An unconventional News Portal.

‘ನೋಟು ಬದಲಾವಣೆ ಪ್ರಕ್ರಿಯೆಗೆ 11ನೇ ದಿನ’: ಅತಂತ್ರತೆ ಕಡೆಗೆ ‘ವಿಶ್ವಗುರು’ವಿನ ನಡಿಗೆ!

‘ನೋಟು ಬದಲಾವಣೆ ಪ್ರಕ್ರಿಯೆಗೆ 11ನೇ ದಿನ’: ಅತಂತ್ರತೆ ಕಡೆಗೆ ‘ವಿಶ್ವಗುರು’ವಿನ ನಡಿಗೆ!

ನೋಟುಗಳ ನಿಷೇಧದಿಂದಾಗಿ ‘ಬೀದಿಗಳಲ್ಲಿ ಗಲಭೆ’ ಹುಟ್ಟಬಹುದು; ಸುಪ್ರಿಂ ಕೋರ್ಟ್ ಆತಂಕ, 10 ದಿನ ಕಳೆಯುವ ಹೊತ್ತಿಗೆಸರತಿ ಸಾಲಿನಲ್ಲಿ ನಿಂತ 55 ಜನರ ಸಾವು, ನಿರ್ಧಾರ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆಯ ಕಾವು, ಹಾದಿ ತಪ್ಪಿದ ಕಾಳಧನ ಸಮರ.. ಇದು ಅನಾಣ್ಯೀಕರಣದ ವಿಚಾರವಾಗಿ ಈವರೆಗೆ ನಡೆದ ಬೆಳವಣಿಗೆಗೆಳ ಪಕ್ಷಿ ನೋಟ.

ಅನಾಣ್ಯೀಕರಣ ಪ್ರಕ್ರಿಯೆ ನಿಧಾನವಾಗಿ ಜನರ ತಾಳ್ಮೆ ಕೆಡಿಸುತ್ತಿದೆ. ಇದರಿಂದ ‘ಬೀದಿಗಳಲ್ಲಿ ಗಲಭೆ’ ಹುಟ್ಟಬಹುದು ಎಂದು ಸುಪ್ರಿಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ನೋಟು ಬ್ಯಾನ್ ವಿಚಾರದಲ್ಲಿ ಎರಡನೇ ಬಾರಿಗೆ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರಿಂ ಕೋರ್ಟ್, “ನೋಟು ನಿಷೇಧದಿಂದ ಪರಿಸ್ಥಿತಿ ಗಂಭೀರವಾಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳಲೇಬೇಕು. ಜನರು ಉದ್ರಿಕ್ತರಾಗಿದ್ದಾರೆ. ಸಮಸ್ಯೆ ಅನುಭವಿಸುತ್ತಿದ್ದಾರೆ.. ಗಲಭೆಗಳೂ ಹುಟ್ಟಿಕೊಳ್ಳಬಹುದು,” ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಅವರಿದ್ದ ನ್ಯಾಯಪೀಠ ವಿಚಾರಣೆ ವೇಳೆ ಗಟ್ಟಿ ನಿಲುವನ್ನು ವ್ಯಕ್ತಪಡಿಸಿದೆ.

ನರೇಂದ್ರ ಮೋದಿ ಸರಕಾರದ ನೋಟ್ ಬ್ಯಾನ್ ವಿಚಾರ ದೇಶವನ್ನು ‘ಆರ್ಥಿಕ ತುರ್ತು ಪರಿಸ್ಥಿತಿ’ಗೆ ದೂಡಿರುವ ಹೊತ್ತಲ್ಲೇ ಸರ್ವೋಚ್ಚ ನ್ಯಾಯಾಲಯದಿಂದ ಈ ಅಭಿಪ್ರಾಯ ಹೊರ ಬಿದ್ದಿದೆ. ಸಾಮಾನ್ಯ ಜನರು ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಮದುವೆಗಳು ಮುರಿದು ಬೀಳುತ್ತಿವೆ. ಗ್ರಾಮೀಣ ಭಾರತದ ರೈತರು ಸಹಕಾರ ಬ್ಯಾಂಕುಗಳ ಸಾಲ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳು ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದಾರೆ. ದೇಶದ ಎಲ್ಲಾ ಹಣಕಾಸು ಚಟುವಟಿಕೆಗಳೂ ಸ್ಥಗಿತಗೊಂಡಿದ್ದು, ಗಂಭೀರ ಪರಿಸ್ಥಿತಿಯತ್ತ ಮುಖಮಾಡಿದೆ.

ಆದರೆ ಜಡ್ಜ್ ಅಭಿಪ್ರಾಯ ತಳ್ಳಿ ಹಾಕಿರುವ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, “ಇದು ಸಂಪೂರ್ಣ ತಪ್ಪು. ಜನರು ತಾಳ್ಮೆಯಿಂದ ಬ್ಯಾಂಕುಗಳಲ್ಲಿ ಕ್ಯೂ ನಿಲ್ಲುತ್ತಿದ್ದಾರೆ,” ಎಂದು ತಮ್ಮದೇ ಶೈಲಿಯಲ್ಲಿ ಪ್ರತಿವಾದ ಮಂಡಿಸಿದ್ದಾರೆ.

India Currency exchange Demonetization

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನ್ಯಾಯಪೀಠ, “ಇಲ್ಲ. ಸಮಸ್ಯೆ ಇದೆ. ತೊಂದರೆ ಇರುವುದನ್ನು ನೀವು ತಳ್ಳಿ ಹಾಕಲು ಸಾಧ್ಯವಿಲ್ಲ,” ಎಂದು ಕೇಂದ್ರಕ್ಕೆ ಸರಿಯಾಗಿ ಚಾಟಿ ಬೀಸಿದೆ.

‘ರೂಪಾಯಿ 500 ಮತ್ತು 1000 ಮುಖಬೆಲೆಯ ನಿಷೇಧದಿಂದ ದೇಶದಲ್ಲಿ ಗಂಭೀರ ಸಮಸ್ಯೆ ಉಂಟಾಗಿದೆ’ ಎಂದು ನೋಟ್ ಬ್ಯಾನ್ ವಿಚಾರವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಈ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಸರಕಾರಕ್ಕೆ ಕಠಿಣ ಪ್ರಶ್ನೆಗಳನ್ನೂ ಕೇಳಿದ್ದಾರೆ. “ನೀವು 500 ಮತ್ತು 1000ದ ನೋಟುಗಳನ್ನು ಬ್ಯಾನ್ ಮಾಡಿದ್ದೀರಿ. 100 ರೂಪಾಯಿ ನೋಟಿಗೆ ಏನಾಗಿದೆ?” ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ‘ಎಟಿಎಂಗಳನ್ನು ಪುನರ್ ವಿನ್ಯಾಸ ಮಾಡಬೇಕಾಗಿದೆ’ ಎಂದು ಸರಕಾರ ಉತ್ತರಿಸಿದೆ.

“ಕಳೆದ ಬಾರಿ ನೀವು ಜನರಿಗೆ ಉಸಿರಾಡುವಂತೆ ಮಾಡುತ್ತೀರಿ ಎಂದಿದ್ದೀರಿ. ಆದರೆ ನೀವು ಡ್ರಾ ಮೊತ್ತವನ್ನು 2,000ಕ್ಕೆ ಇಳಿಸಿದ್ದೀರಿ. ಏನು ಪ್ರಿಂಟಿಂಗ್ ಸಮಸ್ಯೆನಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರೋಹ್ಟಗಿ “ಪ್ರಿಂಟಿಂಗ್ ಸಮಸ್ಯೆ ಮಾತ್ರವಲ್ಲ. ದೇಶದಲ್ಲಿರುವ ಲಕ್ಷಾಂತರ ಶಾಖೆಗಳಿಗೆ ಹಣ ವರ್ಗಾವಣೆ ಮಾಡಬೇಕಾಗಿದೆ, ಎಟಿಎಂಗಳನ್ನು ಪುನರ್ ವಿನ್ಯಾಸ ಮಾಡಬೇಕಾಗಿದೆ,” ಎಂದಿದ್ದಾರೆ.

ಇನ್ನು ‘ಹೈಕೋರ್ಟ್ ಹಾಗೂ ಕೆಳ ನ್ಯಾಯಾಲಯಗಳಲ್ಲಿ ನೋಟ್ ಬ್ಯಾನ್ ವಿರುದ್ಧ ಸಲ್ಲಿಕೆಯಾಗುತ್ತಿರುವ ದೂರುಗಳನ್ನು ತಿರಸ್ಕರಿಸಬೇಕು,’ ಎಂಬ ಕೇಂದ್ರ ಸರಕಾರದ ಬೇಡಿಕೆಯನ್ನೂ ಸುಪ್ರಿಂ ಕೋರ್ಟ್ ತಳ್ಳಿ ಹಾಕಿದೆ.

ನೋಟ್ ಬ್ಯಾನ್ ವಿಚಾರವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನವೆಂಬರ್ 25ಕ್ಕೆ ಮುಂದೂಡಿದೆ.

ಅನಾಣ್ಯೀಕರಣದಿಂದ ಇಲ್ಲೀವರೆಗಿನ ಬೆಳವಣಿಗೆಗಳ ಟೈಮ್ಲೈನ್

ನವೆಂಬರ್‌ 8: ಕೇಂದ್ರದಿಂದ 500 ಮತ್ತು 1000 ರೂ. ಮುಖಬೆಲೆಯ ನೋಟು ರದ್ದು. ಹಳೇ ನೋಟು ಚಲಾವಣೆಗೆ ನ.10ರ ವರೆಗೆ ಅವಕಾಶ. ಹಳೆಯದ್ದಕ್ಕೆ ಬದಲಾಗಿ ಹೊಸ 500, 2000ರ ನೋಟು ಲಭ್ಯ.


ನವೆಂಬರ್‌ 9: ಹಣಕಾಸು ಸಚಿವ ಅರುಣ್‌ ಜೇಟ್ಲಿ ಪತ್ರಿಕಾಗೋಷ್ಠಿ. ರೈತರಿಗೆ, ಮಹಿಳೆಯರಿಗೆ ತೆರಿಗೆ ವಿನಾಯ್ತಿ ಹೇಳಿಕೆ. ಶನಿವಾರ-ಭಾನುವಾರ ಬ್ಯಾಂಕುಗಳಿಗೆ ರಜೆ ರದ್ದು. ಹೆದ್ದಾರಿ ಟೋಲ್‌ ವಸೂಲಿಗೆ ಸದ್ಯಕ್ಕೆ ಬ್ರೇಕ್.


ನವೆಂಬರ್‌ 10: ಎಟಿಎಂ ಓಪನ್‌ ಆಗಲಿವೆ ಎಂದು ಆರ್ಥಿಕ ಕಾರ್ಯದರ್ಶಿ ಹೇಳಿಕೆ. ದಿನಕ್ಕೆ ಡ್ರಾ ಮಿತಿ 2000ಕ್ಕೆ ಇಳಿಕೆ. 100, 50ರ ನೋಟು ಸಿಗುವ ಭರವಸೆ, ಆದರೆ ಸರಿಯಾಗಿ ಓಪನ್‌ ಆಗದ ಎಟಿಎಂಗಳು.


ನವೆಂಬರ್‌ 11: ಹಳೆ ನೋಟುಗಳ ಮಾನ್ಯತೆ 14ರ ವರೆಗೆ ವಿಸ್ತರಣೆ. ಟೋಲ್‌ ಶುಲ್ಕ, ರೈಲು, ಬಸ್‌ ಸಾರಿಗೆ ವ್ಯವಸ್ಥೆಗಳಲ್ಲಿ ವಿನಾಯ್ತಿ ಮುಂದುವರಿಕೆ. ನೋಟಿಗಾಗಿ ಕೆಲವೆಡೆ ಕದನ ಆರಂಭ.


ನವೆಂಬರ್‌ 12: ಎಟಿಎಂಗಳಲ್ಲಿ ಹಣ ಸಿಗಲು ಇನ್ನೂ ಎರಡು-ಮೂರು ವಾರ ಬೇಕಾಗುತ್ತದೆ ಎಂಬ ಹೇಳಿಕೆ ನೀಡಿ ಶಾಕ್‌ ನೀಡಿದ ಅರುಣ್‌ ಜೇಟ್ಲಿ. ತಾಂತ್ರಿಕ ತೊಂದರೆಯ ಕಾರಣ.


ನವೆಂಬರ್‌ 13: ನೋಟು ವಿನಿಮಯ ಮೊತ್ತ 4 ಸಾವಿರದಿಂದ 4,500ಕ್ಕೆ ಏರಿಕೆ. ವಿತ್‌ಡ್ರಾ ಮಿತಿಯೂ 2 ಸಾವಿರದಿಂದ 2,500ಕ್ಕೆ ಹೆಚ್ಚಳ. ವಾರದ ವಿತ್‌ಡ್ರಾ ಮಿತಿ 24 ಸಾವಿರಕ್ಕೆ ಏರಿಕೆ.


ನವೆಂಬರ್‌ 14: ಹಳೆಯ ನೋಟುಗಳ ಮೂಲಕ ಬಿಲ್‌ ಪಾವತಿ ಅವಧಿ, ಟೋಲ್‌ ವಿನಾಯ್ತಿ ಅವಧಿ 18ರ ವರೆಗೆ ವಿಸ್ತರಣೆ. ಸಣ್ಣ ಪುಟ್ಟ ವ್ಯಾಪಾರಿಗಳ ವಿತ್‌ಡ್ರಾ ಮಿತಿ 50,000ಕ್ಕೆ ಏರಿಕೆ.


ನವೆಂಬರ್‌ 15: ನೋಟು ಬದಲಾವಣೆ ವೇಳೆ ಅಳಿಸಲಾಗದ ಇಂಕು ಬಳಕೆ ಘೋಷಣೆ. ಕೆಲವರೇ ಮತ್ತೆ ಮತ್ತೆ ಬಂದು ಸಾಲಲ್ಲಿ ನಿಲ್ಲುತ್ತಿರುವ ಕಾರಣ ಕೊಟ್ಟ ಸರ್ಕಾರ. ಅಕೌಂಟ್ ಇಲ್ಲದವರು ಏನು ಮಾಡಬೇಕು ಸ್ಪಷ್ಟನೆ ಇಲ್ಲ.


ನವೆಂಬರ್‌ 16: ಸರತಿ ಸಾಲಲ್ಲಿ ನಿಂತವರು ಮತ್ತು ಒತ್ತಡ ತಾಳಲಾರದೇ ಸತ್ತವರ ಸಂಖ್ಯೆ 36ಕ್ಕೆ ಏರಿಕೆ. ಎಟಿಎಂಗೆ ಬರದ 500ರ ನೋಟುಗಳು. ಎಟಿಎಂ ಸರಿಹೋಗಲು ಮತ್ತೆ ವಾರಗಳು ಬೇಕೆಂದ ಸರ್ಕಾರ.


ನವೆಂಬರ್‌ 17: ಬ್ಯಾಂಕಿನಿಂದ 4,500ರ ಬದಲಿಗೆ ಕೇವಲ 2000ಕ್ಕೆ ವಿನಿಮಯ ಮಿತಿ ನಿಗದಿ. ಮದುವೆಗೆ ಖಾತೆಯಿಂದ 2.5 ಲಕ್ಷ ವಿತ್‌ಡ್ರಾಗೆ ಅವಕಾಶ. ಸಾವಿನ ಸಂಖ್ಯೆ 47ಕ್ಕೆ ಏರಿಕೆ. ನೋಟ್ ಬ್ಯಾನ್ ಹಿಂತೆಗೆದುಕೊಳ್ಳಲು ಮೂರು ದಿನಗಳ ಗಡುವು ನೀಡಿದ ಕೇಜ್ರಿವಾಲ್ ಮತ್ತು ಮಮತಾ.

ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ:

ನೋಟು ಬದಲಾವಣೆಗೆ ಸರತಿ ಸಾಲಿನಲ್ಲಿ ನಿಂತು ದೇಶದ ಜನ ತಾಳ್ಮೆ ಕಳೆದುಕೊಂಡಿರುವ ಹೊತ್ತಲ್ಲೇ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದೆ.

mamatha-and-kejriwalಮಾತ್ರವಲ್ಲ ಪ್ರತಿಭಟನೆಯ ಜತೆಗೆ ಮೋದಿಯ ಕಾಳಧನ ಸಮರದ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. “ಅನಾಣ್ಯೀಕರಣ 8 ಲಕ್ಷ ಕೋಟಿಯ ಹಗರಣವಾಗಿದ್ದು. ಶನಿವಾರ ಇದನ್ನು ಬಹಿರಂಗಪಡಿಸಲಾಗುವುದು,” ಎಂದು ಕೇಜ್ರಿವಾಲ್ ಬಿಬಿಸಿ ಹಿಂದಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗುರುವಾರ ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾರಿ ರ್ಯಾಲಿ ನಡೆದಿತ್ತು. ಇದನ್ನು ಉದ್ದೇಶಿಸಿ ಮಾತನಾಡಿದ್ದ ಉಭಯ ನಾಯಕರು, “500, 1,000ದ ನೋಟುಗಳ ರದ್ದು ಘೋಷಣೆಯನ್ನು 3 ದಿನಗಳಲ್ಲಿ ವಾಪಸ್‌ ಪಡೆಯದೇ ಇದ್ದರೆ, ಜನರ ಕೋಪವನ್ನು ಎದುರಿಸಬೇಕಾಗುತ್ತದೆ,” ಎಂಬ ಸವಾಲನ್ನೂ ಹಾಕಿದ್ದರು.

ಈ ಹಿಂದೆ ದೇಶದ ಹಲವು ಭಾಗಗಳಲ್ಲಿ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್.ಎಸ್.ಯು.ಐ  ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು.

ಕೇರಳದಲ್ಲಿ ಭಾರಿ ಪ್ರತಿಭಟನೆ:

pinarayi-vijayan-protests-ಕೇಂದ್ರದ ಅನಾಣ್ಯೀಕರಣ ನಿರ್ಧಾರದ ವಿರುದ್ಧ ದೇವರ ನಾಡು ಕೇರಳದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವನ್ನು ಮುಚ್ಚುವ ಹುನ್ನಾರ ಹಾಗೂ ಇನ್ನೂ ಹಲವು ಆರೋಪಗಳೊಂದಿಗೆ ಕೇರಳದಲ್ಲಿ ದೊಡ್ಡ ಮಟ್ಟಕ್ಕೆ ಪ್ರತಿಭಟನೆಗಳು ಎದ್ದಿವೆ. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರ್ಬಿಐ ಪ್ರಾದೇಶಿಕ ಕಚೇರಿ ಮುಂದೆ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು. ಇವರಿಗೆ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಚುತಾನಂದನ್ ಹಾಗೂ ಸೀತಾರಾಂ ಯೆಚೂರಿ ಸಾಥ್ ನೀಡಿದರು. ವಿಶೇಷ ಎಂದರೆ ಇದಕ್ಕೆ ವಿರೋಧ ಪಕ್ಷ ಎಲ್.ಡಿ.ಎಫ್ ಕೂಡಾ ಸಾಥ್ ನೀಡಿತ್ತು. ರಾಜ್ಯಾದ್ಯಂತ ಬ್ಯಾಂಕುಗಳ ಮುಂದೆ ತೀವ್ರ ಪ್ರತಿಭಟನೆ ಹಮ್ಮಿಕೊಂಡಿದ್ದು, ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿ ಕೂಡಾ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ನೋಟ್ ಬ್ಯಾನ್ ಹಿಂತೆಗೆದುಕೊಳ್ಳಲು ಎಎಪಿ ಮತ್ತು ಟಿಎಂಸಿ ನೀಡಿದ್ದ ಮೂರು ದಿನಗಳ ಗಡುವು ಭಾನುವಾರಕ್ಕೆ ಮುಕ್ತಾಯವಾಗುತ್ತಿದ್ದು ಮುಂದಿನ ನಡೆ ಕುತೂಹಲ ಹುಟ್ಟಿಸಿದೆ.

ದಿನ 9, ಸಾವು 55

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ನೋಟು ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ ಒಟ್ಟು 55 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ಹಫಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಇವೆಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಿಂದ ಧೃಢಪಟ್ಟ ಪ್ರಕರಣಗಳೆಂದು ವೆಬ್ಸೈಟ್ ವರದಿ ಮಾಡಿದೆ. ಇನ್ನು ವರದಿಯಾಗದೆ ಇರುವ ಸಾವುಗಳೂ ಸಂಭವಿಸರಬಹುದು ಎಂದು ಅದು ಹೇಳಿಕೊಂಡಿದ್ದು, ಸಾವಿಗೀಡಾದವರಲ್ಲಿ ಬ್ಯಾಂಕಿನಲ್ಲಿ ಕ್ಯೂ ನಿಂತ ಹಿರಿಯರು ಹೆಚ್ಚಿದ್ದಾರೆ; ಒಂದಷ್ಟು ಆತ್ಮಹತ್ಯೆಗಳೂ ನಡೆದಿವೆ ಎಂದು ಅದು ಹೇಳಿದೆ.

ಚಿತ್ರ ಕೃಪೆ: ಇಂಡಿಯನ್ ಎಕ್ಸ್’ಪ್ರೆಸ್, ಡಿಎನ್ಎ

Leave a comment

Top