An unconventional News Portal.

‘ಅಕ್ಕನ ಮೇಲೆ ಪೊಲೀಸ್ ದೌರ್ಜನ್ಯ’: ಡಿಜಿಪಿ ಪುತ್ರನಿಂದ ಕಿರುಕುಳ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್!

‘ಅಕ್ಕನ ಮೇಲೆ ಪೊಲೀಸ್ ದೌರ್ಜನ್ಯ’: ಡಿಜಿಪಿ ಪುತ್ರನಿಂದ ಕಿರುಕುಳ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್!

“ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನ ಅಕ್ಕನ ಮನೆಗೆ ಪೊಲೀಸರನ್ನು ಕಳುಹಿಸಿ, ಬಂಧಿಸುವ ಪ್ರಯತ್ನ ನಡೆಸಿದ್ದಾರೆ…”

ಹೀಗೊಂದು ಗಂಭೀರ ಆರೋಪವನ್ನು ಮಾಡಿದ್ದು, ಶನಿವಾರ ಡಿಜಿಪಿ ಮನೆ ಎದುರು ಪ್ರತಿಭಟನೆ ನಡೆಸಿದ ಯುವತಿಯ ಸಹೋದರಿ. ‘ಸಮಾಚಾರ’ಕ್ಕೆ ಕೆಲವು ಕ್ಷಣಗಳ ಹಿಂದೆಯಷ್ಟೆ ದೂರವಾಣಿ ಮೂಲಕ ಮಾತನಾಡುತ್ತಿದ್ದ ಅವರ ದನಿ ಆತಂಕಗೊಂಡಂತಿತ್ತು.

“ಹತ್ತು ನಿಮಿಷದ ಮುಂದೆ, ರಾಜಾಜಿನಗರದಲ್ಲಿರುವ ನನ್ನ ಅಕ್ಕ ಕರೆ ಮಾಡಿದ್ದಳು. ಮನೆಗೆ ಪೊಲೀಸರು ಬಂದಿದ್ದಾರೆ. ನಾನು ಮನೆಯ ಬಾಗಿಲು ತೆಗೆಯಲಿಲ್ಲ. ಈ ಸಮಯದಲ್ಲಿ ಬಾಗಿಲು ಒಡೆದು ನುಗ್ಗಿದರು. ಮನೆಯಲ್ಲಿ ಡಿಜಿಪಿ ಪುತ್ರ ಕಾರ್ತಿಕೇಶ್ ಹಾಗೂ ಮಧ್ಯವರ್ತಿ ರವಿಶಂಕರ್ ಬಗೆಗಿನ ದಾಖಲೆಗಳನ್ನು ಹುಡುಕುತ್ತಿದ್ದಾರೆ. ಅವುಗಳನ್ನು ನಾಶಪಡಿಸಬಹುದು ಎಂದು ತಿಳಿಸಿದಳು,” ಎಂದು ಚಿಕ್ಕಮಗಳೂರು ಮೂಲದ ಯುವತಿಯ ತಂಗಿ ವಿವರಿಸಿದರು.

“ಅಕ್ಕನ ಜತೆ ಫೋನಿನಲ್ಲಿ ಮಾತನಾಡುತ್ತಿದ್ದಾಗಲೇ ಕರೆ ಕಟ್ಟಾಯಿತು. ನಂತರ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆ. ನಾವು ಚಿಕ್ಕಮಗಳೂರಿನಲ್ಲಿದ್ದೇವೆ. ನನ್ನ ಅಕ್ಕನ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣವನ್ನು ದಾಖಲಿಸಿದ್ದಾರೆ. ಆಕೆಯನ್ನು ಬಂಧಿಸುವ ನೆಪದಲ್ಲಿ ಅವಳ ಬಳಿಯಿದ್ದ ದಾಖಲೆಗಳನ್ನು ನಾಶಪಡಿಸಬಹುದು,” ಎಂದವರು ಆತಂಕವನ್ನು ಹಂಚಿಕೊಂಡರು.

ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಗೆ ಕರೆ ಮಾಡಿದಾಗ, “ಅಂತಹ ಯಾವ ಘಟನೆಯೂ ನಡೆದಿಲ್ಲ,” ಎಂದರು. ಉತ್ತರ ವಲಯದ ಕಂಟ್ರೋಲ್ ರೂಮಿಗೂ ಸಹ 6. 45 ಹೊತ್ತಿಗೆ ಯಾವ ಮಾಹಿತಿಯೂ ಇರಲಿಲ್ಲ. ಡಿಜಿಪಿ ಓಂಪ್ರಕಾಶ್ ಫೋನಿಗೆ ಸಿಗಲಿಲ್ಲ.

ಘಟನೆ ಏನು?:

ರಾಜಾಜಿನಗರದಲ್ಲಿ ವಾಸವಿದ್ದ ಚಿಕ್ಕಮಗಳೂರು ಮೂಲದ ಯುವತಿ ಸದನ (ರಾಜಲಕ್ಷ್ಮಿ) ಓದಿದ್ದು ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ. ಕೋಲಾರ ಮೂಲದ ಯುವಕನ ಜತೆ ಅವರ ಮೊದಲ ಮದುವೆ ನಡೆದಿತ್ತು. ಆದರೆ, ಅದು ಹೆಚ್ಚು ದಿನ ಬಾಳಿಕೆ ಬಂದಿರಲಿಲ್ಲ. “ಈ ಕುರಿತು ಆಕೆ ಕಾನೂನು ಹೋರಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ಅವರಿಗೆ ಡಿಜಿಪಿ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಹಾಗೂ ಮಧ್ಯವರ್ತಿ ರವಿಶಂಕರ್ ಪರಿಚಯವಾಗಿತ್ತು,” ಎಂದು ಕುಟುಂಬದವರು ಮಾಹಿತಿ ನೀಡುತ್ತಾರೆ.

ಇತ್ತೀಚೆಗೆ ಕಾರ್ತಿಕೇಶ್ ಹಾಗೂ ರವಿಶಂಕರ್ ಕಿರುಕುಳ ನೀಡುತ್ತಿದ್ದಾರೆ ಎಂದು ಸದನ ರಾಜಾಜಿನಗರದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಡಿಜಿಪಿ ಪುತ್ರ ಆರೋಪಿ ಸ್ಥಾನದಲ್ಲಿ ಇದ್ದುದರಿಂದ ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಕುಟುಂಬದವರು ಈಗ ಆರೋಪಿಸುತ್ತಿದ್ದಾರೆ.

ಈ ನಡುವೆ, ಸದನ ವಿರುದ್ಧವೇ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಶನಿವಾರ ಹೊರಬಿದ್ದಿದೆ.

ದಾಖಲೆ ಇದೆ:

“ನಿನ್ನೆ ಡಿಜಿಪಿ ಭೇಟಿ ಮಾಡಲು ಅಕ್ಕ ಹೋದಾಗ ಅವರು ಅವಕಾಶ ನೀಡಲಿಲ್ಲ. ಬದಲಿಗೆ ಆಕೆ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಅವರ ಮಗನ ಜತೆಗಿದ್ದ ಪರಿಚಯಕ್ಕೆ ಅಕ್ಕನ ಬಳಿ ಕಾಲ್ ಡೀಟೆಲ್ಸ್, ಫೊಟೋಗಳು ಸೇರಿದಂತೆ ಇತರೆ ದಾಖಲೆಗಳಿವೆ. ಅವುಗಳನ್ನು ಈಗ ಪೊಲೀಸರು ನಾಶ ಮಾಡಲು ಯತ್ನ ನಡೆಸಿರಬಹುದು,” ಎಂದು ಚಿಕ್ಕಮಗಳೂರಿನಿಂದ ಸದನ ಸಹೋದರಿ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

ಈ ಹಿಂದೆ, ಡಿಜಿಪಿ ಓಂಪ್ರಕಾಶ್ ಪುತ್ರನ ವಿರುದ್ಧ ಗಣಿಗಾರಿಕೆ ಆರೋಪವೂ ಕೇಳಿಬಂದಿತ್ತು. ಲೋಕಸತ್ತಾ ಪಕ್ಷ ಈ ಕುರಿತು ದೂರು ದಾಖಲಿಸಿತ್ತು.

ಘಟನೆ ಹಿನ್ನೆಲೆ: ಪ್ರಜಾವಾಣಿ ವರದಿ

ಡಿಜಿಪಿ ಓಂಪ್ರಕಾಶ್ ಅವರ ಪುತ್ರ  ಕಾರ್ತಿಕೇಶ್ ಹಾಗೂ ಅವರ ಸ್ನೇಹಿತ ರವಿಶಂಕರ್ ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಶನಿವಾರ ರಾತ್ರಿ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ರಾತ್ರಿ 7.30ರ ಸುಮಾರಿಗೆ ಕಚೇರಿ ಬಳಿ ಬಂದ ಚಿಕ್ಕಮಗಳೂರು ಮೂಲದ ಮಹಿಳೆ, ‘ನನ್ನ ಹೆಸರಿನಲ್ಲಿರುವ ಎರಡು ನಿವೇಶನಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕಾರ್ತಿಕೇಶ್ ಕಿರುಕುಳ ನೀಡುತ್ತಿದ್ದಾರೆ. ಅವರಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ಆರೋಪಿಸಿದರು.

‘ಅದೇ ರೀತಿ ಕಾರ್ತಿಕೇಶ್ ಸ್ನೇಹಿತ ರವಿಶಂಕರ್ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ರಾಜಾಜಿನಗರ ಠಾಣೆಗೆ 20ಕ್ಕೂ ಹೆಚ್ಚು ದೂರುಗಳನ್ನು ಕೊಟ್ಟಿದ್ದೇನೆ. ಆದರೆ, ಡಿಜಿಪಿ ಮಗ ಹಾಗೂ ಅವರ ಸ್ನೇಹಿತನೆಂಬ ಕಾರಣಕ್ಕೆ ಅವರು ಪ್ರಕರಣ ದಾಖಲು ಮಾಡಿದಂತಿಲ್ಲ’ ಎಂದು ಹೇಳಿದರು.

‘ಡಿಜಿಪಿ ಭೇಟಿಗಾಗಿ ಬೆಳಿಗ್ಗೆಯಿಂದ ಮೂರು ಸಲ ಕಚೇರಿಗೆ ಬಂದಿದ್ದೇನೆ. ಆದರೆ, ಅವರು ಸಿಕ್ಕಿಲ್ಲ. ಹೀಗಾಗಿ ಪ್ರತಿಭಟನೆ ಪ್ರಾರಂಭಿಸಿದ್ದೇನೆ. ಅವರು ಸ್ಥಳಕ್ಕೆ ಬಂದು ನ್ಯಾಯ ಒದಗಿಸುವವರೆಗೂ ಇಲ್ಲಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸಿಬ್ಬಂದಿ ಜತೆ ಸ್ಥಳಕ್ಕೆ ಬಂದ ಕಬ್ಬನ್‌ಪಾರ್ಕ್‌ ಠಾಣೆ ಎಸ್‌ಐ ಕಾತ್ಯಾಯಿನಿ, ಆ ಮಹಿಳೆಯನ್ನು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆದೊಯ್ದರು. ನಂತರ ವಿಚಾರಣೆ ನಡೆಸಿ ರಾತ್ರಿ 10ಗಂಟೆ ಸುಮಾರಿಗೆ ಅವರನ್ನು ಮನೆಗೆ ಕಳುಹಿಸಿದರು.

ಪತಿಯಿಂದ ಪ್ರತ್ಯೇಕವಾಗಿರುವ ಆ  ಮಹಿಳೆ, ರಾಜಾಜಿನಗರದಲ್ಲಿ ನೆಲೆಸಿದ್ದಾರೆ. ಅವರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಹಾಗೂ ರಾಜಾಜಿನಗರ ಠಾಣೆಯಲ್ಲಿ ಜಾತಿನಿಂದನೆ ಆರೋಪದಡಿ ಪ್ರಕರಣಗಳು ದಾಖಲಾಗಿವೆ.

ದೂರು ನೀಡಲಿ
‘ಆ ಮಹಿಳೆ ನನ್ನನ್ನೇ ಗುರಿಯಾಗಿಸಿಕೊಂಡು ಪದೇ ಪದೇ ಈ ರೀತಿ ಮಾಡುತ್ತಿದ್ದಾರೆ. ಯಾರಿಂದಲಾದರೂ ವಂಚನೆ ಆಗಿದ್ದರೆ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಕೊಡಲಿ. ಅದನ್ನು ಬಿಟ್ಟು ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದು ಡಿಜಿಪಿ  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top