An unconventional News Portal.

ನಾಪತ್ತೆಯಾಗಿದ್ದ ಪ್ರಧಾನಿ ಲೋಕಸಭೆಯಲ್ಲಿ ಪ್ರತ್ಯಕ್ಷ: ಅನಾಣ್ಯೀಕರಣ ವಿರೋಧಿಸಿ 28ಕ್ಕೆ ‘ಭಾರತ್ ಬಂದ್’

ನಾಪತ್ತೆಯಾಗಿದ್ದ ಪ್ರಧಾನಿ ಲೋಕಸಭೆಯಲ್ಲಿ ಪ್ರತ್ಯಕ್ಷ: ಅನಾಣ್ಯೀಕರಣ ವಿರೋಧಿಸಿ 28ಕ್ಕೆ ‘ಭಾರತ್ ಬಂದ್’

ಅನಾಣ್ಯೀಕರಣದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದರಿಂದ ಉಭಯ ಸದನಗಳ ಕಲಾಪ ಆರನೇ ದಿನವೂ ಚರ್ಚೆಯಿಲ್ಲದೆ ಮುಂದೂಡಲ್ಪಟ್ಟಿದೆ. ಆದರೆ ಸರಕಾರದ ಮುಖ್ಯಸ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಮಾತನಾಡುತ್ತಿಲ್ಲ. ಆ್ಯಪ್ ನಲ್ಲೇ ಜನರಿಗೆ ದರ್ಶನ ಕೊಡಲು ಮುಂದಾಗಿದ್ದ ಪ್ರಧಾನಿ ಬುಧವಾರ ಲೋಕ ಸಭೆಯಲ್ಲಿ ಪ್ರತ್ಯಕ್ಷರಾದರೂ ಬಾಯಿ ಬಿಡಲಿಲ್ಲ. ಇದೀಗ ಪ್ರಧಾನಿ ಪ್ರತಿಕ್ರಿಯೆಗೆ ಆಗ್ರಹಿಸಿ ವಿರೋಧ ಪಕ್ಷಗಳು 28ನೇ ತಾರೀಕು ‘ಭಾರತ್ ಬಂದ್’ಗೆ ಕರೆ ನೀಡಿವೆ.

ನವೆಂಬರ್ 8ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಅನಾಣ್ಯೀಕರಣಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಳಿಗಾಲ ಸಂಸತ್ ಅಧಿವೇಶನದಲ್ಲಿ ಸರಕಾರದ ವಿರುದ್ಧ ಮುಗಿಬೀಳಲು ಅವು ಸಿದ್ಧತೆ ಮಾಡಿಕೊಂಡಿದ್ದವು. ಆದರೆ ದಿನಗಳು ಉರುಳಿದರೂ ಪ್ರಧಾನಿ ಮಾತ್ರ ಸಂಸತ್ ಭವನದಿಂದ ಮಾರು ದೂರವೇ ಉಳಿದು ಬಿಟ್ಟರು. ಪಿಎಂ ಬರುವಿಕೆಗಾಗಿ ವಿರೋಧ ಪಕ್ಷಗಳು ಧರಣಿ, ಪ್ರತಿಭಟನೆ ಏನೇ ನಡೆಸಿದರೂ ಸಂಸತ್ತಿಗೆ ಮಾತ್ರ ಪ್ರಧಾನಿ ಬರಲೇ ಇಲ್ಲ. ಕೊನೆಗೆ ಬುಧವಾರ ಸಂಜೆ ಪ್ರಧಾನಿ ಲೋಕ ಸಭೆಯಲ್ಲಿ ದರ್ಶನ ನೀಡಿದರು. ಆದರೆ ಮಾತನಾಡುವ ಗೋಜಿಗೆ ಹೋಗಲಿಲ್ಲ.

ಸದನದ ಹೊರಗೆ: 

ಅಧಿವೇಶನ ಆರಂಭಗೊಂಡರೂ ಸಂಸತ್ತಿನಲ್ಲಿ ಕಾಣಿಸಿಕೊಳ್ಳದ ಮೋದಿ ಮಂಗಳವಾರ ಬಿಜೆಪಿ ಸಂಸತ್ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ವಿರೋಧಿಗಳ ವಿರುದ್ಧ ಅಲ್ಲಿಂದಲೇ ವಾಗ್ದಾಳಿ ನಡೆಸಿದ್ದರು.

ಈ ಸಂದರ್ಭ ಅವರು ಹೊಸ ವರ್ಷಕ್ಕೆ ಹೊಸ ದೇಶವನ್ನು ಜನರ ಕೈಗೆ ನೀಡುವ ಭರವಸೆ ನೀಡಿದ್ದರು. “ನನಗಾಗಿಯೂ ಅಲ್ಲ. ನನ್ನ ಬಂಧುಗಳಿಗಾಗಿಯೂ ಅಲ್ಲ. ನಾನು ಇಲ್ಲಿರುವುದು ಬಡವರ ಕಲ್ಯಾಣಕ್ಕಾಗಿ ಮಾತ್ರ; ನಾನಿದನ್ನು ಮಾಡಿಯೇ ಮಾಡುತ್ತೇನೆ,” ಎಂದು ಗುಡುಗಿದ್ದರು. “ವ್ಯವಸ್ಥಿತ ಬದಲಾವಣೆಗಳಾದಾಗ ತೊಂದರೆ ಸಹಜ. ಇಡೀ ದೇಶವೇ ಇದನ್ನು (ಅನಾಣ್ಯೀಕರಣ) ಬೆಂಬಲಿಸುತ್ತಿದೆ. ಇದು ನನ್ನ ನಿರೀಕ್ಷೆಯನ್ನೂ ಮೀರಿದೆ,” ಎಂದು ಹೇಳಿದ್ದರು.

ಇದೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಬಿಜೆಪಿ ರಿಸಲ್ಯೂಷನ್ ಕೂಡಾ ಪಾಸ್ ಮಾಡಲಾಗಿತ್ತು.

ಇದಾದ ನಂತರ ಜನಸಂಘದ ಪ್ರಮುಖ ನಾಯಕ ಕೇದರ್ನಾಥ್ ಸಾಹ್ನಿಯವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಿದ್ದರು. ಆದರೆ ಸಂಸತ್ತಿಗೆ ಮಾತ್ರ ಬಂದಿರಲಿಲ್ಲ.

ಅಸಹಾಯಕತೆಗಳಿಗೆ ಪ್ರತಿಭಟನೆಯ ರೂಪ:

opposition1ಜನರು ಸಮಸ್ಯೆಯಿಂದ ಬಳಲುತ್ತಿದ್ದರೂ ಅಸಹಾಯಕರಾಗಿದ್ದರು. ಆದರೆ ಇದಕ್ಕೆ ಪ್ರತಿಭಟನೆಯ ರೂಪ ನೀಡಲು ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದು, ಸೆಪ್ಟೆಂಬರ್ 28ರಂದು ‘ಭಾರತ ಬಂದ್’ಗೆ ಕರೆ ನೀಡಿವೆ.

‘ಆಕ್ರೋಶ ದಿವಸ್’ದ ಹೆಸರಿನಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ನೋಟ್ ಬ್ಯಾನ್ ವಿರುದ್ಧ ಧ್ವನಿ ಎತ್ತಲಿವೆ. 12ಕ್ಕೂ ಹೆಚ್ಚು ಪಕ್ಷಗಳು ತಮ್ಮ ತಮ್ಮ ಅಧಿಕಾರ, ಪ್ರಭಾಲ್ಯ ಇರುವ ರಾಜ್ಯಗಳಲ್ಲಿ ಅನಾಣ್ಯೀಕರಣದ ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿವೆ.

ಪ್ರಧಾನಿ ಮೌನ ಮತ್ತು ಸದನದಲ್ಲಿ ಅವರ ಅನುಪಸ್ಥಿತಿಯನ್ನು ವಿರೋಧಿಸಿ ಪಕ್ಷಗಳು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿದವು. ಈ ವೇಳೆ ಈ ಘೋಷಣೆ ಹೊರಬಿದ್ದಿದೆ. ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಬಿಎಸ್ಪಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಎಎಪಿ ಮತ್ತು ಎಡಪಕ್ಷಗಳು ಈ ಪ್ರತಿಭಟನೆಯಿಂದ ದೂರ ಉಳಿದಿದ್ದವು.

ನಂತರ ಮಾತನಾಡಿದ ಸಂಸದೀಯ ವ್ಯವಹಾರ ಸಚಿವ ವೆಂಕಯ್ಯ ನಾಯ್ಡು, “ಇಡೀ ದೇಶವೇ ಮೋದಿ ಬೆನ್ನಿಗೆ ಇದೆ. ಸರಕಾರ ಅನಾಣ್ಯೀಕರಣ ವಿಚಾರವನ್ನು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ,” ಎಂದು ಹೇಳಿದ್ದಾರೆ.

ಜನ್ ಧನ್ ಖಾತೆಗೆ ‘ಧನ’ ಸಾಗರ!

ಅನಾಣ್ಯೀಕರಣ ಘೋಷಣೆಯಾದ ನಂತರ ‘ಪ್ರಧಾನ ಮಂತ್ರಿ ಜನ್ ಧನ್ ಖಾತೆ’ಗೆ ಬರೋಬ್ಬರಿ ಹಣ ಹರಿದು ಬರುತ್ತಿದೆ. ಒಟ್ಟಾರೆ ಇಲ್ಲೀವರೆಗೆ ರೂ. 21 ಸಾವಿರ ಕೋಟಿ ಹಣ ಜನ್ ಧನ್ ಖಾತೆಗೆ ಬಂದು ಬಿದ್ದಿದೆ.

ಪಶ್ಚಿಮ ಬಂಗಾಳದಿಂದ ಅತೀ ಹೆಚ್ಚಿನ ಹಣ ಹರಿದು ಬಂದಿದ್ದರೆ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.

ನವೆಂಬರ್ 9ರಂದು 25.5 ಕೋಟಿ ಜನ್ ಧನ್ ಖಾತೆಗಳಲ್ಲಿ ರೂ. 45,636.61 ಕೋಟಿ ಹಣವಿತ್ತು. ಅದೀಗ 66,636 ಕೋಟಿಗೆ ಏರಿಕೆಯಾಗಿದೆ.

ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬರಲ್ಲಾದರೂ ಬ್ಯಾಂಕ್ ಖಾತೆ ಇರಬೇಕು ಎಂಬು ಉದ್ದೇಶದಿಂದ ಆಗಸ್ಟ್ 28, 2014ರಲ್ಲಿ ‘ಪ್ರಧಾನಮಂತ್ರಿ ಜನ್ ಧನ್ ಯೋಜನೆ’ ಜಾರಿಗೆ ತರಲಾಗಿತ್ತು. ಇಲ್ಲಿ ಪ್ರತಿ ಖಾತೆಗೂ 50,000 ರೂಪಾಯಿಗಳ ಹಣ ಜಮಾವಣೆಯ ಲಿಮಿಟ್ ಹಾಕಲಾಗಿದೆ.

ಈ ಹಿಂದೆ ಮಾತನಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, “ಜನ್ ಧನ್ ಖಾತೆಗಳಲ್ಲಿ ತಕ್ಷಣ ಹಣ ಜಮೆಯಾಗುತ್ತಿರುವುದರ ಬಗ್ಗೆ ನಮಗೆ ಕೆಲವು ದೂರುಗಳು ಬಂದಿವೆ,” ಎಂದು ಹೇಳಿದ್ದರು. ಇದೀಗ ಈ ಹಣ ನಿಜವಾಗಿಯೂ ಜನರಿಗೇ ಸೇರಿದ್ದೋ, ಕಪ್ಪು ಹಣವೋ ತಿಳಿದು ಬರಬೇಕಾಗಿದೆ.

Leave a comment

Top