವಾದ ಹಿನ್ನಲೆಯಲ್ಲಿ ಹೋರಾಟವನ್ನು ತಕ್ಷಣಕ್ಕೆ ನಿಲ್ಲಿಸಲಾಗಿತ್ತು. ಆದರೆ ಹೋರಾಟ ನಿಂತರೂ ನಿಷೇದಾಜ್ಞೆಯನ್ನು ಮಾತ್ರ ಜಿಲ್ಲಾಧಿಕಾರಿ ಡಿಸೆಂಬರ್ 31ರವರೆಗೆ ವಿಸ್ತರಿಸಿದ್ದರು. ನಿಷೇದಾಜ್ಞೆಯ ಮಧ್ಯೆ ಹೊರಗಿನಿಂದ ಬಂದ ನಟ ಚೇತನ್ ದಿಡ್ಡಳ್ಳಿಗೆ ಭೇಟಿ ನೀಡಿದ್ದೇ ತಪ್ಪು ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ನಟ ಚೇತನ್ ಸೆಕ್ಷನ್ 144 ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರವಿ ಚೆಂಗಪ್ಪ ನೇತೃತ್ವದಲ್ಲ ಕಾವೇರಿ ಸೇನೆಯವರು ಸಿದ್ಧಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.

Top