An unconventional News Portal.

‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

‘ಕನ್ನಡ ಪ್ರಭ’ದಿಂದ ಸುಗತ ಹೊರಕ್ಕೆ: ಗಾಳಿ ಸುದ್ದಿ ಮತ್ತು ಕಾನ್ವೆಂಟ್ ಶಾಲೆ ಮಕ್ಕಳ ಅತಂತ್ರತೆ!

”ಇದು ಶ್ರೀಮಂತರ ಮನೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಬಿಟ್ಟು ಓದಿಸುತ್ತಾರಲ್ಲ- ಸವಲತ್ತು ಹೇರಳವಾಗಿರುತ್ತದೆ, ಆದರೆ ಪ್ರೀತಿ ಮಾತ್ರ ಇರುವುದಿಲ್ಲ- ಹಾಗೆ ಇದು,” ಎಂದು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಯ ಇವತ್ತಿನ ಸ್ಥಿತಿಯನ್ನು ಬಣ್ಣಿಸುತ್ತಾರೆ ಹಿರಿಯ ಪತ್ರಕರ್ತರೊಬ್ಬರು. ಉದ್ಯಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುದ್ದಿ ವಾಹಿನಿ ಮತ್ತು ದಿನಪತ್ರಿಕೆಯ ಒಳಗೆ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಅವರು ವ್ಯಕ್ತಪಡಿಸಿದ ಒನ್ ಲೈನ್ ಅಭಿಪ್ರಾಯ ಇದು.

ಹಾಗೆ ನೋಡಿದರೆ, ಸುವರ್ಣ ವಾಹಿನಿಯನ್ನು ಮುನ್ನಡೆಸಿಕೊಂಡು ಬಂದಿರುವ ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. ಗೆ ವಾಹಿನಿಯ ಹುಟ್ಟಿನಿಂದ ಇಲ್ಲೀವರೆಗೂ ಚಾನಲ್ ಕುರಿತು ಸ್ಪಷ್ಟತೆ ಇದೆ ಎಂದು ಅನ್ನಿಸುವುದೇ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ 8 ಹೊಸ ಸಂಪಾದಕರನ್ನು ಕಂಡ ಕನ್ನಡದ ಏಕೈಕ ಸುದ್ದಿ ವಾಹಿನಿ ಸುವರ್ಣ ನ್ಯೂಸ್ 24/7. ಇಲ್ಲಿ ಸಂಪಾದಕರು ಬದಲಾದಾಗಲೆಲ್ಲಾ, ಬಹುತೇಕ ಬ್ಯುರೋ ಹಾಗೂ ವಿಭಾಗಗಳ ಮುಖ್ಯಸ್ಥರು ಬದಲಾಗಿದ್ದಾರೆ. ಅವರು ಬದಲಾಗುತ್ತಿದ್ದಂತೆ ಕೆಲಸ ಮಾಡುವ ಪತ್ರಕರ್ತರ ತಂಡಗಳೂ ಬದಲಾಗಿವೆ. ಹೆಸರಿನ ಜತೆಗೆ ಇರುವ ಟ್ಯಾಗ್ ಲೈನ್, ‘ಇದು ನೇರ, ದಿಟ್ಟ ಅನ್ನುವುದಕ್ಕಿಂತ- ಹೊಸ ಮುಖಗಳ ವಿಚಾರದಲ್ಲಿ ನಿರಂತರ ಬದಲಾವಣೆ’ ಇಲ್ಲಿ ಸಾಮಾನ್ಯ ಎಂಬಂತಾಗಿದೆ.

ಇದರ ಜತೆಗೆ, ರಾಜೀವ್ ಚಂದ್ರಶೇಖರ್, ‘ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಗ್ರೂಪಿನಿಂದ ‘ಕನ್ನಡ ಪ್ರಭ’ವನ್ನು ಕೊಂಡುಕೊಂಡರು. ಅದನ್ನು ಮುನ್ನಡೆಸಲು ಬೇಕಾದ ಸಕಲ ಸವಲತ್ತುಗಳನ್ನೂ ನೀಡಿದರು. ಆದರೆ, ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ನಡುವೆ ಹೊಂದಾಣಿಕೆಯೊಂದನ್ನು ಆಡಳಿತ ಮಂಡಳಿ ತರುವಲ್ಲಿ ಇವತ್ತಿಗೂ ಸಫಲವಾಗಿಲ್ಲ. ಯಾಕೆ ಹೀಗೆ ಎಂದರೆ, “ನೋಡಿ, ಅವರಿಗೆ 28 ಇತರೆ ಉದ್ಯಮಗಳಿವೆ. ಅದರಲ್ಲಿ ಮೀಡಿಯಾ ಕೂಡ ಒಂದು. ರಾಜೀವ್ ಚಂದ್ರಶೇಖರ್ (ಆರ್ಸಿ) ರಾಜಕೀಯವಾಗಿ ಮಹತ್ವಾಕಾಂಕ್ಷಿ. ಹೀಗಾಗಿ, ನ್ಯೂಸ್ ಚಾನಲ್, ಪೇಪರ್ ಎಲ್ಲಾ ಇರಬೇಕು ಎಂದು ಬಯಸುತ್ತಾರೆ. ಅದರ ಹೊರತಾಗಿ, ಅವುಗಳ ಬಗ್ಗೆ ಕಕ್ಕುಲಾತಿ ಇದೆ ಎನ್ನಿಸುವುದಿಲ್ಲ,” ಎನ್ನುತ್ತಾರೆ ಒಂದು ಕಾಲದಲ್ಲಿ ಏಷಿಯಾನೆಟ್ ಗ್ರೂಪ್ ಜತೆ ಆತ್ಮೀಯ ಒಡನಾಟ ಹೊಂದಿದ್ದ ಮಲೆಯಾಳಂನ ಹಿರಿಯ ಪತ್ರಕರ್ತರೊಬ್ಬರು.

ಈ ಎರಡೂ ಸಂಸ್ಥೆಗಳ ನಡುವೆ ಹೊಂದಾಣಿಕೆಯನ್ನು ತರುವ ಮೂಲಕ, ದೇಶದಲ್ಲಿಯೇ ಅತ್ಯಂತ ವಿನೂತನವಾಗಿರುವ ನ್ಯೂಸ್ ರೂಂ ಒಂದನ್ನು ಕಟ್ಟುತ್ತೇವೆ ಎಂದು ಹೊರಟಿದ್ದವರು ಸುಗತ ಶ್ರೀನಿವಾಸರಾಜು.

2015ರ ಮೇ ಮೊದಲ ವಾರದಲ್ಲಿ ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. ಗೆ ‘ಸಂಪಾದಕೀಯ ನಿರ್ದೇಶಕ’ರಾಗಿ ಬರುತ್ತಿದ್ದ ಸಮಯದಲ್ಲಿ, ಇಂಗ್ಲಿಷ್ ಪೋರ್ಟಲ್ ಒಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಸುಗತ ಹೀಗೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ, ಕಳೆದ ಒಂದೂವರೆ ವರ್ಷದಲ್ಲಿ, ಅವರ ವಿನೂತನ ನ್ಯೂಸ್ ರೂಂ ಕಟ್ಟುವ ಕನಸು ಫಲ ನೀಡಿಲ್ಲ; ನೀಡುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಬದಲಿಗೆ, ವರ್ಷದ ಕೊನೆಯಲ್ಲಿ ಸುಗತ, ಸಂಸ್ಥೆಯಿಂದ ಹೊರಬೀಳಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ. ದೇಶಾದ್ಯಂತ ಸೈದ್ಧಾಂತಿಕ ಸಂಘರ್ಷದ ನೆಲೆಯಲ್ಲಿ ಪತ್ರಿಕೋದ್ಯಮದ ಒಳಗೆ ನಡೆಯುತ್ತಿರುವ ಬೆಳವಣಿಗೆಗಳ ಮುಂದುವರಿದ ಭಾಗ ಇದು ಎಂಬ ಸಂದೇಶಗಳು ಹರಿದಾಡುತ್ತಿವೆ. ಮತ್ತೊಂದು ಸುತ್ತಿನ ಎಡ- ಬಲಗಳ ಚರ್ಚೆಗೂ ಇದು ನಾಂದಿ ಹಾಡುವ ಸಾಧ್ಯತೆಗಳು ಕಾಣಿಸುತ್ತಿವೆ.

ಸಾಮಾನ್ಯವಾಗಿ, ಎಂತಹ ದೊಡ್ಡ ಸಂಪಾದಕನನ್ನು ಕೆಲಸದಿಂದ ತೆಗೆದು ಹಾಕಿದಾಗಲೂ, ಹೀಗೆ ಒಂದಿಷ್ಟು ಚರ್ಚೆಗಳು ನಡೆದು; ತಣ್ಣಗಾಗುತ್ತವೆ. ಸುಗತ ವಿಚಾರದಲ್ಲೂ ಇದು ನಡೆದರೆ, ಅದರಲ್ಲಿ ಅಚ್ಚರಿ ಏನಿಲ್ಲ. ಸುಗತ ಮತ್ತು ರಾಜೀವ್ ಚಂದ್ರಶೇಖರ್ ಸಂಬಂಧ ಇನ್ನೂ ಚೆನ್ನಾಗಿಯೇ ಇರುವುದರಿಂದ, ಅಷ್ಟು ಸುಲಭಕ್ಕೆ ಅವರು ಸಂಸ್ಥೆಯಿಂದ ಹೊರ ಬೀಳಲಾರರು ಎಂಬ ಅಭಿಪ್ರಾಯ ಸಂಸ್ಥೆಯ ಮೂಲಗಳಿಂದಲೇ ವ್ಯಕ್ತವಾಗುತ್ತಿದೆ. ಇದೇ ವೇಳೆ, ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭವನ್ನು ಮುನ್ನಡೆಸಿದ್ದ, ಸದ್ಯ ವಿಶ್ವವಾಣಿ ಪತ್ರಿಕೆಯ ಸಾರಥ್ಯ ವಹಿಸಿರುವ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಕೂಡ, ರಾಜೀವ್ ಚಂದ್ರಶೇಖರ್ ಕುರಿತು ಬರೆದಿದ್ದಾರೆ. ಅವರು ಸಂಸ್ಥೆಯಲ್ಲಿ ಸಂಪಾದಕರುಗಳನ್ನು ನಡೆಸಿಕೊಳ್ಳುವ ರೀತಿಯ ಕುರಿತು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಈ ಬಾರಿ ಸುಗತ ಹೊರಬೀಳುತ್ತಾರಾ? ಎಂಬ ಪ್ರಶ್ನೆಯನ್ನು ಪಕ್ಕಕ್ಕಿಟ್ಟು, ಇವತ್ತು ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ಗಳ ಒಳಗೆ ನಡೆಯುತ್ತಿರುವ ಬೆಳವಣಿಗೆಯ ಇನ್ನೊಂದು ಮಗ್ಗುಲನ್ನು ಗಮನಿಸಬೇಕಿದೆ.

2014ರಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ.

2014ರಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ.

ಅದು, ಕೆಪಿಎಸ್ಸಿ ಭ್ರಷ್ಟಾಚಾರದ ಕುರಿತು ದೊಡ್ಡಮಟ್ಟಕ್ಕೆ ಚರ್ಚೆ, ಹೋರಾಟಗಳು ನಡೆಯುತ್ತಿದ್ದ ಕಾಲ. 2014ರ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ, ”ಜೀವ ಇರೋವರೆಗೂ… ನನ್ನ ಪತ್ರಿಕೋಗೋಷ್ಠಿಗೆ ನೀವು ಬರಬೇಡಿ,” ಎಂದು ಸುವರ್ಣ ನ್ಯೂಸ್ ಲೋಗೋವನ್ನು ಎಲ್ಲಾ ಮಾಧ್ಯಮಗಳ ಎದುರಿಗೆ ಪ್ರದರ್ಶಿಸಿದ್ದರು. ಆದಾದ ಮೇಲೆ ಅವರು ಸೇರಿದಂತೆ ಹಲವು ರಾಜಕಾರಣಿಗಗಳು, ಕೆಲವು ಸಂಘಟನೆಗಳ ಪ್ರಮುಖರು ಸುವರ್ಣ ನ್ಯೂಸ್ನಿಂದ ದೂರವೇ ಉಳಿದಿದ್ದರು. ಇಂತಹದೊಂದು ‘ಬಹಿಷ್ಕಾರ’ವನ್ನು ಅವರೆಲ್ಲರೂ ಹಿಂತೆಗೆದುಕೊಂಡಿದ್ದು, ಸುಗತ ಶ್ರೀನಿವಾಸರಾಜು ಅಲ್ಲಿಗೆ ಸಂಪಾದಕೀಯ ನಿರ್ದೇಶಕರಾಗಿ ಬಂದ ನಂತರ. “ನ್ಯೂಸ್ ಚಾನಲ್ ಮತ್ತು ಪತ್ರಿಕೆಗೆ ಒಂದು ಸಾಮಾಜಿಕ ಮನ್ನಣೆ ತಂದುಕೊಡುವಲ್ಲಿ ಸುಗತ ಪಾತ್ರ ದೊಡ್ಡದಿದೆ. ಒಂದು ರೂಪಾಯಿ ಖರ್ಚಿಲ್ಲದೆ ಪತ್ರಿಕೆಯನ್ನು ರೀ- ಲಾಂಚ್ ಮಾಡಿದರು. ಆದರೆ, ಆಡಳಿತ ಮಂಡಳಿಯಲ್ಲಿರುವ ಕನ್ನಡ ಬಾರದವರಿಗೆ, ಈ ಎರಡು ಮಾಧ್ಯಮ ಸಂಸ್ಥೆಗಳು ಸಮಚಿತ್ತದಿಂದ ನಡೆದುಕೊಂಡು ಹೋಗುವುದೇ ಬೇಕಿಲ್ಲ ಎನ್ನಿಸುತ್ತದೆ,” ಎನ್ನುತ್ತಾರೆ ಸುಗತ ಆತ್ಮೀಯರೊಬ್ಬರು.

ಹಾಗೆ ನೋಡಿದರೆ, ಇವತ್ತು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಮುನ್ನಡೆಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಮೇಲಿಂದ ಕೆಳಗಿನವರೆಗೆ ಕನ್ನಡಿಗರೇ ಇಲ್ಲ. ಕನ್ನಡ ಪ್ರಭದಂತಹ, ಕನ್ನಡದ ಮಣ್ಣಿನ ಜತೆಗೆ ಸಂಬಂಧವನ್ನು ಹೊಂದಿರುವ ಹಳೆಯ ಪತ್ರಿಕೆಯ ಸೊಗಡು ಏನು ಎಂಬುದನ್ನು ಗ್ರಹಿಸುವ ಸೂಕ್ಷ್ಮತೆಯೂ ಅವರಿಗಿದ್ದಂತೆ ಕಾಣಿಸುತ್ತಿಲ್ಲ. ಇಂತಹ ಆರೋಪಕ್ಕೆ ಪೂರಕವಾದ ಕೆಲವು ಆಡಳಿತಾತ್ಮಕ ನಿರ್ಧಾರಗಳು ಇಲ್ಲಿ ಕಾಣಸಿಗುತ್ತವೆ. ಇವುಗಳ ಜತೆಗೆ, “ಸಂಸ್ಥೆ ಒಳಗಿನ ಹಿರಿಯರ ಇಗೋ ಕೂಡ ಸಮಸ್ಯೆಯಾಗಿದೆ,” ಎನ್ನುತ್ತಾರೆ ಸಂಸ್ಥೆಯ ಹಿರಿಯ ಉದ್ಯೋಗಿಯೊಬ್ಬರು.

ಈ ಎಲ್ಲಾ ಕಾರಣಗಳಿಂದಾಗಿ, ಕನ್ನಡ ಪ್ರಭ ಮತ್ತು ಸುವರ್ಣ ಸುದ್ದಿ ವಾಹಿನಿಯಲ್ಲಿ ನ್ಯೂನತೆಯೊಂದು ಕಾಲದಿಂದ ಕಾಲಕ್ಕೆ ಕಾಡುತ್ತಲೇ ಬಂದಿದೆ. ಅದರ ಮತ್ತೊಂದು ಸುತ್ತಿನ ಆಯಾಮವೀಗ ಸುಗತ ಸುತ್ತ ಮುತ್ತ ಚರ್ಚೆಯ ಮೂಲಕ ಆರಂಭವಾಗಿದೆ. ಕಾನ್ವೆಂಟ್ ಶಾಲೆಯ ಮಗು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಗಳು ಆರಕ್ಕೂ ಏರದ, ಮೂರಕ್ಕೂ ಇಳಿಯದ ಸ್ಥಿತಿಗೆ ಇದು ಕೊಡುಗೆ ನೀಡುತ್ತಿದೆ. ಸೈದ್ಧಾಂತಿಕ ಚರ್ಚೆಯ ಆಚೆಗೆ ಇದರ ಲಾಭ ಎದುರಾಳಿಗಳಿಗಾಗುತ್ತಿದೆ. ಕಾನ್ವೆಂಟ್ ಶಾಲೆಯ ಮಕ್ಕಳ ಅತಂತ್ರತೆ ಮುಂದುವರಿಯುತ್ತಿದೆ.

ENTER YOUR E-MAIL

Name
Email *
May 2017
M T W T F S S
« Apr    
1234567
891011121314
15161718192021
22232425262728
293031  

Top