An unconventional News Portal.

‘ಅನಾಣ್ಯೀಕರಣ’ಕ್ಕೆ ತಿಂಗಳು: ಬತ್ತದ ಭರವಸೆಯ ಸಾಗರ; ಸಮಸ್ಯೆಗಳು ಸಾವಿರ; ಜನಸಾಮಾನ್ಯ ಹರೋ ಹರ!

‘ಅನಾಣ್ಯೀಕರಣ’ಕ್ಕೆ ತಿಂಗಳು: ಬತ್ತದ ಭರವಸೆಯ ಸಾಗರ; ಸಮಸ್ಯೆಗಳು ಸಾವಿರ; ಜನಸಾಮಾನ್ಯ ಹರೋ ಹರ!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಹು ನಿರೀಕ್ಷಿತ ಅನಾಣ್ಯೀಕರಣ ಘೋಷಣೆಯಾಗಿ ಗುರುವಾರಕ್ಕೆ ತಿಂಗಳು ತುಂಬಿದೆ.

ಈ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಕೆಲವರು ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ಎಲ್ಲಾ ನಿಯಂತ್ರಣ ಕ್ರಮಗಳ ಆಚೆಗೂ ಅದ್ಧೂರಿ ಮದುವೆಗಳಾಗಿವೆ. ಐಟಿ ರೈಡುಗಳು ಹೆಚ್ಚಾಗಿವೆ. ಕರ್ನಾಟಕವೂ ಸೇರಿದಂತೆ ದೇಶದ ಹಲವೆಡೆ ಅಧಿಕಾರಿಗಳು ಹೊಸ ನೋಟುಗಳ ಕಪ್ಪುಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ. ದೇಶವಿರೋಧಿ ಕೃತ್ಯಗಳಿಗೆ ಬ್ರೇಕ್ ಬಿತ್ತು ಎನ್ನುತ್ತಿರುವಂತೆಯೇ ಭಯೋತ್ಪಾದಕ ದಾಳಿಗಳು ನಡೆದಿವೆ; ನಡೆಯುತ್ತಿವೆ. ಪೇಟಿಎಂನಂತಹ ಕಂಪನಿಗಳ ವಹಿವಾಟು ಹೆಚ್ಚಾಗಿದೆ.

ಹಾಗಾದರೆ ಅನಾಣ್ಯೀಕರಣದಿಂದ ಉಂಟಾದ ಸಮಸ್ಯೆಗಳಿಗಾದರೂ ಮುಕ್ತಿ ಸಿಕ್ಕಿತಾ ಕೇಳಿದರೆ, ಅದೂ ಇಲ್ಲ. ನಿಜವಾದ ಅರ್ಥದಲ್ಲಿ ಸಾಮಾನ್ಯ ಜನ ಬರಿಗೈ ‘ಫಕೀರ’ರಾಗಿದ್ದು ಹಣವಿಲ್ಲದ ಜೀವನ ಮುಂದುವರಿಸಿದ್ದಾರೆ.

ಬಡವರ ಜೀವನಕ್ಕೆ ಯಾರು ಹೊಣೆ?

ಅನಾಣ್ಯೀಕರಣ ಘೋಷಣೆಯಾಗುತ್ತಿದ್ದಂತೆ ಪ್ರಧಾನಿ ಮೋದಿ ‘ಸ್ವಲ್ಪ ದಿವಸ ಸಮಸ್ಯೆಯಾಗುವುದು ನಿಜ,’ ಎಂದು ಹೇಳಿದ್ದರು. ಆದರೆ 30 ದಿನಗಳ ನಂತರ ನೋಡಿದರೂ ಈ ಸಮಸ್ಯೆ ಬಗೆಹರಿದಿಲ್ಲ.

“ನನಗೀಗ ಕೆಲಸವಿಲ್ಲ. ದುಡ್ಡು ಕೊಡಲು ಧಣಿಯ ಬಳಿ ಹಣವಿಲ್ಲ. ಕೆಲಸಕ್ಕೆ ಬರಬೇಡ ಎಂದಿದ್ದಾರೆ. ಹಾಗಾಗಿ ನಾನು ಅಡಿಕೆ ಸುಲಿಯಲು ಹೋಗುತ್ತಿಲ್ಲ,” ಎನ್ನುತ್ತಾರೆ ಕೂಲಿ ಕೆಲಸ ಮಾಡುವ ದೇವಕಿ. ಮೈ ತುಂಬಾ ಸಾಲವಾಗಿದೆ. ಹಾಲಿಗೆ ಹಣ ನೀಡಿಲ್ಲ. ಅಂಗಡಿಯಿಂದ ಸಾಲ ತಂದಿದ್ದೇನೆ. ಸಾಲ ಕೊಡದೆ ಮುಂದೆ ಸಾಮಾನು ತರುವಂತಿಲ್ಲ. ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಆಕೆ ತೆರೆದಿಡುತ್ತಿದ್ದರು. ಇದು ಅನಾಣ್ಯೀಕರಣದ ಕನಿಷ್ಟ ಪರಿಣಾಮ ಎದುರಿಸುತ್ತಿರುವ ದಕ್ಷಿಣ ಕನ್ನಡದ ಸಾಮಾನ್ಯ ಜನರ ಪರಿಸ್ಥಿತಿ.

ಆಕೆಯ ಧಣಿಗಳದ್ದು ಇನ್ನೊಂದು ಕತೆ. “ಸದ್ಯ ಚಾಲಿ ಅಡಿಕೆಗೆ ಉತ್ತಮ ದರವಿದೆ. ಆದರೆ ಮಾರಾಟ ಮಾಡಲು ಹೋದರೆ ಹಳೆ ನೋಟು ಕೊಡುತ್ತಾರೆ. ಅದನ್ನು ಪುನಃ ಬ್ಯಾಂಕಿಗೆ ಹಾಕಿ ವಾಪಸ್ಸು ಪಡೆಯಬೇಕು. ವಾಪಸ್ಸು ಪಡೆದಿದ್ದು ನಮ್ಮ ಖರ್ಚಿಗಾಗುತ್ತದೆ. ಕೆಲಸದವರಿಗೆ ಸಂಬಳ ಕೊಡಲು ಸಾಲುವುದಿಲ್ಲ,” ಎನ್ನುತ್ತಾರೆ ಸುಬ್ರಮಣ್ಯ ಭಟ್. ಹೀಗೆ ಒಟ್ಟಾರೆ ಆರ್ಥಿಕತೆ, ಹಣದ ವಹಿವಾಟು ಸ್ಥಗಿತವಾಗಿದೆ.

ಸಾಕಷ್ಟು ಬ್ಯಾಂಕುಗಳು, ಎಟಿಎಂಗಳು ಇರುವ ದಕ್ಷಿಣ ಕನ್ನಡದ ಪರಿಸ್ಥಿತಿಯೇ ಹೀಗಾದರೆ ಉಳಿದ ಕಡೆ ಇದರ ಪರಿಣಾಮ ಎಷ್ಟಿರಬಹುದು ಎಂದು ಅಂದಾಜಿಸಬಹುದು.

ಹಣವಿಲ್ಲ.. ಹಣವಿಲ್ಲ.. ಹಣವಿಲ್ಲ:

ನೋಟಿನ ಗಾತ್ರ ಬದಲಾವಣೆಯಿಂದ, ‘ದಿ ಹಿಂದೂ’ ವರದಿಯಂತೆ ದೇಶದಲ್ಲಿರುವ 2,20,000 ಎಟಿಎಂ ಮೆಷೀನ್ಗಳ ವಿನ್ಯಾಸ ಬದಲಾಯಿಸಬೇಕಾಗಿತ್ತು. ಇದರಲ್ಲಿ ಈಗಾಗಲೇ ಶೇಕಡಾ 90 ಮೆಷೀನುಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ ಹೆಚ್ಚಿನ ಎಟಿಎಂಗಳು ‘ನೋ ಕ್ಯಾಶ್’ ಬೋರ್ಡ್ ತಗಲು ಹಾಕಿಕೊಂಡಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಎಟಿಎಂಗಳು ಬಾಗಿಲೆಳೆದುಕೊಂಡ ದೃಶ್ಯ ಸಾಮಾನ್ಯವಾಗಿದೆ.

ಸದ್ಯ ಬ್ಯಾಂಕುಗಳಲ್ಲಿ ನೋಟುಗಳ ಬದಲಾವಣೆಯನ್ನೂ ನಿಲ್ಲಿಸಲಾಗಿದೆ. ಪೆಟ್ರೋಲ್ ಪಂಪ್, ಬಸ್ಸು, ಆಸ್ಪತ್ರೆ, ಮೆಡಿಕಲ್ ಶಾಪುಗಳಲ್ಲಿಯೂ ಹಳೆ ನೋಟು ಸ್ವೀಕಾರ ನಿಲ್ಲಿಸಲಾಗಿದೆ. ಹೀಗಿರುವಾಗ ಜನ ಹಣವಿಲ್ಲದೆ ಒದ್ದಾಡುತ್ತಿದ್ದಾರೆ.

“ನಮ್ಮ ಬೇಕರಿಯಲ್ಲಿ ವ್ಯಾಪಾರ ಪೂರ್ತಿಯಾಗಿ ನಿಂತು ಹೋಗಿದೆ. ಯಾರೂ ಖರೀದಿಸಲು ಬರುತ್ತಿಲ್ಲ. ಯಾರ ಬಳಿಯೂ ಹೆಚ್ಚಿಗೆ ಹಣವಿಲ್ಲ. ಹಾಗಾಗಿ ಅಗತ್ಯ ಸಾಮಾನು ತೆಗೆದುಕೊಳ್ಳುತ್ತಾರೆಯೇ ವಿನಃ ಬೇಕರಿಗೆ ಬರುತ್ತಿಲ್ಲ,” ಎನ್ನುತ್ತಾರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ರಸ್ತೆಯಲ್ಲಿ ಬೇಕರಿ ನಡೆಸುವ ರಾಮಚಂದ್ರ. ಇದು ಅವರ ಕಥೆ ಮಾತ್ರವಲ್ಲ. ರಸ್ತೆ ಬದಿ ತರಕಾರಿ ಹಣ್ಣು ಮಾರುವ, ತಳ್ಳು ಗಾಡಿಯಲ್ಲಿ ಮನೆಮನೆಗೆ ವ್ಯಾಪಾರ ಮಾಡುವ ವ್ಯಾಪಾರಿಗಳು, ಸಣ್ಣ ಪುಟ್ಟ ಹೊಟೇಲ್ ನಡೆಸುವವರೆಲ್ಲಾ ವ್ಯವಹಾರವಿಲ್ಲದೆ ದಿನ ತಳ್ಳುತ್ತಿದ್ದಾರೆ.

ಕೆಲವು ರೈತರಂತೂ ಪಡಬಾರದ ಪರಿಪಾಟಲು ಪಡುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಕಡೆಗಳಲ್ಲಿ ಭತ್ತ ಕೊಯ್ಲಿಗೆ ಬಂದಿದೆ. ಕಟಾವು ಮಾಡಿಸಲು ಹಣವಿಲ್ಲದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

500ರ ನೋಟು ಇನ್ನೂ ನಾಪತ್ತೆ!:

demonetisation-2

ಅನಾಣ್ಯೀಕರಣದ ನಂತರ ಕೇವಲ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನಷ್ಟೆ ಚಲಾವಣೆಗೆ ಬಿಡಲಾಗಿದೆ. ಹೀಗಾಗಿ ಹಣ ಸಿಕ್ಕಿದರೂ ಹಲವು ಜನ ಚಿಲ್ಲರೆ ಇಲ್ಲದೆ ಪರದಾಡುತ್ತಿದ್ದಾರೆ. ಚಿಲ್ಲರೆ ಕೊರತೆ ನೀಗಿಸಲು ಪರ್ಯಾಯವಾಗಬೇಕಿದ್ದ 500 ರೂಪಾಯಿ ನೋಟು ಎಲ್ಲೂ ಕಾಣ ಸಿಗುತ್ತಿಲ್ಲ.

ಇಲ್ಲೀವರೆಗೆ ದೇಶದಲ್ಲಿ 1,660 ಕೋಟಿ 500 ರೂಪಾಯಿ ನೋಟಗಳು ಚಲಾವಣೆಯಲ್ಲಿದ್ದವು. ಅವುಗಳನ್ನು ಹಿಂತೆಗೆದುಕೊಂಡ ಬಳಿಕ ಕಳೆದ 30 ದಿನಗಳಲ್ಲಿ ಕೇವಲ 1 ಕೋಟಿ ನೋಟುಗಳನ್ನಷ್ಟೆ ಇಲ್ಲಿವರೆಗೆ ಪ್ರಿಂಟು ಮಾಡಲಾಗಿದೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ. ಇನ್ನೂ 1,659 ಕೋಟಿ ನೋಟಗಳ್ನು ಪ್ರಿಂಟ್ ಮಾಡಬೇಕಾಗಿದ್ದು ಯಾವತ್ತು ಪೂರ್ಣವಾಗುತ್ತೋ ಗೊತ್ತಾಗುತ್ತಿಲ್ಲ ಎಂದು ಅದು ಹೇಳಿದೆ. ದೇಶದ ಆರ್ಥಿಕತೆಯಲ್ಲಿ (16.28 ಲಕ್ಷ ಕೋಟಿ ರೂಪಾಯಿ) 500 ರೂಪಾಯಿ ನೋಟುಗಳ ಪಾಲು 8.3 ಲಕ್ಷ ಕೋಟಿ. ಈಗ ಅದೇ ನೋಟುಗಳು ಇಲ್ಲದೆ ಅರ್ಧ ಆರ್ಥಿಕತೆಗೆ ಹೊಡೆತ ಬಿದ್ದಿದೆ.

ಹಣಕಾಸು ಇಲಾಖೆ ಅಡಿಯಲ್ಲಿ ಬರುವ ನೋಟು ಮುದ್ರಣ ಮಾಡುವ ಕಾರ್ಪೊರೇಷನ್ ಮತ್ತು ಆರ್ಬಿಐ ನಡುವೆ ಹಲವು ಸಮಯದಿಂದ ಜಟಾಪಟಿ ನಡೆಯುತ್ತಿದೆ ಎಂದು ಮಾಜಿ ಆರ್ಬಿಐ ಉಪ ಗವರ್ನರ್ ಕೆ. ಸಿ. ಚಕ್ರಬರ್ತಿ ಹೇಳಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲೂ ಕಾರ್ಪೊರೇಷನ್ ಸಿಬ್ಬಂದಿಗಳಿಲ್ಲದೆ ಬಳಲುತ್ತಿದೆ. ಪೂರ್ಣಕಾಲಿಕ ಸಿಇಒ ಕೂಡಾ ಕಾರ್ಪೊರೇಷನಿನಲ್ಲಿ ಇಲ್ಲ ಅಂತ ಕ್ವಿಂಟ್ ಹೇಳಿದೆ.

ಹೆಚ್ಚಿದ ರೈಡ್:

ಅನಾಣ್ಯೀಕರಣ ನಂತರ ಆದಾಯ ತೆರಿಗೆ ಇಲಾಖೆ ತನ್ನ ದಾಳಿಗಳನ್ನು ಹೆಚ್ಚಿಸಿದ್ದು ದೊಡ್ಡ ದೊಡ್ಡ ಮಿಕಗಳು ಬಲೆಗೆ ಬೀಳುತ್ತಿವೆ. ಅದರಲ್ಲೂ ಕರ್ನಾಟಕದಲ್ಲಿ ಈ ರೈಡುಗಳು ಹೆಚ್ಚಾಗಿವೆ.

ಡಿಸೆಂಬರ್ 3ರಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಯೋಜನಾಭಿವೃದ್ಧಿ ಅಧಿಕಾರಿ ಜಯಚಂದ್ರ ಮನೆ ಮೇಲಿನ ದಾಳಿಯಲ್ಲೂ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಇದರಲ್ಲಿ 2 ಕೋಟಿಗೂ ಹೆಚ್ಚು ಹಣ ಹೊಸ 2,000 ರೂಪಾಯಿ ನೋಟಿನಲ್ಲಿತ್ತು ಎಂಬುದು ಗಮನಾರ್ಹ.

ಇನ್ನು ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ಮದುವೆಗೆ ಕೋಟ್ಯಂತರ ರೂಪಾಯಿ ‘ಬಿಳಿ’ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಎಸ್‌ ಅಧಿಕಾರಿ ಭೀಮಾ ನಾಯಕ್‌ ಅವರ ಕಾರು ಚಾಲಕ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೂರು ಕೋಟಿ ರೂಪಾಯಿಗಿಂತ ಹೆಚ್ಚು ಕಪ್ಪು ಹಣವನ್ನು ‘ಬಿಳಿ, ಮಾಡಿರುವ ವಿಷಯವನ್ನು ಕಾರು ಚಾಲಕ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯಕ್‌ ಕಾರು ಚಾಲಕ ಕೆ.ಸಿ.ರಮೇಶ್ ಮದ್ದೂರಿನ ವಸತಿ ಗೃಹವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದೇ ರೀತಿ ಗೋವಾದ ಪೊಂಡಾ ಮತ್ತು ಪೊರ್ವಾರಿಂ ಪ್ರದೇಶದಲ್ಲಿ ಇಂದು (ಗುರುವಾರ) ಪೊಲೀಸರು 1.5 ಕೋಟಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿಯೂ ಒಂದು ಕೋಟಿ ಹಣ ಹೊಸ 2,000 ನೋಟುಗಳಲ್ಲಿದೆ.

ತವರಿನ ಪರಿಸ್ಥಿತಿ:

ಸದ್ಯ ಗುಜರಾತ್ ರಾಜ್ಯದಲ್ಲಿ ಕೆಲಸದ ನಿಮಿತ್ತ ಸಂಚರಿಸುತ್ತಿರುವ ‘ಸಮಾಚಾರ’ ಓದುಗರೊಬ್ಬರು ನೀಡಿರುವ ಮಾಹಿತಿ ಪ್ರಕಾರ, “ಇಲ್ಲಿ ಪೇಟಿಎಂ, ಕಾಶ್ ಲೆಸ್ ಮಿನಿಯ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಆದರೆ, ಸಣ್ಣ ಮಟ್ಟದ ಅಂಗಡಿಗಳಲ್ಲಿ ಇನ್ನೂ ಈ ಸೌಲಭ್ಯವಿಲ್ಲ. ಜನರಿಗೆ ಮೋದಿ ಮಾಡಿರುವ ಈ ಘೋಷಣೆಯಿಂದ ಒಳ್ಳೆಯದಾಗುತ್ತದೆ ಎಂಬ ಭರವಸೆ ಇದೆ. ಆದರೆ, ಅವರಿಗೆ ಈವರೆಗೂ ಏನೆಂದರೆ ಏನೂ ಒಳ್ಳೆಯದಾಗಿಲ್ಲ ಎಂಬುದು ಎದ್ದು ಕಾಣಿಸುತ್ತಿದೆ. ಒಂದು ರೀತಿಯ ಕುರುಡು ಅಭಿಮಾನ ಕಾಣಿಸುತ್ತಿದೆ”.

ಪ್ರಧಾನಿ ತವರು ರಾಜ್ಯ ತಳಮಟ್ಟ ಸ್ಥಿತಿಯನ್ನು ವಿವರಿಸಿರುವ ಅವರು, “ಗಾಂಧಿನಗರದಲ್ಲಿ ಹೆಚ್ಚಿನ ಹೋಟೆಲ್ಗಳು ಗಿರಾಕಿಗಳಿಲ್ಲದೆ ವಹಿವಾಟು ಸ್ಥಗಿತಗೊಳಿಸಿವೆ. ಸಂಬಳ ಕೊಡಲಾಗದ ಹೋಟೆಲ್ ಹುಡುಗರನ್ನು ಮನೆಗೆ ಕಳುಹಿಸಲಾಗಿದೆ. ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ಇಲ್ಲಿನ ಗ್ರಾಮೀಣ ಭಾಗದ ಜನರ ವ್ಯವಹಾರಕ್ಕೂ ಹೊಡೆತ ಬಿದ್ದಿದೆ. ಹೀಗೆ ಮುಂದುವರಿದರೆ ಜನ ಕೆಲವೇ ದಿನಗಳಲ್ಲಿ ಬೀದಿಗೆ ಬೀಳುವ ಸಾಧ್ಯತೆ ಬೇರೆ ಕಡೆಗಳಿಗಿಂತ ಇಲ್ಲಿ ಹೆಚ್ಚಿದೆ,” ಎನ್ನುತ್ತಾರೆ.

ಹೀಗೆ, ಅನಾಣ್ಯೀಕರಣ ಪ್ರಕ್ರಿಯೆ ಘೋಷಣೆಯಾದ ಮೊದಲ ತಿಂಗಳು ತುಂಬುತ್ತಿರುವ ಹೊತ್ತಿಗೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಚಿತ್ರಣಗಳು. ಜತೆಗೆ, ಆರ್ಬಿಐ ಬುಧವಾರ ನೀಡಿರುವ ಹೇಳಿಕೆ ಪ್ರಕಾರ ಜಿಡಿಪಿ ಕುಸಿದಿದೆ. ಪ್ರಧಾನಿ ಮೋದಿ ಕೇಳಿರುವ 50 ದಿನಗಳ ಕಾಲಾವಕಾಶದ ಗಡುವು ಮುಗಿಯಲು ಇನ್ನು ಸುಮಾರು 20 ದಿನಗಷ್ಟೆ ಬಾಕಿ ಇದೆ. ಸಂಸತ್ತಿನ ಒಳಗೆ ಪ್ರಧಾನಿ ಕಾಲಿಡುತ್ತಿಲ್ಲ. ಹೀಗೆ ಮುಂದುವರಿದರೆ ಅನಾಣ್ಯೀಕರಣ ಘೋಷಣೆಯ ತಾರ್ಕಿಕ ಅಂತ್ಯ ಹೇಗಾಗಬಹುದು ಎಂಬ ಕುತೂಹಲವೂ ಮೂಡಿದೆ.

Leave a comment

Top